ಬೆಳಗಾವಿ (ನ.20): ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವ ಸರ್ಕಾರದ ಕ್ರಮಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಮಹಾರಾಷ್ಟ್ರದ ಗಡಿ ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ತೀವ್ರವಾಗಿ ಖಂಡಿಸಿದೆ. ಆದರೆ, ಇಲ್ಲಿನ ಬಿಜೆಪಿ ನಾಯಕರು ಮುಖ್ಯಮಂತ್ರಿಗಳ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದಕ್ಕಾಗಿ ನಗರದ ಹಲವೆಡೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಅಭಿನಂದಿಸಿ ಫಲಕಗಳನ್ನು ಹಾಕಲಾಗಿದೆ. ಈ ಫಲಕಗಳು ಇದೀಗ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದು, ಇವುಗಳ ಮೇಲೆ ಮಸಿ ಬಳಿಯುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಬೆಳಗಾಬಿ ದಕ್ಷಿಣದ ಅನಗೋಳದಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ್ ಸಿಎಂಗೆ ಅಭಿನಂದನೆ ಸಲ್ಲಿಸಿ ಮರಾಠಿಯಲ್ಲಿ ನಾಮಫಲಕ ಅಳವಡಿಸಿದ್ದಾರೆ. ಈ ನಾಮ ಫಲಕಕ್ಕೆ ಕರವೇ ಕಾರ್ಯಕರ್ತರು ಮಸಿ ಬಳಿಯುವ ಮೂಲಕ ಸರ್ಕಾರದ ಈ ನಿರ್ಧಾರಕ್ಕೆ ವಿರೋಧಿಸಿದ್ದಾರೆ.
ಅಭಯ ಪಾಟೀಲ್ ಬೆಂಬಲಿಗರು ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಕ್ಕೆ ಸಿಎಂ ಯಡಿಯೂರಪ್ಪನವರಿಗೆ ಧನ್ಯವಾದ ಹೇಳಿ ಮರಾಠಿಯಲ್ಲಿ ಬ್ಯಾನರ್ ಹಾಕಿದ್ದರು. ಇದಕ್ಕೆ ಮಸಿ ಬಳಿದಿರುವ ಕಾರ್ಯಕರ್ತರು ಕೂಡಲೇ ಮರಾಠಾ ಅಭಿವೃದ್ಧಿ ನಿಗಮ ರದ್ದು ಪಡಿಸುವಂತೆ ಪ್ರತಿಭಟಿಸಿದ್ದಾರೆ. ಜಿಲ್ಲೆಯಲ್ಲಿ ನಾರಾಯಣಗೌಡ ಬಣದ ಕಾರ್ಯಕರ್ತರಿಂದ ನಿತ್ಯ ಆಕ್ರೋಶ ವ್ಯಕ್ತವಾಗುತ್ತಲೆ ಇದ್ದು, ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಡ ಹಾಕುತ್ತಿದ್ದಾರೆ.
ಇದನ್ನು ಓದಿ: ಬಂದ್ ಹೇಗೆ ಮಾಡುತ್ತಾರೆ ನೋಡೋಣ: ಕನ್ನಡ ಪರ ನಕಲಿ ಹೋರಾಟಗಾರರಿಗೆ ಸಿಎಂ ಹೆದರಬಾರದು ಎಂದ ಯತ್ನಾಳ್
ಇತ್ತ ಸರ್ಕಾರ ಮಾತ್ರ ಈ ಅಭಿವೃದ್ಧಿ ಪ್ರಾಧಿಕಾರವನ್ನು ಮರಾಠ ನಿಗಮ ಎಂದು ಬದಲಾಯಿಸಿದ್ದು, ಯಾವುದೇ ಕಾರಣಕ್ಕೂ ಇದರಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಅಲ್ಲದೇ ಸರ್ಕಾರ ಮರಾಠಾ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುತ್ತಿದೆಯೇ ವಿನಃ ಬೇರೆ ಯಾವುದೋ ಕಾರಣಕ್ಕಾಗಿ ಅಲ್ಲ. ಬಲವಂತದಿಂದ ಬಂದ್ ನಡೆಸಿದರೆ ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರದ ಮರಾಠ ಅಭಿವೃದ್ಧಿ ಪ್ರಾಧಿಕಾರ ನಿರ್ಧಾರದಿಂದ ಹಿಂದೆ ಸರಿಯಬೇಕು ನ.27ರವರೆಗೂ ಸರ್ಕಾರಕ್ಕೆ ಗಡುವು ನೀಡಿದ್ದು, ಅಷ್ಟರೊಳಗೆ ನಿರ್ಧಾರ ಹಿಂಪಡೆಯದೇ ಹೋದರೆ ಡಿ.5ರಂದು ಕರ್ನಾಟಕ ಬಂದ್ ನಡೆಸುವುದಾಗಿ ವಾಟಳ್ ನಾಗರಾಜ್ ಸೇರಿ ಹಲವು ಕನ್ನಡ ಪರ ಸಂಘಟನೆಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ