Bird Flu: ತುಂಗಭದ್ರಾ ನದಿಗೆ ಬಂದ ವಿದೇಶಿ ಪಕ್ಷಿಗಳು; ಹೆಚ್ಚಾದ ಹಕ್ಕಿ ಜ್ವರದ ಭೀತಿ

ಐರೋಪ್ಯ ರಾಷ್ಟ್ರ, ಏಷ್ಯಾ ಖಂಡದ ಇತರ ಕಡೆಯಿಂದ ಪ್ರತಿ ವರ್ಷ ಹಕ್ಕಿಗಳು ವಲಸೆ ಬರುತ್ತವೆ. ಹೆಬ್ಬಾತು, ಪೇಂಟ್ ಹೆಡೆಡ್ ಸ್ಟ್ರೋಕ್, ಏಷಿಯನ್ ಒಪನ್ ಬಿಲ್, ಕಾಮನ್ ಕ್ರೇನ್, ಬಾರ್ ಹೆಡೆಡ್ ಗೀಸ್, ಹೀಗೆ ಹಲವಾರು ಪಕ್ಷಿಗಳು ವಲಸೆ ಬಂದಿವೆ. ನಿತ್ಯ ಶುಭ್ರವಾಗಿ ಹರಿಯುವ ತುಂಗಭದ್ರಾ ನದಿಯ ಗುಂಟ ಹಕ್ಕಿಗಳು ನಲಿದಾಡುತ್ತಿವೆ.

ತುಂಗಭದ್ರಾ ನದಿಗೆ ಬಂದಿರುವ ವಿದೇಶಿ ಹಕ್ಕಿಗಳು

ತುಂಗಭದ್ರಾ ನದಿಗೆ ಬಂದಿರುವ ವಿದೇಶಿ ಹಕ್ಕಿಗಳು

  • Share this:
ರಾಯಚೂರು(ಜ.18): ರಾಯಚೂರು ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ನದಿಯಲ್ಲಿ ಈಗ ವಿದೇಶಿ ಹಕ್ಕಿಗಳ ಕಲರವ, ಮುಂಜಾನೆ, ಸಂಜೆಯ ವೇಳೆಗೆ ನದಿಯಲ್ಲಿ ಹಕ್ಕಿಗಳ ನಲಿದಾಟ, ಹಾರಾಟ, ಇಂಪಾದ ಧ್ವನಿ ಕೇಳಿ ಆನಂದಿಸುವುದು ಮಾನವಿ ತಾಲೂಕಿನ ಜನತೆಯ ವಿಶೇಷತೆಯಾಗಿದೆ. ಈಗ ನದಿಯ ಗುಂಟ ಹಿಂಡು ಹಿಂಡಾಗಿ ಅಪರೂಪದ ಹಕ್ಕಿಗಳನ್ನು ನೋಡಿ ಜನತೆ ಮನೋಲ್ಲಾಸಗೊಳ್ಳುತ್ತಿದ್ದಾರೆ.  ಆದರೆ ಈ ಬಾರಿ ಬಂದಿರುವ ಹಕ್ಕಿಗಳು , ಹಕ್ಕಿ ಜ್ವರ ಹೊತ್ತು ತರುತ್ತವೆ ಎಂಬ ಆತಂಕ ಆವರಿಸಿದೆ.

ಸಹ್ಯಾದ್ರಿ ತಪ್ಪಲಿನಿಂದ ಹರಿದು ಬರುವ ತುಂಗಭದ್ರಾ ನದಿಯು ರಾಜ್ಯದಲ್ಲಿ ರಾಯಚೂರು ಜಿಲ್ಲೆಯ ಕೊನೆಯಲ್ಲಿ ಆಂಧ್ರಪ್ರದೇಶ ಪ್ರವೇಶಿಸುತ್ತದೆ.  ತುಂಗಭದ್ರಾ ಈ ಭಾಗದ ಜನರ ಜೀವನಾಡಿ, ಒಂದು ಕಡೆ ಕಾಲುವೆಯ ಮುಖಾಂತರ ಇನ್ನೊಂದು ಕಡೆ ನದಿಗುಂಟ ನೀರೊದಗಿಸಿ ನೀರಾವರಿ ಸೌಲಭ್ಯ ನೀಡಿದೆ. ಇದು ಒಂದು ಕಡೆಯಾದರೆ, ಈ ನದಿಯಲ್ಲಿ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ವೈವಿಧ್ಯಮಯ ಪಕ್ಷಿ ಸಂಕುಲಗಳನ್ನು ಕಾಣುತ್ತೇವೆ. ಅದರಲ್ಲಿ ಮಾನವಿ ತಾಲೂಕಿನ ದದ್ದಲ, ಮಲ್ಲಾಪುರ, ಕಾತರಕಿ, ರಾಜೋಳ್ಳಿ ಸೇರಿದಂತೆ ಸುಮಾರು 60 ಕಿ.ಮೀ. ವ್ಯಾಪ್ತಿಯ ನದಿಯಲ್ಲಿ ಸಾವಿರಾರು ವಿದೇಶಿ ಹಕ್ಕಿಗಳನ್ನು ಕಾಣಬಹುದಾಗಿದೆ.

ಪದೇ ಪದೇ ಹೇಳಿಕೆ ನೀಡಿದ್ರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲ್ಲ; ಠಾಕ್ರೆ ಹೇಳಿಕೆಗೆ ಡಿಕೆಶಿ, ಜಾರಕಿಹೊಳಿ ಕಿಡಿ

ಐರೋಪ್ಯ ರಾಷ್ಟ್ರ, ಏಷ್ಯಾ ಖಂಡದ ಇತರ ಕಡೆಯಿಂದ ಪ್ರತಿ ವರ್ಷ ಹಕ್ಕಿಗಳು ವಲಸೆ ಬರುತ್ತಿವೆ. ಹೆಬ್ಬಾತು, ಪೇಂಟ್ ಹೆಡೆಡ್ ಸ್ಟ್ರೋಕ್, ಏಷಿಯನ್ ಒಪನ್ ಬಿಲ್, ಕಾಮನ್ ಕ್ರೇನ್, ಬಾರ್ ಹೆಡೆಡ್ ಗೀಸ್, ಹೀಗೆ ಹಲವಾರು ಪಕ್ಷಿಗಳು ವಲಸೆ ಬಂದಿವೆ. ನಿತ್ಯ ಶುಭ್ರವಾಗಿ ಹರಿಯುವ ತುಂಗಭದ್ರಾ ನದಿಯ ಗುಂಟ ಹಕ್ಕಿಗಳು ನಲಿದಾಡುತ್ತಿವೆ. ಗುಂಪು ಗುಂಪಾಗಿ ಬಾನಿನಲ್ಲಿ ಬಾನಾಡಿಗಳು ರೆಕ್ಕೆ ಬಿಚ್ಚಿ ನಲಿದಾಡುವ ದೃಶ್ಯವು ಕಣ್ತುಂಬುವಂತೆ ಇರುತ್ತದೆ, ವರ್ಷದಿಂದ ವರ್ಷಕ್ಕೆ ಹಕ್ಕಿಗಳು ವಲಸೆ ಬರುವುದು ಹೆಚ್ಚಾಗುತ್ತಿದ್ದು ಪ್ರತಿ ವರ್ಷ ಬರುವ ಹಕ್ಕಿಗಳೊಂದಿಗೆ ಮತ್ತೊಂದಿಷ್ಟು ವಿಶಿಷ್ಠ ಪ್ರಬೇಧದ ಹಕ್ಕಿಗಳು ಇಲ್ಲಿಗೆ ಬರುತ್ತಿವೆ.

ಸಾಮಾನ್ಯವಾಗಿ ಈ ದಿನದಲ್ಲಿ ಬರುವ ಹಕ್ಕಿಗಳು ಸಂತಾನಾಭಿವೃದ್ಧಿಗಾಗಿ ಬರುತ್ತವೆ ಎನ್ನಲಾಗಿದೆ. ಒಂದೆರಡು ತಿಂಗಳು ಇಲ್ಲಿರುವ ಹಕ್ಕಿಗಳು ಜನವರಿ ತಿಂಗಳ ನಂತರ ವಾಪಸ್ಸಾಗುತ್ತವೆ. ಮಾನವಿ ತಾಲೂಕಿನಲ್ಲಿ ಈಗ ಸುಗ್ಗಿಯ ಕಾಲ, ಈ ರೈತರು ಹೊಲದಲ್ಲಿ ರಾಶಿ ಮಾಡಿರುತ್ತಾರೆ. ರಾಶಿ ಮಾಡುವಾಗ ಕಾಳು ನೆಲದಲ್ಲಿರುವದರಿಂದ ಹಕ್ಕಿಗಳಿಗೆ ಆಹಾರ ಸಮಸ್ಯೆ ಇಲ್ಲ, ಹೀಗಾಗಿ ಸಾಕಷ್ಟು ಹಕ್ಕಿಗಳು ಇಲ್ಲಿಗೆ ಬರುತ್ತವೆ ಎನ್ನುತ್ತಾರೆ, ಮಾನವಿಯ ಪಕ್ಷಿ ಪ್ರೇಮಿ ಸಲಾಲುದ್ದೀನ್.ಈ ಬಾರಿಯೂ ಹಕ್ಕಿಗಳು ನದಿಯಲ್ಲಿ ಕಲರವ ಮಾಡುತ್ತಿವೆ, ಆದರೆ ಈ ಬಾರಿ ಹಕ್ಕಿಗಳು ಎಲ್ಲಿ ಹಕ್ಕಿ ಜ್ವರವನ್ನು ಹೊತ್ತುಕೊಂಡು ಬಂದು ಹರಡುವ ಭಯ ಆವರಿಸಿದೆ. ಈಗ ದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ.

ಅದೃಷ್ಠವಶಾತ್ ಇಲ್ಲಿಯವರೆಗೂ ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿಲ್ಲ, ಆದರೆ ವಿದೇಶದಿಂದ ಬಂದ ಹಕ್ಕಿಗಳು ಜ್ವರದ ಸೋಂಕು ತರುತ್ತವೆ ಎಂಬ ಭಯವಿದೆ. ಈ ಹಿನ್ನಲೆಯಲ್ಲಿ ಪಕ್ಷಿ ಪ್ರೇಮಿ ಸಲಾಲುದ್ದಿನ್ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ರಾಜೇಶ ಈಗ ನದಿಯ ಗುಂಟ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ, ಎಲ್ಲಿಯಾದರೂ ಹಕ್ಕಿಗಳು ಸಾವನ್ನಪ್ಪಿದ್ದು ಕಂಡು ಬಂದರೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ, ಒಂದು ಕಡೆ ಪಕ್ಷಿಗಳ ಕಲರವ ಸವಿಯುವ ಜನಕ್ಕೆ ಹಕ್ಕಿಜ್ವರದ ಭೀತಿಯೂ ಇದೆ.
Published by:Latha CG
First published: