SriRamulu| ಬರೀ ಗಿಮಿಕ್ಸ್ ಮಾಡಿಕೊಂಡೇ ಬಂದಿರುವ ಕಾಂಗ್ರೆಸ್ ಪಕ್ಷವನ್ನು ಕಳೆದ 70 ವರ್ಷಗಳಿಂದ ನೋಡಿದ್ದೇನೆ; ಶ್ರೀರಾಮುಲು
ಕಾಂಗ್ರೆಸ್ ಪಕ್ಷವನ್ನ ಕಳೆದ 70 ವರ್ಷಗಳಿಂದ ನೋಡಿದ್ದೇವೆ. ಬರೀ ಗಿಮಿಕ್ಸ್ ಮಾಡಿಕೊಂಡೇ ಬಂದಿದ್ದಾರೆ. ಕಾಂಗ್ರೆಸ್ ಅಂದ್ರೆ ಗಿಮಿಕ್ಸ್ ಗಿಮಿಕ್ಸ್ ಅಂದ್ರೆ ಕಾಂಗ್ರೆಸ್. ಇವರ ಕಾಲದಲ್ಲೂ ಬೆಲೆ ಹೆಚ್ಚಾಗಿತ್ತು ಎಂದು ಶ್ರೀರಾಮುಲು ಕಿಡಿಕಾರಿದ್ದಾರೆ.
ಬೆಂಗಳೂರು (ಸೆಪ್ಟೆಂಬರ್ 13); ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಿಂದ ಬರೀ ಗಿಮಿಕ್ಸ್ಗಳನ್ನು ಮಾಡಿಕೊಂಡೇ ಬರುತ್ತಿದೆ. ಇದನ್ನು ನಾವೂ ನೋಡುತ್ತಲೇ ಇದ್ದೇವೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ. ಅಸಲಿಗೆ ಇಂದಿನಿಂದ ರಾಜ್ಯದಲ್ಲಿ ವಿಧಾನ ಮಂಡಲ ಅಧಿವೇಶನ ಆರಂಭವಾಗಿದೆ. ಬಸವರಾಜ ಬೊಮ್ಮಾಯಿ ಸಿಎಂ ಆದಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು,ಬೆಲೆ ಏರಿಕೆ, ಹದಗೆಟ್ಟ ಕಾನೂನು ಸುವ್ಯವಸ್ಥೆ, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಅಲ್ಲದೆ, ಪೆಟ್ರೋಲ್, ಡೀಸೆಲ್, ಎಲ್ಪಿಜಿ ಹಾಗೂ ಅಡುಗೆ ಎಣ್ಣೆ ಬೆಲೆ ಏರಿಕೆ ಬಿಸಿ ಕಂಡಿಸಿ ವಿಧಾನಸೌಧಕ್ಕೆ ಚಕ್ಕಡಿಯಲ್ಲಿ ಬಂದು ಪ್ರತಿಭಟಿಸಲೂ ಯೋಜನೆ ರೂಪಿಸಲಾಗಿತ್ತು.
ಯೋಜನೆಯಂತೆ ಇಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ನಾಯಕರಾದ ಆರ್.ವಿ. ದೇಶಪಾಂಡೆ, ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕರು ಇಂದು ಚಕ್ಕಡಿ ಮೂಲಕ ವಿಧಾನಸೌಧಕ್ಕೆ ಆಗಮಿಸಿದ್ದರು. ಆದರೆ, ಪೊಲೀಸರು ಅವರನ್ನು ವಿಧಾನಸೌಧದ ಗೇಟಿನಲ್ಲೇ ತಡೆದು ಚಕ್ಕಡಿಯನ್ನು ಒಳಗೆ ಅನುಮತಿಸಲು ನಿರಾಕರಿಸಿದ್ದರು.
ಈ ವೇಳೆ ಕಾಂಗ್ರೆಸ್ ನಾಯಕರು ಗೇಟಿನ ಮುಂದೆಯೇ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಕೆಲ ಕಾಲ ಮಾತಿನ ಚಕಮಕಿಯೂ ನಡೆದ ಪ್ರಸಂಗ ವರದಿಯಾಗಿದೆ.
ಕಾಂಗ್ರೆಸ್ ನಾಯಕ ಈ ವರ್ತನೆಯನ್ನು ಕಂಡಿಸಿರುವ ಸಚಿವ ಶ್ರೀರಾಮುಲು, "ಕಾಂಗ್ರೆಸ್ ಪಕ್ಷವನ್ನ ಕಳೆದ 70 ವರ್ಷಗಳಿಂದ ನೋಡಿದ್ದೇವೆ. ಬರೀ ಗಿಮಿಕ್ಸ್ ಮಾಡಿಕೊಂಡೇ ಬಂದಿದ್ದಾರೆ. ಕಾಂಗ್ರೆಸ್ ಅಂದ್ರೆ ಗಿಮಿಕ್ಸ್ ಗಿಮಿಕ್ಸ್ ಅಂದ್ರೆ ಕಾಂಗ್ರೆಸ್. ಇವರ ಕಾಲದಲ್ಲೂ ಬೆಲೆ ಹೆಚ್ಚಾಗಿತ್ತು. ನಿಮಗೆ ನಾನು ಒಂದು ಸವಾಲ್ ಹಾಕುತ್ತೇನೆ.
ನಿಮ್ಮ ಆಡಳಿತ ಇರುವ ರಾಜ್ಯಗಳಲ್ಲಿ ವ್ಯಾಟ್ ಕಡಿಮೆ ಮಾಡಲು ಆಗುತ್ತಾ? ಡೀಸಲ್, ಪೆಟ್ರೋಲ್ ನಮ್ಮ ರಾಜ್ಯದಲ್ಲಿ ಮಾತ್ರ ಹೆಚ್ಚಾಗಿಲ್ಲ. ಕಾಂಗ್ರೆಸ್ ಅಧಿಕಾರ ಇರುವ ರಾಜ್ಯದಲ್ಲಿ ವ್ಯಾಟ್ ಕಡಿಮೆ ಮಾಡಿ. ತಾಕತ್ ಇದ್ರೆ ವ್ಯಾಟ್ ಕಡಿಮೆ ಮಾಡಿ ನೋಡಿ" ಎಂದು ಸವಾಲು ಹಾಕಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕಾರ್ಯ ವೈಖರಿಗೆ ಮೆಚ್ಚುಗೆ ಸೂಚಿಸಿರುವ ಶ್ರೀರಾಮುಲು, "ಮೋದಿ ಮತ್ತು ಸಿಎಂ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಳಿತವಾಗುತ್ತಿದೆ ಇದನ್ನು ಗಮನಿಸಿ. ಅಲ್ಲಿ ಬೆಲೆಯನ್ನು ಕಡಿಮೆ ಮಾಡಿ ಇಲ್ಲಿ ಎತ್ತಿನ ಗಾಡಿ, ಸೈಕಲ್ ನಲ್ಲಿ ಬನ್ನಿ" ಎಂದು ಕಿಡಿಕಾರಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ