ಟಿವಿ, ಬೈಕ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಎಂದ ಸಚಿವ ಉಮೇಶ್ ಕತ್ತಿ; ಸಾರ್ವಜನಿಕರ ಆಕ್ರೋಶ

ಮನೆಯಲ್ಲಿ ಟಿವಿ, ಬೈಕ್, ಫ್ರಿಜ್ ಹೊಂದಿರುವ ಜನರು ತಮ್ಮ ಬಿಪಿಎಲ್ ಕಾರ್ಡನ್ನು ಮಾರ್ಚ್ 31ರೊಳಗೆ ವಾಪಸ್ ಕೊಡಬೇಕು. ಇಲ್ಲದಿದ್ದರೆ ಸರ್ವೆ ಮಾಡಿ ಅಂಥ ಕಾರ್ಡುಗಳನ್ನೇ ರದ್ದು ಮಾಡುತ್ತೇವೆ ಎಂದು ಆಹಾರ ಸಚಿವ ಉಮೇಶ್ ಕತ್ತಿ ನಿನ್ನೆ ಹೇಳಿಕೆ ನೀಡಿದ್ದರು.

ಉಮೇಶ್​ ಕತ್ತಿ

ಉಮೇಶ್​ ಕತ್ತಿ

  • Share this:
ಬೆಳಗಾವಿ(ಫೆ. 15): ಹೆಚ್ಚು ಜಮೀನು ಹೊಂದಿದವರು, ಮನೆಯಲ್ಲಿ ಟಿವಿ, ಬೈಕು, ಫ್ರಿಜ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ ನೀಡಿದ ಹೇಳಿಕೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೊಂದು ಹುಚ್ಚು ದರ್ಬಾರ್ ಆಗಿದೆ. ಎಂಥ ಬಡವರ ಮನೆಯಲ್ಲೂ ಟಿವಿ, ಬೈಕ್​ಗಳು ಇರುತ್ತವೆ. ಕಾರಣಕ್ಕೆ ಕಾರ್ಡ್ ರದ್ದು ಮಾಡುತ್ತೇನೆನ್ನುವುದು ಎಷ್ಟು ಸರಿ ಎಂದು ನ್ಯೂಸ್18 ಕನ್ನಡಕ್ಕೆ ಹಲವರು ಪ್ರತಿಕ್ರಿಯಿಸಿ ಪ್ರಶ್ನಿಸಿದ್ದಾರೆ.

ಬಿಪಿಎಲ್ ಕಾರ್ಡ್ ಹೊಂದಿರುವವರಲ್ಲಿ ಐದು ಎಕರೆಗಿಂತ ಹೆಚ್ಚು ಜಮೀನು ಇರಬಾರದು. ಮನೆಯಲ್ಲಿ ಟಿವಿ, ಬೈಕ್, ಫ್ರಿಜ್ ಆಗಲೀ ಇರಬಾರದು. ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿಗಳು ಹಾಗೂ 1.2 ಲಕ್ಷ ರೂಗಿಂತ ಹೆಚ್ಚು ವಾರ್ಷಿಕ ಆದಾಯ ಇದ್ದವರು ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ. ಆ ರೀತಿ ಇರುವವರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಕೂಡಲೇ ಮರಳಿಸಬೇಕು. ಈ ರೀತಿಯ ಅಕ್ರಮ ಬಿಪಿಎಲ್ ಕಾರ್ಡ್​ಗಳನ್ನ ವಾಪಸ್ ಮಾಡಲು ಮಾರ್ಚ್ 31ರವರೆಗೆ ಗಡುವು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ವೆ ಮಾಡಿ ಅಕ್ರಮ ಬಿಪಿಎಲ್ ಕಾರ್ಡ್​ಗಳನ್ನ ಪತ್ತೆ ಹಚ್ಚಿ ರದ್ದು ಮಾಡುತ್ತೇವೆ ಎಂದು ಬೆಳಗಾವಿಯಲ್ಲಿ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಬರಲಿ, ಬಾರದಿರಲಿ ಎಸ್ಟಿ ಮೀಸಲಾತಿ ಹೋರಾಟ ಮುಂದುವರಿಯಲಿದೆ; ಸಚಿವ ಕೆ.ಎಸ್.ಈಶ್ವರಪ್ಪ

ಇವರ ಹೇಳಿಕೆಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ, ಸರ್ಕಾರ ಇಂಥ ದುಸ್ಸಾಹಸಕ್ಕೆ ಕೈಹಾಕಿದ್ರೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಇಂದು ತಮ್ಮ ಬಳಿ ಪ್ರತಿಕ್ರಿಯೆ ಕೇಳಿದ ಮಾಧ್ಯಮಗಳ ಮೇಲೆಯೇ ಸಚಿವ ಉಮೇಶ್ ಕತ್ತಿ ಎರಗಿ ಬಿದ್ದಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಅವರ ವಿಎಸ್​ಎಲ್ ಸಕ್ಕರೆ ಕಾರ್ಖಾನೆ ಬಳಿ ಬಂದ ಮಾಧ್ಯಮಗಳು ಈ ವೇಳೆ ಬಿಪಿಎಲ್ ಕಾರ್ಡ್ ವಿಚಾರವನ್ನ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು. ಮೈಕ್ ತೆಗೀತೀರೋ ಇಲ್ಲವೋ ಎಂದು ಮಾಧ್ಯಮದವರ ಮೈಕ್ ತಳ್ಳಿ, ತಾನು ಯಾವುದೇ ರಿಯಾಕ್ಷನ್ ಕೊಡಲ್ಲ ಎಂದು ಹೇಳಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೊರಟುಹೋದರು.

ಉಮೇಶ್ ಕತ್ತಿ ಹೇಳಿಕೆಗೆ ವಿರೋಧ ಪಕ್ಷದ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ವಪಕ್ಷದ ಕೆಲ ಮುಖಂಡರೂ ಕೂಡ ಟೀಕೆ ಮಾಡಿದ್ದಾರೆ. ನಾಗರಿಕರಿಗೆ ಆಹಾರ ಪೂರೈಸುವುದು ಸರ್ಕಾರದ ಕರ್ತವ್ಯ. ಅಕ್ರಮ ಕಾರ್ಡುಗಳನ್ನ ಪತ್ತೆ ಹಚ್ಚಿ ರದ್ದು ಮಾಡುವುದು ಬಿಟ್ಟು ಇಂಥ ಸಲ್ಲದ ನಿಯಮಗಳನ್ನ ರೂಪಿಸುವುದು ಸರಿಯಲ್ಲ. ತಾವು ಆಹಾರ ಸಚಿವರನ್ನ ಭೇಟಿಯಾಗಿ ಆಕ್ಷೇಪ ಸಲ್ಲಿಸುತ್ತೇವೆ ಎಂದು ಮಾಜಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್ ಹೇಳಿದ್ಧಾರೆ.

ಇದನ್ನೂ ಓದಿ: ಸಿದ್ದರಾಮಯ್ಯನವರ ನಾಯಕತ್ವಕ್ಕೆ ಕುತ್ತು ಬಂದಿದ್ದು, ಅವರಿಗೆ ಅಭದ್ರತೆ ಕಾಡುತ್ತಿದೆ: ಜಗದೀಶ್ ಶೆಟ್ಟರ್

ಬಿಜೆಪಿ ನಾಯಕ ಸೋಮಶೇಖರ್ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಡವರು ಸಾಲ ಮಾಡಿಯಾದರೂ ಟಿವಿ, ಬೈಕ್ ಅನ್ನ ಖರೀದಿಸುತ್ತಾರೆ. ಹಾಗಂತ ಅವರ ಬಿಪಿಎಲ್ ಕಾರ್ಡು ರದ್ದು ಮಾಡುವುದು ಎಷ್ಟು ಸರಿ? ಬಡತನದ ಆಧಾರದ ಮೇಲೆ ಬಿಪಿಎಲ್ ಕಾರ್ಡ್ ಕೊಡಬೇಕು ಅಷ್ಟೇ ಎಂದು ಅವರು ಹೇಳಿದ್ದಾರೆ.

ವರದಿ: ಲೋಹಿತ್ ಶಿರೋಳ / ಚಂದ್ರಕಾಂತ ಸುಗಂಧಿ
Published by:Vijayasarthy SN
First published: