ಜಾನಪದ ಸಂಭ್ರಮದಲ್ಲಿ ಗಮನ ಸೆಳೆದ ದೇಸಿ ಅಡುಗೆ, ಇಳಕಲ್ ಸೀರೆಯುಟ್ಟ ನೀರೆಯರು

news18
Updated:August 1, 2018, 7:00 PM IST
ಜಾನಪದ ಸಂಭ್ರಮದಲ್ಲಿ ಗಮನ ಸೆಳೆದ ದೇಸಿ ಅಡುಗೆ, ಇಳಕಲ್ ಸೀರೆಯುಟ್ಟ ನೀರೆಯರು
news18
Updated: August 1, 2018, 7:00 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ (ಆಗಸ್ಟ್ 01) :  ಕಲಬುರ್ಗಿಯ ಸೇಂಟ್ ಜೋಸೆಫ್ ಪಿ.ಯು. ಕಾಲೇಜಿನಲ್ಲಿ ಜಾನಪದ ಸಂಭ್ರಮ ಮನೆ ಮಾಡಿತ್ತು. ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಜನಪದರ ಆಹಾರ, ಉಡುಗೆ, ತೊಡುಗೆ, ಕಲೆ-ಸಂಸ್ಕೃತಿ ಇತ್ಯಾದಿಗಳ ಪ್ರತೀಕವಾಗಿತ್ತು. ಒಂದು ಕಡೆ ಜನಪದ ಗೀತೆ, ನೃತ್ಯಗಳು ಗಮನ ಸೆಳೆದರೆ, ಮತ್ತೊಂದು ಕಡೆ ತರಹೇವಾರಿ ಜನಪದ ತಿನಿಸುಗಳು ಬಾಯಲ್ಲಿ ನೀರೂರುವಂತೆ ಮಾಡಿದವು.

ನಗರೀಕರಣದಿಂದಾಗಿ ನಮ್ಮ ಬದುಕು ಪಾಶ್ಚಾತ್ಯೀಕರಣವಾಗುತ್ತಿದೆ. ದಿನೇ ದಿನೇ ನಾವು ಹಳ್ಳಿ ಬದುಕಿನಿಂದ ದೂರವಾಗುತ್ತಿದ್ದೇವೆ. ಕುಟ್ಟುವ ಒಳ್ಳು, ಬೀಸುವ ಕಲ್ಲು ಎಲ್ಲವೂ ನಮ್ಮಿಂದು ದೂರವಾಗಿವೆ. ನಗರೀಕರಣ ಕಾರಣದಿಂದಾಗಿ ನಮ್ಮಿಂದ ದೂರವಾದ ಜನಪದರ ಬದುಕನ್ನು ಮರುಸೃಷ್ಟಿಸುವ ಕಾರ್ಯ ಕಲಬುರ್ಗಿ ಸೇಂಟ್ ಜೋಸೆಫ್ ಪಿ.ಯು. ಕಾಲೇಜು ವಿದ್ಯಾರ್ಥಿಗಳಿಂದ ನಡೆಯಿತು. ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಜಾನಪದ ಕಲೆ, ಸಂಸ್ಕೃತಿ, ಉಡುಗೆ, ತೊಡುಗೆ, ಜನಪದರ ಬದುಕನ್ನು ನೆನಪಿಸುವ ಕಾರ್ಯ ನಡೆಯಿತು.ಜಾನಪದ ಸಂಭ್ರಮ ತಿನ್ನುವ ತಿನಿಸುಗಳಿಂದ ಹಿಡಿದು, ಬಳಸುವ ವಸ್ತು, ಉಡುಗೆ-ತೊಡುಗೆ, ಜನಪದ ಗೀತೆ, ನೃತ್ಯ, ಆಟ ಇತ್ಯಾದಿಗಳೆಲ್ಲವನ್ನೂ ಒಳಗೊಂಡಿತ್ತು. ಶೇಂಗಾ ಹೋಳಿಗೆ, ದಪಾಟಿ, ಕಡಕ್ ರೊಟ್ಟಿ, ಬದನೆಕಾಯಿ, ಸೇಂಗಾ ಉಂಡಿ, ರಾಗಿ ಮುದ್ದೆ, ಸಜ್ಜೆ ರೊಟ್ಟಿ, ಶಾವಿಗೆ, ಜೋಳದ ಕಡುಬು, ಹೋಳಿಗೆ, ಕಡುಬು, ಶೇಂಗಾ ಹಿಂಡಿ, ಕಾರೆಳ್ಳು ಪುಡಿ ಹೀಗೆ ಬಾಯಲ್ಲಿ ನೀರೂರಿಸುವ ಜನಪದ ಶೈಲಿಯ ತಿಂಡಿ-ತಿನುಸುಗಳು ಪ್ರದರ್ಶನಗೊಂಡವು. ಜನಪದ ಬದುಕನ್ನು ಸ್ಮರಿಸಿಕೊಳ್ಳುತ್ತಲೇ ಅದನ್ನು ಜೀವನದಲ್ಲಿ ಒಂದಿಷ್ಟಾದರೂ ಅಳವಡಿಸಿಕೊಳ್ಳಬೇಕೆಂಬ ಧ್ಯೇಯದೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ ಎಂದು ವಿದ್ಯಾರ್ಥಿನಿಯರು ಹರ್ಷ ವ್ಯಕ್ತಪಡಿಸಿದರು.

ವೇದಿಕೆಯ ಮೇಲಂತೂ ಲಂಬಾಣಿ ನೃತ್ಯ ಸೇರಿದಂತೆ ಜನಪದ ಶೈಲಿಯ ವಿವಿಧ ನೃತ್ಯಗಳು, ಜನಪದ ಗೀತೆಗಳ ಗಾಯನ ಮತ್ತಿತರ ಜನಪದ ಕಾರ್ಯಕ್ರಮಗಳು ನಡೆದವು. ಇಳಕಲ್ ಸೀರಿ ಉಟ್ಟ ವಿದ್ಯಾರ್ಥಿನಿಯರು ಸೆಲ್ಫೀಗಳನ್ನು ತೆಗೆದುಕೊಂಡು ಖುಷಿಪಟ್ಟರು. ಕೆಲ ವಿದ್ಯಾರ್ಥಿನಿಯರು ಲಂಬಾಣಿ ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನ ಸೆಳೆದರು. ಜನಪದ ನಶಿಸುತ್ತಿರುವ ಈ ದಿನಗಳಲ್ಲಿ ಅದನ್ನು ಸ್ಮರಿಸುವ ಕಾರ್ಯ ಮಾಡುತ್ತಿರುವ ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಯರ ಕಾರ್ಯಕ್ಕೆ ಹಿರಿಯ ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಮೆಚ್ಚುಗೆ ವ್ಯಕ್ತಪಡಿಸಿದರು.

ಒಟ್ಟಾರೆ ಬಾಯಿ ತೆಗೆದರೆ ಪಿಜಾ-ಬರ್ಗರ್ ಎನ್ನುವ ಮಕ್ಕಳು ಇಂದು ಜೋಳದ ರೊಟ್ಟಿ, ಶೇಂಗಾ ಹಿಂಡಿ, ಹೋಳಿಗೆ ಇತ್ಯಾದಿಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದುದು ಗಮನ ಸೆಳೆಯಿತು. ಬೀಸುವ ಕಲ್ಲು, ಕುಟ್ಟುವ ಒನಕೆ, ಒಳ್ಳು, ಕೌದಿ ಇತ್ಯಾದಿ ಜನಸಾಮಾನ್ಯರಿಂದ ಕಣ್ಮರೆಯಾಗುತ್ತಿರುವ ವಸ್ತುಗಳೂ ಸಹ ಪ್ರದರ್ಶನಗೊಂಡವು. ಹಳ್ಳಿಯ ಶೈಲಿನಯ ಜೀವನದ ಮರುಸೃಷ್ಠಿಯನ್ನೂ ಮಾಡಲಾಗಿತ್ತು. ಜಾನಪದ ಸಂಭ್ರಮ ಒಂದರ್ಥದಲ್ಲಿ ಜನಪದರ ಬದುಕಿನ ಗತ ವೈಭವವನ್ನು ಬಿಂಬಿಸುತ್ತಿತ್ತು.
Loading...

 
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...