ನೆರೆ ಸಂತ್ರಸ್ತರಿಗೆ ಮನೆ ಹಸ್ತಾಂತರ ಮತ್ತೊಂದು ವಾರ ತಡ; ಸಚಿವ ವಿ. ಸೋಮಣ್ಣ

ಸಾವಿರಾರು ಮನೆಗಳ ನಿರ್ಮಾಣ ಮಾಡುವಾಗ ಯಾವುದೋ ಒಂದು ಮನೆಯ ಕೆಲಸದಲ್ಲಿ ಚಿಕ್ಕಪುಟ್ಟ ವ್ಯತ್ಯಾಸ ಆಗಿರಬಹುದು. ಆದರೆ ಇದನ್ನೇ ಉದ್ದೇಶ ಪೂರ್ವಕವಾಗಿ ಸರ್ಕಾರದ ವಿರುದ್ಧ ಆರೋಪಿಸಲಾಗುತ್ತಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಸಚಿವ ವಿ. ಸೋಮಣ್ಣ

ಸಚಿವ ವಿ. ಸೋಮಣ್ಣ

  • Share this:
ಕೊಡಗು (ಮೇ 22): 2018 ರ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನಿರ್ಮಾಣ ಮಾಡಿರುವ ಮನೆಗಳ ಹಸ್ತಾಂತರ ಕಾರ್ಯ ಮತ್ತೊಂದು ವಾರ ತಡವಾಗಲಿದೆ ಎಂದು ಉಸ್ತುವಾರಿ ಸಚಿವ ವಿ ಸೋಮಣ್ಣ ಇಂದು ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ವಿ ಸೋಮಣ್ಣ, "ಲಾಕ್‍ಡೌನ್ ಮುಂದುವರೆಯುವ ಬಗ್ಗೆ ಯಾವುದೇ ಯೋಚನೆ ಇರಲಿಲ್ಲ. ಹೀಗಾಗಿ ಮೇ 29 ರಂದು ಸಂತ್ರಸ್ತರಿಗೆ ಮನೆ ಹಸ್ತಾಂತರಿಸಲು ನಿರ್ಧರಿಸಲಾಗಿತ್ತು. ಆದರೆ, ಲಾಕ್‍ಡೌನ್ ಮೇ ಕೊನೆಯವರೆಗೆ ಇರುವುದರಿಂದ ಜೂನ್ 4 ರಂದು ಮನೆ ಹಸ್ತಾಂತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕೆಂಬ ಸಂತ್ರಸ್ತರ ಒತ್ತಾಯ ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಪ್ರೊಟೊಕಾಲ್ ಪ್ರಕಾರ ಯಾರನ್ನೆಲ್ಲಾ ಕರೆಯಲು ಸಾಧ್ಯವಿದೆಯೊ ಅವರನ್ನು ಕರೆಯಲಾಗುವುದು ಅಷ್ಟೇ" ಎಂದಿದ್ದಾರೆ. ಆ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಆಹ್ವಾನಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಇನ್ನು ಸಂತ್ರಸ್ತರಿಗೆ ನಿರ್ಮಾಣ ಮಾಡಿರುವ ಮನೆಗಳ ಕಾಮಗಾರಿ ಕಳಪೆ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ವಿ ಸೋಮಣ್ಣ, "ಸಾವಿರಾರು ಮನೆಗಳ ನಿರ್ಮಾಣ ಮಾಡುವಾಗ ಯಾವುದೋ ಒಂದು ಮನೆಯ ಕೆಲಸದಲ್ಲಿ ಚಿಕ್ಕಪುಟ್ಟ ವ್ಯತ್ಯಾಸ ಆಗಿರಬಹುದು. ಆದರೆ ಇದನ್ನೇ ಉದ್ದೇಶ ಪೂರ್ವಕವಾಗಿ ಸರ್ಕಾರದ ವಿರುದ್ಧ ಆರೋಪಿಸಲಾಗುತ್ತಿದೆ. ಒಂದು ವೇಳೆ ಹಾಗೆ ಕಳಪೆಯಾಗಿದ್ದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಪಾಕಿಸ್ತಾನದ ವಿಮಾನ ದುರಂತ; ಅಚ್ಚರಿಯ ರೀತಿಯಲ್ಲಿ ಬದುಕುಳಿದ ಬ್ಯಾಂಕ್ ಆಫ್ ಪಂಜಾಬ್ ಸಿಇಒ ಜಾಫರ್ ಮಸೂದ್
First published: