ವರುಣನ ಆರ್ಭಟ ಬೆಂಗಳೂರಿನಲ್ಲಿ (Bengaluru) ಸಾಕಷ್ಟು ನಷ್ಟವನ್ನುಂಟು ಮಾಡಿದ್ದು, ನಗರದಲ್ಲಿ ಸಾಕಷ್ಟು ಹಾನಿಗಳನ್ನುಂಟು ಮಾಡಿದೆ. ಮನೆಗಳಿಗೆ ನುಗ್ಗಿ ಗೃಹೋಪಯೋಗಿ ವಸ್ತುಗಳು ನಾಶವಾಗಿರುವುದರ ಜೊತೆ ಜೊತೆಗೆ ಅದೆಷ್ಟೋ ಮನೆಗಳನ್ನು (Homes) ವರುಣ ದೇವ ಭಾಗಶಃ ಮುಳುಗಿಸಿಯೇ ಬಿಟ್ಟಿದ್ದಾನೆ. ಕಳೆದ ಬುಧವಾರ ರಾತ್ರಿ ಸುರಿದ ಮಳೆಯಿಂದ ಸುಮಾರು 200 ಮನೆಗಳಿಗೆ ನೀರು ನುಗ್ಗಿದೆ. ಮಹದೇವಪುರ, ಬೊಮ್ಮನಹಳ್ಳಿ ಮತ್ತು ಬೆಂಗಳೂರಿನ ದಕ್ಷಿಣ ಮತ್ತು ಪೂರ್ವ ಭಾಗಗಳು ಹೆಚ್ಚು ಹಾನಿಗೊಳಗಾಗಿದ್ದು, ಉತ್ತರ ಮತ್ತು ಪಶ್ಚಿಮ ಬೆಂಗಳೂರು ಯಾವುದೇ ಮಳೆ-ಸಂಬಂಧಿತ ಹಾನಿಯಿಂದ ಮುಕ್ತವಾಗಿದೆ. ಐಟಿ ಹಬ್‌ಗಳೂ (IT- Hub) ಸೇರಿದಂತೆ ಬೆಂಗಳೂರಿನ 60 ಸ್ಥಳಗಳಲ್ಲಿ ಮಳೆರಾಯ ತನ್ನ ಆರ್ಭಟಿಸಿದ್ದಾನೆ ಅಂತೆಯೇ ಕನಿಷ್ಠ ಮೂರು ರಸ್ತೆಗಳು (Roads) ಕುಸಿದಿವೆ ಎಂದು ಬಿಬಿಎಂಪಿಯ ಅಂಕಿ ಅಂಶಗಳು ತಿಳಿಸಿವೆ.
ಮನೆಗಳಿಗೆ ನೀರು ನುಗ್ಗಿದೆ
ನಗರದ ಹಲವಾರು ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿದ್ದು, ಮಡಿವಾಳ ಕೆರೆ ತುಂಬಿ ಹರಿಯುತ್ತಿದ್ದು, ಹಲವು ಜನವಸತಿ ಪ್ರದೇಶಗಳು ಹಾಗೂ ಹೊರವರ್ತುಲ ರಸ್ತೆಗೆ ನೀರು ನುಗ್ಗಿದೆ. ಮೂರು ತಿಂಗಳಲ್ಲಿ ಏಳನೇ ಬಾರಿಗೆ ತಮ್ಮ ಮನೆಗಳಿಗೆ ನೀರು ನುಗ್ಗುತ್ತಿರುವುದಾಗಿ ಕೆಲವು ನಿವಾಸಿಗಳು ತಿಳಿಸಿದ್ದಾರೆ.
ಬಿಬಿಎಂಪಿ ಮಂಕೀಸ್ ಚೀಕ್ ಯೋಜನೆ
ನಗರದಲ್ಲಿ ಸಾಧಾರಣ ಮಳೆಯಾದಾಗಲೂ ಜಲಾವೃತಗೊಳ್ಳುತ್ತಿದ್ದು ಈ ಸಮಸ್ಯೆಯನ್ನು ಪರಿಹರಿಸಲು ತಗ್ಗು ಪ್ರದೇಶಗಳಲ್ಲಿ ನೆಲದಡಿಯಲ್ಲಿ ನೀರಿನ ಸಂಗ್ರಹಣೆ ಕಣಿವೆಗಳನ್ನು (ಮಂಕೀಸ್ ಚೀಕ್) ಯೋಜಿಸುವ ನಿರ್ಧಾರ ತಾಳಿದೆ. ಇಂತಹ ನೆಲದಡಿಯ ಟ್ಯಾಂಕ್‌ಗಳು ಮಳೆನೀರನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು ಅಂತಹ ಒಂದು ಭೂಗತ ಟ್ಯಾಂಕ್ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಿರ್ಮಿಸುವ ಯೋಜನೆ ಇದೆ ಎಂದು ಬಿಬಿಎಂಪಿ ತಿಳಿಸಿದೆ.
ಈ ಯೋಜನೆಯು ಇನ್ನೂ ಪರಿಕಲ್ಪನೆಯ ಹಂತವನ್ನು ತಲುಪಿಲ್ಲ ಜೊತೆಗೆ ಸರಕಾರದಿಂದ ಒದಗಿಸಲಾದ 1,800 ಕೋಟಿ ರೂಪಾಯಿ ವೆಚ್ಚದಲ್ಲಿ ನಾಗರಿಕ ಸಂಸ್ಥೆಯು ಪ್ರಸ್ತುತ ಮಳೆನೀರು ಚರಂಡಿಗಳನ್ನು ಮರುರೂಪಿಸುತ್ತಿದೆ.
ಪ್ರವಾಹ ತಗ್ಗಿಸಲು ಎರಡು ಸಲಹೆಗಳು
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸುವಂತೆ ತಗ್ಗು ಪ್ರದೇಶಗಳಲ್ಲಿ ಪ್ರವಾಹವನ್ನು ತಗ್ಗಿಸಲು ಎರಡು ಪರಿಹಾರಗಳನ್ನು ಸೂಚಿಸಿದ್ದು ಮಳೆನೀರು ಸಂಗ್ರಹಿಸುವ ಟ್ಯಾಂಕ್ ನಿರ್ಮಾಣ ಹಾಗೂ ಇನ್ನೊಂದು ಅನುಮತಿ ದೊರೆಯುವಲ್ಲಿ ನೀರನ್ನು ಹೊರಹಾಕಲು ಭೂಗತ ಪೈಪ್‌ಲೈನ್‌ಗಳನ್ನು ನಿರ್ಮಿಸುವುದು ಎಂದು ತಿಳಿಸಿದ್ದಾರೆ.
ವಿಶ್ವಬ್ಯಾಂಕ್ ನೆರವು
ಬೆಂಗಳೂರಿನಲ್ಲಿ ಮಳೆಬಂದಾಗ ಸಂಪೂರ್ಣ ಜಲಾವೃತಗೊಳ್ಳುವುದು ಇದೀಗ ಸರ್ವೇ ಸಾಮಾನ್ಯವಾಗಿಬಿಟ್ಟಿದ್ದು ನಗರದ ತಗ್ಗುಪ್ರದೇಶಗಳು ಮುಳುಗಡೆಯ ಭೀತಿಯನ್ನು ಎದುರಿಸುತ್ತಲೇ ಇವೆ. ಇಲ್ಲಿ ವಾಸಿಸುವವರ ಅಳಲು ತೋಡಿಕೊಂಡರೂ ಅದಕ್ಕೆ ಸೂಕ್ತಪರಿಹಾರ ದೊರೆಯುತ್ತಿಲ್ಲ. ಇನ್ನು ಸಿಲಿಕಾನ್ ಸಿಟಿಯ ಪ್ರವಾಹವನ್ನು ಪರಿಹರಿಸಲು ಕೈಗೊಳ್ಳಬೇಕಾದ ಯೋಜನೆಗಳಿಗೆ ಬೆಂಬಲವಾಗಿ ವಿಶ್ವ ಬ್ಯಾಂಕ್ ಸಹಾಯ ಹಸ್ತ ಚಾಚಿದೆ. ಬ್ಯಾಂಕ್ ನೀಡುವ ಸೂಚನೆಗಳು ಹಾಗೂ ಬೆಂಬಲವನ್ನು ಪರಿಗಣಿಸುವುದಾಗಿ ಕೂಡ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬಿಬಿಎಂಪಿಯ ಕಳಪೆ ಕಾಮಗಾರಿಯೇ ಹೊಣೆ
ಮಳೆಯ ಭೀಕರ ಹಾನಿಯಿಂದ ಕಂಗೆಟ್ಟಿರುವ ನಗರವಾಸಿಗಳು ಇದೀಗ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಹವಾಮಾನ ದೋಷದಿಂದ ಆಗಾಗ್ಗೆ ಮಳೆಸುರಿಯುತ್ತಿದ್ದು ಇದರಿಂದ ನಗರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ ಹಾಗೂ ನಾವು ಯಾವುದೇ ಪರಿಹಾರವನ್ನು ತೆಗೆದುಕೊಳ್ಳಲು ಆಗದೇ ಇರುವ ಪರಿಸ್ಥಿತಿಯಲ್ಲಿರುವುದಾಗಿ ಬಿಬಿಎಂಪಿ ತಿಳಿಸಿದ್ದರೆ, ನಾಗರಿಕರು, ಕಳಪೆ ಕಾಮಗಾರಿ ಹಾಗೂ ಮೇಲ್ವಿಚಾರಣೆಯ ಕೊರತೆಯಿಂದ ಬೆಂಗಳೂರು ನಗರ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ ಎಂದು ಜನತೆ ವಾದಿಸುತ್ತಿದ್ದಾರೆ.
ಇದನ್ನೂ ಓದಿ: Cauvery: ಜೀವನದಿಯ ಉಳಿವಿಗಾಗಿ ಕಾವೇರಿ ಆರತಿ
ಕಪ್ಪುಡಾಂಬರ್ ಹಾಕಿದ ರಸ್ತೆಗಳು ಬರೇ 10 ವರ್ಷ ಬಾಳಿಕೆ ಬಂದರೆ ಸಿಮೆಂಟ್ ಕಾಂಕ್ರೀಟ್ ಹಾಕಿದ ರೋಡ್‌ಗಳು 40 ವರ್ಷಗಳ ಕಾಲ ಬಾಳಿಕೆ ಬರುತ್ತದೆ ಹಾಗಿದ್ದರೆ ರಸ್ತೆಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಬಿಬಿಎಂಪಿ ಕಾಂಕ್ರೀಟ್ ರೋಡ್‌ಗಳಿಗೆ ಆದ್ಯತೆ ನೀಡಬೇಕು ಎಂಬುದಾಗಿ ತಜ್ಞರು ಸೂಚಿಸಿದ್ದಾರೆ. ಕಾಮಗಾರಿಗಳ ಗುತ್ತಿಗೆ ತೆಗೆದುಕೊಂಡವರೂ ಕೂಡ ಮೇಲ್ವಿಚಾರಣೆಯ ಕೊರತೆಯನ್ನು ಕಾಮಗಾರಿಗಳು ಎದುರಿಸುತ್ತಿವೆ ಎಂದು ಸ್ಪಷ್ಟವಾಗಿಯೇ ಹೇಳಿದ್ದು ಮೇಲಾಧಿಕಾರಿಗಳಿಂದ ಬರುವ ಆದೇಶಗಳಿಗೆ ತಕ್ಕಹಾಗೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಭ್ರಷ್ಟಾಚಾರ ಹಾಗೂ ಲಂಚ ಸಮಸ್ಯೆಗಳು ಮಿತಿಮೀರಿದ್ದು ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳುವುದು ಬಿಟ್ಟರೆ ಬೇರಾವ ದಾರಿ ಕೂಡ ಇಲ್ಲ ಎಂದು ತಿಳಿಸಿದ್ದಾರೆ. ಪೌರ ಕಾರ್ಮಿಕರು ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನೂ ಬೇಜಾವಬ್ದಾರಿಯಿಂದ ಮಾಡುತ್ತಿದ್ದಾರೆ ಎಂಬುದಾಗಿ ನಗರವಾಸಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ