news18-kannada Updated:June 14, 2020, 7:51 AM IST
ಸಾಂದರ್ಭಿಕ ಚಿತ್ರ
ಬಾಗಲಕೋಟೆ(ಜೂ.14): ಮಹಾರಾಷ್ಟ್ರದ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದೆ. ಹೀಗಾಗಿ ಮಹಾರಾಷ್ಟ್ರ-ಕರ್ನಾಟಕ ಗಡಿ ಜಿಲ್ಲೆ ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ಮೋಡ ಕವಿದ ವಾತಾವರಣ, ತುಂತುರು ಮಳೆ ಜೊತೆಗೆ ಅಲ್ಲಲ್ಲಿ ಮಳೆ ಆರ್ಭಟ ಜೋರಾಗಿದೆ.
ಇನ್ನು, ಮಹಾರಾಷ್ಟ್ರದಲ್ಲಿ ಮಳೆಯಾದರೆ ಕರ್ನಾಟಕದಲ್ಲಿ ಪ್ರವಾಹ ಎನ್ನುವ ಮಾತು ಜನಜನಿತವಾಗಿದೆ. ಕಳೆದ ವರ್ಷದ ಪ್ರವಾಹ ಶತಮಾನದಲ್ಲಿ ಕಂಡು ಕೇಳರಿಯದ ಕರಾಳ ಘಟನೆ ಸಂತ್ರಸ್ತರಲ್ಲಿ ಇನ್ನೂ ಮಾಸಿಲ್ಲ. ಪ್ರವಾಹದ ಬಳಿಕ ಕೊರೋನಾ ಕರಾಳತೆ ಮಧ್ಯೆ ಸಂತ್ರಸ್ತರು ಸೂರು ಕಟ್ಟಿಕೊಂಡಿಲ್ಲ. ಆದರೀಗ ಮತ್ತೆ ಪ್ರವಾಹದ ಎಚ್ಚರಿಕೆ ಗಂಟೆಗೆ ಸಂತ್ರಸ್ತರು ಬೆಚ್ಚಿಬಿದ್ದಿದ್ದಾರೆ.
ಬಾಗಲಕೋಟೆಯಲ್ಲಿ ಈ ಬಾರಿ ಪ್ರವಾಹ ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಜಿಲ್ಲಾಡಳಿತ ಈಗಾಗಲೇ ಪ್ರವಾಹ ಎದುರಿಸುವ ಸಂಬಂಧ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ಎಸ್ಪಿ ಲೋಕೇಶ್, ಜಿಪಂ ಸಿಇಒ ಗಂಗೂಬಾಯಿ ಮಾನಕರ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಜಿಲ್ಲೆಯ ಕೃಷ್ಣಾ ,ಮಲಪ್ರಭಾ, ಘಟಪ್ರಭಾ ನದಿ ತೀರದ ಗ್ರಾಮಗಳಲ್ಲಿ ಡಂಗೂರ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಕೃಷ್ಣಾನದಿ ತೀರದ ಜಮಖಂಡಿ ತಾಲೂಕಿನ ಗ್ರಾಮಗಳು, ಘಟಪ್ರಭಾ ನದಿ ತೀರದ ಮುಧೋಳ ತಾಲೂಕಿನ ಗ್ರಾಮಗಳು, ಹಾಗೂ ಮಲಪ್ರಭಾ ನದಿ ತೀರದ ಬಾದಾಮಿ ತಾಲೂಕಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಹ ಮುನ್ಸೂಚನೆ ನೀಡಲಾಗಿದೆ.
ಕಳೆದ ಬಾರಿ ಪ್ರವಾಹ ನೀರು ಯಾವ್ಯಾವ ಗ್ರಾಮಗಳಲ್ಲಿ ಎಲ್ಲಿಯವರೆಗೆ ಬಂದಿತ್ತು. ಆ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಿದ್ದತೆ ಜಿಲ್ಲಾಡಳಿತ ಮಾಡಿಕೊಂಡಿದೆ. ಇನ್ನು ಪ್ರವಾಹ ಪೀಡಿತ ತಾಲೂಕುಗಳಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದೆ. ಪ್ರವಾಹ ಪೀಡಿತಗೊಳಗಾಗುವ ತಾಲೂಕುವಾರು ಅಗ್ನಿಶಾಮಕ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಬೋಟ್, ಈಜುಗಾರ ಪಟ್ಟಿ ಸಿದ್ಧಪಡಿಸಿಕೊಂಡಿದೆ.
ಇದನ್ನೂ ಓದಿ: ಕೊರೋನಾ ಎಫೆಕ್ಟ್: ಬೆಂಗಳೂರಿನಲ್ಲಿ ಬಾಡಿಗೆ ಮನೆಗಳು ಖಾಲಿ ಖಾಲಿ..
ಪ್ರತಿ ದಿನ ನದಿಗೆ ಹರಿಬಿಡಲಾಗುವ ನೀರಿನ ಒಳಹರಿವು ಪ್ರಮಾಣದ ಮೇಲೆ ಆಲಮಟ್ಟಿ ಅಣೆಕಟ್ಟೆ ಅಭಿಯಂತರರು ನಿಗಾ ವಹಿಸಿ ಮುನ್ನೆಚ್ಚರಿಕೆ ನೀಡುವಂತೆ ಸೂಚಿಸಲಾಗಿದೆ. ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಅಲ್ಲಿನ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆ ಯಾವುದೇ ಮುನ್ಸೂಚನೆ ನೀಡದೇ ನದಿಗೆ ನೀರು ಹರಿಬಿಟ್ಟ ಪರಿಣಾಮ ಬಾಗಲಕೋಟೆ ಜಿಲ್ಲೆಯ ಮೂರು ನದಿಗಳ ಪ್ರವಾಹಕ್ಕೆ 198 ಗ್ರಾಮಗಳು ನಲುಗುವಂತಾಗಿತ್ತು. ಜೊತೆಗೆ ನದಿ ತೀರದ ಗ್ರಾಮಸ್ಥರು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗೊಳಗಾಗಿತ್ತು.ಕಳೆದ ಬಾರಿ ಪ್ರವಾಹದಿಂದ ಪಾಠ ಕಲಿತಿರುವ ಜಿಲ್ಲಾಡಳಿತ ಈಗಲೇ ಎಚ್ಚೆತ್ತುಕೊಂಡು ಸಮರ್ಥವಾಗಿ ಪ್ರವಾಹ ಎದುರಿಸುವಲ್ಲಿ ತೊಡಿಗಿಸಿಕೊಂಡಿದ್ದ ಅಧಿಕಾರಿಗಳ ಸಲಹೆ ಪಡೆಯಲು ಜಿಲ್ಲಾಡಳಿತ ಮುಂದಾಗಿದೆ. ಜಮಖಂಡಿ, ಮುಧೋಳ, ಬಾದಾಮಿ ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ರಚಿಸಿದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗುವಂತೆ ಸೂಚಿಸಲಾಗಿದೆ ಅಂತಾರೆ ಬಾಗಲಕೋಟೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ.
ಇನ್ನು ಕಳೆದ ವರ್ಷದ ಪ್ರವಾಹದ ಹೊಡೆತಕ್ಕೆ ತತ್ತರಿಸಿದ ಸಂತ್ರಸ್ತರು ಬದುಕು ಕಟ್ಟಿಕೊಳ್ಳುವ ಮುನ್ನವೇ ಮತ್ತೆ ಪ್ರವಾಹದ ಎಚ್ಚರಿಕೆ ಗಂಟೆ ಬರಸಿಡಿಲು ಬಡದಂತಾಗಿದೆ. ಈ ಬಾರಿ ಮುಂಗಾರು ಮಳೆ ಉತ್ತಮವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಈ ಬಾರಿಯೂ ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಜತೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಹೆಸರು ಬೀಜ ಬಿತ್ತನೆ ಮಾಡಿರುವ ರೈತರು ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ. ಕೆಲವೆಡೆ ಮೋಡ ಕವಿದ ವಾತಾವರಣವಿರುವದರಿಂದ ಯಾವಾಗ ಮಳೆಯಾಗುತ್ತೆ ಎಂದು ಬಿತ್ತನೆ ಮಾಡಿದ ರೈತರ ಎದುರು ನೋಡುತ್ತಿದ್ರೆ, ಇನ್ನೊಂದೆಡೆ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಏನೇ ಆಗಲಿ ಪ್ರವಾಹ ಬಾರದಿರಲಿ,ಫಸಲು ಬರುವಷ್ಟು ಮಳೆಯಾಗಲಿ ಎನ್ನುವುದು ಎಲ್ಲರ ಆಶಯ.
First published:
June 14, 2020, 7:51 AM IST