ಭೀಮಾ ನದಿಯಲ್ಲಿ ಪ್ರವಾಹ; ಜೀವ ಉಳಿಸಿಕೊಳ್ಳಲು ಜನರ ಹರಸಾಹಸ

ಭೀಮಾ ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು, ಜನರು ಭೀಮೆಯ ಪ್ರವಾಹಕ್ಕೆ ಬೆಚ್ಚಿಬಿದ್ದಿದ್ದಾರೆ. ಪ್ರವಾಹ ಕಂಡು ಹೆದರಿ ಗ್ರಾಮಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.

ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ಜನ

ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ಜನ

  • Share this:
ಕಲಬುರ್ಗಿ(ಅ.17): ಕಲಬುರ್ಗಿ ಜಿಲ್ಲೆಯಲ್ಲಿ ಭೀಮೆ ಅಬ್ಬರಿಸಿದೆ. ಭೀಮೆ ಉಕ್ಕಿದಂತೆಲ್ಲಾ ಜನತೆ ಬಿಕ್ಕುವಂತಾಗಿದೆ. ನೂರಾರು ಗ್ರಾಮಗಳು ಜಲಾವೃತಗೊಂಡಿವೆ. ಗಂಟು-ಮೂಟೆಗಳನ್ನು ಕಟ್ಟಿಕೊಂಡು ಜನ ಮೇಲ್ಭಾಗದ ಸ್ಥಳಗಳಿಗೆ ತೆರಳುತ್ತಿದ್ದಾರೆ. ಭೀಮಾ ನದಿ ನೀರು 8 ಲಕ್ಷ ಕ್ಯೂಸೆಕ್ಸ್ ದಾಟಿದ್ದು, ಪ್ರವಾಹ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗಲಾರಂಭಿಸಿದೆ. ಹೌದು, ಭೀಮಾ ನದಿಯಲ್ಲಿ ಭಾರೀ  ಪ್ರವಾಹ ಉಂಟಾಗಿದ್ದು, ಹಲವು ಜನರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ತಗ್ಗು ಪ್ರದೇಶಗಳಲ್ಲಿದ್ದ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ಹೀಗಾಗಿ 15ಕ್ಕೂ ಹೆಚ್ಚು ಮಂದಿ ಭೀಮೆಯ ಪ್ರವಾಹದಲ್ಲಿ ಸಿಕ್ಕಿಕೊಂಡಿದ್ದಾರೆ. ಹೊಲದ ಮನೆಯಲ್ಲಿಯೇ ಇರುವ ಜನರ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ. ಜನಗಳ ಜೊತೆ ಜಾನುವಾರುಗಳೂ ಸಹ ಸಂಕಷ್ಟಕ್ಕೆ ಸಿಲುಕಿವೆ. ಅಫಜಲಪುರ ತಾಲೂಕಿನ ಬೋಸಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಕಲಬುರ್ಗಿ ಎಸಿ ರಾಮಚಂದ್ರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಬೋಟ್ ಮೂಲಕ ಕೆಲವು ಸಂತ್ರಸ್ತರನ್ನು ರಕ್ಷಣೆ ಮಾಡಲಾಗಿದೆ. ಉಳಿದವರು ಅಲ್ಲಿಂದ ಬರಲು ನಿರಾಕರಿಸುತ್ತಿದ್ದಾರೆ. ದನಗಳನ್ನು ಬಿಟ್ಟು ಬರೋಕೆ ಆಗಲ್ಲ ಅಂತ ಸಂತ್ರಸ್ತರು ಹೇಳುತ್ತಿದ್ದಾರೆ.ಸ್ಥಳೀಯರು ಮತ್ತು ಎಸಿ ರಾಮಚಂದ್ರ ನಡುವೆ ವಾಗ್ವಾದ ನಡೆದಿದೆ. ಸ್ಥಳೀಯರ ಮನವೊಲಿಕೆಗೆ ಎಸಿ ಯತ್ನಿಸಿದ್ದಾರೆ. ಆದರೂ ಸ್ಥಳಕ್ಕೆ ರಕ್ಷಿಸಲು ಹೋದಾಗ ಸಂತ್ರಸ್ತರು ಬಚ್ಚಿಟ್ಟುಕೊಳ್ಳಲು ಯತ್ನಿಸಿದ್ದಾರೆ. ಕೊನೆಗೂ ಎಸಿ ರಾಮಚಂದ್ರ ಮತ್ತು ಡಿವೈಎಸ್ಪಿ ಮಲ್ಲಿಕಾರ್ಜುನ ಸಂತ್ರಸ್ತರ ಮನವೊಲಿಕೆ ಮಾಡಿದ್ದಾರೆ. ಕೊನೆಗೂ 15 ಜನ ಸಂತ್ರಸ್ತರನ್ನು ರಕ್ಷಿಸಿದ್ದಾರೆ.ಭೀಮಾ ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು, ಜನರು ಭೀಮೆಯ ಪ್ರವಾಹಕ್ಕೆ ಬೆಚ್ಚಿಬಿದ್ದಿದ್ದಾರೆ. ಪ್ರವಾಹ ಕಂಡು ಹೆದರಿ ಗ್ರಾಮಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಜೊತೆಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಫಜಲಪುರ ತಾಲೂಕಿನ ಬೋಸಗಾ ಗ್ರಾಮ ನಾಲ್ಕು ದಿನಗಳಿಂದಲೂ ಜಲಾವೃತಗೊಂಡಿದೆ. ನಾಲ್ಕು ದಿನಗಳಿಂದಲೂ ಉಪವಾಸ ಬಿದ್ದಿದ್ದೇವೆ. ಯಾರೂ ಕೇಳೋರೇ ಇಲ್ಲ ಎಂದು ಬೋಸಗಾ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ.

ಐಲ್ಯಾಂಡ್ ಆದ ಬೋಸಗಾ ಗ್ರಾಮ

ಭೀಮಾ ನದಿಯಲ್ಲಿ ಪ್ರವಾಹದಿಂದಾಗಿ ಹೊಳೆ ಬೋಸಗಾ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ನೀರು ಸುತ್ತುವರಿದು ಗ್ರಾಮವು ದ್ವೀಪದಂತಾಗಿದೆ. ಗ್ರಾಮದ ಬಹುತೇಕ ಮನೆಗಳಿಗೆ ಬೀಗ ಹಾಕಿಕೊಂಡು  ಜನ ಊರು ತೊರೆದಿದ್ದಾರೆ. ಅಂಗನವಾಡಿ ಕಟ್ಟಡ, ಶಾಲೆ, ಹಲವು ದೇವಸ್ಥಾನಗಳೂ ಮುಳುಗಡೆಯಾಗಿವೆ. ಮನೆಯಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಜನರು ಸಿಲಿಂಡರ್, ಸಾಕು ಪ್ರಾಣಿ, ಜಾನುವಾರುಗಳ ಜೊತೆ ಗ್ರಾಮ ತೊರೆಯುತ್ತಿದ್ದಾರೆ. ಜನಪ್ರತಿನಿಧಿಗಳೂ, ಅಧಿಕಾರಿಗಳ ವಿರುದ್ಧ ಜನತೆ ಆಕ್ರೋಶ ಹೊರಹಾಕಿದ್ದಾರೆ. ನಾಲ್ಕೈದು ದಿನದಿಂದ ಉಪವಾಸ ಬಿದ್ದಿದ್ದೇವೆ. ಯಾರೂ ಬಂದಿಲ್ಲ, ಯಾರನ್ನೂ ವಿಚಾರಿಸಿಲ್ಲ. ಕಾಳಜಿ ಕೇಂದ್ರವನ್ನೂ ತೆರೆದಿಲ್ಲವೆಂದು ಕಿಡಿಕಾರಿದ್ದಾರೆ.
Published by:Latha CG
First published: