news18-kannada Updated:August 19, 2020, 3:46 PM IST
ಸಾಂದರ್ಭಿಕ ಚಿತ್ರ
ಕಾರವಾರ(ಆ.19): ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಭಾರೀ ಮಳೆ ಸುರಿದರೆ, ತಾಲೂಕಿನ ತಂಡ್ರಕುಳಿ ಗ್ರಾಮದ ಜನರ ಸ್ಥಿತಿ ನರಕಕ್ಕೆ ದೂಡುತ್ತದೆ. ಒಂದೆಡೆ ನದಿ ಪ್ರವಾಹದ ಆತಂಕ, ಇನ್ನೊಂದೆಡೆ ಗುಡ್ಡ ಕುಸಿತದ ಭೀತಿ. ಈ ಎರಡರ ನಡುವೆ ಈ ಗ್ರಾಮದ ಜನರು ಜೀವ ಕೈಯಲ್ಲಿ ಹಿಡಿದು ಜೀವನ ದೂಡುತ್ತಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತಂಡ್ರಕುಳಿ ಗ್ರಾಮ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿದೆ. ಇಲ್ಲಿ ಸುತ್ತಮುತ್ತ ಸುಮಾರು 30 ಮನೆಗಳಿವೆ. ಅಘನಾಶಿನಿ ನದಿ ಪಾತ್ರದಲ್ಲಿ ಇರುವ ಈ ಗ್ರಾಮದ ಜನರು ಮಳೆಗಾಲದಲ್ಲಿ ಅಘನಾಶಿನಿ ನದಿ ಪ್ರವಾಹದ ಭೀತಿ ಎದುರಿಸಿ ಎರಡು ತಿಂಗಳು ಭಯದಲ್ಲೆ ಜೀವನ ದೂಡುತ್ತಾರೆ.
ಕಳೆದ ವರ್ಷ ಮತ್ತು ಈ ವರ್ಷ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಕುಸಿದು ಸಾಕಷ್ಟು ಸಮಸ್ಯೆ ಆಗಿದೆ. ಕಳೆದ ಎರಡು ವರ್ಷದ ಹಿಂದೆ ಇದೆ ಜಾಗದಲ್ಲಿ ಗುಡ್ಡ ಕುಸಿದು ಈ ಗ್ರಾಮದಲ್ಲಿ ಮೂವರು ಧಾರುಣವಾಗಿ ಸಾವು ಕಂಡಿದ್ದರು. ಈ ಭಾರೀ ಸುರಿದ ಮಳೆಗೂ ಕೂಡಾ ಇಲ್ಲಿ ಗುಡ್ಡ ಕುಸಿದು ಬಿದ್ದು ಮತ್ತೆ ಸಮಸ್ಯೆ ಎದುರಾಗಿದೆ. ಜತೆಗೆ ಇಲ್ಲಿ ಹರಿಯುವ ಅಘನಾಶಿನಿ ನದಿ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ ಇಲ್ಲಿನ ಜನ. ಹೀಗೆ ಒಂದೆಡೆ ಗುಡ್ಡ ಕುಸಿತದ ಭೀತಿ ಮತ್ತು ನದಿ ಪ್ರವಾಹದ ಭಯಕ್ಕೆ ಬಿದ್ದು ನರಕ ಯಾತನೆಯಲ್ಲಿ ಜನರು ಜೀವನ ದೂಡುತ್ತಿದ್ದಾರೆ.

ಭೂ ಕುಸಿತದ ಭಯ
ಇನ್ನೂ ಈ ಗ್ರಾಮದವರು ಕಳೆದ ಎರಡು ವರ್ಷದಿಂದ ತಮ್ಮನ್ನ ಸ್ಥಳಾಂತರಿಸಿ ಎಂದು ಸರಕಾರದ ಮುಂದೆ ಗೋಗರೆಯುತ್ತಿದ್ದಾರೆ. ಆದರೆ ಇದರಿಂದ ಯಾವ ಪ್ರಯೋಜನವೂ ಆಗಿಲ್ಲ. ಪ್ರವಾಹ ಮತ್ತು ಗುಡ್ಡ ಕುಸಿತದ ಸಂದರ್ಭದಲ್ಲಿ ಇಲ್ಲಿ ಸಾಂತ್ವಾನ ಹೇಳಲು ಬರುವ ಜನಪ್ರತಿನಿಧಿಗಳಿಗೆ ಇಲ್ಲಿನ ಎಲ್ಲ ಸಮಸ್ಯೆ ಅರಿವು ಇದೆ, ಆದ್ರೆ ಇದಕ್ಕೆ ಶಾಶ್ವತ ಪರಿಹಾರ ಕೊಡಿಸುವ ಪ್ರಯತ್ನ ಆಗಿಲ್ಲ ಎನ್ನೋದು ಇಲ್ಲಿನ ಜನರ ಆರೋಪ. ಕೇವಲ ಘಟನೆ ಘಟಿಸಿದ ಸಂದರ್ಭದಲ್ಲಿ ಸಾಂತ್ವಾನದ ಮಾತು ಮಾತ್ರ ಜನಪ್ರತಿನಿಧಿಗಳಿಂದ ಕೇಳಿ ಬರುತ್ತದೆ. ಕಳೆದ ಎರಡು ವರ್ಷದಿಂದ ಮಳೆಗಾಲದಲ್ಲಿ ಇಲ್ಲಿನ ಜನರ ಬದುಕು ಹೇಳತೀರದ್ದಾಗಿದೆ. ಭಯದ ವಾತಾವರಣದಲ್ಲಿ ಬದುಕೆ ಬೇಡವೆನಿಸಿದೆ ಎನ್ನೋದು ಅಳಲು ಇಲ್ಲಿ ಜನರದ್ದು.
ಒಟ್ಟಾರೆ ತಂಡ್ರಕುಳಿ ಗ್ರಾಮದ ಬದುಕು ನರಕದಲ್ಲಿ ಸಾಗುತ್ತಿದೆ. ಒಂದೆಡೆ ಪ್ರವಾಹ ಇನ್ನೊಂದೆಡೆ ಗುಡ್ಡ ಕುಸಿತದ ಭಯ. ಈ ನರಕದಲ್ಲಿ ಹೇಗೆ ಬದುಕಲಯ್ಯಾ ನಾವು ಎನ್ನುವುದೇ ಇಲ್ಲಿನ ಜನರ ದಿನನಿತ್ಯದ ಗೋಳು. ಆಳುವ ಜನಪ್ರತಿನಿಧಿಗಳು ಕೂಡಲೇ ಇದಕ್ಕೆ ಸೂಕ್ತ ಪರಿಹಾರ ನೀಡಬೇಕು.
Published by:
Latha CG
First published:
August 19, 2020, 3:46 PM IST