ಹೇಮಾವತಿ ಹಿನ್ನೀರಿನಲ್ಲಿ ಮುಳುಗುತ್ತಿದೆ ತೇಲುವ ಟೈಟಾನಿಕ್...!

ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಯ ಭಾಗಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು, 1960ರಲ್ಲಿ ಹಾಸನದ ಜೀವನದಿ­ಯಾದ ಹೇಮಾವತಿಗೆ ಗೊರೂರು ಗ್ರಾಮದ ಬಳಿ ಅಣೆಕಟ್ಟೆ ನಿರ್ಮಾಣ ಪ್ರಾರಂಭವಾಯಿತು. ಆಗ ಶೆಟ್ಟಿಹಳ್ಳಿ ಸೇರಿದಂತೆ ಸುಮಾರು 28 ಗ್ರಾಮಗಳು ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾದವು. ಈ ಪೈಕಿ ಒಂದೂವರೆ ಶತಮಾನದ ಚರ್ಚ್‌ ಕೂಡ ಹೇಮಾವತಿ ಅಣೆಕಟ್ಟೆಯ ಒಡಲು ಸೇರಿಕೊಂಡಿತು. ಅಂದಿನಿಂದ ಶೆಟ್ಟಿಹಳ್ಳಿ ಚರ್ಚ್ ಹಿನ್ನೀರಿನಲ್ಲಿ ಮುಳುಗೇಳುತ್ತಿದೆ. ತೇಲುವ ಹಡಗಿನಂತೆ.

ಮುಳುಗುತ್ತಿರುವ ಚರ್ಚ್​

ಮುಳುಗುತ್ತಿರುವ ಚರ್ಚ್​

  • Share this:
ಹಾಸನ(ಆ.11): ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿರುವ ತೇಲುವ ಟೈಟಾನಿಕ್ ಎಂದೇ ಪ್ರಸಿದ್ಧಿ ಪಡೆದಿರುವ ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ರೋಸರಿ ಚರ್ಚ್​​ ಮುಳುಗಡೆಯಾಗಿರುವ ಬಗ್ಗೆ ಚರ್ಚ್​​ನ ಫಾದರ್ ಡೇವಿಡ್ ಅವರು ಪರಿಚಯಿಸಿದ್ದಾರೆ.

ಹೇಮಾವತಿಯ ಜಲರಾಶಿ ನಡುವೆ ಮೇಲೆ ಮುಳುಗಿ ಏಳುತ್ತಿರುವ ಹಡಗಿನಂತಹ ಆಕೃತಿಯೊಂದು ಕಾಣುತ್ತದೆ. ಹಾದು ಹೋಗುವವರನ್ನು ತನ್ನ ಹೊರ ಮೇಲ್ಮೈನಿಂದಲೇ ಸೆಳೆಯುವ ಈ ಆಕೃತಿಯೇ ಶೆಟ್ಟಿಹಳ್ಳಿಯ ಐತಿಹಾಸಿಕ ‘ರೋಸರಿ ಚರ್ಚ್’. ಚರಿತ್ರೆಯ ಕುರುಹನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ಈ ಚರ್ಚ್, ಪ್ರತಿ ಮಳೆಗಾಲದಲ್ಲಿ ಹೇಮಾವತಿಯ  ಹಿನ್ನೀರಿನಲ್ಲಿ ಮುಳುಗೇಳುತ್ತದೆ.

ಹಾಸನದಿಂದ 15 ಕಿಲೋ ಮೀಟರ್ ದೂರದಲ್ಲಿರುವ ಶೆಟ್ಟಿಹಳ್ಳಿಯಲ್ಲಿ ಈ ಚರ್ಚ್ ಇದೆ. ಸ್ವಾತಂತ್ರ್ಯಪೂರ್ವ ಮೈಸೂರು ಭಾಗದಲ್ಲಿ, ಹಾಸನದ ಸುತ್ತಮುತ್ತ ವಾಸವಿದ್ದ ಕೈಸ್ತ ಧರ್ಮೀಯರ ಹೆಮ್ಮೆಯ ಆರಾಧನಾ ಕೇಂದ್ರವಾಗಿದ್ದ ಈ ಚರ್ಚ್, ಇಂದು ಕಾಲಗರ್ಭದೊಳಗೆ ಹೂತುಹೋಗಿದೆ. ಆದರೆ, ಇಂದಿಗೂ ತನ್ನ ಹಳೆಯ ಚಹರೆಯನ್ನು ಪಳೆಯುಳಿಕೆಯಂತೆ ಉಳಿಸಿಕೊಂಡಿದ್ದು, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಬೇಲೂರು, ಹಳೆಬೀಡು, ಶ್ರವಣಬೆಳಗೊಳ ಹಾಗೂ ಸಕಲೇಶಪುರದ ಪೈಕಿ ಇದೂ ಒಂದು ಆಕರ್ಷಣೀಯ ಸ್ಥಳವಾಗಿದೆ. ಪ್ರವಾಸ ಸ್ಥಳಗಳಿಗಿರಬೇಕಾದ ಯಾವುದೇ ಮೂಲ ಸೌಲಭ್ಯಗಳಿಲ್ಲದ್ದರೂ, ತೀರದಲ್ಲಿ ನಿಂತು ನೋಡುವ ಪ್ರವಾಸಿಗರನ್ನು ತನ್ನೊಡಲಿಗೊಮ್ಮೆ ಬಂದು ಹೋಗುವಂತೆ ಕೈ ಬೀಸಿ ಕರೆಯುತ್ತದೆ.

1860ರಲ್ಲಿ ಫ್ರೆಂಚ್‌ ಪಾದ್ರಿಗಳಿಂದ ನಿರ್ಮಾಣ

ಸಕಲೇಶಪುರ, ಆಲೂರು ಹಾಗೂ ಬೇಲೂರು ಭಾಗದ ತೋಟಗಳ ಮಾಲೀಕರಾಗಿದ್ದ ಶ್ರೀಮಂತ ಬ್ರಿಟಿಷರಿಗಾಗಿ, ಸುಮಾರು 1860 ರಂದು ಮೈಸೂರು ರಾಜ್ಯದಲ್ಲಿದ್ದ ಫ್ರೆಂಚ್ ಪಾದ್ರಿಗಳಿಂದ ಈ ಚರ್ಚ್ ನಿರ್ಮಾಣವಾಗಿದೆ ಎಂದು ಎಂದು ದಾಖಲೆಗಳು ಹೇಳುತ್ತವೆ.

ಸುಣ್ಣ– ಮರಳು–ನೀರು ಬೆರೆಸಿದ ಗಾರೆ, ಸುಟ್ಟ ಇಟ್ಟಿಗೆ, ಬೆಲ್ಲ ಮತ್ತು ಮೊಟ್ಟೆ ಮಿಶ್ರಣವನ್ನು ನಿರ್ಮಾಣಕ್ಕೆ ಬಳಸಲಾಗಿದೆ. ಗೋಥಿಕ್ ವಾಸ್ತುಶಿಲ್ಪ ಮಾದರಿಯಲ್ಲಿ ಕಟ್ಟಲಾಗಿರುವ ಈ ಚರ್ಚ್‌ಗೆ, ಹಾಸನ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಾಸವಿದ್ದ ಕ್ರೈಸ್ತರು ಪ್ರಾರ್ಥನೆಗೆ ಬರುತ್ತಿದ್ದರು. ಸ್ವಾತಂತ್ರ್ಯ ನಂತರ, ಶೆಟ್ಟಿಹಳ್ಳಿ ಸೇರಿದಂತೆ ಚಂಗರವಳ್ಳಿ, ಮದನಕೊಪ್ಪಲು, ದೊಡ್ಡಕೊಪ್ಪಲು, ಗದ್ದೆಕೊಪ್ಪಲು ಹಾಗೂ ಸುತ್ತಲಿನ ಗ್ರಾಮಗಳ ಕ್ರೈಸ್ತರು ಈ ಚರ್ಚನ್ನು ಪ್ರಾರ್ಥನೆಗೆ ಬಳಸುತ್ತಿದ್ದರು.

ಚರ್ಚ್‌ನ ಸುಂದರ ಕಮಾನುಗಳು, ಗೋಪುರ, ಎತ್ತರದ ಬಾಗಿಲುಗಳು, ಮಿನಾರುಗಳು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ತನ್ನ ಬಾಹ್ಯ ಮತ್ತು ಒಳ ವಿನ್ಯಾಸದಿಂದಲೇ ಮನಸೆಳೆಯುವ ಈ ಚರ್ಚ್, ಸ್ವಾತಂತ್ರ್ಯಪೂರ್ವದಲ್ಲಿ ಹಾಸನದ ಸುತ್ತಮುತ್ತ ಕ್ರೈಸ್ತ ಧರ್ಮ ಒಂದು ಕಾಲದಲ್ಲಿ ಉಳ್ಳವರ ಧರ್ಮವಾಗಿ  ಉಚ್ಚ್ರಾಯ ಸ್ಥಿತಿಯಲ್ಲಿತ್ತು ಎಂಬುದನ್ನೂ ಸೂಚಿಸುತ್ತದೆ.

ಹೇಮಾವತಿ ಒಡಲಿಗೆ...

ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಯ ಭಾಗಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು, 1960ರಲ್ಲಿ ಹಾಸನದ ಜೀವನದಿ­ಯಾದ ಹೇಮಾವತಿಗೆ ಗೊರೂರು ಗ್ರಾಮದ ಬಳಿ ಅಣೆಕಟ್ಟೆ ನಿರ್ಮಾಣ ಪ್ರಾರಂಭವಾಯಿತು. ಆಗ ಶೆಟ್ಟಿಹಳ್ಳಿ ಸೇರಿದಂತೆ ಸುಮಾರು 28 ಗ್ರಾಮಗಳು ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾದವು. ಈ ಪೈಕಿ ಒಂದೂವರೆ ಶತಮಾನದ ಚರ್ಚ್‌ ಕೂಡ ಹೇಮಾವತಿ ಅಣೆಕಟ್ಟೆಯ ಒಡಲು ಸೇರಿಕೊಂಡಿತು. ಅಂದಿನಿಂದ ಶೆಟ್ಟಿಹಳ್ಳಿ ಚರ್ಚ್ ಹಿನ್ನೀರಿನಲ್ಲಿ ಮುಳುಗೇಳುತ್ತಿದೆ. ತೇಲುವ ಹಡಗಿನಂತೆ.

ಜಲಾಶಯದ ತೀರದಲ್ಲಿ ನಿಂತು ನೋಡಿದರೆ, ಶೆಟ್ಟಿಹಳ್ಳಿ ಚರ್ಚ್  ತೇಲುತ್ತಿರುವ ಹಡಗಿನಂತೆ ಗೋಚರಿಸುತ್ತದೆ. ಮಳೆಗಾಲದಲ್ಲಿ ಅಲ್ಪಮಟ್ಟಿಗೆ ಕಾಣುವ ಚರ್ಚ್‌ ಹತ್ತಿರಕ್ಕೆ ತೆಪ್ಪದ ಮೂಲಕ ಹೋಗಬಹುದು. ಇದಕ್ಕಾಗಿ ಒಂದಿಷ್ಟು ಹಣ ನೀಡಬೇಕು. ಸ್ವಲ್ಪ ಅಪಾಯಕಾರಿಯೂ ಆದ ಈ ತೆಪ್ಪಯಾನಕ್ಕೆ ಸಾಹಸ ಮನೋಭಾವದ ಪ್ರವಾಸಿಗರಷ್ಟೆ ಮುಂದಾಗುತ್ತಾರೆ. ಬೇಸಿಗೆಯಲ್ಲಿ ಹಿನ್ನೀರಿನ ಪ್ರಮಾಣ ಕ್ರಮೇಣ ತಗ್ಗುತ್ತಾ ಬರುವುದರೊಂದಿಗೆ, ಚರ್ಚ್‌ ಕೂಡ ತನ್ನ ಪೂರ್ಣ ಸ್ವರೂಪವನ್ನು ಪಡೆಯುತ್ತದೆ. ಆಗ ಪ್ರವಾಸಿಗರು ತಮ್ಮ ಬೈಕ್‌ ಮತ್ತು ಕಾರುಗಳನ್ನು ಚರ್ಚ್‌ನಿಂದ ಅನತಿ ದೂರದಲ್ಲಿ ನಿಲ್ಲಿಸಿ, ಹತ್ತಿರದಿಂದ ಚರ್ಚನ್ನು ಕಣ್ತುಂಬಿಕೊಳ್ಳಬಹುದು.

ಅಳಿವು ದೂರವಿಲ್ಲ

ಐದೂವರೆ ದಶಕದಿಂದ ನೀರಿನಲ್ಲೇ ಮುಳುಗೇಳುತ್ತಿರುವ ಚರ್ಚ್‌ನ ಮೂಲ ಹಾಗೂ ಸದ್ಯದ ಸ್ವರೂಪಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಏಕೆಂದರೆ, ವರ್ಷದಿಂದ ವರ್ಷಕ್ಕೆ ಚರ್ಚ್‌ನ ಗೋಡೆ, ಕಮಾನು ಹಾಗೂ ಗೋಪುರಗಳು ಕುಸಿಯುತ್ತಾ ಹಿನ್ನೀರಿನ ಒಡಲಲ್ಲಿ ಮಣ್ಣಾಗುತ್ತಿವೆ.

ಯೇಸುವಿನ ಶಿಲುಬೆ ಇಡುತ್ತಿದ್ದ ಜಾಗವೊಂದನ್ನು ಹೊರತುಪಡಿಸಿದರೆ, ಗೋಪುರದಂತಿರುವ ಕಟ್ಟಡದ ಹಿಂಭಾಗ  ಕುಸಿತದಿಂದಾಗಿ, ಚರ್ಚ್‌ನ ಪ್ರತ್ಯೇಕ ಭಾಗವೇನೊ ಎಂಬಂತೆ ಗೋಚರಿಸುತ್ತದೆ. ಕಟ್ಟಡದ ಕಮಾನುಗಳು ಬಹುತೇಕ ಶಿಥಿಲಗೊಂಡಿವೆ.

ಹಾಗಾಗಿ ಚರ್ಚ್‌ ಸ್ಥಳಕ್ಕೆ ಆಗಾಗ್ಗೆ ಭೇಟಿ ನೀಡುವವರಿಗೆ, ಚರ್ಚ್‌ನ ಅವಸಾನದ ಸೂಚನೆಗಳು ಸುಲಭವಾಗಿ ಗೋಚರಿಸುತ್ತವೆ. ಹಾಗಾಗಿ ಹಾಸನ ಜಿಲ್ಲೆಯ ಈ ಸೋಜಿಗಕ್ಕೆ ಆದಷ್ಟು ಬೇಗ ಭೇಟಿ ನೀಡಿ ಕಣ್ತುಂಬಿಕೊಳ್ಳುವುದು ಒಳಿತು.
Published by:Latha CG
First published: