ವಿಬ್​ ಗಯಾರ್ ಅತ್ಯಾಚಾರ ಪ್ರಕರಣ; 5 ವರ್ಷವಾದರೂ ವಿಚಾರಣೆಯೇ ಶುರುವಾಗಿಲ್ಲ!

ವಿಬ್​ ಗಯಾರ್​ ಶಾಲೆಯ ಮುಖ್ಯಸ್ಥ ರುಸ್ತುಂ ಕೆರವಾಲ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರಿಂದ ಹಾಗೂ ಸಾಕ್ಷಿಗಳನ್ನು ನಾಶ ಮಾಡಲು ಯತ್ನಿಸಿದ್ದರಿಂದ ಅವರ ವಿರುದ್ಧವೂ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

sushma chakre | news18
Updated:January 10, 2019, 1:00 PM IST
ವಿಬ್​ ಗಯಾರ್ ಅತ್ಯಾಚಾರ ಪ್ರಕರಣ; 5 ವರ್ಷವಾದರೂ ವಿಚಾರಣೆಯೇ ಶುರುವಾಗಿಲ್ಲ!
ಸಾಂದರ್ಭಿಕ ಚಿತ್ರ
sushma chakre | news18
Updated: January 10, 2019, 1:00 PM IST
ಬೆಂಗಳೂರು (ಜ. 10): ವರ್ತೂರಿನ ವಿಬ್ ಗಯಾರ್ ಶಾಲೆಯ 6 ವರ್ಷದ ಬಾಲಕಿ ಮೇಲೆ 2014ರಲ್ಲಿ ನಡೆದ ಅತ್ಯಾಚಾರ ಪ್ರಕರಣದ ವಿಷಯ ತಿಳಿದು ಇಡೀ ಬೆಂಗಳೂರೇ ಆಘಾತಕ್ಕೊಳಗಾಗಿತ್ತು. ಈ ಪ್ರಕರಣದ ರಾಷ್ಟ್ರಮಟ್ಟದಲ್ಲೂ ಚರ್ಚೆಯಾಗಿತ್ತು. ಅದಾಗಿ 5 ವರ್ಷವಾಗಿದೆ. ಆಗ ಎದ್ದಿದ್ದ ಪ್ರತಿಭಟನೆಯ ಬಿಸಿ ತಣ್ಣಗಾಗಿದೆ. ಮಾಧ್ಯಮಗಳೂ ಒಂದಷ್ಟು ವರದಿಗಳನ್ನು ಮಾಡಿ ಸುಮ್ಮನಾಗಿವೆ. ಆದರೆ, ಆ ಪ್ರಕರಣ ಏನಾಗಿದೆ ಎಂಬ ಮಾಹಿತಿ ನಿಮಗೆ ಗೊತ್ತಾ?

ವಿಬ್​ ಗಯಾರ್​ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ 2014ರ ಜುಲೈ ತಿಂಗಳಲ್ಲಿ ರಾಜ್ಯಾದ್ಯಂತ ತೀವ್ರವಾದ ಪ್ರತಿಭಟನೆ ನಡೆದಿತ್ತು. ದುರಂತ ನಡೆದು 5 ವರ್ಷಗಳು ಘಟಿಸಿದರೂ ಆ ಮಗುವಿಗಾಗಿ ಆಕೆಯ ಕುಟುಂಬದವರಿಗಾಗಿ ಇನ್ನೂ ನ್ಯಾಯ ಸಿಕ್ಕಿಲ್ಲ. ಮಗುವಿಗೆ ಈ ರೀತಿ ಆಯಿತಲ್ಲ ಎಂಬ ನೋವು ಒಂದೆಡೆಯಾದರೆ, ಪ್ರಭಾವಿಗಳ ಹಿನ್ನೆಲೆಯಿರುವ ಈ ಪ್ರಕರಣದಲ್ಲಿ ಜಯ ಸಾಧಿಸುವುದು ಸುಲಭವಲ್ಲ ಎಂಬ ಹತಾಶೆ ಇನ್ನೊಂದು ಕಡೆ. ಈ ಕಾರಣದಿಂದ ಆ ಮಗುವಿನ ಕುಟುಂಬ ಅಂದೇ ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಗೊಂಡಿತ್ತು.

ಈ ವಿಬ್ ಗಯಾರ್​ ಶಾಲೆಯ ಮಗುವಿನ ಮೇಲಾದ ಅತ್ಯಾಚಾರ ಪ್ರಕರಣದ ವಿಚಾರಣೆ ಇನ್ನೂ ಶುರುವಾಗಿಲ್ಲ. ಈ ಪ್ರಕರಣ ಬೆಂಗಳೂರಿನ ಜಿಲ್ಲಾ ಹೆಚ್ಚುವರಿ ಸೆಷನ್​ ಕೋರ್ಟ್​ನಲ್ಲಿದ್ದು, ಇದುವರೆಗೂ ಕೋರ್ಟ್​ ಯಾವುದೇ ಆರೋಪಿಗಳ ವಿರುದ್ಧ ಚಾರ್ಜ್​ಶೀಟ್​ ದಾಖಲಿಸಿಲ್ಲ ಎಂದು ದಿ ನ್ಯೂಸ್​ ಮಿನಿಟ್​ ವರದಿ ಮಾಡಿದೆ.

ಇದನ್ನೂ ಓದಿ: ದೇಶಾದ್ಯಂತ ಹಿಂದಿ ರಾಷ್ಟ್ರ ಭಾಷೆ ಮಾಡಲು ಕೇಂದ್ರದ ಹುನ್ನಾರ, ಸದ್ಯ ಪ್ರಸ್ತಾವನೆ ಇಲ್ಲ- ಜಾವಡೇಕರ್ ಸ್ಪಷ್ಟನೆ

2014 ಜುಲೈ ತಿಂಗಳಲ್ಲಿ ವಿಬ್​ ಗಯಾರ್​ ಶಾಲೆಯ ಮಗುವಿನ ಮೇಲೆ ಅತ್ಯಾಚಾರ ನಡೆದ ಘಟನೆ ಬಯಲಾದ ಬಳಿಕ ಬೆಂಗಳೂರು ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದರು. ಆದರೆ, ಅದರ ಮಾರನೇ ದಿನವೇ ಆತನದ್ದು ಯಾವುದೇ ತಪ್ಪಿಲ್ಲ, ನಾವೇ ತಪ್ಪಾಗಿ ತಿಳಿದುಕೊಂಡು ಆತನನ್ನು ಬಂಧಿಸಿದ್ದೆವು ಎಂದು ಹೇಳಿದ ಪೊಲೀಸರು ಆತನನ್ನು ಬಿಡುಗಡೆ ಮಾಡಿದ್ದರು. ವಿಬ್​ ಗಯಾರ್​ ಶಾಲೆಯ ಇಬ್ಬರು ಜಿಮ್​ ತರಬೇತುದಾರರಾದ ಲಾಲ್​ಗಿರಿ ಮತ್ತು ವಾಸೀಂ ಪಾಷಾ ಅವರನ್ನು ಬಂಧಿಸಿ ಐಪಿಸಿ ಸೆಕ್ಷನ್​ 376 (ಅತ್ಯಾಚಾರ), ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿತ್ತು. ಹಾಗೇ, ವಿಬ್​ ಗಯಾರ್​ ಶಾಲೆಯ ಮುಖ್ಯಸ್ಥ ರುಸ್ತುಂ ಕೆರವಾಲ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರಿಂದ ಹಾಗೂ ಸಾಕ್ಷಿಗಳನ್ನು ನಾಶ ಮಾಡಲು ಯತ್ನಿಸಿದ್ದರಿಂದ ಅವರ ವಿರುದ್ಧವೂ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

2014ರ ಅಕ್ಟೋಬರ್​ ತಿಂಗಳಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಈ ಪ್ರಕರಣದ ಬಗ್ಗೆ ಚಾರ್ಜ್​ಶೀಟ್​ ದಾಖಲಿಸಲಾಗಿತ್ತು. ಆದರೆ, ಪ್ರತಿಭಟನೆಗಳು ತಣ್ಣಗಾಗಿ, ಮಾಧ್ಯಮಗಳಲ್ಲಿ ವರದಿಗಳೂ ಕಡಿಮೆಯಾದ ಬಳಿಕ ವಿಚಾರಣೆಯೂ ಹಳ್ಳ ಹಿಡಿಯಿತು. ಕ್ರಮೇಣ ಜನರು ಆ ಪ್ರಕರಣವನ್ನು ಮರೆತೂ ಬಿಟ್ಟರು.

ಇದನ್ನೂ ಓದಿ: 'ದೇವೇಗೌಡರು ಭಸ್ಮಾಸುರ ಇದ್ದಂತೆ; ಅವರು ತಲೆಯ ಮೇಲೆ ಕೈ ಇಟ್ಟರೆ ಕತೆ ಮುಗಿದಂತೆ'; ಯತ್ನಾಳ್​
Loading...

ಪೋಕ್ಸೋ ಕಾಯ್ದೆ ಪ್ರಕಾರ, ಮಗುವಿನ ಮೇಲೆ ಅತ್ಯಾಚಾರ ನಡೆದ ಪ್ರಕರಣದ ಬಗ್ಗೆ ಒಂದು ವರ್ಷದೊಳಗೆ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡಬೇಕು. 3 ವರ್ಷದ ಹಿಂದೆ ಆರೋಪಿ ನಂಬರ್​ 3 ವಿಬ್​ ಗಯಾರ್​ ಶಾಲೆಯ ಮುಖ್ಯಸ್ಥ ರುಸ್ತುಂ ಕೆರವಾಲ ಈ ಪ್ರಕರಣದ ವಿಚಾರಣೆಯ ಮೇಲೆ ಹೈಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದರು. ನಂತರ ಅವರಿಗೆ ಕೂಡ ಜಾಮೀನು ಸಿಕ್ಕಿತ್ತು. ಹಲವು ಬಾರಿ ವಿಚಾರಣೆಗೆ ಆಗಮಿಸುವಂತೆ ನೋಟಿಸ್​ ನೀಡಿದರೂ ಅವರು ಹಾಜರಾಗಲಿಲ್ಲ. ನಂತರ ಇನ್ನಿಬ್ಬರು ಪ್ರಮುಖ ಆರೋಪಿಗಳಾದ ಲಾಲ್​ ಗಿರಿ ಮತ್ತು ವಾಸೀಂ ಪಾಷಾ ಅವರ ವಿರುದ್ಧ ವಿಚಾರಣೆ ನಡೆಸಲು ಅನುಮತಿ ನೀಡಬೇಕೆಂದು ಕೋರ್ಟ್​ ಬಳಿ ಒಪ್ಪಿಗೆ ಕೇಳಲಾಯಿತು. ಅಷ್ಟರಲ್ಲಾಗಲೇ 5 ವರ್ಷ ಕಳೆದುಹೋಯಿತು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನೀರಿಗೆ ಕೀಟನಾಶಕ ಬೆರೆಸಿದ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ

2018ರ ಡಿಸೆಂಬರ್​ ತಿಂಗಳಲ್ಲಿ ಲಾಲ್​ ಗಿರಿ ಮತ್ತು ವಾಸಿಂ ಪಾಷಾ ವಿರುದ್ಧ ಚಾರ್ಜ್​ಶೀಟ್​ ದಾಖಲಿಸಲು ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್, ಈ ವರ್ಷ ಜನವರಿ 2ರಂದು ಅವರಿಬ್ಬರಿಗೂ ಜಾಮೀನುರಹಿತ ವಾರೆಂಟ್​ ಹೊರಡಿಸಿತು. ಆದರೆ, ವಾಸೀಂ ಪಾಷಾನ ಕಾಲು ಮುರಿದುಹೋಗಿದ್ದರಿಂದ ಆತ ಕೋರ್ಟಿಗೆ ಹಾಜರಾಗಲಿಲ್ಲ ಎಂದು ಪಬ್ಲಿಕ್​ ಪ್ರಾಸಿಕ್ಯೂಟರ್​ ಅನಿಲ್ ಕುಮಾರ್​ ಹೇಳಿದ್ದಾರೆ.

ಈ ಮೊದಲು ತನಿಖೆ ನಡೆಯುವಾಗ ವಿಬ್​ ಗಯಾರ್​ ಶಾಲೆಯ ಪ್ರಿನ್ಸಿಪಾಲ್​, ತಾವು ವಾಸೀಂ ಮತ್ತು ಲಾಲ್​ಗಿರಿ ಅವರ ಹಿನ್ನೆಲೆಯನ್ನು ಪರಿಶೀಲಿಸಿದ ನಂತರವೇ ಅವರನ್ನು ಜಿಮ್​ ತರಬೇತುದಾರರಾಗಿ ನೇಮಕ ಮಾಡಿಕೊಂಡಿದ್ದೆವು. ಅವರು ಈ ಕೃತ್ಯ ಎಸಗಿರಲು ಸಾಧ್ಯವೇ ಇಲ್ಲ ಎಂದಿದ್ದರು. ಆದರೆ, ನಂತರ ಅವರೂ ಓರ್ವ ಸಾಕ್ಷಿಯಾಗಲು ಒಪ್ಪಿಗೆ ಸೂಚಿಸಿದ್ದರು.

ಇದನ್ನೂ ಓದಿ: ಮಗಳನ್ನು ಅಂಗನವಾಡಿಗೆ ಸೇರಿಸಿ ಮಾದರಿಯಾದ ತಮಿಳುನಾಡು ಜಿಲ್ಲಾಧಿಕಾರಿ..!

ಯಾಕಿಷ್ಟು ವಿಳಂಬ?:
ಮೂಲಗಳ ಪ್ರಕಾರ ಬೆಂಗಳೂರಿನಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಬಾಕಿಯಿರುವ ಪ್ರಕರಣ ಸಂಖ್ಯೆ 1,200ಕ್ಕೂ ಹೆಚ್ಚು. 2018ರಲ್ಲೇ ಸುಮಾರು 207 ಪೋಕ್ಸೋ ಕೇಸುಗಳು ಬೆಂಗಳೂರಿನಲ್ಲಿ ದಾಖಲಾಗಿದ್ದವು. ಆದರೆ, ಅವ್ಯಾವುದರ ತೀರ್ಪೂ ಪ್ರಕಟವಾಗಿಲ್ಲ. 132 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಉಳಿದವು ತನಿಖಾ ಹಂತದಲ್ಲಿಯೇ ಉಳಿದಿವೆ.

ನ್ಯಾಯಾಧೀಶರು ಬೇರೆ ಪ್ರಕರಣಗಳ ಜೊತೆಗೆ ಈ ಪೋಕ್ಸೋ ಪ್ರಕರಣಗಳ ವಿಚಾರಣೆಯನ್ನು ನಡೆಸಬೇಕಾದ್ದರಿಂದ ಬಹುತೇಕ ಪ್ರಕರಣಗಳ ತೀರ್ಪು ಪ್ರಕಟವಾಗಿಲ್ಲ. ಇದಕ್ಕಿಂತ ಕೆಲವು ಕ್ರಿಮಿನಲ್​ ಪ್ರಕರಣಗಳು ಬಹಳ ಮುಖ್ಯವಾದ್ದರಿಂದ ಆ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಹೀಗಾಗಿ, ಒಂದೋ ಆರೋಪಿಗಳು ತಮ್ಮ ಪ್ರಭಾವ ಬಳಸಿ ಕೇಸು ಖುಲಾಸೆ ಆಗುವಂತೆ ನೋಡಿಕೊಳ್ಳುತ್ತಾರೆ. ಅಥವಾ ದೂರುದಾರರು ತಮಗೆ ನ್ಯಾಯ ಸಿಗುವುದಿಲ್ಲ ಎಂದು ಅರಿತು ತಾವೇ ಹಿಂದೆ ಸರಿಯುತ್ತಾರೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ