ರಾಷ್ಟ್ರಮಟ್ಟದ ಹಾಕಿ ಶಿಬಿರಕ್ಕೆ ಹಾಸನ ಜಿಲ್ಲೆಯ ಐವರು ಆಯ್ಕೆ

Hassan: ರಾಷ್ಟ್ರೀಯ ಹಾಕಿ ತಂಡಕ್ಕೆ ಹಾಸನ ಜಿಲ್ಲೆಯ ಐವರು ಆಯ್ಕೆ. ಹಿರಿಯರ ವಿಭಾಗದ ಶಿಬಿರಕ್ಕೆ ಇಬ್ಬರು, ಕಿರಿಯರ ತಂಡದಲ್ಲಿ ಮೂವರು ವನಿತೆಯರು ಎಂಟ್ರಿ.‌

ರಾಷ್ಟ್ರೀಯ ಹಾಕಿ ಶಿಬಿರಕ್ಕೆ ಆಯ್ಕೆಯಾದ ಪ್ರತಿಭಗಳು

ರಾಷ್ಟ್ರೀಯ ಹಾಕಿ ಶಿಬಿರಕ್ಕೆ ಆಯ್ಕೆಯಾದ ಪ್ರತಿಭಗಳು

  • Share this:
ಹಾಕಿ (Hockey) ರಾಷ್ಟ್ರೀಯ ಕ್ರೀಡೆ(National Game)ಯಾದರೂ ಹಾಸನ (Hassan) ಜಿಲ್ಲೆಯಿಂದ ಈವರೆಗೂ ಯಾರೊಬ್ಬರೂ ರಾಷ್ಟ್ರಮಟ್ಟದ ಶಿಬಿರಕ್ಕೆ (National Camp) ಆಯ್ಕೆಯಾಗಿರಲಿಲ್ಲ. ಇದೇ ಮೊಟ್ಟ ಮೊದಲ ಬಾರಿಗೆ ಹಾಸನ ಜಿಲ್ಲೆಯ ಐವರು ಕ್ರೀಡಾಪಟುಗಳು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಇದು ಹಾಕಿ ಇತಿಹಾಸದಲ್ಲಿಯೇ ಪ್ರಥಮವಾಗಿದ್ದು, ಇವರೆಲ್ಲಾ  ರಾಷ್ಟ್ರೀಯ ಹಾಕಿ ತಂಡವನ್ನೂ ಪ್ರತಿನಿಧಿಸಿ ನವ ಇತಿಹಾಸ ಬರೆಯಲಿ ಎಂಬುದು ಜಿಲ್ಲೆಯ ಪ್ರತಿಯೊಬ್ಬರ ಶುಭ ಹಾರೈಕೆಯಾಗಿದೆ. ಹಲವು ದಶಕಗಳಿಂದ ಕಾಡುತ್ತಿದ್ದ ಈ ಕೊರತೆಯನ್ನು ಜಿಲ್ಲೆಯ ಐವರು ಆಟಗಾರರು ಆಯ್ಕೆಯಾಗುವ ಮೂಲಕ ಜಿಲ್ಲೆಯ ಹೆಸರು ಹಾಕಿ ಅಂಗಳದಲ್ಲೂ ರಾಜಾಜಿಸುವಂತೆ ಮಾಡಿದ್ದಾರೆ.

ಶೇಷೇಗೌಡ ಬಿ.ಎಂ.

ಹಾಸನ ನಗರದ ಬೀರನಹಳ್ಳಿ ಬಡಾವಣೆ ರಾಘವೇಂದ್ರ ಕಾಲೋನಿಯ ಮಹೇಶ್-ಕಮಲ ದಂಪತಿ ಪುತ್ರ ಶೇಷೇಗೌಡ ಬಿ.ಎಂ. ಭಾರತೀಯ ರಾಷ್ಟ್ರೀಯ ಹಾಕಿ ತಂಡದ ಪುರುಷರ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಮಿಡ್ ಫೀಲ್ಡರ್ ಪ್ಲೇಯರ್ ಆಗಿರುವ ಶೇಷೇಗೌಡ, ಇಂಡಿಯನ್ ರೈಲ್ವೆ ಹೈದ್ರಾಬಾದ್‌ನಲ್ಲಿ ಚೆಕಿಂಗ್ ಇನ್ಸ್‌ಪೆಕ್ಟರ್ ಆಗಿದ್ದು, ದೇಶದ ವಿವಿಧೆಡೆ ನಡೆದ ಹಲವು ಕ್ರೀಡಾಕೂಟಗಳಲ್ಲಿ ಭಾಗಿಯಾಗಿ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ:  Chikkamagaluru: ಕಸದ ಸಮಸ್ಯೆ ನಿಯಂತ್ರಿಸಲು ಚಿಕ್ಕಮಗಳೂರು ನಗರಸಭೆ ಮಾಸ್ಟರ್ ಪ್ಲಾನ್!

ಅಂಜಲಿ ಹೆಚ್.ಆರ್.

ಇದೇ ರೀತಿ ಹೊಳೆನರಸೀಪುರ ತಾಲ್ಲೂಕಿನ ಆಲದಹಳ್ಳಿ ಗ್ರಾಮದ ರಾಮಚಂದ್ರ ಎಂಬವರ ಪುತ್ರಿ ಅಂಜಲಿ ಹೆಚ್.ಆರ್. ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅಂಜಲಿ ಮಿಡ್ ಫೀಲ್ಡರ್ ಅಂಡ್ ಫಾರ್ವರ್ಡ್ ಆಟಗಾರ್ತಿಯಾಗಿದ್ದು  ಹೆಚ್.ಆರ್. ಮೈಸೂರಿನ ಚಾಮುಂಡಿ ವಿವಾಹ ಕ್ರೀಡಾಂಗಣದ ಮಹಿಳಾ ಕ್ರೀಡಾ ಹಾಸ್ಟೆಲ್‌ನಲ್ಲಿ ತರಬೇತಿ ಪಡೆದು, ಉತ್ತಮ ಆಟಗಾರ್ತಿಯಾಗುವ ಭರವಸೆ ಮೂಡಿಸಿದ್ದಾರೆ. ಈ ಇಬ್ಬರು ಈಗಾಗಲೇ ತರಬೇತಿ ಶಿಬಿರದಲ್ಲಿ ಭಾಗಿಯಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಇದರ ಜೊತೆಯಲ್ಲಿಯೇ ರಾಷ್ಟ್ರೀಯ ಕಿರಿಯರ ಶಿಬಿರಕ್ಕೆ ಜಿಲ್ಲೆಯ ಮೂವರು ವನಿತೆಯರು ಸೆಲೆಕ್ಟ್ ಆಗಿದ್ದಾರೆ..

ಚಂದನ ಜೆ.,  ಲಿಖಿತ ಎಸ್.ಪಿ, ಮತ್ತು ತೇಜಸ್ವಿನಿ ಡಿ.ಎನ್.

ಹಾಸನ ನಗರದ ಕ್ರೀಡಾ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಅರಕಲಗೂಡು ತಾಲೂಕು ಗಂಗೂರು ಗ್ರಾಮದ ಜಗದೀಶ್-ಸುಜಾತ ದಂಪತಿ ಪುತ್ರಿ ಚಂದನ ಜೆ., ಶಾಂತಿಗ್ರಾಮದ ಪ್ರಕಾಶ-ಸೌಭಾಗ್ಯಮ್ಮ ದಂಪತಿ ಪುತ್ರಿ ಲಿಖಿತ ಎಸ್.ಪಿ. ಹಾಗೂ ಮಳಲಿ ಗ್ರಾಮದ ನಾಗರಾಜ್ ಎಂಬವವರ ಪುತ್ರಿ ತೇಜಸ್ವಿನಿ ಡಿ.ಎನ್. ಎಂಬುವವರು ಆಯ್ಕೆಯಾಗಿದ್ದು, ಇದೇ ತಿಂಗಳ 17 ರಿಂದ ಹಾಕಿ ಇಂಡಿಯಾ ಆಯೋಜಿಸಿರುವ ತರಬೇತಿ ಶಿಬಿರದಲ್ಲಿ ತಮ್ಮ ಪ್ರತಿಭೆಯನ್ನು  ಅನಾವರಣಗೊಳಿಸಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ:  Hassan: ಯುವಕನನ್ನು ಬೆತ್ತಲುಗೊಳಿಸಿ ಅತಿರೇಕ: ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿ ಪೌರುಷ

ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳು ರಾಷ್ಟ್ರೀಯ ತಂಡವನ್ನು ತಲುಪಲು ಹಲವರ ಶ್ರಮವಿದೆ. ಅಪ್ಪಟ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಅವರನ್ನು ಉತ್ತಮ ಆಟಗಾರರನ್ನಾಗಿ ಮಾಡುವಲ್ಲಿ ಕ್ರೀಡಾ ವಸತಿ ನಿಲಯದ ಹಾಕಿ ತರಬೇತುದಾರ ಹೆಚ್.ಟಿ.ರವೀಶ್  ಕೊಡುಗೆ ಅಪಾರವಿದೆ. ಇವರೆಲ್ಲರೂ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಿರುವುದು ಆಪಾರ ಸಂತಸ ಉಂಟುಮಾಡಿದೆ.

ಎಲ್ಲಾ ಅಟಗಾರರು ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿ, ಕಿರಿಯರ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಮತ್ತಷ್ಟು ಕೀರ್ತಿ ತರುವಂತಾಗಲಿ ಎಂದು ಕ್ರೀಡಾಧಿಕಾರಿ ಸಿ.ಕೆ.ಹರೀಶ್, ಜಿಲ್ಲಾ ಹಾಕಿ ತಂಡದ ಅಧ್ಯಕ್ಷ ಮೇಘರಾಜ್, ಹಿರಿಯ ಕ್ರೀಡಾಪಟುಗಳಾದ ರವಿಶಂಕರ್, ಪಾಲಾಕ್ಷ, ಮಧು ಜಯಂತ, ಚಂದ್ರಶೇಖರ ಶುಭ ಹಾರೈಸಿದ್ದಾರೆ.

ಈವರೆಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕ್ರೀಡಾಪಟುಗಳೇ ರಾಷ್ಟ್ರೀಯ ಹಾಕಿ ಶಿಬಿರಕ್ಕೆ ಆಯ್ಕೆಯಾಗುತ್ತಿದ್ದರು. ಇದೇ ಮೊದಲ ಬಾರಿಗೆ ಜಿಲ್ಲೆಯ ಒಟ್ಟು ಐವರು ಆಯ್ಕೆ ಆಗಿರುವುದು ಹಿರಿಹಿರಿ ಹಿಗ್ಗುವಂತೆ ಮಾಡಿದೆ. ಇಂತಹ ಪ್ರತಿಭಾವಂತ ಆಟಗಾರರಿಗೆ ಜಿಲ್ಲೆಯ ಯುವ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಪ್ರೀತಂ ಜೆ.ಗೌಡ, ನೂತನ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಸೇರಿದಂತೆ ಹಲವರು ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಹಾಕಿ ಅಭ್ಯಾಸ ಮಾಡಲು ತುರ್ತು ಅಗತ್ಯವಿರುವ ಹಾಕಿ ಟರ್ಫ್ ಮೈದಾನ ನಿರ್ಮಾಣವಾಗಬೇಕಿದೆ. ಇದರಿಂದ ಹಲವರ ಕನಸು ನನಸಾಗಲು ಉತ್ತೇಜನ ಸಿಕ್ಕಂತಾಗಲಿದೆ ಎಂದು ಹಾಕಿ ಕ್ಲಬ್ ಕಾರ್ಯದರ್ಶಿ ರವಿಶಂಕರ್ ಹೆಚ್.ಬಿ.ತಿಳಿಸಿದ್ದಾರೆ.

ಈಗಾಗಲೇ ಹಾಸನ ಜಿಲ್ಲೆಯಿಂದ ವಿವಿಧ ಅಂತಾರಾಷ್ಟ್ರೀಯ ಕ್ರೀಡೆಗಳಿಗೆ ಹಲವು ಕ್ರೀಡಾಪಟುಗಳನ್ನು ಆಯ್ಕೆಯಾಗಿ ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಹೆಸರವಾಸಿಯಾಗುವಂತೆ ಮಾಡಿದ್ದಾರೆ. ಜಾವಗಲ್ ಶ್ರೀನಾಥ್ (ಕ್ರಿಕೆಟ್), ವಿಕಾಸ್‌ಗೌಡ (ಡಿಸ್ಕಸ್ ಥ್ರೋ) ಪ್ಯಾರಾಲಂಪಿಯನ್ ಹೊಸನಗರ ಗಿರೀಶ್ (ಹೈಜಂಪ್), ಇತ್ತೀಚೆಗೆ ಸುಹಾಸ್ ಲಾಳನಕೆರೆ (ಬ್ಯಾಡ್ಮಿಂಟನ್) ಇನ್ನು ಮೊದಲಾದವರು ತಮ್ಮದೇ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿ, ಜಿಲ್ಲೆಯ ಹೆಸರನ್ನೂ ವಿಶ್ವವ್ಯಾಪಿ ಬೆಳಗಿಸಿದ್ದಾರೆ.

ಇದೀಗ ಹಾಕಿಯಲ್ಲೂ ಐವರು ಪ್ರತಿಭಾವಂತರು ಮಿಂಚಲಿ ಎಂಬುದು ಜಿಲ್ಲೆಯ ಪ್ರತಿಯೊಬ್ಬ ಕ್ರೀಡಾಭಿಮಾನಿಗಳ ಹಾರೈಕೆಯಾಗಿದೆ.
Published by:Mahmadrafik K
First published: