ಆನೇಕಲ್​​: ದುಬಾರಿ ಮೊಬೈಲ್​​ಗಳ ದೋಚುತ್ತಿದ್ದ ಖತರ್ನಾಕ್​​ ಕಳ್ಳರ ಬಂಧನ

ಕೊರೋನಾ ಸಮಯದಲ್ಲಿಯು ತಮ್ಮ ಕಸುಬು ಮುಂದುವರಿಸಿದ್ದ ಆರೋಪಿಗಳು ಟೆಂಪರೇಚರ್​​ ಚೆಕ್ ಮಾಡುವ ನೆಪದಲ್ಲಿ, ಸ್ಯಾನಿಟರೈಸ್ ಸಿಂಪಡಿಸುವ ನೆಪದಲ್ಲಿ ಒಂಟಿ ಮನೆಗಳಿಗೆ ನುಗ್ಗಿ ಮೊಬೈಲ್ ದೋಚಿ ಸಹ ಪರಾರಿಯಾಗಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ.

ಮೊಬೈಲ್​ ಕಳ್ಳರ ಬಂಧನ

ಮೊಬೈಲ್​ ಕಳ್ಳರ ಬಂಧನ

  • Share this:
ಆನೇಕಲ್(ಸೆ.12): ದುಬಾರಿ ಮೊಬೈಲ್​​​ಗಳನ್ನು ದೋಚಿ ಕ್ಷಣ ಮಾತ್ರದಲ್ಲಿ ಪರಾರಿಯಾಗುತ್ತಿದ್ದ ಐವರು ಕಳ್ಳರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಮೊಬೈಲ್​​ಗಳನ್ನು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸರು ಜಫ್ತಿ ಮಾಡಿದ್ದಾರೆ. ಆನೇಕಲ್ ತಾಲ್ಲೂಕಿನ ನಾಯನಹಳ್ಳಿ ವಾಸಿಗಳಾದ ಸಂತೋಷ(22) ರಾಜೇಶ್​​(24) ಲಿಂಗಾಪುರ ವಾಸಿ ಪವನ್(21), ಶ್ರೀಧರ್(24) ಆನೇಕಲ್ ಟೌನ್ ವಾಸಿ ರಂಜಿತ್ ಕುಮಾರ್(23) ಬಂಧಿತ ಆರೋಪಿಗಳು.

ಜಿಗಣಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ ಜಿಗಣಿ ಮತ್ತು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಪದೇ ಪದೇ ಮೊಬೈಲ್ ಕಳ್ಳತನ ಪ್ರಕರಣಗಳು ವರದಿಯಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಹಾಗಾಗಿ ಮೊಬೈಲ್ ಕಳ್ಳರ ಮೇಲೆ ಹದ್ದಿನ ಕಣ್ಣಿಟ್ಟ ಜಿಗಣಿ ಇನ್ಸ್​ಪೆಕ್ಟರ್​ ವಿಶ್ವನಾಥ್ ಅಂಡ್ ಟೀಮ್ ಮೊಬೈಲ್ ಕಳ್ಳರನ್ನು ಮಾಲು ಸಮೇತ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು, ಬಂಧಿತ ಆರೋಪಿಗಳು ಜನರನ್ನು ದೋಚಲು ತರಹೆವಾರಿ ಪ್ಲಾನ್​​ಗಳನ್ನು ವರ್ಕ್ಔಟ್ ಮಾಡಿದ್ದಾರೆ. ಮಾತ್ರವಲ್ಲದೆ ಯಶಸ್ವಿ ಸಹ ಆಗಿದ್ದಾರೆ. ಕೊನೆಗೆ ಗ್ರಹಚಾರ ಕೆಟ್ಟು ಪೊಲೀಸರಿಗೆ ಸಿಕ್ಕಿಬಿದ್ದು, ಇದೀಗ ಜೈಲು ಪಾಲಾಗಿದ್ದಾರೆ. ಒಂಟಿ ಮನೆ, ನಿರ್ಜನ ಪ್ರದೇಶ, ಒಬ್ಬಂಟಿಯಾಗಿ ರಸ್ತೆಯಲ್ಲಿ ಸಾಗುವವರನ್ನು ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಮಾರಕಾಸ್ತ್ರಗಳಿಂದ ಬೆದರಿಸಿ ಅವರ ಬಳಿ ಮೊಬೈಲ್ ಹಣ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾಗಿ ಪೊಲೀಸ್ ತನಿಖೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಅಂದಹಾಗೆ ಬಂಧಿತ ಆರೋಪಿಗಳಿಗೆ ಕಾಸ್ಟ್ಲಿ ಮೊಬೈಲ್ ಅಂದ್ರೆ ಅದೇನು ಕ್ರೇಜ್ ಇತ್ತೊ ಗೊತ್ತಿಲ್ಲ. ಅಡ್ಡಗಟ್ಟಿದ ಮೇಲೆ ಯಾವುದೇ ಕಾರಣಕ್ಕೂ ಮೊಬೈಲ್ ಮಾತ್ರ ಬಿಡುತ್ತಿರಲಿಲ್ಲ. ಕೊಡುವುದಿಲ್ಲ ಎಂದರೆ ಕೊಲ್ಲಲು ಸಹ ಹಿಂದು ಮುಂದೆ ನೋಡದ ಖತರ್ನಾಕ್ ಗ್ಯಾಂಗ್ ಇದು.

ಇದನ್ನೂ ಓದಿ: ಕೇಂದ್ರ ಸರ್ಕಾರದ ನವೋದ್ಯಮ ರ‍್ಯಾಂಕಿಂಗ್ ಪ್ರಕಟ: ಅಗ್ರಗಣ್ಯ ಸಾಧಕ ಗೌರವಕ್ಕೆ ಪಾತ್ರವಾದ ಕರ್ನಾಟಕ

ಕೊರೋನಾ ಸಮಯದಲ್ಲಿಯು ತಮ್ಮ ಕಸುಬು ಮುಂದುವರಿಸಿದ್ದ ಆರೋಪಿಗಳು ಟೆಂಪರೇಚರ್​​ ಚೆಕ್ ಮಾಡುವ ನೆಪದಲ್ಲಿ, ಸ್ಯಾನಿಟರೈಸ್ ಸಿಂಪಡಿಸುವ ನೆಪದಲ್ಲಿ ಒಂಟಿ ಮನೆಗಳಿಗೆ ನುಗ್ಗಿ ಮೊಬೈಲ್ ದೋಚಿ ಸಹ ಪರಾರಿಯಾಗಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ.
Published by:Ganesh Nachikethu
First published: