ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ನಡೆಯೋದು ಹೊಸತೇನಲ್ಲ. ಪ್ರತಿದಿನ ಹತ್ತಾರು ಕಡೆಗಳಲ್ಲಿ ಒಂದಲ್ಲೊಂದು ಕ್ರೈಂ ಕೃತ್ಯಗಳು ನಡೆಯುತ್ತಲೇ ಇರುತ್ತದೆ. ಪೊಲೀಸರು ಚಾಪೆ ಕೆಳಗೆ ನುಗ್ಗಿದ್ರೆ, ಕಿಡಿಗೇಡಿಗಳು ರಂಗೋಲಿ ಕೆಳಗೆ ನುಸುಳ್ತಾರೆ. ಹೀಗಾಗಿ ಬೆಂಗಳೂರಿನಲ್ಲಿ ಅಪರಾಧ ಕೃತ್ಯಗಳನ್ನು ತಡೆಯಲು ಅದೆಷ್ಟೇ ಪ್ಲಾನ್ ರೂಪಿಸಿದ್ರೂ ವರ್ಕೌಟ್ ಆಗಲ್ಲ. ಇದೀಗ ಇಂತಹದ್ದೇ ಕಳ್ಳತನದ ಕೃತ್ಯವೊಂದು ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.
ಬೆಂಗಳೂರಿನ ಜಯನಗರ 5ನೇ ಬ್ಲಾಕ್‌ನಲ್ಲಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ ನೇಪಾಳ ಮೂಲದ ಗ್ಯಾಂಗ್‌ನಿಂದ ಪೂರ್ವ ನಿಯೋಜಿತ ದರೋಡೆ ಪ್ರಕರಣ ನಡೆದಿದ್ದು, ಪ್ರಕರಣ ಸಂಬಂಧ ಐವರು ನೇಪಾಳ ಮೂಲದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿಯ ವಿಷಯ ಅಂದ್ರೆ ಕಳ್ಳತನ ಪ್ರಕರಣ ನಡೆದ ಎರಡೇ ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Bengaluru: ಉಂಡ ಮನೆಗೆ ಕನ್ನ ಹಾಕಿ ನೇಪಾಳಕ್ಕೆ ಜೋಡಿ ಜೂಟ್; ಸೆಕ್ಯುರಿಟಿಯಿಂದಲೇ ಕಳ್ಳತನ
ಘಟನೆಯ ಹಿನ್ನೆಲೆ
ಬಂಧಿತ ಐವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ಪತಿ-ಪತ್ನಿಯರಂತೆ ನಟಿಸಿ ಹದಿನೈದು ದಿನಗಳ ಹಿಂದೆ ಸಂತ್ರಸ್ತರ ನಿವಾಸದಲ್ಲಿ ಮನೆಗೆಲಸದವರಾಗಿ ಸೇರಿಕೊಂಡಿದ್ದರು. ಆರೋಪಿಗಳಾದ ಬಿಕಾಸ್ ಮತ್ತು ಸುಶ್ಮಿತಾ ಪತಿ-ಪತ್ನಿಯಾಗಿ ನಟಿಸಿದ್ದು, ನಿವೃತ್ತ ಸರ್ಕಾರಿ ನೌಕರ ಎಚ್‌ಎಸ್ ಒಬೆದುಲ್ಲಾ ಖಾನ್ ಅವರ ನಿವಾಸದಲ್ಲಿ ಮನೆಕೆಲಸಕ್ಕೆ ಸೇರಿಕೊಂಡಿದ್ದಾರೆ. ಬಳಿಕ ಮನೆಯಲ್ಲಿ ಯಾರ್ಯಾರು ಇದ್ದಾರೆ? ಏನೇನು ವಸ್ತುಗಳನ್ನು ಎಲ್ಲೆಲ್ಲಿ ಇಡುತ್ತಾರೆ ಎಂಬ ಮಾಹಿತಿಗಳನ್ನೆಲ್ಲ ಸಂಪೂರ್ಣವಾಗಿ ತಿಳಿದುಕೊಂಡ ಆರೋಪಿಗಳು ಈ ಮಾಹಿತಿಯನ್ನು ತಮ್ಮ ಗ್ಯಾಂಗ್ ನೀಡಿದ್ದಾರೆ.
ಬಳಿಕ ಕಳ್ಳತನಕ್ಕೆ ಪ್ಲಾನ್ ಮಾಡಿದ ಆರೋಪಿಳಾದ ಬಿಕಾಸ್ (23), ಸುಶ್ಮಿತಾ (22), ಹೃದಮ್ ಅಲಿಯಾಸ್ ಹೇಮಂತ್ (21), ರೋಷನ್ ಪದಮ್ (27) ಮತ್ತು ಪ್ರೇಮ್ (31) ಕಳೆದ ಸೋಮವಾರ ಒಬೆದುಲ್ಲಾ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ಸೋಮವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿಗಳು ಕಳ್ಳತನ ನಡೆಸಿದ್ದು, ಹೊರ ಹೋಗಿದ್ದ ಒಬೆದುಲ್ಲಾ ಖಾನ್ ಮನೆಗೆ ಹಿಂದಿರುಗಿದಾಗ ಕಳ್ಳತನ ಮತ್ತು ಮನೆ ಕೆಲಸಕ್ಕೆ ಸೇರಿದ್ದ ದಂಪತಿ ಕಾಣೆಯಾದ ವಿಷಯ ಸಿಕ್ಕಿದೆ. ಇದರಿಂದ ಅನುಮಾನಗೊಂಡ ಅವರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಪರಾಧ ನಡೆದ ಎರಡು ಗಂಟೆಗಳಲ್ಲಿ ಆರೋಪಿಗಳು ಲಾರಿಯಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧನ ಮಾಡಿದ್ದಾರೆ. ಆರೋಪಿಗಳಿಂದ ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ಬ್ರಾಂಡೆಡ್ ವಾಚ್‌ಗಳು ಮತ್ತು ಇತರ ಬೆಲೆ ಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Bengaluru: ರಾತ್ರಿ ವೇಳೆ ವಾಹನಗಳಲ್ಲಿ ಓಡಾಡುವ ಸವಾರರೇ ಎಚ್ಚರ ಎಚ್ಚರ; ಏಕಾಏಕಿ ಡಿಕ್ಕಿ ಹೊಡೆದು ದರೋಡೆ ಮಾಡ್ತಾರೆ ಹುಷಾರ್!
ಆರೋಪಿಗಳ ಪೈಕಿ ಹೃದಮ್ ಕಳೆದ ಐದು ವರ್ಷಗಳ ಹಿಂದೆ ಬೊಮ್ಮನಹಳ್ಳಿಯಲ್ಲಿ ತನ್ನ ಆತ್ಮೀಯ ಗೆಳೆಯನನ್ನು ಕೊಂದ ಪ್ರಕರಣದಲ್ಲಿ ಪೊಲೀಸರು ಜೈಲಿಗೆ ಹಾಕಿದ್ದರು. ಆಗ ಅಪ್ರಾಪ್ತನಾಗಿದ್ದ ಆರೋಪಿಯು ಜೈಲಿನಿಂದ ಹೊರ ಬಂದ ನಂತರ ಆತ ಇತರ ಆರೋಪಿಗಳೊಂದಿಗೆ ಸೇರಿಕೊಂಡಿದ್ದ. ಆರೋಪಿಗಳ ತಂಡವು ಮನೆಗೆಲಸದವರನ್ನು ಹುಡುಕುತ್ತಿರುವ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಆಗ ಒಬೆದುಲ್ಲಾ ಖಾನ್ ಅವರ ಸಂಪರ್ಕವಾಗಿ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ