HOME » NEWS » State » FISHING INDUSTRY IS A LETHAL TO THE VILLAGE OUTRAGE OVER AGAINST OF FISH MILL IN UDUPI HK

ಉಡುಪಿಯ ಉದ್ಯಾವರ ಗ್ರಾಮಕ್ಕೆ ಮಾರಕವಾದ ಮೀನುಗಾರಿಕೆ ಉದ್ಯಮ; ಫಿಶ್ ಮಿಲ್ ಸ್ಥಾಪನೆಗೆ ಆಕ್ರೋಶ

ಜನ ವಿರೋಧದ ನಡುವೆ ಈಗಾಗಲೇ ಮೂರು ಫಿಶ್ ಮಿಲ್ ಗಳು ಆರಂಭವಾಗಿದ್ದು, ಅವುಗಳಲ್ಲಿ ಎರಡು ಕಾರ್ಯಾಚರಿಸುತ್ತಿವೆ. ಈಗ ಮತ್ತೊಂದು ಫಿಶ್ ಮಿಲ್ ಆರಂಭಿಸುವ ಪ್ರಯತ್ನವನ್ನು ಹಿಂಬಾಗಿಲ ಮೂಲಕ ನಡೆಸಲಾಗುತ್ತಿದೆ.

news18-kannada
Updated:March 21, 2020, 7:08 AM IST
ಉಡುಪಿಯ ಉದ್ಯಾವರ ಗ್ರಾಮಕ್ಕೆ ಮಾರಕವಾದ ಮೀನುಗಾರಿಕೆ ಉದ್ಯಮ; ಫಿಶ್ ಮಿಲ್ ಸ್ಥಾಪನೆಗೆ ಆಕ್ರೋಶ
ಸಾಂದರ್ಭಿಕ ಚಿತ್ರ
  • Share this:
ಉಡುಪಿ(ಮಾ.21): ಕರಾವಳಿಗರ ಜೀವನಾಡಿ ಮೀನುಗಾರಿಕೆ ಉದ್ಯಮವಾಗಿ ಬೆಳೆದಿದೆ. ಆದರೆ, ಇದೇ ಉದ್ಯಮ ಈ ಗ್ರಾಮಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಉಡುಪಿ ನಗರಕ್ಕೆ ಹೊಂದಿಕೊಂಡಿರುವ ಉದ್ಯಾವರ ಎಂಬ ಪುಟ್ಟಗ್ರಾಮದಲ್ಲಿ ಫಿಶ್ ಮಿಲ್ ಸ್ಥಾಪಿಸುವ ಉದ್ದೇಶದಿಂದ ಫಲವತ್ತಾದ ಭೂಮಿಯನ್ನು ಕೈಗಾರಿಕಾ ವಲಯವಾಗಿ ಮಾರ್ಪಾಟು ಮಾಡಲು ಮುಂದಾಗಿದ್ದಾರೆ. ಇದಕ್ಕೆ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಸ್ವತ: ಜಿಲ್ಲಾ ಪಂಚಾಯತ್ ಅಧ್ಯಕ್ಷರ ಮುತುವರ್ಜಿಯಲ್ಲೇ ಈ ಅಸಹಜ ಬೆಳವಣಿಗೆ ನಡೆಯುತ್ತಿರುವುದು ಗ್ರಾಮಸ್ಥರ ಆತಂಕಕ್ಕೂ ಕಾರಣವಾಗಿದೆ.

ಮೀನುಗಾರಿಕೆ ಕರಾವಳಿ ಭಾಗದ ಜನರ ಜೀವಾಳ. ಕೇವಲ ಮೀನು ಹಿಡಿದು ಮಾರಾಟ ಮಾಡಿದ್ದರೆ ಪರಿಸರಕ್ಕೆ ಯಾವುದೇ ತೊಂದರೆ ಇರಲಿಲ್ಲ. ಆದರೆ ಹಣದಾಸೆಗೆ ಬಿದ್ದವರು ಸಾಲು ಸಾಲು ಫಿಶ್ ಮಿಲ್ ಗಳನ್ನು ಸ್ಥಾಪಿಸಿ ಊರು ಕೊಳ್ಳೆ ಹೊಡೆಯಲು ಹೊರಟಿದ್ದಾರೆ. ಉಡುಪಿಯ ಉದ್ಯಾವರ ಎನ್ನುವ ಗ್ರಾಮ ಪರಿಸರ ವಿರೋಧಿ ಹೋರಾಟಗಳಿಗೆ ಹೆಸರುವಾಸಿ. ಅದೆಷ್ಟು ಹೆಸರುವಾಸಿ ಅಂದ್ರೆ ಪರಿಸರ ಹೋರಾಟದ ಹೆಸರಲ್ಲೇ ಗ್ರಾಮ ಪಂಚಾಯತ್ ಗೆದ್ದು ಆಡಳಿತ ಮಾಡಿದ ಇತಿಹಾಸ ಈ ಗ್ರಾಮಕ್ಕಿದೆ. ಈಗ ಮತ್ತೊಮ್ಮೆ ಉದ್ಯಾವರ ಗ್ರಾಮ ಕೈಗಾರಿಕೆಗಳ ವಿರುದ್ದ ಹೋರಾಟಕ್ಕೆ ಸಜ್ಜಾಗಿದೆ.

ಈ ಪುಟ್ಟ ಗ್ರಾಮದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಆದರೆ ಪರಿಸರ ಪ್ರಿಯರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯವು ಜಿಲ್ಲಾ ಪಂಚಾಯತ್ ಗೆ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದೆ. ದುರಂತ ಅಂದ್ರೆ ಒಂದೊಮ್ಮೆ ಹೋರಾಟದ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನೇಶ್ ಬಾಬು, ಕೈಗಾರಿಕಾ ವಲಯ ಸ್ಥಾಪನೆಗೆ ಹಸಿರು ನಿಶಾನೆ ನೀಡಿದ್ದಾರೆ.

ಉದ್ಯಾವರ ಸಾಕಷ್ಟು ಫಲವತ್ತಾದ ಕೃಷಿಭೂಮಿಯನ್ನು ಹೊಂದಿದೆ. ಜನ ವಿರೋಧದ ನಡುವೆ ಈಗಾಗಲೇ ಮೂರು ಫಿಶ್ ಮಿಲ್ ಗಳು ಆರಂಭವಾಗಿದ್ದು, ಅವುಗಳಲ್ಲಿ ಎರಡು ಕಾರ್ಯಾನಿರ್ವಹಿಸುತ್ತಿವೆ. ಈಗ ಮತ್ತೊಂದು ಫಿಶ್ ಮಿಲ್ ಆರಂಭಿಸುವ ಪ್ರಯತ್ನವನ್ನು ಹಿಂಬಾಗಿಲ ಮೂಲಕ ನಡೆಸಲಾಗುತ್ತಿದೆ. ಹೊಸ ಕಾರ್ಖಾನೆ ಆರಂಭಿಸಲು ಗ್ರಾಮಸ್ಥರ ವಿರೋಧವಿದೆ. ಸ್ಥಳೀಯ ಪಂಚಾಯತ್ ಕೂಡಾ ಅವಕಾಶ ನಿರಾಕರಿಸಿದೆ.

ಆದರೆ ಫಿಶ್ ಮಿಲ್ ಮಾಡಲು ಹೊರಟವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲಿಂದ ಈ ವಿಚಾರ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಂಗಣಕ್ಕೆ ಬಂದಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕೈಗಾರಿಕಾ ವಲಯಕ್ಕೆ ಅನುಮತಿ ನೀಡಿದ್ದಾರೆ. ಆದರೆ ಫಿಶ್ ಮಿಲ್ ಗೆ ನನ್ನ ಬೆಂಬಲ ಇಲ್ಲ ಎನ್ನುತ್ತಿದ್ದಾರೆ.

ಫಿಶ್ ಮಿಲ್ ಆರಂಭವಾದರೆ ಪರಿಸರದ ನೀರು ಮತ್ತು ಗಾಳಿ ಸಂಪೂರ್ಣ ಕಲುಷಿತವಾಗುತ್ತೆ. ಹಾಗಾಗಿ ಯಾವುದೇ ಕಾರಣಕ್ಕೂ ಫಿಶ್ ಮಿಲ್ ಆರಂಭಿಸಲು ಬಿಡಲ್ಲ ಎಂದು ಪರಿಸರಪ್ರಿಯರು ಹೇಳುತ್ತಾರೆ.

ಇದನ್ನು ಓದಿ : ಕೊರೋನಾ ಭೀತಿ ಹಿನ್ನೆಲೆ - ಬಿಸಿಯೂಟದ ಬದಲು ಆಹಾರಧಾನ್ಯ ವಿತರಿಸುವಂತೆ ಶಿಕ್ಷಣ ಇಲಾಖೆ ಆದೇಶಒಂದು ವೇಳೆ ಕೈಗಾರಿಕಾ ವಲಯಕ್ಕೆ ಅವಕಾಶ ನೀಡಿದ್ದೇ ಆದರೆ ಮತ್ತೊಂದು ಫಿಶ್ ಮಿಲ್ ಸ್ಥಾಪನಗೆ ಕಾರಣವಾಗಬಹುದು ಎನ್ನುವುದು ಗ್ರಾಮಸ್ಥರ ಆತಂಕವಾಗಿದೆ.

ಉದ್ಯಾವರ ಗ್ರಾಮದಲ್ಲಿ ಫಿಶ್ ಮಿಲ್ ವಿಚಾರವಾಗಿ ಪದೇ ಪದೇ ಗದ್ದಲಗಳು ನಡೆಯುತ್ತಿವೆ. ಕೈಗಾರಿಕೆಯ ಹೆಸರಲ್ಲಿ ರಾಜಕಾರಣ ಈ ಕ್ಷೇತ್ರದಲ್ಲಿ ಮಾಮೂಲಾಗಿದೆ. ವಿರೋಧಿಸುವವರು ಸಮರ್ಥಿಸುವುದು, ಸಮರ್ಥಿಸುವವರು ಮತ್ತೊಮ್ಮೆ ವಿರೋಧಿಸುವುದು ನಡೆಯುತ್ತಲೇ ಇರುತ್ತೆ. ಈ ಪರಿಸರ ರಾಜಕಾರಣದಲ್ಲಿ ಊರವರ ಹಿತ ಬಲಿಯಾಗುತ್ತಿರುವುದು ಮಾತ್ರ ವಿಪರ್ಯಾಸ.

(ವರದಿ : ಪರೀಕ್ಷಿತ್ ಶೇಟ್)
Youtube Video
First published: March 21, 2020, 7:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories