HOME » NEWS » State » FISHERY STARTED FROM TODAY AT UTTARA KANNADA COASTAL LG

ಉತ್ತರ ಕನ್ನಡ: ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಪುನರಾರಂಭ; ಮೀನುಗಾರರಿಗೆ ಮತ್ತೆ ಕಾಡಲಿದೆ ಕೊರೋನಾ ಮಾಹಾಮಾರಿ

ಇಷ್ಟು ವರ್ಷ ಓರಿಸ್ಸಾ, ಜಾರ್ಖಂಡ್ ಹೀಗೆ ವಿವಿಧ ಹೊರ ರಾಜ್ಯದ ಮೀನುಗಾರರು ಈ ಬಾರಿ ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆ ಮಾಡಲು ಬರಲು ಅಸಾಧ್ಯವಾಗಿದೆ. ಕೊರೋನಾ ಮಾಹಾಮಾರಿ ಇವರನ್ನೆಲ್ಲಾ ತವರಿನಲ್ಲೆ ಕಟ್ಟಿ ಹಾಕಿದೆ.

news18-kannada
Updated:August 1, 2020, 8:11 PM IST
ಉತ್ತರ ಕನ್ನಡ: ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಪುನರಾರಂಭ; ಮೀನುಗಾರರಿಗೆ ಮತ್ತೆ ಕಾಡಲಿದೆ ಕೊರೋನಾ ಮಾಹಾಮಾರಿ
ಕಡಲ ತೀರದಲ್ಲಿ ನಿಂತಿರುವ ಬೋಟ್​ಗಳು
  • Share this:
ಕಾರವಾರ(ಆ.01): ರಾಜ್ಯದ ಕರಾವಳಿಯಲ್ಲಿ ಆಗಸ್ಟ್ ತಿಂಗಳ ಮೊದಲ ದಿನ ಮೀನುಗಾರಿಕೆ ಪ್ರಾರಂಭಕ್ಕೆ ವಿದ್ಯುಕ್ತ ಚಾಲನೆ ಸಿಗುತ್ತದೆ. ಮಳೆಗಾಲದ ಎರಡು ತಿಂಗಳು ಬಂದ್ ಆಗುವ ಮೀನುಗಾರಿಕೆ ಸರ್ಕಾರದ ಆದೇಶದಂತೆ ಇಂದಿನಿಂದ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಪ್ರತಿವರ್ಷ ಅಗಸ್ಟ್‌ನಲ್ಲಿ ಮೀನುಗಾರಿಕೆಯನ್ನ ಹಬ್ಬದಂತೆ ಆಚರಿಸುತ್ತಿದ್ದ ಉತ್ತರಕನ್ನಡ ಮೀನುಗಾರರ ಸಂಭ್ರಮವನ್ನು ಈ ಬಾರಿ ಕೊರೋನಾ ಕಸಿದುಕೊಂಡಿದೆ.  ಕೊರೋನಾ ನೀಡಿದ ಹೊಡೆತದಿಂದ ಇನ್ನೂ ಸಹ ಮೀನುಗಾರರು ಚೇತರಿಸಿಕೊಂಡಿಲ್ಲವಾಗಿದ್ದು ಮತ್ತೆ ಕಡಲಿಗಿಳಿಯಲು ಕಾರ್ಮಿಕರ ಕೊರತೆ ಎದುರಾಗಿದೆ.

ಸರ್ಕಾರದ ಆದೇಶದಂತೆ ಜೂನ್, ಜುಲೈ ತಿಂಗಳ ಮಳೆಗಾಲದ ಅವಧಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಿದ ಬಳಿಕ ಆಗಸ್ಟ್ 1 ರಿಂದ ಪುನಃ ಪ್ರಾರಂಭ ಮಾಡಲಾಗುತ್ತದೆ. 61 ದಿನಗಳ ಬಳಿಕ ಮೀನುಗಾರಿಕೆ ಪ್ರಾರಂಭವನ್ನ ಮೀನುಗಾರರು ಹಬ್ಬದಂತೆ ಆಚರಣೆ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆ. ಅದರಂತೆ ಇವತ್ತು ಕರಾವಳಿಯಲ್ಲಿ ಮೀನುಗಾರಿಕೆ ಮತ್ತೆ ಪ್ರಾರಂಭಗೊಂಡಿದ್ದು ಈ ಬಾರಿ ಉತ್ತರಕನ್ನಡ ಜಿಲ್ಲೆಯ ಮೀನುಗಾರರಲ್ಲಿ ಯಾವುದೇ ಸಂಭ್ರಮಾಚರಣೆ ಕಂಡುಬಂದಿಲ್ಲ. ಬೋಟುಗಳನ್ನ ಮಾವಿನ ತೋರಣ, ಹೂವಿನ ಹಾರ ಹಾಕಿ ಸಿಂಗರಿಸಿ ಪೂಜೆ ಮಾಡಿ ಖುಷಿಯಿಂದ ಸಮುದ್ರಕ್ಕಿಳಿಯುತ್ತಿದ್ದ ಮೀನುಗಾರರ ಸಂಭ್ರಮವನ್ನ ಕೊರೋನಾ ಕಸಿದುಕೊಂಡಿದೆ.

ಹೌದು, ಪ್ರತಿವರ್ಷದಂತೆ ಮೀನುಗಾರಿಕೆ ಮೇಲಿನ ನಿಷೇಧ ಅವಧಿ ಜುಲೈ 31ಕ್ಕೆ ಮುಕ್ತಾಯಗೊಂಡ ಬಳಿಕ ಮೀನುಗಾರರು ಮೀನುಗಾರಿಕೆಯನ್ನ ಪ್ರಾರಂಭಿಸುತ್ತಿದ್ದರು. ಅದರಂತೆ ಕಾರವಾರ ತಾಲ್ಲೂಕಿನ ಬೈತಖೋಲ ಬಂದರಿನಲ್ಲಿ ಮೀನುಗಾರಿಕೆ ಪ್ರಾರಂಭದ ದಿನ ಕಾಣುತ್ತಿದ್ದ ಹಬ್ಬದ ಸಂಭ್ರಮ ಈ ಬಾರಿ ಕಾಣೆಯಾಗಿದೆ. ಕೆಲವೇ ಕೆಲವು ಬೋಟುಗಳು ಮಾತ್ರ ಮೀನುಗಾರಿಕೆಗೆ ತೆರಳುತ್ತಿದ್ದು ಸಾಕಷ್ಟು ಬೋಟುಗಳು ಬಂದರಿನಲ್ಲೇ ಲಂಗರು ಹಾಕಿ ನಿಂತಿವೆ. ಕೊರೊನಾ ಅಟ್ಟಹಾಸ ಹಿನ್ನಲೆ ಮೀನುಗಾರಿಕಾ ಬೋಟುಗಳಲ್ಲಿ ಕೆಲಸ ಮಾಡುತ್ತಿದ್ದ ಹೊರರಾಜ್ಯದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದು ಮತ್ತೆ ವಾಪಸ್ಸಾಗಿಲ್ಲ. ಹೀಗಾಗಿ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟುಗಳಲ್ಲಿ ಕಾರ್ಮಿಕರೇ ಇಲ್ಲದಂತಾಗಿದ್ದು ಸ್ಥಳೀಯರನ್ನ ತೆಗೆದುಕೊಂಡು ಕೆಲವೇ ಕೆಲವು ಬೋಟುಗಳು ಮಾತ್ರ ಮೀನುಗಾರಿಕೆಗೆ ತೆರಳಿವೆ.

ಕರ್ನಾಟಕದಲ್ಲಿ ಆಗಸ್ಟ್​ 20ಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ; ಸಚಿವ ಸುರೇಶ್ ಕುಮಾರ್

ಹೊರ ರಾಜ್ಯದ ಮೀನುಗಾರರ ಕೊರತೆ; ರಾಜ್ಯದ ಮೀನುಗಾರ ಕಾರ್ಮಿಕರ ಮೊರೆ ಹೋದ ಬೋಟ್ ಮಾಲಿಕರು

ಇಷ್ಟು ವರ್ಷ ಓರಿಸ್ಸಾ, ಜಾರ್ಖಂಡ್ ಹೀಗೆ ವಿವಿಧ ಹೊರ ರಾಜ್ಯದ ಮೀನುಗಾರರು ಈ ಬಾರಿ ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆ ಮಾಡಲು ಬರಲು ಅಸಾದ್ಯವಾಗಿದೆ. ಕೊರೋನಾ ಮಾಹಾಮಾರಿ ಇವರನ್ನೆಲ್ಲಾ ತವರಿನಲ್ಲೆ ಕಟ್ಟಿ ಹಾಕಿದೆ. ಈ ಹಿನ್ನಲೆಯಲ್ಲಿ ಈಗ ಉತ್ತರ ಕರ್ನಾಟಕ ಭಾಗದ ಕೊಪ್ಪಳದ ಮೀನುಗಾರ ಕಾರ್ಮಿಕರು ಈ ಬಾರಿ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರಿಕಾ ಕಾರ್ಮಿಕರಾಗಿದ್ದಾರೆ. ಬಹುತೇಕ ಮೀನುಗಾರಿಕಾ ಬೋಟ್ ಮಾಲಿಕರು ಕೊಪ್ಪಳದ ಕಾರ್ಮಿಕರಿಗೆ ಬುಲಾವ್ ಮಾಡಿದ್ದಾರೆ.

ಸಾಲ ಬೇಡ, ಬಡ್ಡಿಯನ್ನಾದರೂ ಮನ್ನಾ ಮಾಡಿ ಎಂದ ಮೀನುಗಾರುಇನ್ನು ಕಳೆದ ಬಾರಿ ಆಗಸ್ಟ್ ಮೊದಲ ವಾರದಲ್ಲಿ ನೆರೆ ಪರಿಸ್ಥಿತಿ ಉಂಟಾದ ಬಳಿಕ ಸಮುದ್ರದಲ್ಲೂ ಚಂಡಮಾರುತದಿಂದಾಗಿ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಅದಾದ ಬಳಿಕ ಎರಡು ತಿಂಗಳು ನಡೆದ ಮೀನುಗಾರಿಕೆ ಬಳಿಕ ಈ ವರ್ಷದ ಪ್ರಾರಂಭದಲ್ಲಿ ಮತ್ಸ್ಯಕ್ಷಾಮ ಹಿನ್ನಲೆ ಹಂತ ಹಂತವಾಗಿ ಸ್ಥಗಿತಗೊಳ್ಳುವಂತಾಗಿದ್ದು ಅಷ್ಟರಲ್ಲೇ ಕೊರೊನಾ ವಕ್ಕರಿಸಿದ ಪರಿಣಾಮ ಮೀನುಗಾರಿಕೆ ಸಂಪೂರ್ಣ ನಿಂತುಹೋಗಿತ್ತು. ಇದೀಗ ಸುಮಾರು ನಾಲ್ಕು ತಿಂಗಳ ಬಳಿಕ ಸ್ಥಗಿತಗೊಂಡಿದ್ದ ಮೀನುಗಾರಿಕೆ ಇಂದಿನಿಂದ ಪ್ರಾರಂಭವಾಗಬೇಕಾಗಿತ್ತಾದರೂ ಕೊರೋನಾ ಅವಾಂತರದಿಂದಾಗಿ ಅದಕ್ಕೂ ಅಡ್ಡಿಯಾಗಿದೆ. ಅಲ್ಲದೇ ಪದೇ ಪದೇ ಮೀನುಗಾರಿಕೆ ಸ್ಥಗಿತಗೊಂಡ ಹಿನ್ನಲೆ ಮೀನುಗಾರರು ಸಾಲ ತೀರಿಸಲಾಗದೇ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು ಸರ್ಕಾರ ಕೇವಲ ಪ್ರಚಾರ ಪಡೆದುಕೊಂಡಿದ್ದನ್ನ ಹೊರತುಪಡಿಸಿದರೆ ಮೀನುಗಾರರ ನೆರವಿಗೇ ಬಂದಿಲ್ಲ ಅನ್ನೋದು ಮೀನುಗಾರರ ಅಭಿಪ್ರಾಯವಾಗಿದೆ.

ಇನ್ನು ಸದ್ಯ ಹೊರರಾಜ್ಯದ ಮೀನುಗಾರರು ಬರುವುದು ಸಾಧ್ಯವಿಲ್ಲದ ಹಿನ್ನಲೆ ಸ್ಥಳೀಯ ಕಾರ್ಮಿಕರನ್ನೇ ಬಳಸಿಕೊಂಡು ವಾರದ ಬಳಿಕ ಮೀನುಗಾರಿಕೆ ಪ್ರಾರಂಭಿಸಲು ಪರ್ಸಿನ್ ಬೋಟು ಮೀನುಗಾರರು ನಿರ್ಧರಿಸಿದ್ದಾರೆ. ಸದ್ಯ ಮೀನುಗಾರಿಕೆ ಪ್ರಾರಂಭಿಸಿರುವವರಿಗೆ ಮೀನಿನ ಲಭ್ಯತೆಯನ್ನ ಪರಿಶೀಲಿಸಿದ ಬಳಿಕವೇ ಮೀನುಗಾರಿಕೆಗೆ ಇಳಿಯಲು ಪರ್ಸಿನ್ ಬೋಟು ಮೀನುಗಾರರು ನಿರ್ಧರಿಸಿದ್ದು ಸದ್ಯಕ್ಕಂತೂ ಮೀನುಗಾರಿಕೆ ಪ್ರಾರಂಭವಾಗುವ ಲಕ್ಷಣಗಳು ಕಂಡುಬಂದಿಲ್ಲ.

ಒಟ್ಟಾರೆ ಕರಾವಳಿಯಲ್ಲಿ ಮೀನುಗಾರಿಕೆ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದರೂ ಮೀನುಗಾರಿಕೆಗೆ ತೆರಳಲಾಗದ ಪರಿಸ್ಥಿತಿ ಮೀನುಗಾರರದ್ದಾಗಿದೆ. ಈ ಬಾರಿಯಾದರೂ ಉತ್ತಮ ಮೀನುಗಾರಿಕೆ ನಡೆಯುವ ವಿಶ್ವಾಸದಲ್ಲಿ ಮೀನುಗಾರರಿದ್ದು ಮೀನುಗಾರಿಕೆ ಚೇತರಿಸಿಕೊಳ್ಳತ್ತಾ ಎನ್ನುವುದನ್ನು ಕಾದುನೋಡಬೇಕು.
Published by: Latha CG
First published: August 1, 2020, 8:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories