HOME » NEWS » State » FISHERMAN FACING MANY PROBLEM IN KARWAR HK

ಕಾರವಾರ: ಪ್ರಕೃತಿಯ ಮುನಿಸಿಗೆ ಬರಿದಾಯ್ತು ಮೀನುಗಾರರ ಬದುಕು

ಮೀನುಗಾರಿಕೆ ನಡೆಸಲು ಮೀನುಗಾರರು ಬ್ಯಾಂಕುಗಳಲ್ಲಿ ಸಾಲ ಮಾಡಿ ಬೋಟುಗಳನ್ನ ಸಿದ್ದಪಡಿಸಿಕೊಂಡಿದ್ದು ಇದೀಗ ಮೀನುಗಳೇ ಸಿಗದೇ ಆತಂಕಗೊಳ್ಳುವಂತಾಗಿದೆ. ಮಾರ್ಚ್ ತಿಂಗಳು ಸಮೀಪಿಸುತ್ತಿರುವುದರಿಂದ ಬ್ಯಾಂಕುಗಳು ಸಾಲದ ಮರುಪಾವತಿಗೆ ಒತ್ತಾಯಿಸುತ್ತಿದ್ದು ಮೀನುಗಾರರು ದಿಕ್ಕು ಕಾಣದಂತಹ ಪರಿಸ್ಥಿತಿಯಲ್ಲಿದ್ದಾರೆ.

news18-kannada
Updated:February 19, 2020, 7:31 AM IST
ಕಾರವಾರ: ಪ್ರಕೃತಿಯ ಮುನಿಸಿಗೆ ಬರಿದಾಯ್ತು ಮೀನುಗಾರರ ಬದುಕು
ಮೀನುಗಾರಿಕಾ ಬೋಟುಗಳು
  • Share this:
ಕಾರವಾರ(ಫೆ.19) : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಈ ಬಾರಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೀನುಗಾರಿಕಾ ಅವಧಿ ಮುಗಿಯಲು ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು ಉತ್ತಮ ಮೀನುಗಾರಿಕೆ ನಡೆಸಲು ಸಿದ್ಧತೆ ನಡೆಸಿದ್ದರು. ಆದರೆ, ಆಳ ಸಮುದ್ರದವರೆಗೆ ತೆರಳಿದರೂ ಮೀನುಗಳೇ ಸಿಗದೇ ಮೀನುಗಾರರು ವಾಪಸ್ಸಾಗುವಂತಾಗಿದೆ. ಹಾಗಾಗಿ ಈ ಬಾರಿ ಅವಧಿಗೆ ಮುನ್ನವೇ ಮೀನಿಗೆ ಮತ್ಸ್ಯಕ್ಷಾಮ ಎದುರಾಗಿದೆ. ಪರಿಣಾಮ ಸಾಲ ಮಾಡಿಕೊಂಡು ಮೀನುಗಾರಿಕೆ ಪ್ರಾರಂಭಿಸಿದವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದು ಕಂಗಾಲಾಗಿದ್ದಾರೆ.

ಜನವರಿಯಿಂದಲೂ ಉತ್ತಮ ಮೀನುಗಳು ಸಿಗದೆ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಬೋಟುಗಳು ಖಾಲಿಯಾಗಿಯೇ ವಾಪಸ್ಸಾಗುವಂತಾಗಿತ್ತು. ಕೆಲವೊಂದು ಬೋಟುಗಳಿಗೆ ಮೀನು ಸಿಕ್ಕರೂ ಡೀಸೆಲ್‌ಗೆ ವ್ಯಯಿಸಿದ ಖರ್ಚು ಸಹ ಪೂರೈಸುವಷ್ಟು ಮೀನುಗಳು ಸಿಗದ ಹಿನ್ನಲೆ ಮೀನುಗಳು ಸಿಕ್ಕರೂ ಲಾಭವಾಗುವ ಪರಿಸ್ಥಿತಿ ಇರಲಿಲ್ಲ. ಈ ನಿಟ್ಟಿನಲ್ಲಿ ಕಳೆದ ಹದಿನೈದು ದಿನಗಳಿಂದ ಬೈತಖೋಲ ಭಾಗದ ಮೀನುಗಾರಿಕಾ ಬೋಟುಗಳು ಮೀನುಗಾರಿಕೆಗೆ ತೆರಳದೇ ಬಂದರಿನಲ್ಲೇ ಲಂಗರು ಹಾಕಿ ನಿಂತಿವೆ. ಸುಮಾರು 300ಕ್ಕೂ ಅಧಿಕ ಬೋಟುಗಳು ಮೀನುಗಳು ಸಿಗದೇ ಮೀನುಗಾರಿಕೆಯನ್ನ ಸ್ಥಗಿತಗೊಳಿಸಿದ್ದು ಮೀನುಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಇನ್ನು ಈ ಬಾರಿಯ ಮೀನುಗಾರಿಕಾ ಅವಧಿಯಲ್ಲಿ ಅಗಸ್ಟ್ ತಿಂಗಳಿನಿಂದ ಮೀನುಗಾರಿಕೆ ಪ್ರಾರಂಭವಾಗಿದ್ದರೂ ಸಹ ಧಾರಾಕಾರ ಮಳೆ ಹಾಗೂ ಚಂಡಮಾರುತದಂತಹ ಹವಾಮಾನ ವೈಪರೀತ್ಯದಿಂದಾಗಿ ನಾಲ್ಕೈದು ಬಾರಿ ಸ್ಥಗಿತಗೊಳ್ಳುವಂತಾಗಿತ್ತು. ಇದಾದ ನಂತರ ಮೀನುಗಾರಿಕೆಯನ್ನ ಪುನಃ ಪ್ರಾರಂಭಿಸಿದ್ದರೂ ಸಹ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದ ಪರಿಣಾಮ ಉತ್ತಮ ಮೀನುಗಾರಿಕೆ ಸಾಧ್ಯವಾಗಿರಲಿಲ್ಲ. ಇದೀಗ ಬೇಸಿಗೆ ಸಮೀಪಿಸುತ್ತಿದ್ದು ಪ್ರತಿವರ್ಷ ಈ ಅವಧಿಯಲ್ಲಿ ಉತ್ತಮ ಮೀನುಗಾರಿಕೆ ನಡೆಯುತ್ತಿತ್ತು. ಈ ಹಿನ್ನಲೆ ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೆ ನಿರಾಸೆ ಉಂಟಾಗುವಂತಾಗಿದೆ.

ಮೀನುಗಾರಿಕೆ ನಡೆಸಲು ಮೀನುಗಾರರು ಬ್ಯಾಂಕುಗಳಲ್ಲಿ ಸಾಲ ಮಾಡಿ ಬೋಟುಗಳನ್ನ ಸಿದ್ದಪಡಿಸಿಕೊಂಡಿದ್ದು ಇದೀಗ ಮೀನುಗಳೇ ಸಿಗದೇ ಆತಂಕಗೊಳ್ಳುವಂತಾಗಿದೆ. ಮಾರ್ಚ್ ತಿಂಗಳು ಸಮೀಪಿಸುತ್ತಿರುವುದರಿಂದ ಬ್ಯಾಂಕುಗಳು ಸಾಲದ ಮರುಪಾವತಿಗೆ ಒತ್ತಾಯಿಸುತ್ತಿದ್ದು ಮೀನುಗಾರರು ದಿಕ್ಕು ಕಾಣದಂತಹ ಪರಿಸ್ಥಿತಿಯಲ್ಲಿದ್ದಾರೆ. ಒಂದೆಡೆ ಮೀನುಗಾರಿಕೆ ಸ್ಥಗಿತಗೊಂಡಿದ್ದು ಮೊದಲೇ ನಷ್ಟದಲ್ಲಿ ಮೀನುಗಾರರಿದ್ದು ಇದೀಗ ಸಾಲ ಮರುಪಾವತಿಸಲು ಸಾಧ್ಯವಾಗದ ಸ್ಥಿತಿ ಇದ್ದು ಸರ್ಕಾರ ಮೀನುಗಾರರ ನೆರವಿಗೆ ಬರಬೇಕು ಎನ್ನುವುದು ಮೀನುಗಾರರ ಅಭಿಪ್ರಾಯವಾಗಿದೆ.

ಇದನ್ನೂ ಓದಿ : ಮಕ್ಕಳ ಹೊಟ್ಟೆಗೆ ಸೂಜಿದಾರ ಪೋಣಿಸಿ ಹರಕೆ ತೀರಿಕೆ: ಕಾರವಾರದ ‘ಮಾರ್ಕೆಪೂನವ್’ ಜಾತ್ರೆ ವಿಶೇಷತೆಗಳು

ಇನ್ನು ಪ್ರತಿವರ್ಷ ಏಪ್ರಿಲ್, ಮೇ ತಿಂಗಳ ಕೊನೆಯವರೆಗೆ ಮೀನುಗಾರರು ಮೀನುಗಾರಿಕೆಯನ್ನು ನಡೆಸುತ್ತಿದ್ದರು. ಜೂನ್ ತಿಂಗಳಿನಿಂದ ಮೀನುಗಾರಿಕೆ ನಿಷೇಧ ಅವಧಿ ಪ್ರಾರಂಭವಾಗುವುದರಿಂದ ಮೀನುಗಾರರಿಗೆ ಎರಡು ತಿಂಗಳು ರಜೆಯ ಅವಧಿಯಂತಿದ್ದು ಅದಕ್ಕೂ ಮೊದಲೇ ಉತ್ತಮ ಮೀನುಗಾರಿಕೆ ಮಾಡಿಕೊಂಡು ಲಾಭವನ್ನ ಗಳಿಸಿಕೊಳ್ಳುತ್ತಿದ್ದರು. ಆದ್ರೆ ಈ ಬಾರಿ ಅವಧಿಗೆ ಮುನ್ನವೇ ಮತ್ಸ್ಯಕ್ಷಾಮ ಎದುರಾಗಿದ್ದು ಬೋಟಿಗೆ ಹಾಕಿದ್ದ ಹಣವನ್ನೂ ಸಹ ಗಳಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.

ಮೀನುಗಾರರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಸರ್ಕಾರ ಕೇವಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲವನ್ನ ಮಾತ್ರ ಮನ್ನಾ ಮಾಡಿದ್ದು ಸ್ಥಳೀಯ ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡಿದ್ದವರಿಗೆ ಸಾಲಮನ್ನಾ ಪ್ರಯೋಜನವಾಗದಂತಾಗಿದೆ. ಒಟ್ಟಾರೇ ಅವಧಿಗೆ ಮುನ್ನವೇ ಮತ್ಸ್ಯಕ್ಷಾಮ ಎದುರಾಗಿರೋದು ಮೀನುಗಾರರನ್ನ ಸಂಕಷ್ಟಕ್ಕೆ ಸಿಲುಕಿಸಿದಂತಾಗಿದ್ದು ಸರ್ಕಾರ ಮೀನುಗಾರರ ನೆರವಿಗೆ ಆಗಮಿಸಿ ಮೀನುಗಾರಿಕೆ ಉಳಿಸಲು ಮುಂದಾಗಬೇಕಿದೆ. (ವರದಿ : ದರ್ಶನ್ ನಾಯ್ಕ)
First published: February 19, 2020, 7:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories