ಮಂಗಳೂರು: ಇಂದಿನಿಂದ ಮೀನುಗಾರಿಕೆ ಆರಂಭ

ಕಡಲ ತೀರದಲ್ಲಿ ನಿಂತಿರುವ ಬೋಟ್​ಗಳು

ಕಡಲ ತೀರದಲ್ಲಿ ನಿಂತಿರುವ ಬೋಟ್​ಗಳು

ಈ ಮಧ್ಯೆ ಮಹಾಮಾರಿ ಕೊರೋನಾ ಅದೆಲ್ಲಕ್ಕೂ ಅವಕಾಶ ನೀಡಿರಲಿಲ್ಲ. ಆದರೆ ಇದೀಗ ಅನ್​​ಲಾಕ್ 4.0 ಜಾರಿಯಾಗುತ್ತಿದ್ದಂತೆ ಬಂದರು ಚಟುವಟಿಕೆಗಳು ಸಕ್ರಿಯವಾಗಲಿವೆ. ಮೀನುಗಾರಿಕೆಗೆ ತೆರಳುವ ಯಾಂತ್ರೀಕೃತ ಪರ್ಸಿನ್ ಮತ್ತು ಟ್ರಾಲ್ ಬೋಟ್​​ಗಳು ಸಮುದ್ರಕ್ಕೆ ಇಳಿದಿವೆ.

  • Share this:

ಬೆಂಗಳೂರು(ಸೆ.01): ಇಂದಿನಿಂದ ಬಂದರು ನಗರಿ ಮಂಗಳೂರಿನಲ್ಲಿ ಮೀನುಗಾರಿಕಾ ಚಟುವಟಿಕೆ ಆರಂಭವಾಗಿದೆ.‌ ಕಳೆದ ಐದು ತಿಂಗಳಿನಿಂದ ಲಂಗರು ಹಾಕಿದ್ದ ಬೋಟ್​ಗಳು ಮತ್ತೆ ಕಡಲಿಗಿಳಿದಿದೆ. ಈ ಮೂಲಕ ಕರಾವಳಿಯ ಜೀವನಾಡಿ ಉದ್ಯಮ ಮತ್ತೆ ಚಟುವಟಿಕೆಯಿಂದ ಗರಿಗೆದರುವಂತಾಗಿದೆ.


ಕೊರೋನಾದಿಂದಾಗಿ ಮಾರ್ಚ್ ತಿಂಗಳ ಅಂತ್ಯಕ್ಕೆ ಲಂಗರು ಹಾಕಿದ್ದ ಪರಿಣಾಮ ಬೇಸಿಗೆ ಮೀನುಗಾರಿಕೆಯ ಲಾಭವಿಲ್ಲದೇ ಮೀನುಗಾರರು ಕಂಗಾಲಾಗಿದ್ದರು. ಕಡಲತಡಿಯ ಜನರ ಜೀವನಾಡಿಯಾದ ಮೀನುಗಾರಿಕಾ ಉದ್ಯಮವು ಕೊರೋನಾ ಕಾರಣದಿಂದ ಮಂಕಾಗಿತ್ತು. ಎಲ್ಲವೂ ಸಂಪ್ರದಾಯದಂತೆ ನಡೆಯುತ್ತಿದ್ದರೆ ಮೇ ಅಂತ್ಯಕ್ಕೆ ಮೀನುಗಾರಿಕಾ ಋತು ಅಂತ್ಯ ಕಂಡು ಆಗಸ್ಟ್ 1ರಿಂದ ಮತ್ತೆ ಮೀನುಗಾರಿಕಾ ಚಟುವಟಿಕೆಗಳು ಆರಂಭವಾಗಬೇಕಿತ್ತು.‌


ಈ ಮಧ್ಯೆ ಮಹಾಮಾರಿ ಕೊರೋನಾ ಅದೆಲ್ಲಕ್ಕೂ ಅವಕಾಶ ನೀಡಿರಲಿಲ್ಲ. ಆದರೆ ಇದೀಗ ಅನ್​​ಲಾಕ್ 4.0 ಜಾರಿಯಾಗುತ್ತಿದ್ದಂತೆ ಬಂದರು ಚಟುವಟಿಕೆಗಳು ಸಕ್ರಿಯವಾಗಲಿವೆ. ಮೀನುಗಾರಿಕೆಗೆ ತೆರಳುವ ಯಾಂತ್ರೀಕೃತ ಪರ್ಸಿನ್ ಮತ್ತು ಟ್ರಾಲ್ ಬೋಟ್​​ಗಳು ಸಮುದ್ರಕ್ಕೆ ಇಳಿದಿವೆ.


ಕರಾವಳಿಯ ಮೀನುಗಾರಿಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದ ಕಾರ್ಮಿಕರನ್ನೇ ಅವಲಂಬಿಸಿದ್ದು, ಆದರೆ ಕೊರೋನಾ ಕಾರಣದಿಂದ ಎಲ್ಲಾ ಕಾರ್ಮಿಕರು ಇನ್ನೂ ಮಂಗಳೂರು ತಲುಪಿಲ್ಲ. ಆದ್ದರಿಂದ ಈ ಬಾರಿಯ ಮೀನುಗಾರಿಕಾ ಋತುವಿನ ಮೊದಲ ದಿನ ಕೇವಲ ಶೇ.20ರಷ್ಟು ಬೋಟ್​​​ಗಳು ಮಾತ್ರ ಸಮುದ್ರಕ್ಕಿಳಿದಿವೆ.‌ ಆದರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬೋಟ್​​ಗಳು ಕಡಲಿಗಿಳಿಯಲಿದೆ.


ಇನ್ನು, ಬೋಟ್​​ಗಳಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡೋದ್ರಿಂದ ಕೊರೋನಾ ಸೋಂಕು ಹರಡುವ ಭಯವೂ ಕಾಡುತ್ತಿದೆ. ಆ ಕಾರಣಕ್ಕಾಗಿಯೇ ಮೀನುಗಾರಿಕಾ ಇಲಾಖೆ ಅಗತ್ಯ ಸುರಕ್ಷತಾ ಕ್ರಮಕೈಗೊಳ್ಳುವಂತೆ ಬೋಟ್ ಮಾಲೀಕರಿಗೆ ಸೂಚನೆ ನೀಡಿದೆ. ವಿಶೇಷವಾಗಿ ಹೊರ ರಾಜ್ಯದಿಂದ ಬರೋ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸುವ ಜವಾಬ್ದಾರಿಯನ್ನು ಕೂಡಾ ಬೋಟ್ ಮಾಲೀಕರಿಗೆ ವಹಿಸಲಾಗಿದೆ ಅಂತಾ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಾರ್ಶ್ವನಾಥ ತಿಳಿಸಿದ್ದಾರೆ.


ಇದನ್ನೂ ಓದಿ: ಮಂಗಳೂರು: ರೈತರ ನೆರವಿಗೆ ನಿಂತ ಭಾರತೀಯ ರೈಲ್ವೆ ಇಲಾಖೆ


ಒಟ್ಟಿನಲ್ಲಿ ಒಂದು ಕಡೆ ಕೊರೋನಾ ಆತಂಕ ಇನ್ನೊಂದು ಕಡೆ ಬದುಕಿನ ಪ್ರಶ್ನೆಯನ್ನಿರಿಸಿ ಕಡಲ ಮಕ್ಕಳು ಸಮುದ್ರಕ್ಕಿಳಿದಿದ್ದಾರೆ. ಆಳಸಮುದ್ರಕ್ಕೆ ತೆರಳಿ ಇನ್ನೇನು ಕೆಲ ದಿನಗಳಲ್ಲಿ ಮತ್ಸ್ಯಪ್ರಿಯರ ನೆಚ್ಚಿನ ಮೀನುಗಳನ್ನ ಹೊತ್ತು ತರಲಿದ್ದಾರೆ‌. ಆದರೆ ಇತ್ತೀಚಿನ ಕೆಲ ವರುಷಗಳಿಂದ ಚಂಡಮಾರುತ, ಬಿರುಗಾಳಿಯಂತಹ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಕರಾವಳಿಯ ಪ್ರಮುಖ ಉದ್ದಿಮೆ ಮೀನುಗಾರಿಕೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಅನುಭವಿಸಿತ್ತು. ಹಾಗಾಗಿ ಈ ಬಾರಿ ಮತ್ತೆ ಅಂತಹ ಯಾವುದೇ ವಿಘ್ನ ಎದುರಾಗದಿರಲಿ ಅನ್ನೋ ಮೊರೆಯನ್ನ ಸಮುದ್ರರಾಜನ ಮುಂದಿರಿಸಿ ಕಡಲಿಗಿಳಿದಿದ್ದಾರೆ.

Published by:Ganesh Nachikethu
First published: