Meet Mr ನಾಗರಾಜಯ್ಯ, ನಾಡಪ್ರಭು ಕೆಂಪೇಗೌಡ ಲೇಔಟಿನ ಮೊಟ್ಟಮೊದಲ ಮನೆಯೊಡೆಯ!

ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲಿ ಮೊದಲ ಮನೆ ನಿರ್ಮಾಣ ಆಗಿದೆ. ಆದ್ರೆ ನೆತ್ತಿ ಮೇಲೆ ಸೂರು ಬಂದರೂ ವಾಸ ಮಾಡೋಕೆ ಯಾರೂ ರೆಡಿ ಇಲ್ಲ! ದಶಕಗಳ ಹೋರಾಟದ ನಂತರ ಇಲ್ಲಿ ತಲೆ ಎತ್ತಿದ ಮೊದಲ ಮನೆ ಹೇಗಿದೆ ನೋಡಿ.

ನಾಗರಾಜಯ್ಯನ ಮನೆ

ನಾಗರಾಜಯ್ಯನ ಮನೆ

  • Share this:
ಅಂತೂ ಇಂತೂ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (Kempegowda Layout) ಮೊಟ್ಟಮೊದಲ ಮನೆ ನಿರ್ಮಾಣವಾಗಿದೆ. ಈ ಮನೆ ನಾಗರಾಜಯ್ಯನದ್ದು. ನಾಗರಾಜಯ್ಯನವ್ರು ಕಾರ್ಪೊರೇಶನ್ ಬ್ಯಾಂಕಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದು ನಿವೃತ್ತಿಯ ಅಂಚಿನಲ್ಲಿದ್ದಾರೆ. 2017ರಲ್ಲಿ ಇವರ ಹೆಸರಿಗೆ ರಿಜಿಸ್ಟರ್ ಆಗಿದ್ದ ನಾಡಪ್ರಭು ಕೆಂಪೇಗೌಡ ಬಡಾವಣೆಯ ಸೈಟಿನಲ್ಲಿ (Site in Layout) ಕೊನೆಗೂ ಒಂದು ಮನೆ ನಿರ್ಮಿಸಿದ್ದಾರೆ. ಈ ಮನೆ ಕಟ್ಟದೇ ಇದ್ದಿದ್ರೆ ಬ್ಯಾಂಕಿನ ಲೋನ್ (Bank Loan) ಮತ್ತಷ್ಟು ಭಾರವಾಗ್ಬಿಡ್ತಿತ್ತು ಅನ್ನೋದು ಅವ್ರ ಆತಂಕ. ಅಂದ್ಹಾಗೆ ನಾಗರಾಜಯ್ಯ ಮನೆ ಕಟ್ಟಿರುವುದು ಯಾವ ಗಿನ್ನಿಸ್ ದಾಖಲೆಗಿಂತಲೂ ಮೀರಿದ್ದು ಅನ್ನೋದಂತೂ ಸತ್ಯ.

ನಾಗರಾಜಯ್ಯನಾದ ನಾನು….

“ಈ ಮನೆ ಮುಗಿಸೋಕೆ ನಂಗೆ 8 ತಿಂಗಳು ಹಿಡೀತು ನೋಡಿ. ನವೆಂಬರ್​ನಲ್ಲಿ ಬಹುತೇಕ ನಿರ್ಮಾಣ ಕೆಲಸ ಮುಗಿಯಿತು. ಆಮೇಲೆ ಸಣ್ಣ ಪುಟ್ಟ ಕೆಲ್ಸ ಮುಗಿಸಿಕೊಂಡ್ವಿ. ಈಗೇನಾದ್ರೂ ನಾನು ಮನೆ ಕಟ್ಟದೇ ಇದ್ದಿದ್ರೆ ಬ್ಯಾಂಕಿನವ್ರು ಗೃಹ ಸಾಲ ಕೊಟ್ಟಿದ್ದನ್ನು ಬದಲಿಸಿಬಿಡ್ತಿದ್ರು. ಒಂದೂವರೆ ವರ್ಷಗಳೊಳಗೆ ನಾನು ಮನೆ ಕಟ್ಟಲೇಬೇಕಿತ್ತು. 40 ಲಕ್ಷ ಸಾಲ ಮಾಡಿದೀನಿ, ತಿಂಗಳಿಗೆ 36,000 ರೂಪಾಯಿ ಇಎಂಐ ಕಟ್ಟಬೇಕು. ಇನ್ನೂ ತಡ ಮಾಡಿದ್ರೆ ಲೋನ್ ಡಿಸೆಬಿಲಿಟಿ ಆಗ್ಬಿಡ್ತಿತ್ತು, ಅದಕ್ಕೆ ಏನೋ ಮಾಡಿ ಮನೆ ಕಟ್ಟಿಬಿಟ್ಟೆ.

ಹಾಗಂತ ಈಗ ಆರಾಮಾಗಿದೀನಾ? ಅಯ್ಯೋ ಇಲ್ಲ… ಈಗ ಹೊಸಾ ಸಮಸ್ಯೆಗಳು ಶುರುವಾಗಿವೆ. ಮನೆ ಕಟ್ಟುವಾಗ ಬೆಸ್ಕಾಂನವ್ರು ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಕೊಟ್ಟಿದ್ರು. ಅದನ್ನು ಬಳಸಿಕೊಂಡು ಮನೆ ಏನೋ ಕಟ್ಟಿದ್ವಿ, ನೀರಿಗೂ ಪಕ್ಕದ ಹೊಸಬೈರೋಹಳ್ಳಿ ಜನ ಸಹಾಯ ಮಾಡಿದ್ರು, ಹಾಗಾಗಿ ಸಾಧ್ಯವಾಯ್ತು. ಈಗಂತೂ ಮನೆಗೆ ಸೋಲಾರ್ ಇದೆ-ದೀಪಕ್ಕೆ ಸಮಸ್ಯೆ ಇಲ್ಲ.

ಇದನ್ನೂ ಓದಿ: Mud House In Bengaluru: ಮಣ್ಣಿನಿಂದ ಮನೆ ಕಟ್ಟಿಕೊಂಡ ದಂಪತಿ; ಪರಿಸರ ಸ್ನೇಹಿ ಮನೆ ಹೇಗಿದೆ ನೀವೇ ನೋಡಿ

ಹಾಗಂತ ಎಲ್ಲವೂ ಸರಾಗವಾಗಿ ನಡೆಯಲಿಲ್ಲ. ಮನೆಯ ಪ್ಲಾನ್ ಸ್ಯಾಂಕ್ಷನ್​​ಗೆ ನಾನು ಒಂದು ವರ್ಷ ಬಿಡಿಎ ಇಲಾಖೆ-ಕಚೇರಿ ಅಲೆದಿದ್ದೇನೆ. 20 ವರ್ಷದ ಹಿಂದೆ ಸೈಟಿಗೆ ಪ್ರಯತ್ನಪಡೋಕೆ ಆರಂಭಿಸಿದ್ದೆ. ಕೊನೆಗೂ ಸೈಟ್ ಸಿಕ್ಕಿ ಮನೆ ಆಯ್ತಲ್ಲಾ ಅಂತ ಖುಷಿ ಪಡೋಕೆ ಆಗದ ಪರಿಸ್ಥಿತಿಯಲ್ಲಿ ಇದ್ದೀನಿ. ಈಗಲೂ ಮನಗೆ ಅಗತ್ಯವಾದ ಸ್ಯಾನಿಟೇಶನ್ ಲೈನ್ ಆಗ್ಲೀ, ಬೆಸ್ಕಾಂನಿಂದ ಶಾಶ್ವತ ವಿದ್ಯುತ್ ಸಂಪರ್ಕವಾಗ್ಲೀ ದೊರೆತಿಲ್ಲ. ರಸ್ತೆನೂ ಇಲ್ಲ. ಇದರ ನಡುವೆ ಮನೆ ಕಟ್ಟುವಾಗ ಅಳವಡಿಸಿದ್ದ ನೀರಿನ ಮೋಟರ್​ನ್ನು ಯಾರೋ ಕದ್ದುಕೊಂಡು ಹೋದ್ರು, ಹೊಸಾ ಮೋಟರ್ ತರಬೇಕಾಯ್ತು.

ಇಷ್ಟೆಲ್ಲಾ ಹರಸಾಹಸ ಪಟ್ಟ ನಂತರ ಕೊನೆಗೂ ಮನೆ ರೆಡಿಯಾಗಿದೆ. ಕನಿಷ್ಟ ಯಾರಿಗಾದ್ರೂ ಬಾಡಿಗೆಗೆ ಕೊಟ್ಟು ಸಾಲದ ಹೊರೆ ಸ್ವಲ್ಪ ತಗ್ಗಿಸಿಕೊಳ್ಳೋಣ ಎಂದುಕೊಂಡರೆ ರಸ್ತೆಯೂ ಸೇರಿದಂತೆ ಮೂಲಭೂತ ಸೌಕರ್ಯ ಇಲ್ಲದೇ ಇರೋದ್ರಿಂದ ಯಾರೂ ಬರ್ತಿಲ್ಲ. ಕನಿಷ್ಟ 10ರಿಂದ 15 ಸಾವಿರ ರೂಪಾಯಿ ಬಾಡಿಗೆ ಬಂದರೆ ನನ್ನ ತಿಂಗಳ ಇಎಂಐ ಕೊಂಚ ಹಗುರಾಗುತ್ತದೆ. ಈಗ ನಮ್ಮದೊಂದೇ ಮನೆ ಇರೋದು, ಆದ್ರೆ ನಾವು ಮನೆ ಕಟ್ಟಿದ್ದು ನೋಡಿ ಅಕ್ಕಪಕ್ಕದ ಮೂರ್ನಾಲ್ಕು ಜನ ತಾವು ಮನೆ ನಿರ್ಮಿಸುವ ಆಸಕ್ತಿಯಿಂದ ಬಂದರು. ಆದ್ರೆ ಬೆಸ್ಕಾಂನವರು ಅವರಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕೊಡುವುದಿಲ್ಲ ಎಂದುಬಿಟ್ಟರು. ಹಾಗಾಗಿ ಇವ್ರೂ ವಾಪಸ್ ಹೋದ್ರು.”

ಇದು ನಾನಾ ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ಬಿಡಿಎ ಪ್ರತಿಷ್ಟಿತ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮನೆ ನಿರ್ಮಿಸಿದ ನಾಗರಾಜಯ್ಯನವರ ಕತೆ. ಬ್ಲಾಕ್ 4 – ಜಿ ಸೆಕ್ಟರ್​ನಲ್ಲಿರುವ ಅವರ ಮನೆ ಈ ಲೇಔಟ್​ನ ಮೊಟ್ಟಮೊದಲ ಮನೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದ್ರೆ ಮನೆ ನಿರ್ಮಾಣ ಒಂದು ಬಿಟ್ರೆ ಇನ್ನೂ ವಾಸಕ್ಕೆ ಅಗತ್ಯವಾದ ಸೌಕರ್ಯಗಳು ಇಲ್ಲ. ಆದ್ರೆ ಇಲ್ಲಿ ಮನೆ ನಿರ್ಮಿಸಿರೋದು ಸಣ್ಣ ಸಾಧನೆಯಲ್ಲ. ಯಾಕೆ ಎಂದು ತಿಳಿದುಕೊಳ್ಳೋಕೆ ನೀವು ನಾಡಪ್ರಭು ಕೆಂಪೇಗೌಡ ಬಡಾವಣೆಯ ಬಗ್ಗೆಯೂ ಸ್ವಲ್ಪ ತಿಳಿದುಕೊಳ್ಬೇಕು.

ನಾಡಪ್ರಭು ಕೆಂಪೇಗೌಡ ಬಡಾವಣೆ – ಕೆಂಪೇಗೌಡ ಲೇಔಟ್

2010ನೇ ಇಸವಿಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಗಾಗಿ ಬಿಡಿಎ ಭೂಸ್ವಾಧೀನ ಆರಂಭಿಸಿತು. ಒಟ್ಟು 4040 ಎಕರೆಗಳು ನೋಟಿಫೈ ಆಗಿತ್ತು. 2015ನೇ ಇಸವಿಯಲ್ಲಿ ಅಂತಿಮ ಹಂತದ ಭೂಸ್ವಾಧೀನ ನಡೆಯಿತು. ಒಟ್ಟಾರೆಯಾಗಿ ಕೆಂಪೇಗೌಡ ಬಡಾವಣೆಗಾಗಿ 2658 ಎಕರೆ ಜಮೀನು ಸ್ವಾಧೀನವಾಗಿ ಕಾಮಗಾರಿ ಪ್ರಾರಂಭವಾಯಿತು. ಇನ್ನು 1300 ಎಕರೆಗಳಷ್ಟು ಜಾಗ ನಾನಾ ಕಾರಣಗಳಿಂದಾಗಿ ಸ್ವಾಧೀನ ಬಾಕಿಯುಳಿದಿದೆ. ಇದರಲ್ಲಿ 600 ಎಕರೆ ಗಳಿಗಿಂತಲೂ ಹೆಚ್ಚು ಜಮೀನು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಿದೆ.

ಉಳಿದ 300 ಎಕರೆ ಜಾಗ ಕಂದಾಯ ಇಲಾಖೆಯ ಅಧೀನದಲ್ಲಿದೆ. ಈ ಎಲ್ಲಾ ಕಾರಣಗಳ ನಂತರ ಕೊನೆಯಲ್ಲಿ ಕೆಂಪೇಗೌಡ ಬಡಾವಣೆಯಲ್ಲಿ 23,000 ಸೈಟುಗಳು ಲಭ್ಯವಾದವು. ಅದರಲ್ಲಿ 10,000 ಸೈಟುಗಳು 2016 ಮತ್ತು 2018ರಲ್ಲಿ ಜನರಲ್ ಕೆಟಗರಿಯಲ್ಲಿ ಹಂಚಿಕೆಯಾದವು. 9000 ಸೈಟುಗಳು ಬಡಾವಣೆಗಾಗಿ ತಮ್ಮ ಜಮೀನು ನೀಡಿದ ರೈತರಿಗೆ ಪರಿಹಾರವಾಗಿ ನೀಡಲಾಗಿದೆ. ಇನ್ನು 3000 ಸೈಟುಗಳನ್ನು ಅರ್ಕಾವತಿ ಬಡಾವಣೆಯಲ್ಲಿ ಭೂಮಿ ನೀಡಿದವರಿಗೆ ಪರ್ಯಾಯವಾಗಿ ಇಲ್ಲಿ ನಿವೇಶನ ನೀಡಲಾಗಿದೆ. ಇನ್ನು 1000ದಷ್ಟು ಸೈಟುಗಳು ಬದಲಿ ಸೈಟುಗಳಿಗೇ ಬಳಕೆಯಾಗಿದೆ.

ಇದನ್ನೂ ಓದಿ: BWSSB Rules: ಮನೆಯಲ್ಲಿ ಮೋಟರ್ ಆನ್ ಮಾಡಿ ಮರೆತು ಹೋಗ್ಬೇಡಿ, ಇನ್ಮುಂದೆ ಬೇಕಾಬಿಟ್ಟಿ ನೀರು ಹರಿಸಿದ್ರೆ ಬೀಳುತ್ತೆ ದಂಡ!

ಬೆಂಗಳೂರಿನಲ್ಲಿ ನಮ್ಮದೊಂದು ಸ್ವಂತ ಮನೆ ಇರಲಿ, ಅದೂ ಸರ್ಕಾರದ ಅಧೀನ ಸಂಸ್ಥೆ ಬಿಡಿಎ ಇಂದಲೇ ಕೊಂಡರೆ ಯಾವುದೇ ತಾಂತ್ರಿಕ ಸಮಸ್ಯೆ ಇರುವುದಿಲ್ಲ. ನೆಮ್ಮದಿಯಾಗಿ ಅಲ್ಲಿ ಇರಬಹುದು ಎಂದುಕೊಂಡು 10 ಸಾವಿರ ಜನ ಕೆಂಪೇಗೌಡ ಬಡಾವಣೆಯಲ್ಲಿ ಜಾಗ ಕಾದಿರಿಸಿಕೊಂಡರು. ಆದ್ರೆ ಅಲ್ಲಿ ಮನೆ ಕಟ್ಟುವ ನಮ್ಮ ಕನಸು ಅದ್ಯಾವಾಗ ಈಡೇರುತ್ತೋ ಗೊತ್ತಿಲ್ಲ ಎನ್ನುತ್ತಾರೆ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹೊಂದಿರುವ ಸೂರ್ಯಕಿರಣ್ ಎ ಎಸ್.

ಈ ಪರದಾಟ ಇಂದು ನಿನ್ನೆಯದಲ್ಲ

“1997ರಲ್ಲಿ ನಾವು ಬಿಡಿಎ ಬಳಿಯಲ್ಲಿ ಸ್ವಂತ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದೆವು. 2016ರ ಡಿಸೆಂಬರ್ ನಲ್ಲಿ ಮೊದಲ ಲಿಸ್ಟ್ ಘೋಷಣೆಯಾಯ್ತು. ಏಪ್ರಿಲ್ ತಿಂಗಳಲ್ಲಿ ನಾವು ಹಣ ಪಾವತಿಸಿದೆವು, 2017ರಲ್ಲಿ ಸೈಟ್ ನಮ್ಮ ಹೆಸರಿಗೆ ರಿಜಿಸ್ಟರ್ ಆಯ್ತು. ಸೈಟ್ ಇದೆ ಎಂದು ಖುಷಿ ಪಡಬೇಕಾ, ಅಥವಾ ಇದ್ದೂ ಇಲ್ಲದಂತೆ ಇದೆ…ನಮ್ಮದಾದ ಸ್ಥಳವನ್ನೂ ನಾವು ಪಡೆಯೋಕೆ ಹೀಗೆ ದಶಕಗಟ್ಟಲೆ ಹೋರಾಡಿ, ಕಾಯಬೇಕಾಗಿದ್ಯಲಾ ಎಂದು ದುಃಖಪಡಬೇಕಾ ತಿಳಿಯದಂಥಾ ಪರಿಸ್ಥಿತಿ ನಮ್ಮದು” ಎನ್ನುತ್ತಾರವರು.

ನಿವೇಶನ ನೀಡಿದ 5 ವರ್ಷದೊಳಗೆ ಮನೆ ನಿರ್ಮಾಣ ಮಾಡಬೇಕು ಎನ್ನುವ ನಿಯಮ ಹಾಕುವ ಬಿಡಿಎ, ಅದಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನೇ ಕಲ್ಪಿಸದೇ ಇರೋದು ವಿಪರ್ಯಾಸ.

ಯಾವ ಸೈಟಿಗೆ ಎಷ್ಟು ಬೆಲೆ?

20 X 30 ಅಳತೆಯ ನಿವೇಶನಕ್ಕೆ 12 ಲಕ್ಷ ರೂಪಾಯಿ, 30 X 40 ಗೆ 24 ಲಕ್ಷ ರೂ, 40 X 60ಗೆ 52 ಲಕ್ಷ ಮತ್ತು 50 X 80 ಅಳತೆಯ ಸೈಟಿಗೆ 96 ಲಕ್ಷ ರೂಪಾಯಿ ಹಣ ನೀಡಿ ಜನರು ಖರೀದಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬೆಸ್ಕಾಂಗೆ ಬಿಡಿಎ 58 ಕೋಟಿ ರೂಪಾಯಿ ಪಾವತಿಸಿದರೆ ಮಾತ್ರ ಬಡಾವಣೆಗೆ ವಿದ್ಯುತ್ ಸಂಪರ್ಕ ಸಿಗಲಿದೆ. ಇನ್ನುಳಿದ ಸೌಕರ್ಯಗಳಿಗೂ ಟೆಂಡರ್, ಕಾಮಗಾರಿಗಳೆಲ್ಲಾ ಆಮೆಗತಿಯಲ್ಲಿ ಸಾಗುತ್ತಿವೆ. ಇಷ್ಟೆಲ್ಲಾ ಸಮಸ್ಯೆಗಳ ಆಗರವಾದ ಕೆಂಪೇಗೌಡ ಬಡಾವಣೆಯಲ್ಲಿ ಮೊಟ್ಟಮೊದಲ ಮನೆ ನಿರ್ಮಿಸಿದ ಹೆಗ್ಗಳಿಕೆ ನಾಗರಾಜಯ್ಯನದ್ದು. ಆದರೆ ಉಳಿದ ಸೌಕರ್ಯಗಳ ಜೊತೆ ನೆರೆಹೊರೆಯವರು ಯಾವಾಗ ಬರಬಹುದು ಎನ್ನುವ ಬಗ್ಗೆ ಮಾತ್ರ ಅವರಿಗೆ ಕಿಂಚಿತ್ತೂ ಮಾಹಿತಿ ಇಲ್ಲ.
Published by:Soumya KN
First published: