ಬೆಳಗಾವಿ: ಶ್ರೀರಾಮಸೇನೆ (Sri Ram Sena) ಸಂಘಟನೆಯ ಬೆಳಗಾವಿ (Belagavi) ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಬೆಳಗಾವಿ ತಾಲೂಕಿನ ಹಿಂಡಲಗಾ (Hindalga) ಗ್ರಾಮ ಬಳಿ ಫೈರಿಂಗ್ ನಡೆದಿದ್ದು, ಬೈಕ್ನಲ್ಲಿ (Bike) ಆಗಮಿಸಿದ್ದ ದುಷ್ಕರ್ಮಿಗಳು ಫೈರಿಂಗ್ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ದಾಳಿಯಲ್ಲಿ ಗುಂಡು ರವಿ ಕೋಕಿತಕರ್ ಗದ್ದಕ್ಕೆ ತಾಗಿ ಬಳಿಕ ಅವರ ಜೊತೆಗಿದ್ದ ಚಾಲಕನ ಕೈಗೆ ತಗುಲಿದೆ. ಸದ್ಯ ಗಾಯಾಳುಗಳನ್ನ ಬೆಳಗಾವಿ ಖಾಸಗಿ ಆಸ್ಪತ್ರೆಗೆ (Private Hospital) ದಾಖಲು ಮಾಡಲಾಗಿದೆ. ಘಟನೆಯಲ್ಲಿ ರವಿ ಕೋಕಿತಕರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಧರ್ಮವೀರ ಸಂಭಾಜಿ ಉದ್ಯಾನದಲ್ಲಿ ನಾಳೆ ವಿರಾಟ ಹಿಂದು ಸಭೆಯನ್ನು(Virata Hindu Sabha) ರವಿ ಕೋಕಿತಕರ್ ಆಯೋಜನೆ ಮಾಡಿದ್ದರು.
ಘಟನೆಯನ್ನು ಖಂಡಿಸಿದ ಮುತಾಲಿಕ್
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ದುಷ್ಕರ್ಮಿಗಳಿಂದ ಫೈರಿಂಗ್ ಆಗಿದೆ. ಕೂದಲೆಳೆಯಷ್ಟು ಅಂತರದಲ್ಲಿ ಬುಲೆಟ್ ಕತ್ತಿಗೆ ತಾಕಿ ಚಾಲಕನ ಕೈಯೊಳಗೆ ಹೊಕ್ಕಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ಅಪಾಯಕಾರಿ ಹಲ್ಲೆ ತಪ್ಪಿದೆ. ದೇವರ ದಯೆಯಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ, ವಿರೋಧಿಸುತ್ತೇನೆ. ಈ ರೀತಿ ದುಷ್ಕರ್ಮಿಗಳ ಆಟ ನಡೆಯುವುದಿಲ್ಲ. ಹಿಂದುತ್ವಕ್ಕಾಗಿ ಇರುವ ಶ್ರೀರಾಮ ಸೇನೆ ಸಂಘಟನೆ ಎಂದೂ ಯಾವತ್ತೂ ನಿಮ್ಮ ಗುಂಡು, ಬಾಂಬ್, ಕತ್ತಿ, ತಲ್ವಾರ್ಗೆ ಹೆದರಲ್ಲ. ದುಷ್ಕರ್ಮಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಹಿಂಡಲಗಾ ಸೆಂಟ್ರಲ್ ಜೈಲು ಹತ್ತಿರ ನಡೆದ ಘಟನೆ ನಡೆದಿದ್ದು, ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇರಲೇಬೇಕು. ಪೊಲೀಸರು ಸಿಸಿ ಕ್ಯಾಮೆರಾ ಮೂಲಕ ಪತ್ತೆ ಹಚ್ಚಬೇಕು. ಬೈಕ್ ಮೇಲೆ ಬಂದ ಇಬ್ಬರನ್ನು ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸಬೇಕು.
ರಾಜ್ಯಾದ್ಯಂತ ಶ್ರೀರಾಮ ಸೇನೆನಿಂದ ನಾಳೆ ಪ್ರತಿಭಟನೆ
ನಾಳೆ ಇಡೀ ರಾಜ್ಯಾದ್ಯಂತ ಶ್ರೀರಾಮ ಸೇನೆ ಪ್ರತಿಭಟನೆ ಮಾಡುತ್ತಿದೆ. ಈ ರೀತಿ ದುಷ್ಕರ್ಮಿಗಳಿಗೆ ಉತ್ತರ ನೀಡಲು ಪ್ರತಿಭಟನೆ. ಹಿಂದೂ ಸಮಾಜ ತಾಕತ್ ಧೈರ್ಯದಿಂದ ಇದೆ, ಗಟ್ಟಿಯಾಗಿದೆ. ನಿಮ್ಮ ಗುಂಡಿಗೆ ಬೆದರುವಂತದ್ದಲ್ಲ. ಈ ರೀತಿ ಪುಂಡಾಟಿಕೆಯನ್ನು ದುಷ್ಕರ್ಮಿಗಳು ನಿಲ್ಲಿಸಬೇಕು.
ನಾಳೆ ಸಂಜೆ 5 ಗಂಟೆಗೆ ಬೆಳಗಾವಿಯ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಇದೆ. ನಾಳೆ ಸಂಭಾಜಿ ಉದ್ಯಾನವನದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ಇದೆ. ನಾನು ಕಾರ್ಯಕ್ರಮಕ್ಕೆ ಬರುತ್ತಿದ್ದೀನಿ. ಆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗುತ್ತೆ. ನಿಮ್ಮ ಗುಂಡೇಟಿಗೆ ದುಷ್ಕೃತ್ಯಕ್ಕೆ ನಾಚಿಗೇಡಿತನಕ್ಕೆ ಉತ್ತರ ಹೇಳುತ್ತೇನೆ. ಪೊಲೀಸ್ ಇಲಾಖೆ ಶೀಘ್ರವೇ ದುಷ್ಕರ್ಮಿಗಳ ಬಂಧಿಸಬೇಕು ಎಂದು ಒತ್ತಾಯ ಮಾಡಿದರು.
ಖಾಸಗಿ ಆಸ್ಪತ್ರೆಗೆ ಡಿಸಿಪಿ ರವೀಂದ್ರ ಗಡಾದಿ, ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಭೇಟಿ
ಬೆಳಗಾವಿಯ ಖಾಸಗಿ ಆಸ್ಪತ್ರೆಯ ಬಳಿ ಹಿಂದೂಪರ ಕಾರ್ಯಕರ್ತರ ಜಮಾವಣೆಯಾಗಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಕಾರು ಚಾಲಕ ಮನೋಜ್ ದೇಸೂರಕರ್ಗೂ ಚಿಕಿತ್ಸೆ ನೀಡಲಾಗುತ್ತಿದೆ.
ಬೈಕ್ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ಯುವಕರು ಫೈರಿಂಗ್ ಮಾಡಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಡಿಸಿಪಿ ರವೀಂದ್ರ ಗಡಾದಿ, ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆ ಬಳಿ ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಅಲ್ಲದೇ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ್ ಆಸ್ಪತ್ರೆಗೆ ಭೇಟಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ, ಸಂಜೆ 7:45ರ ಸುಮಾರಿಗೆ ನಡೆದಿದೆ. ಬೆಳಗಾವಿ ನಗರದಿಂದ ಹಿಂಡಲಗಾ ಗ್ರಾಮಕ್ಕೆ ತೆರಳುವಾಗ ರಸ್ತೆ ಹಂಪ್ ಹತ್ತಿರ ಕಾರು ಸ್ಲೋ ಆದಾಗ, ಬೈಕ್ ನಲ್ಲಿ ಬಂದು ಫೈರಿಂಗ್ ಮಾಡಿದ್ದಾರೆ. ದಾಳಿ ಹೇಗೆ ನಡೆಯಿತು ಅಂತ ಗೊತ್ತಿಲ್ಲ.
ಕಾರಿನಲ್ಲಿದ್ದ ಇಬ್ಬರಿಗೆ ಯಾವುದೇ ಗಂಭೀರ ಗಾಯ ಆಗಿಲ್ಲ. ವೈಯಕ್ತಿಕ ಕಾರಣವೇ ಅಥವಾ ಸಂಘಟನೆ ಕಾರಣಕಕ್ಕೆ ಎಂಬ ಬಗ್ಗೆ ತನಿಖೆ ಮಾಡುತ್ತೇವೆ. ನಾಲ್ಕು ತಂಡ ರಚನೆ ಮಾಡಿ ಆರೋಪಗಳ ಪತ್ತೆಗೆ ಕ್ರಮ ವಹಿಸುತ್ತೇವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳುತ್ತೇವೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ