ಕಾರವಾರ (ಜ. 9): ಮನೆಯಲ್ಲಿ ಇನ್ನೇನು ಕೆಲವೇ ಗಂಟೆಗಳಲ್ಲಿ ಮದುವೆ ಕಾರ್ಯವೊಂದು ನಡೆಯಬೇಕಾಗಿತ್ತು. ಆದರೆ ಈ ಸಂಭ್ರಮದ ನಡುವೆ ಕೋಲಾಹಲವೊಂದು ನಡೆದಿದ್ದು, ಆತಂಕ ಸೃಷ್ಟಿಸಯಾದ ವಾತಾವರಣ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಅಂಕೋಲಾ ತಾಲೂಕಿನ ರಾಮನಗುಳಿ ನಿವಾಸಿ ನಂದಾ ಗಾಂವ್ಕರ್ ಎಂಬುವವರ ಮಗಳ ಮದುವೆಯನ್ನು ಅವರ್ಸಾ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಯ ಸಮೀಪದ ಸಭಾಭವನದಲ್ಲಿ ಈ ಕಾರ್ಯ ನೇರವೇರಿಸಲಾಗುತ್ತಿತ್ತು. ಇನ್ನೇನು ಬೆಳಗ್ಗೆ ಎದ್ದರೆ ಮುಹೂರ್ತವಿದ್ದು, ಮನೆಯಲ್ಲಿ ಸಂಭಮ ಮನೆ ಮಾಡಿತ್ತು. ಆದರೆ, ಬೆಳಗಿನ ಜಾವ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ಆತಂಕ ಸೃಷ್ಟಿಸಿದೆ. ಅದೃಷ್ಟವಶಾತ್ ಯಾವುದೇ ದುರ್ಘಟನೆ ನಡೆದಿಲ್ಲ.
ನಂದಾ ಗಾಂವ್ಕರ್ ಪುತ್ರಿ ದಿವ್ಯಾ ವಿವಾಹ ತಾಲೂಕಿನ ಖೇಣಿ ಗ್ರಾಮದ ಪ್ರಕಾಶ್ ಎನ್ನುವವರೊಂದಿಗೆ ಇಂದು ನಿಶ್ಚಯವಾಗಿತ್ತು. ಗ್ರಾಮದ ಖಾಸಗಿ ಸಭಾಭವನವೊಂದರಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದ್ದು, ಸಂಬಂಧಿಕರೆಲ್ಲರೂ ಮನೆಯಲ್ಲಿ ಮದುವೆ ತಯಾರಿಯಲ್ಲಿದ್ದರು. ಇಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ವಧುವಿನ ಕೋಣೆಯ ಹೊರಗೆ ಭಾರೀ ಪ್ರಮಾಣದ ಗುಂಡಿನ ಸದ್ದಾಗಿದ್ದು, ಮನೆಯವರೆಲ್ಲರೂ ಆತಂಕದಿಂದ ಕೋಣೆಯತ್ತ ಓಡಿಬಂದಿದ್ದರು. ಕೋಣೆಯೊಳಗೆ ಇದ್ದವರು ಮನೆಯ ಒಳಗೆ ಹೊರಗೆ ಏನಾಯಿತೆಂದು ಗಾಬರಿಯಿಂದ ಪರಿಶೀಲನೆ ನಡೆಸಿದ್ದರು. ಈ ವೇಳೆ ವಧುವಿನ ಕೋಣೆಯ ಕಿಟಕಿಯ ಹೊರಗೆ ಗುಂಡು ಬಿದ್ದಿರುವುದು ಗಮನಕ್ಕೆ ಬಂದಿತ್ತು. ಆದರೆ, ಸ್ಥಳದಲ್ಲಿ ಯಾರೂ ಸಹ ಕಂಡುಬಾರದ ಹಿನ್ನಲೆ ಯಾರು ಗುಂಡಿನ ದಾಳಿ ನಡೆಸಿರಬಹುದು ಎನ್ನುವುದು ತಿಳಿಯದಂತಾಗಿದೆ.
ಮದುವೆ ಸಂಭ್ರಮದಲ್ಲಿ ಇದ್ದವರಿಗೆ ಗಲಿಬಿಲಿ ವಾತಾವರಣ ಸೃಷ್ಟಿ ಆಯಿತು ನಿದ್ದೆಯ ಮಂಪರಿನಲ್ಲಿ ಏನು ತಿಳಿಯದಾಯಿತು. ಒಂದೆಡೆ ಸಂಭ್ರಮಕ್ಕೆ ತಯಾರಿ ಇನ್ನೊಂದೆಡೆ ಏಕಾಏಕಿ ಗುಂಡಿನಸದ್ದು ದಿಕ್ಕೆ ತೋಚದಂತಾದ ಮನೆಯವರು ನೇರವಾಗಿ ಪೋಲಿಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೋಲಿಸರು ಪರಿಶೀಲನೆ ನಡೆಸಿ ಪ್ರಕರಣ ಕೈ ಗೆತ್ತಿಕೊಂಡಿದ್ದಾರೆ.
ಇದನ್ನು ಓದಿ: ಮೂರು ಸಾವಿರ ರೂಗಾಗಿ ಸರ್ಕಾರಿ ಡಿಸೇಲ್ ಹಾಕಿಸಿಕೊಳ್ಳುವ ನಿರ್ಗತಿ ನನಗೆ ಬಂದಿಲ್ಲ: ಸಾರಿಗೆ ಸಚಿವ ಸವದಿ
ಸಂಭ್ರದಲ್ಲಿದ್ದವರಿಗೆ ಶಾಕಿಂಗ್ ಸುದ್ದಿ
ನಾಡಬಂದೂಕಿನಿಂದ ದಾಳಿ ನಡೆದಿರುವುದು ಕಂಡುಬಂದಿದೆ. ಇನ್ನು ಬೆಳಗಿನ ಜಾವದಲ್ಲಿ ಘಟನೆ ನಡೆದ ಕಾರಣ ಯಾರು ಗುಂಡು ಹಾರಿಸಿರಬಹುದೆಂದು ಕಂಡುಬಂದಿಲ್ಲವಾಗಿದ್ದು ಮನೆಯವರೂ ಸಹ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ. ಆದರೆ ಪೋಲಿಸ್ ಬಲ್ಲ ಮೂಲಗಳ ಪ್ರಕಾರ ವಧುವಿನ ಹಳೆಯ ಪ್ರೇಮಿಯೇ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದಾರೆ.
ಪೋಲಿಸ್ ಭದ್ರತೆಯಲ್ಲಿ ನಡೆದ ಮದುವೆ
ಇನ್ನು ಗುಂಡಿನದಾಳಿ ನಡೆದ ಹಿನ್ನಲೆ ಪೊಲೀಸ್ ಭದ್ರತೆಯಲ್ಲಿ ಮದುವೆ ಕಾರ್ಯವನ್ನು ನೆರವೇರಿಸಲಾಯಿತು. ಏಕಾಏಕಿ ನಡೆದ ಗುಂಡಿನ ದಾಳಿಯಿಂದ ಮದುವೆ ಮನೆಯಲ್ಲಿ ಆತಂಕ ಮನೆಮಾಡಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದಂತಾಗಿದ್ದಂತೂ ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ