ಬೆಂಗಳೂರು: ಪ್ರಸಿದ್ಧ ಕರಗ ಮಹೋತ್ಸವದ (Bengaluru Karaga Festival) ವೇಳೆ ಬೆಂಕಿ ಅವಘಡ ಸಂಭವಿಸಿದ್ದು, ಬೆಂಗಳೂರಿನ ಧರ್ಮರಾಯಸ್ವಾಮಿ ದೇಗುಲ (Dharmaraya Swamy Temple ) ಬಳಿ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಬೈಕ್ (Bike), ಆಟೋಗಳಿಗೆ (Auto) ಬೆಂಕಿ ಹೊತ್ತಿಕೊಂಡಿತ್ತು. ದೇಗುಲದ ಬಳಿ ಹಚ್ಚಿದ್ದ ಕರ್ಪೂರದ (Camphor) ಬೆಂಕಿ ತಗುಲಿ ಘಟನೆ ನಡೆದಿದ್ದು, ದೇವರಿಗೆ ಹರಕೆ ಮಾಡಿಕೊಂಡಿದ್ದ ಭಕ್ತರು 50 ಕೆಜಿಯ ಕರ್ಪೂರ ಗಟ್ಟಿಗಳನ್ನು ಹಚ್ಚಿದ ಸಂದರ್ಭದಲ್ಲಿ ಬೆಂಕಿ ಅನಾಹುತ ನಡೆದಿದೆ. ಈ ವೇಳೆ ಬೈಕ್ ಮತ್ತು ಆಟೋಗೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ.
ಸುಮಾರು 700 ಮೀಟರ್ ದಾರಿಯುದ್ದಕ್ಕೂ ಕರ್ಪೂರದ ಪೂಜೆ
ಇಂದು ರಾತ್ರಿ ವಿಶ್ವವಿಖ್ಯಾತ ಕರಗೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೂಜೆ, ವಿಧಿ ವಿಧಾನಗಳು ಆರಂಭಗೊಂಡಿದ್ದವು. ಎನ್ ಆರ್ ಸಿಂಗ್ನಲ್ ನಿಂದ ಧರ್ಮರಾಯ ದೇವಸ್ಥಾನದವರೆಗೂ ಕರ್ಪೂರ ಹಚ್ಚಿ ಭಕ್ತರು ಸೇವೆ ಸಲ್ಲಿಕೆ ಮಾಡಿದ್ದರು. ಸುಮಾರು 700 ಮೀಟರ್ ದಾರಿಯುದ್ದಕ್ಕೂ ಕರ್ಪೂರದ ಪೂಜೆ ನಡೆಸಲಾಗಿದೆ. ಈ ವೇಳೆ ಬೈಕ್ಗಳು ಸೇರಿದಂತೆ ಆಟೋಗೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ.
ಐವತ್ತು ಕೆಜಿಯ ಎರಡು ಕರ್ಪೂರ ಗಟ್ಟಿಗಳ ಕೆಳಗೆ ಐಸ್ ಬಾಕ್ಸ್ ಇಟ್ಟು ಪೂಜೆ ಸಲ್ಲಿಕೆ ಮಾಡಲಾಗಿತ್ತು. ಅಲ್ಲದೆ, ಅಪ್ಪು, ಓಂ ಹಾಗೂ ಆರ್ಸಿಬಿ ಹೆಸರಲ್ಲಿ ಅಭಿಮಾನಿಗಳು, ಭಕ್ತರು ಕರ್ಪೂರ ಹಚ್ಚಿದರು. ಉಳಿದಂತೆ ದೇವಸ್ಥಾನಕ್ಕೆ ಹೋಗುವ ದಾರಿ ಬದಿ ನಿಲ್ಲಿಸಿದ್ದ ಐದಾರು ಬೈಕ್ ಗಳು ಬೆಂಕಿಯ ತೀವ್ರತೆಗೆ ಸುಟ್ಟು ಕರಕಲಾಗಿದೆ.
ಘಟನೆ ಕುರಿತಂತೆ ಮಾಹಿತಿ ನೀಡಿರುವ ಕರಗ ಸಮಿತಿ ಅಧ್ಯಕ್ಷ ಸತೀಶ್ ಅವರು, ಕರಗ ಆಚರಣೆ ಒಂಭತ್ತನೇ ದಿನವಾಗಿದ್ದು, ವಿಜೃಂಭಣೆಯಿಂದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕರ್ಪೂರ ಹಚ್ಚುವಾಗ ಎಲ್ಲಾ ಗಾಡಿ ತೆಗೆಸಲಾಗಿದೆ. ಆದರೆ ಕರ್ಪೂರದ ಬೆಂಕಿಯ ಹಬೆ ವಾಹನಗಳಿಗೆ ತಾಗಿದೆ. ಪೊಲೀಸರು ಬಂದೋಬಸ್ತ್ ಇದ್ದರೂ ನಾವು ಎಲ್ಲರಿಗೂ ಹೇಳಿದ್ದೇವು. ಹರಕೆ ಹೊತ್ತಿದ್ದವರು ಕೆಜಿಗಟ್ಟಲೆ ಕರ್ಪೂರ ಹಚ್ಚುತ್ತಾರೆ. ಯಾರು ಭಯಪಡುವ ಅಗತ್ಯವಿಲ್ಲ. ಎಲ್ಲರೂ ಸಹಕಾರ ಕೊಡಬೇಕು. ಭಕ್ತಾದಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ