HOME » NEWS » State » FIRE ACCIDENT 3 CARS BURNED AFTER FIRE ATTACKS IN BENGALURU ANEKAL GARAGE CANK SCT

 ಆನೇಕಲ್​ನ ಗ್ಯಾರೇಜ್​ನಲ್ಲಿ ಅಗ್ನಿ ಅವಘಡ; ಬೆಂಕಿಯಿಂದ 3 ಕಾರುಗಳು ಸುಟ್ಟು ಭಸ್ಮ

Crime News: ರಿಪೇರಿಗೆಂದು ತಂದು ನಿಲ್ಲಿಸಿದ್ದ ಮೂರು ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದ್ದು , ಮೂರು ಕಾರುಗಳು ಬೆಂಕಿಗಾಹುತಿಯಾಗಿವೆ . ಗ್ಯಾರೇಜ್ ಸಮೀಪದ ಪೊದೆಗೆ ಯಾರೋ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು , ಅದರಲ್ಲಿನ ಕಿಡಿ ಮೊದಲು ಪೊದೆಗೆ ಹೊತ್ತಿಕೊಂಡಿದೆ .

news18-kannada
Updated:March 13, 2021, 8:52 AM IST
 ಆನೇಕಲ್​ನ ಗ್ಯಾರೇಜ್​ನಲ್ಲಿ ಅಗ್ನಿ ಅವಘಡ; ಬೆಂಕಿಯಿಂದ 3 ಕಾರುಗಳು ಸುಟ್ಟು ಭಸ್ಮ
ಸಾಂದರ್ಭಿಕ ಚಿತ್ರ
  • Share this:
ಆನೇಕಲ್ : ಸ್ಥಗಿತಗೊಂಡಿದ್ದ ಗ್ಯಾರೇಜ್​ವೊಂದರಲ್ಲಿನ ಕಾರುಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 3 ಕಾರುಗಳು ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ನಿನ್ನೆ ಸಂಜೆ ನಡೆದಿದೆ . ಆನೇಕಲ್ ಪಟ್ಟಣದ ಬಿದರಗೆರೆ ರಸ್ತೆಯಲ್ಲಿರುವ ಸಿಕಂದರ್ ಎಂಬುವವರಿಗೆ ಸೇರಿದ ಕಾರು ಗ್ಯಾರೇಜ್​ನಲ್ಲಿ ಈ ಘಟನೆ ನಡೆದಿದೆ .

ರಿಪೇರಿಗೆಂದು ತಂದು ನಿಲ್ಲಿಸಿದ್ದ ಮೂರು ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದ್ದು , ಮೂರು ಕಾರುಗಳು ಬೆಂಕಿಗಾಹುತಿಯಾಗಿವೆ . ಗ್ಯಾರೇಜ್ ಸಮೀಪದ ಪೊದೆಗೆ ಯಾರೋ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು , ಅದರಲ್ಲಿನ ಕಿಡಿ ಮೊದಲು ಪೊದೆಗೆ ಹೊತ್ತಿಕೊಂಡಿದೆ . ಬಳಿಕ ಕಾರು ಗ್ಯಾರೇಜಿನಲ್ಲಿ ಕಾರುಗಳಿಗು ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ . ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾರುಗಳು ಬೆಂಕಿಗೆ ಆಹುತಿಯಾಗಿವೆ .

ಸ್ಥಳೀಯ ವಾಸಿಗಳು ಪ್ರಾರಂಭದಲ್ಲಿ ಗಿಡಗಂಟಿಗಳಿರುವ ಪೊದೆಗೆ ಬೆಂಕಿ ಬಿದ್ದಿದೆ ಎಂದುಕೊಂಡಿದ್ದರು . ಬಳಿಕ ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ  ಹೊಸಕೋಟೆ ಸಮೀಪದ ಅಗ್ನಿಶಾಮಕ ದಳ ಠಾಣೆಗೆ ಮಾಹಿತಿ ನೀಡಿದ್ದಾರೆ . ಕೂಡಲೇ ಸ್ಥಳಕ್ಕಾಗಮಿಸಿದ ಸಿಡಿಹೊಸಕೋಟೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸುಮಾರು ಒಂದು ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ . ಸಕಾಲಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸದಿದ್ದರೆ ಗ್ಯಾರೇಜಿಗೆ ಹೊಂದಿಕೊಂಡಿದ್ದ ಮನೆಗಳಿಗೂ ಬೆಂಕಿ ವ್ಯಾಪಿಸುವ ಸಾಧ್ಯತೆ ಇತ್ತು . ಆದರೆ ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ದುರಂತವೊಂದು ತಪ್ಪಿದೆ .

ಇದನ್ನೂ ಓದಿ: Bengaluru Covid-19: ಬೆಂಗಳೂರಿನಲ್ಲಿ ವಿದ್ಯಾಪೀಠದಲ್ಲಿ ಕ್ಲಸ್ಟರ್ ಮಾದರಿಯ ಕೊರೋನಾ ಕೇಸ್ ಪತ್ತೆ; ಹಾಸ್ಟೆಲ್​ನ 158 ಜನ ಕ್ವಾರಂಟೈನ್!

ಅಲ್ಲದೆ, ಪಾಳು ಬಿದ್ದ ಗ್ಯಾರೇಜ್ ಬಳಿ ಪುಂಡು ಪೋಕರಿಗಳು ಸೇರಿ ಮದ್ಯಪಾನ , ಧೂಮಪಾನ ಸೇರಿದಂತೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಿತ್ತು . ಹಾಗಾಗಿ, ಕುಡಿದ ಮತ್ತಿನಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಾಧ್ಯತೆ ಇದೆ ಎನ್ನಲಾಗಿದೆ . ಮಾತ್ರವಲ್ಲದೆ ಗ್ಯಾರೇಜ್ ನಷ್ಟದಿಂದ ಪಾರಾಗಲು ಗ್ಯಾರೇಜ್ ಮಾಲೀಕ ಸಿಕಂದರ್ ಬೆಂಕಿ ಹಚ್ಚಿಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನಲಾಗಿದೆ .

ಅಂದಹಾಗೆ ಗ್ಯಾರೇಜ್ ಮಾಲೀಕ ಸಿಕಂದರ್ ಹಲವು ವರ್ಷಗಳಿಂದ ಗ್ಯಾರೇಜ್ ನಡೆಸುತ್ತಿದ್ದ. ಲಾಕ್ ಡೌನ್ ಸಮಯದಲ್ಲಿ ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಸಾಲ ತೀರಿಸಲಾಗದೆ, ಗ್ಯಾರೇಜ್ ಬಂದ್ ಮಾಡಿ ಊರು ಬಿಟ್ಟು ಪರಾರಿಯಾಗಿದ್ದಾನೆ . ರಿಪೇರಿಗೆಂದು ಬಂದಿದ್ದ ಕಾರುಗಳನ್ನು ಗ್ಯಾರೇಜ್ ಸಮೀಪದ ಬಯಲಿನಲ್ಲಿಯೇ ನಿಲ್ಲಿಸಲಾಗಿತ್ತು.  ಗ್ಯಾರೇಜ್ ಬಂದ್ ಆಗಿದ್ದರಿಂದ ನಿಂತಲ್ಲಿಯೇ ಕಾರುಗಳು ನಿಂತಿದ್ದವು . ಜೊತೆಗೆ ಕಾರುಗಳ ಸುತ್ತಮುತ್ತ ಪೊದೆಗಳಂತೆ ಗಿಡಗಂಟಿಗಳು ಬೆಳೆದುಕೊಂಡಿದ್ದು, ಬೆಂಕಿ ಸರಾಗವಾಗಿ ವ್ಯಾಪಿಸಲು ಕಾರಣ ಎನ್ನಲಾಗಿದೆ.
ಸದ್ಯಕ್ಕೆ ಆನೇಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ .

(ವರದಿ : ಆದೂರು ಚಂದ್ರು )
Published by: Sushma Chakre
First published: March 13, 2021, 8:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories