ಬೆಂಗಳೂರು(ಮಾ.16): ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ವಿರುದ್ಧ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸಚಿನ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 341, 323, 504, 506, 34ರಡಿ ಎಫ್ಐಆರ್ ದಾಖಲಾಗಿದೆ. ಯುವ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿನ್ ಗೌಡ ಮೇಲೆ ನಲಪಾಡ್ ಹಲ್ಲೆ ನಡೆಸಿದ್ಧಾರೆ ಎಂಬ ಆರೋಪದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಯುಬಿ ಸಿಟಿ ಗಲಾಟೆ ಪ್ರಕರಣದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದ ಮೊಹಮ್ಮದ್ ನಲಪಾಡ್ ಇತ್ತೀಚಿನ ದಿನಗಳಲ್ಲಿ ರಾಜಕಾರಣಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದಾರೆ. ಒಂದು ತಿಂಗಳಿಗೆ ಮುನ್ನ ನಲಪಾಡ್ ಕಾರ್ ಅಪಘಾತ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು. ಮೂರು ವಾಹನಗಳಿಗೆ ಡಿಕ್ಕಿ ಹೊಡೆದ ಬೆಂಟ್ಲಿ ಕಾರನ್ನು ನಲಪಾಡ್ ಅವರೇ ಚಲಾಯಿಸುತ್ತಿದ್ದರು ಎಂದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣದಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ಹೆಸರು ಕೇಳಿ ಬಂದಿದೆ.
ಹೌದು, ಕಾಂಗ್ರೆಸ್ ಕಾರ್ಯಕರ್ತರ ಮೇಲೆಯೇ ಮೊಹಮ್ಮದ್ ನಲಪಾಡ್ ಮತ್ತವರ ಟೀಮ್ ಹಲ್ಲೆ ಮಾಡಿದ್ಧಾರೆ ಎಂದು ಹೇಳಲಾಗುತ್ತಿದೆ. ಕಾರ್ಯಕರ್ತ ಸಚಿನ್ ಗೌಡ ಎಂಬುವರ ಮೇಲೆ ನಲಪಾಡ್ ಹಲ್ಲೆ ಮಾಡಿ ಪುಂಡಾಟ ಮೆರೆದಿದ್ಧಾರೆ ಎಂದು ಆರೋಪಿಸಲಾಗಿದೆ. ಹೀಗೆಂದು ಹಲ್ಲೆಗೊಳಗಾದ ಎನ್ನಲಾದ ಸಚಿನ್ ಗೌಡ ಪೊಲೀಸ್ ದೂರು ನೀಡಿದ್ದಾರೆ. ಇದಕ್ಕೂ ಮುನ್ನ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ಆಗಮಿಸಿದ್ದ ನಲಪಾಡ್ ಕೂಡ ದೂರು ನೀಡಿದ್ಧಾರೆ.
ಇದನ್ನೂ ಓದಿ: ಮತ್ತೆ ಶಾಸಕ ಹ್ಯಾರಿಸ್ ಮಗನ ಪುಂಡಾಟ; ಕಾಂಗ್ರೆಸ್ ಕಾರ್ಯಕರ್ತನ ಮೇಲೆಯೇ ಹಲ್ಲೆ ಮಾಡಿದ್ರಾ ನಲಪಾಡ್?
ಭಾನುವಾರ ಯೂತ್ ಕಾಂಗ್ರೆಸ್ನಿಂದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಲಪಾಡ್ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಸಚಿನ್ ಗೌಡ ಮತ್ತು ಯೂತ್ ಕಾಂಗ್ರೆಸ್ ಅಧ್ಯಕ್ಷರ ನಡುವೆ ಗಲಾಟೆಯಾಗಿದೆ. ಆಗ ನಲಪಾಡ್ ಇಬ್ಬರ ನಡುವಿನ ಗಲಾಟೆ ಬಿಡಿಸಲು ಹೋದಾಗ ಸಚಿನ್ ಗೌಡ ಆವಾಜ್ ಹಾಕಿದ್ದರಂತೆ. ಮಾಧ್ಯಮದಲ್ಲಿ ನಿನ್ನ ಮಾನ ಹರಾಜು ಹಾಕ್ತೀನಿ ಎಂದು ಸಚಿನ್ ಗೌಡ ಬೆದರಿಕೆ ಹಾಕಿದರಂತೆ. ಹಾಗಾಗಿ ಮೊಹಮ್ಮದ್ ನಲಪಾಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಹೇಳಿದರು.
ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಮಾತಾಡಿದ ನಲಪಾಡ್, ನಿನ್ನೆ ಯುವ ಕಾಂಗ್ರೆಸ್ನಿಂದ ಯಂಗ್ ಇಂಡಿಯಾ ಕೀ ಬೋಲೋ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾನು ಈ ಕಾರ್ಯಕ್ರಮದಲ್ಲಿ ಪ್ರತಿನಿಧಿಯಾಗಿದ್ದೇನೆ. ಐದು ಜನಕ್ಕೆ ಬಹುಮಾನ ಕೊಡಲಾಯ್ತು. ಆಗ ನಾನು ಗೆದ್ದಿರಲಿಲ್ಲ. ಸಚಿನ್ ಗೌಡ ಎಂಬಾತನು ಸೋತಿದ್ದ. ಇದರಿಂದ ಅವನಿಗೂ ಬೇಸರ ಆಗಿತ್ತು. ಸಚಿನ್ ಆಗ ಗೌತಮ್ ನನ್ನ ಯಾಕೇ ಸ್ಟೇಜ್ ಮೇಲೆ ಕರಿಯಲಿಲ್ಲ ಎಂದು ಗಲಾಟೆ ಶುರು ಮಾಡಿದ. ಶಿವಕುಮಾರ್ ಜೊತೆ ಗಲಾಟೆ ಮಾಡಿದ್ದ. ನಾನು ಗಲಾಟೆ ಮಧ್ಯೆ ಹೋಗಿ ರಾಜಿ ಮಾಡಲು ಮುಂದಾದಗ ನನಗೆ ಆವಾಜ್ ಹಾಕಿದ್ದ. ಆ ಸಂದರ್ಭದಲ್ಲಿ ತಳ್ಳಾಟ ನೂಕಾಟ ಆಗಿದೆ. ಅಲ್ಲಿದ್ದ ಸ್ಥಳದಲ್ಲಿ ಜನ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಾಧ್ಯಮಗಳಿಗೆ ಹೇಳ್ತೀನಿ ನೋಡಿಕೊಳ್ತೀನಿ ಅಂತ ಬೆದರಿಕೆ ಹಾಕಿದ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ