ಮೈಸೂರು: ಮೂರು ತಿಂಗಳ ಹಿಂದೆ ಅಂದಿನ ವಿರೋಧ ಪಕ್ಷದ ನಾಯಕ ಹಾಗೂ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ವಿರುದ್ಧ ಪ್ರಚೋದನಕಾರಿ ಭಾಷಣ (Hate Speech) ಮಾಡಿದ್ದ ಅಂದಿನ ಮಾಜಿ ಸಚಿವ ಡಾ.ಸಿ. ಎನ್. ಅಶ್ವಥ್ ನಾರಾಯಣ್ (Ashwath Narayan) ವಿರುದ್ಧ ದೂರು ದಾಖಲಾಗಿದೆ. ಮೈಸೂರಿನ (Mysuru) ದೇವರಾಜ ಪೊಲೀಸ್ ಠಾಣೆಯಲ್ಲಿ ಬುಧವಾರ ಅಶ್ವಥ್ ನಾಯಾಯಣ್ ವಿರುದ್ಧ ದೂರು ದಾಖಲಾಗಿದೆ. ಫೆಬ್ರವರಿ 14ರಂದು ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವ ವೇಳೆ ಅಶ್ವಥ್ ನಾರಾಯಣ್ ಅವರು ಉರಿಗೌಡ ಮತ್ತು ನಂಜೇಗೌಡರು (Urigowda-Nanjegowda) ಟಿಪ್ಪು ಸುಲ್ತಾನನ್ನು (Tippu Sultan) ಹೊಡೆದು ಹಾಕಿದರೋ, ಹಾಗೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ನಂತರ ಈ ಹೇಳಿಕೆಗೆ ವಿಷಾಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ವಾರದಲ್ಲೇ ಅಶ್ವಥ್ ನಾರಾಯಣ್ ವಿರುದ್ಧ ದೂರು ದಾಖಲಿಸಲಾಗಿದೆ.
ಮಂಡ್ಯದ ಸಾತನೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವ ವೇಳೆ ಟಿಪ್ಪುವಿನ ಜಾಗಕ್ಕೆ ಸಿದ್ದರಾಮಯ್ಯ ಬಂದು ಬಿಡ್ತಾರೆ. ಉರಿಗೌಡ, ನಂಜೇಗೌಡ ಅವರು ಟಿಪ್ಪುಗೆ ಏನು ಮಾಡಿದ್ರೊ, ಅದೇ ರೀತಿ ಸಿದ್ದರಾಮಯ್ಯ ಅವರನ್ನು ಕೂಡ ಹೊಡೆದು ಹಾಕಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಎರಡನೇ ಬಾರಿ ತೆರಳಿ ದೂರು
ಈ ಕುರಿತು ಅಶ್ವಥ್ ನಾರಾಯಣ್ ವಿರುದ್ಧ ಕಾಂಗ್ರೆಸ್ ಮುಖಂಡರು ದೂರು ನೀಡಿದರೂ ಪೊಲೀಸರು ಯಾವುದೇ ದೂರು ದಾಖಲಿಸಿಕೊಂಡಿರಲಿಲ್ಲ. ಇದೀಗ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ದೇವರಾಜ ಪೊಲೀಸ್ ಠಾಣೆಯಲ್ಲಿ ಎರಡನೇ ಬಾರಿ ತೆರಳಿ ದೂರು ನೀಡಿದರು. ಇದೀಗ ಪೊಲೀಸರು ದೂರನ್ನು ಸ್ವೀಕರಿಸಿದ್ದು, ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 153 (ಗಲಬೆ ಉಂಟು ಮಾಡಲು ಪ್ರಚೋದಿಸುವುದು) ಅಡಿಯಲ್ಲಿ ಅಶ್ವಥ್ ನಾರಾಯಣ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಸರ್ಕಾರದ ಕಡೆಯಿಂದ ಬಂದಿಲ್ಲ
ಹಿಂದೆ ದೂರು ನೀಡಿದರೂ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ಈಗ ಮತ್ತೆ ದೂರು ನೀಡಿದ್ದೇವೆ. ನಾವು ಸರ್ಕಾರದ ಕಡೆಯಿಂದ ಬಂದಿಲ್ಲ. ಹೈಕಮಾಂಡ್ ಸೂಚನೆ ಮೇರೆ ಪಕ್ಷದ ವತಿಯಿಂದ ಬಂದಿದ್ದೇವೆ. ನೀವು ಒತ್ತಡಕ್ಕೆ ಒಳಗಾಗದೆ, ಸಮಾಜದಲ್ಲಿ ಕದಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದರೂ ಕ್ರಮಕೈಗೊಂಡಿರಲಿಲ್ಲ. ಇನ್ಸ್ಪೆಕ್ಟರ್ ಬಿ ಶಿವಕುಮಾರ್ ಅವರ ಸೂಚನೆ ಮೇರೆಗೆ ಲಕ್ಷಣ ಎರಡನೇ ದೂರು ನೀಡಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ