ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ (BJP MLA Aravind Limbavali) ಮಹಿಳೆಯೊಬ್ಬರನ್ನು (Woman) ನಿಂದಿಸಿದ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಇದೀಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆ ಮಹಿಳೆಯ ವಿರುದ್ಧ ಎಫ್ಐಆರ್ (FIR) ಸಹ ದಾಖಲಿಸಲಾಗಿದೆ. ಕಂದಾಯ ಅಧಿಕಾರಿ ಪಾರ್ಥ್ ಸಾರಥಿ ನೀಡಿದ ದೂರಿನ ಆಧಾರದ ಮೇಲೆ ವೈಟ್ ಫೀಲ್ಡ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ರುತ್ ಮೇರಿ ಸಗಾಯಿ ಶಾಸಕರಿಂದ ನಿಂದನೆಗೊಳಗಾದ ಮಹಿಳೆ. ರುತ್ ಮೇರಿ ಸಗಾಯಿ ಅವರು ವೈಟ್ ಫೀಲ್ಡ್ ಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ (Block Congress President) ಆಗಿದ್ದಾರೆ. ರುತ್ ಮೇರಿ ಸಗಾಯಿ ಅವರು ಕಮರ್ಷಿಯಲ್ ಬಿಲ್ಡಿಂಗ್ ಹೊಂದಿದ್ದು, ರಾಜ ಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನೂ ಈ ವಿಚಾರವಾಗಿ ನ್ಯೂಸ್ 18 ಕನ್ನಡದ ಜೊತೆ ಮೇರಿ ಸಗಾಯಿ ಅವರು ಮಾತನಾಡಿದ್ದು, ರಾಜ ಕಾಲುವೆಯ ಒತ್ತುವರಿ ಆರೋಪ ತಳ್ಳಿ ಹಾಕಿದ್ದಾರೆ. ನಮ್ಮ ಕ್ಷೇತ್ರಕ್ಕೆ ಬಂದ ಶಾಸಕರು ನಮ್ಮ ಕಟ್ಟಡದ ಕಾಂಪೌಂಡ್ ಕೆಡವಿ ಹಾಕಿದ್ದರು. ಇದನ್ನು ಪ್ರಶ್ನಿಸಲು ನಾನು ಅಲ್ಲಿಗೆ ತೆರಳಿದ್ದೆ. ಒಂದು ನಿಮಿಷ ಮಾತನಾಡಬೇಕು ಅಂತ ಹೇಳಿದ್ದಕ್ಕೆ, ಕೋಪದಿಂದ ಹಲ್ಲು ಕಚ್ಚಿ, ಕೋಪದಿಂದ ಏಕವಚನದಿಂದ ಮಾತನಾಡಿದರು.
ಏಕಾಏಕಿ ಕಾಂಪೌಂಡ್ ಬೀಳಿಸಿದ್ದೇಕೆ?
ಕೈಯಲ್ಲಿರುವ ದಾಖಲೆ ತೆಗೆದುಕೊಳ್ಳಲು ಬಂದಾಗ ನಾನು ನೀಡಲಿಲ್ಲ. ಕೊನೆಗೆ ಕೈಯಲ್ಲಿರುವ ದಾಖಲೆ ಪತ್ರ ತೆಗೆದುಕೊಂಡರು. ನಾವು ಬಿಬಿಎಂಪಿ ಅನುಮತಿ ಪಡೆದು ಕಟ್ಟಡ ನಿರ್ಮಾಣ ಮಾಡಿದ್ದೇವೆ. ಕಾಂಪೌಂಡ್ ಬೀಳಿಸುವ ಮೊದಲು ನಮಗೆ ನೋಟಿಸ್ ನೀಡಬೇಕಿತ್ತು ಅಥವಾ ನಮ್ಮ ಗಮನಕ್ಕೆ ತರಬೇಕಿತ್ತು. ಏಕಾಏಕಿ ಕಾಂಪೌಂಡ್ ಬೀಳಿಸಿದ್ದೇಕೆ ಎಂದು ಮೇರಿ ಸಗಾಯಿ ಪ್ರಶ್ನೆ ಮಾಡಿದ್ದಾರೆ.
ಮಾನಸಿಕವಾಗಿ ನೊಂದಿದ್ದೇನೆ
ಕಾಂಪೌಂಡ್ ಬೀಳಿಸಿದ ಜಾಗದಲ್ಲಿ ವಿದ್ಯುತ್ ಉಪಕರಣಗಳಿವೆ. ಅಲ್ಲಿ ಏನಾದ್ರೂ ಅಪಾಯ ಉಂಟಾದ್ರೆ ಯಾರು ಹೊಣೆ ಎಂದು ಪ್ರಶ್ನಿಸಿದ ಮೇರಿ ಸಗಾಯಿ, ಯಾರೂ ನನ್ನ ಜೊತೆ ಇಷ್ಟು ಕೆಟ್ಟದಾಗಿ ನಡೆದುಕೊಂಡಿರಲಿಲ್ಲ. ಎಲ್ಲರೆದರೂ ನನ್ನ ಅವಮಾನಿಸಲಾಗಿದೆ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ ಎಂದರು.
ಇದನ್ನೂ ಓದಿ: P Sainath: ಮುರುಘಾ ಸ್ವಾಮೀಜಿ ಪ್ರಕರಣದಿಂದ ಮುಜುಗರ, ಪ್ರಶಸ್ತಿ ಹಿಂದಿರುಗಿಸಿದ ಖ್ಯಾತ ಪತ್ರಕರ್ತ ಪಿ ಸಾಯಿನಾಥ್!
ಪೊಲೀಸ್ ಠಾಣೆಯಲ್ಲಿ ಕೂರಿಸಿದ್ರು!
ಇನ್ನು ಈ ಘಟನೆ ಬಳಿಕ ನನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಲಾಯ್ತು. ಅಲ್ಲಿ ಪೊಲೀಸರ ಮುಂದೆ ನಡೆದ ಘಟನೆ ವಿವರಿಸಲು ನಮ್ಮ ಬಳಿ ಈ ವಿಡಿಯೋ ಕ್ಲಿಪಿಂಗ್ ಸಹ ಇರಲಿಲ್ಲ. ಕೊನೆಗೆ ನಮ್ಮ ನಾಯಕರು ಮತ್ತು ಬೆಂಬಲಿಗರು ಬಂದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಬೇಕಾಯ್ತು ಎಂದು ಮೇರಿ ಸಗಾಯಿ ಮಾಹಿತಿ ನೀಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಅರವಿಂದ್ ಲಿಂಬಾವಳಿ ಮುಂದೆ ಬರುವ ಮಹಿಳೆ, ಸರ್ ಇಲ್ಲಿ ಕೇಳಿ ಎಂದು ಹೇಳುತ್ತಾರೆ. ಈ ವೇಳೆ ಶಾಸಕರು ಮಹಿಳೆಯ ಕೈಯಲ್ಲಿದ್ದ ಪತ್ರ ಪಡೆಯಲು ಮುಂದಾಗ್ತಾರೆ. ಆದ್ರೆ ಮಹಿಳೆ ಪತ್ರ ನೀಡದೇ ತಮ್ಮ ಮಾತು ಕೇಳಿ ಎಂದು ಒತ್ತಾಯಿಸುತ್ತಾರೆ. ಇದರಿಂದ ಕೋಪಗೊಂಡ ಮಾನ್ಯ ಶಾಸಕರು, ಏ ಇವರನ್ನು ಕರ್ಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಕೂರಿಸಿ ಎಂದು ಅಲ್ಲಿದ್ದ ಸಿಬ್ಬಂದಿಗೆ ಸೂಚಿಸುತ್ತಾರೆ.
ಮಹಿಳೆಯ ಕೈಯಲ್ಲಿದ್ದ ಪತ್ರವನ್ನು ಬಲವಂತವಾಗಿ ಕಸಿದುಕೊಳ್ಳುತ್ತಾರೆ. ಈ ವೇಳೆ ಅದು ಸರ್ಕಾರಿ ಜಮೀನು ಅಲ್ಲ ಎಂದು ಹೇಳುತ್ತಾರೆ. ಮಹಿಳೆ ಮಾತುಗಳಿಂದ ಮತ್ತಷ್ಟು ಕೋಪಗೊಂಡ ಮಾನ್ಯ ಶಾಸಕರು, ಒತ್ತುವರಿ ಮಾಡ್ಕೊಂಡು ಬರ್ತಿರಾ ಎಂದು ಪ್ರಶ್ನೆ ಮಾಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ