news18-kannada Updated:December 27, 2020, 11:56 AM IST
ವಿಷ್ಣುವರ್ಧನ್
ಬೆಂಗಳೂರು(ಡಿ.27): ಅವರು ಕೋಟಿ ಕೋಟಿ ಕನ್ನಡಿಗರ ಹೃದಯಗೆದ್ದ ನಟ. ಅಭಿಮಾನಿಗಳ ಪಾಲಿನ ಸಾಹಸ ಸಿಂಹ ಎಂತಲೇ ಖ್ಯಾತಿ ಗಳಿಸಿದ್ದ ವಿಷ್ಣುವರ್ಧನ್ ರಾಜ್ಯದಲ್ಲಿ ಅಪಾರ ಅಭಿಮಾನಿಗಳನ್ನ ಗಳಿಸಿ ಮನೆ ಮಾತಾಗಿದ್ದಾರೆ. ತಮ್ಮ ನೆಚ್ಚಿನ ನಟನ ಸ್ಮರಣೆಗಾಗಿ ಅಭಿಮಾನಿಗಳು ಪ್ರತಿಮೆ ಸ್ಥಾಪಿಸಿ ಪ್ರೀತಿ ಅಭಿಮಾನ ತೋರಿಸಿದ್ದರು. ಆದರೆ ರಾತ್ರೋರಾತ್ರಿ ಕಿಡಿಗೇಡಿಗಳ ಗುಂಪು ಡಾ. ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸಗೊಳಿಸಿ ವಿಕೃತಿ ಮರೆದಿದ್ದರು. ಈ ಕೃತ್ಯವನ್ನು ಖಂಡಿಸಿ ಡಾ.ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದರು. ಪ್ರಕರಣ ಸಂಬಂಧ ಸದ್ಯ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೌದು, ಶುಕ್ರವಾರ ತಡರಾತ್ರಿ ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ಗೇಟ್ ಬಳಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸ ಮಾಡಿದ್ದ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಫ್ಐಆರ್ ಹಾಕಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿ ಯಾರ್ಯಾರು ಸ್ಥಳದಲ್ಲಿ ಇದ್ದರು ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಕೃತ್ಯ ಎಸಗಿದ ದುಷ್ಕರ್ಮಿಗಳ ಬಂಧನಕ್ಕೆ ವಿಜಯನಗರ ಪೊಲೀಸರು ಬಲೆ ಬೀಸಿದ್ದಾರೆ. ಐಪಿಸಿ ಸೆಕ್ಷನ್ 427 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಿಗರ ಮೇರುನಟ, ಅಭಿಮಾನಿಗಳ ಸಿಂಹಾದ್ರಿಯ ಸಿಂಹ ವಿಷ್ಣುವರ್ಧನ್ ಅಂದ್ರೆ ರಾಜ್ಯದ ಜನರಿಗೆ ಎಲ್ಲಿಲ್ಲದ ಪ್ರೀತಿ. ರಾಜ್ಯದಲ್ಲಿ ಅಪಾರ ಅಭಿಮಾನಿ ಬಳಗವನ್ನ ಹೊಂದಿರುವ ವಿಷ್ಣುವರ್ಧನ್ ದಾದಾ ಅಂತಲೇ ಮನೆ ಮಾತಾಗಿದ್ದಾರೆ. ತಮ್ಮ ನೆಚ್ಚಿನ ನಟನ ಜ್ಞಾಪಕಾರ್ಥವಾಗಿ ರಾಜ್ಯದೆಲ್ಲೆಡೆ ಅವರ ಪುತ್ಥಳಿ ಪ್ರತಿಮೆಗಳನ್ನ ಸ್ಥಾಪಿಸಿ ಆರಾಧಿಸುತ್ತಾರೆ. ಅದ್ರೆ ಕಳೆದ ರಾತ್ರಿ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ನಿರ್ಮಿಸಲಾಗಿದ್ದ ವಿಷ್ಣುವರ್ಧನ್ ಪ್ರತಿಮೆಯನ್ನ ಕಿಡಿಗೇಡಿಗಳು ಧ್ವಂಸಗೊಳಿಸಿ ದುಷ್ಕೃತ್ಯ ಎಸಗಿದ್ದರು.
ಟೋಲ್ ಗೇಟ್ ನ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಲ್ಲಿ ಡಾ. ವಿಷ್ಣುವರ್ಧನ್ ಸೇನಾ ಸಮಿತಿಯಿಂದ ಒಂದೂವರೆ ವರ್ಷದ ಹಿಂದೆ ಪ್ರತಿಮೆಯನ್ನ ಪ್ರತಿಷ್ಟಾಪಿಸಲಾಗಿತ್ತು. ಆದ್ರೆ ಪ್ರತಿಮೆ ಸ್ಥಾಪನೆ ಆದಾಗಿನಿಂದಲೂ ಒಂದಲ್ಲಾ ಒಂದು ವಿವಾದ ಪ್ರತಿಮೆ ವಿಚಾರಕ್ಕೆ ಉದ್ಭವವಾಗುತ್ತಲೇ ಇತ್ತಂತೆ. ವಿಷ್ಣು ಪ್ರತಿಮೆ ಇದ್ದ ಸ್ಥಳದಲ್ಲಿ ಬಾಲಗಂಗಾಧರ ಸ್ವಾಮಿಗಳ ಪುತ್ಥಳಿ ನಿರ್ಮಾಣಕ್ಕೆ ಸ್ಥಳೀಯರು ಮುಂದಾಗಿದ್ದರಂತೆ. ಅದಕ್ಕಾಗಿ ಕೆಲವು ಸಿದ್ದತೆಗಳು ಸಹ ನಡೆದಿದ್ವಂತೆ. ಈ ಬಗ್ಗೆ ಕೆಲ ಹಿರಿಯ ಜೊತೆ ಮಾತುಕತೆ ನಡೆಸಿ ವಿಷ್ಣು ಪ್ರತಿಮೆ ಅದೇ ವೃತ್ತದ ಬೇರೆಡೆ ಪ್ರತಿಷ್ಟಾಪಿಸಲು ಸಮ್ಮತಿಸಲಾಗಿತ್ತು ಎನ್ನಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ರತಿಮೆ ಸ್ಥಳಾಂತರ ಮಾಡಲು ಚಿಂತನೆ ನಡೆಸಿದ್ದಾಗಲೇ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ವಿಷ್ಣುವರ್ಧನ್ ಪುತ್ಥಳಿಯನ್ನ ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದಾರೆ.
ಕೊಡಗಿನಲ್ಲಿ ಕ್ರೀಡಾಂಗಣಗಳೇ ಬಂದ್; ಆಟಗಾರರಿಗೆ ಫಿಟ್ನೆಸ್ ಸಮಸ್ಯೆ
ರಾತ್ರೋರಾತ್ರಿ ವಿಷ್ಣುವರ್ಧನ್ ಪುತ್ಥಳಿ ಧ್ವಂಸಗೊಳಿಸಿದ ವಿಚಾರ ತಿಳಿದ ಅಭಿಮಾನಿಗಳು ಬೆಳ್ಳಂಬೆಳಗ್ಗೆ ಟೋಲ್ ಗೇಟ್ ನ ವಿಷ್ಣು ಪ್ರತಿಮೆ ಬಳಿ ಜಮಾಯಿಸಿದ್ದರು. ವಿಷ್ಣು ಪ್ರತಿಮೆ ಧ್ವಂಸಗೊಳಿಸಿದ್ದನ್ನ ಖಂಡಿಸಿ ಪ್ರತಿಭಟನೆ ನಡೆಸಿದ್ದರು. ವಿಷ್ಣುವರ್ಧನ್ ಅಭಿಮಾನಿಗಳು ಕನ್ನಡ ಪರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಧ್ವಂಸಗೊಳಿಸಿದ ಕಿಡಿಗೇಡಿಗಳನ್ನ ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದರು.
ಇನ್ನೂ ಇದೇ ವೇಳೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸಹ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುತ್ಥಳಿ ಧ್ವಂಸಗೊಳಿಸಿದ್ದನ್ನ ಖಂಡಿಸಿದ ಅನಿರುದ್ದ ಕೂಡಲೇ ಪೊಲೀಸರು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡು, ಅವರನ್ನ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ವಿಷ್ಣು ಅಭಿಮಾನಿಗಳು ಶಾಂತಪ್ರಿಯರು, ತುಂಬ ನೋವುಗಳನ್ನ ಉಂಡಿದ್ದೀರಿ. ಕಷ್ಟಗಳನ್ನ ಎದುರಿಸಿದ್ದೀರಿ. ಅಭಿಮಾನಿಗಳು ಶಾಂತವಾಗಿರಿ ಎಂದು ಕರೆ ನೀಡಿದರು. ವಿಷ್ಣು ಪುತ್ಥಳಿ ಧ್ವಂಸದ ಬಗ್ಗೆ ಶಾಸಕ ಹಾಗೂ ನಿರ್ಮಾಪಕ ಮುನಿರತ್ನಂ ಸಹ ಬೇಸರ ವ್ಯಕ್ತಪಡಿಸಿದರು. ಅಂಬರೀಶ್ ಮತ್ತು ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಮೇರು ನಟರು. ಅಂತವರ ಪ್ರತಿಮೆಗಳನ್ನ ಧ್ವಂಸಗೊಳಿಸುವುದು ಸರಿಯಲ್ಲ ಎಂದು ಹೇಳಿದ್ದರು.ಇನ್ನೂ ವಿಷ್ಣು ಪ್ರತಿಮೆ ಧ್ವಂಸಗೊಳಿಸಿದ ಘಟನೆ ಎಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿದ್ದಂತೆ ಅಭಿಮಾನಿಗಳು ಸ್ಥಳಕ್ಕೆ ದೌಡಾಯಿಸಿದ್ದರು. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದರು. ಬಳಿಕ ಪ್ರತಿಭಟನೆ ನಿರತ ವಿಷ್ಣು ಅಭಿಮಾನಿಗಳ ಮನವೊಲಿಸಿದ ವಿಜಯನಗರ ಪೊಲೀಸರು ಕಿಡಿಗೇಡಿಗಳ ವಿರುದ್ಧ ದೂರು ನೀಡುವಂತೆ ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದರು.
ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಧ್ವಂಸಗೊಂಡ ಸ್ಥಳದಲ್ಲಿ ಪುನಃ ವಿಷ್ಣುವರ್ಧನ್ ಪ್ರತಿಮೆಯನ್ನ ಪುನರ್ ಪ್ರತಿಷ್ಟಾಪನೆ ಮಾಡಲಾಯಿತು. ಪರಿಸ್ಥಿತಿಯನ್ನ ಪೊಲೀಸರು ಹತೋಟಿಗೆ ತೆಗೆದುಕೊಂಡಿದ್ದು ವಿಷ್ಣು ಅಭಿಮಾನಿಗಳ ಮನವೊಲಿಸಿದ್ದರು. ಇತ್ತ ಪುತ್ಥಳಿ ಧ್ವಂಸಗೊಳಿಸಿದ ಕಿಡಿಗೇಡಿಗಳು ಯಾರು ಅನ್ನೋ ಬಗ್ಗೆ ಕುತೂಹಲ ಉಂಟು ಮಾಡಿದ್ದು ಅವರನ್ನ ಪೊಲೀಸರು ಬಂಧಿಸ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
Published by:
Latha CG
First published:
December 27, 2020, 11:56 AM IST