ತುಮಕೂರು: ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆಗೆ ಪ್ರತಿಕಾರವಾಗಿ ಸುರತ್ಕಲ್ನಲ್ಲಿ ಫಾಜಿಲ್ ಹತ್ಯೆ (Fazil) ಮಾಡಲಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಹಿಂದೂ ಪರಿಷತ್ನ ( Vishwa Hindu Parishad) ಮುಖಂಡ ಶರಣ್ ಪಂಪ್ವೆಲ್ (Sharan Pumpwell) ವಿರುದ್ಧ ತುಮಕೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಇಂದು ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಆಗಮಿಸಿದ್ದ ಸೈಯದ್ ಬುರ್ಹಾನ್ ಉದ್ದೀನ್ ಎಂಬಾತ ಪ್ರಚೋದನಾಕಾರಿ ಭಾಷಣ ಮಾಡಿದ್ದ ಶರಣ ಪಂಪ್ವೆಲ್ ವಿರುದ್ಧ ದೂರು ದಾಖಲಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಕಾರ್ಯದರ್ಶಿಯಾಗಿರುವ ಶರಣ್ ಪಂಪ್ವೆಲ್, ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತಿಕಾರವಾಗಿ ಸುರತ್ಕಲ್ನಲ್ಲಿ ಫಾಜಿಲ್ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದರು.
ಕಳೆದ ಶನಿವಾರ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ತುಮಕೂರು ನಗರದಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶರಣ್ ಪಂಪ್ವೆಲ್, ಸಾರ್ವಜನಿಕ ವೇದಿಕೆ ಭಾಷಣದಲ್ಲಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದರು ಎಂದು ತುಮಕೂರು ನಗರದ ಬಾರ್ ಲೈನ್ ನಿವಾಸಿಯಾಗಿರುವ ಸೈಯದ್ ಬುರ್ಹಾನ್ ಉದ್ದೀನ್ ಪೊಲೀಸರಿಗೆ ದೂರು ನೀಡಿದ್ದಾರೆ. ಶರಣ್ ಪಂಪ್ವೆಲ್ ಭಾಷಣ ತುಮಕೂರಿನಲ್ಲಿ ಶಾಂತಿಭಂಗಕ್ಕೆ ಕಾರಣವಾಗಲಿದೆ ಎಂದು ದೂರಿನಲ್ಲಿ ಆರೋಪಿಸಿದ್ದು, ಕಲಾಂ 157, ಸಿಆರ್ಪಿಸಿ (a)(b) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಶರಣ್ ಪಂಪ್ವೆಲ್ ಹೇಳಿದ್ದೇನು?
ಶೌರ್ಯ ಸಂಚಲನ ಕಾರ್ಯಕ್ರಮ ಮಾತನಾಡಿದ್ದ ಶರಣ್ ಪಂಪ್ವೆಲ್, ಅಯೋಧ್ಯೆ ರಾಮಮಂದಿರ ಹೋರಾಟಕ್ಕಾಗಿ ವಿಶ್ವ ಹಿಂದೂ ಪರಿಷತ್ಗೆ ಕರೆ ಕೊಟ್ಟಿತ್ತು. ದೇಶದ ವಿವಿಧ ಮೂಲೆಗಳಿಂದ ಜನರು ಆಯೋಧ್ಯೆ ಬಂದು ಕರಸೇವೆ ಮಾಡಿದ್ದರು. ಅಂದು ಮುಲಾಯಂ ಸಿಂಗ್ ಸರ್ಕಾರ ಶೂಟ್ ಮಾಡಲು ಸೂಚನೆ ನೀಡಿತ್ತು. ಅಲ್ಲಿ ಭಜರಂಗ ದಳದ ನಮ್ಮ ಇಬ್ಬರು ಕಾರ್ಯಕರ್ತರು ಕೂಡ ತಮ್ಮ ಪ್ರಾಣವನ್ನು ಕೊಟ್ಟಿದ್ದರು.
ಭಜರಂಗ ದಳ ಹುಟ್ಟಿದ್ದೆ ಸಂಘರ್ಷಕ್ಕಾಗಿ, ಅವಶ್ಯಕತೆ ಇದ್ದಾಗ ಹೋರಾಟ ಮಾಡ್ತೀವಿ ಅನಿವಾರ್ಯ ಆದರೆ ನುಗ್ಗಿ ಹೊಡೆಯುತ್ತೆ ಎಂದಿದ್ದರು. ಪ್ರತೀಕಾರಕ್ಕಾಗಿ 2 ಸಾವಿರ ಮಂದಿಯನ್ನು ಹತ್ಯೆ ಮಾಡಿದ್ದೇವೆ. 59 ಕರಸೇವಕರ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡಿದ್ದರು. ಇದು ಹಿಂದೂಗಳ ಸಾಮರ್ಥ್ಯ. ದಕ್ಷಿಣ ಕನ್ನಡ ಮಾತ್ರವಲ್ಲ, ಇಡೀ ಕರ್ನಾಟಕವೇ ಹಿಂದುತ್ವದ ಫ್ಯಾಕ್ಟರಿ ಆಗಲಿದೆ ಎಂದು ಸವಾಲು ಹಾಕಿದ್ದರು.
ಪಂಪ್ವೆಲ್ ಹೇಳಿಕೆಗೆ ಖಂಡನೆ
ಪ್ರತೀಕಾರಕ್ಕಾಗಿ ಫಾಜಿಲ್ ಹತ್ಯೆ ಮಾಡಲಾಗಿದೆ ಎಂದು ಹೇಳಿಕೆ ನೀಡಿರುವ ಶರಣ್ ಪಂಪ್ವೆಲ್ ವಿರುದ್ಧ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಈ ಕುರಿತು ಟ್ವೀಟ್ ಮಾಡಿದ್ದ ಕಾಂಗ್ರೆಸ್ ಮುಖಂಡ ಹೇಮನಾಥ್ ಶೆಟ್ಟಿ , ವಿಶ್ವ ಹಿಂದೂ ಪರಿಷತ್ತಿನ ನಾಯಕ ಶರಣ್ ಪಂಪ್ವೆಲ್ ಫಾಜಿಲ್ ಕೊಲೆಯನ್ನು ಪ್ರತೀಕಾರದ ಕೊಲೆ ಎಂದು ಹೇಳಿರುವುದರಿಂದ ಜಿಲ್ಲೆಯ ಜನರ ಮನಸ್ಸಿನಲ್ಲಿ ಆತಂಕ ಮನೆ ಮಾಡಿದೆ. ಹಿಂದೂ ಸಂಘಟನೆ ಎನ್ನುವುದು ಕಾನೂನು ಕೈಗೆತ್ತಿಕೊಂಡು ಅನ್ಯ ಧರ್ಮೀಯರನ್ನು ಕೊಲೆಗೈದು ಪ್ರತೀಕಾರ ತೀರಿಸಿಕೊಳ್ಳಿ ಎಂದು ಸರಕಾರ ನಿರ್ದೇಶಿಸಿದೆಯೇ? ಎಂದು ಪ್ರಶ್ನಿಸಿದ್ದರು.
ಡಿವೈಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನೀರ್ ಕಟ್ಟಿಪಾಳ್ಯ ಅವರು ಪಂಪ್ವೆಲ್ ಭಾಷಣ ದುಷ್ಟತನದ ಪರಮಾವಧಿ ಎಂದು ಕಿಡಿ ಕಾರಿದ್ದರು. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಪಂಪ್ವೆಲ್ರನ್ನು ಬಂಧಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದರು. ಫಾಜಿಲ್ ತಂದೆ ಕೂಡ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿ ಶರಣ್ ಪಂಪವೇಲ್ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ