ನಮ್ಮ ದೇಶದಲ್ಲಿ ಹೆಚ್ಚಾಗಿ ಸೇಬು ಬೆಳೆಯುವುದು ಅಂದರೆ ಕಾಶ್ಮೀರ ಹಾಗೂ ಹಿಮಾವಲ ಪ್ರದೇಶದಲ್ಲಿ. ಅಂದ ಹಾಗೆ, ಕರ್ನಾಟಕ (Karnataka) ಸೇರಿ ಬಹುತೇಕ ರಾಜ್ಯಗಳಲ್ಲಿ ಇದನ್ಯಾಕೆ ಬೆಳೆಯುವುದಿಲ್ಲ. ಬೆಳೆಯಲು ಸಾಧ್ಯವೇ ಇಲ್ಲವೇ ಎಂಬ ಅನುಮಾನ ಹಲವು ರೈತರು (Framer) ಹಾಗೂ ಜನಸಾಮಾನ್ಯರಲ್ಲೂ ಇರುತ್ತದೆ. ಆದರೆ, ಇಲ್ನೋಡಿ.. ರಾಜ್ಯದಲ್ಲಿ ಈಗ ಮತ್ತೊಂದು ಸೇಬು ಕ್ರಾಂತಿ (Apple Revolution) ಆರಂಭವಾದಂತಿದೆ. ಮತ್ತೊಂದು ಕ್ರಾಂತಿ ಅಂದರೆ ಈ ಹಿಂದೆಯೂ ಸೇಬು ಬೆಳೆಯಲಾಗುತ್ತಿತ್ತಾ ಅಂತೀರಾ..? ಹೌದು.. ಬೆಂಗಳೂರಿನ ಹೃದಯಭಾಗದಲ್ಲೇ ನೂರು ವರ್ಷಗಳ ಹಿಂದೆ ಸೇಬುಗಳನ್ನು ಬೆಳೆಯಲಾಗುತ್ತಿತ್ತು ಎಂಬುದು ನಿಮಗೆ ತಿಳಿದಿದೆಯೇ? ಆದರೀಗ, ಕಾಶ್ಮೀರ (Kashmir) ಮತ್ತು ಹಿಮಾಚಲ ಪ್ರದೇಶದಲ್ಲಿ ಸಾಮಾನ್ಯವಾಗಿ ಬೆಳೆಯುವ ಸಮಶೀತೋಷ್ಣ ಹಣ್ಣು ಎಂದು ಕರೆಯುವ ಆ್ಯಪಲ್ ಅಥವಾ ಸೇಬನ್ನು ಈಗ ಬೆಂಗಳೂರು ಸುತ್ತಮುತ್ತ ಮತ್ತೆ ಬೆಳೆಯಲಾಗುತ್ತಿದೆ.
50 ಎಕರೆ ಪ್ರದೇಶದಲ್ಲಿ ಸೇಬು ಬೆಳೆ
ಉತ್ತರ ಕರ್ನಾಟಕದ ಕೆಲವು ಬರಪೀಡಿತ ಬಯಲು ಪ್ರದೇಶಗಳ ಜೊತೆಗೆ ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಣಗಿದ ಭೂಮಿಯಲ್ಲಿ ಸೇಬು ಕೃಷಿಯನ್ನು ಪ್ರಯತ್ನಿಸಲಾಗುತ್ತಿದೆ ಎಂಬ ಅಂಶವು ಹೆಚ್ಚು ಆಸಕ್ತಿದಾಯಕವಾಗಿದೆ. ಅಲ್ಲದೆ, ದಶಕದ ಹಿಂದೆಯೂ ಬೆಂಗಳೂರಿನಲ್ಲಿ ಕೊನೆಯ ಬಾರಿಗೆ ಸೇಬು ಬೆಳೆದಿದ್ದು, ಲಾಲ್‌ಬಾಗ್‌ನಲ್ಲಿ ನಗರದ ಸ್ಥಳೀಯ ತಳಿಯನ್ನು ಬೆಳೆಸುವ ಮೂಲಕ ತೋಟಗಾರಿಕಾ ಅಧಿಕಾರಿಗಳು ಯಶಸ್ಸನ್ನು ಸಾಧಿಸಿದ್ದರು. ಈಗ ಸಿರಾ ಹಾಗೂ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಸೇಬು ಬೆಳೆಯಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
1887 ರಲ್ಲಿ ಬ್ರಿಟಿಷ್ ಸಸ್ಯಶಾಸ್ತ್ರಜ್ಞ ಜಾನ್ ಕ್ಯಾಮರೂನ್ ಅವರು ಬೆಂಗಳೂರಿನ ಸ್ವಂತ ವೈವಿಧ್ಯಮಯ ಸೇಬು - ರೋಮ್ ಬ್ಯೂಟಿ ಅನ್ನು ಪರಿಚಯಿಸಿದರು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ನಂತರ, ನಗರದ ಅರಮನೆ ಮೈದಾನದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೇಬಿನ ತೋಟಗಳಿದ್ದವು. ಆದರೆ, ಸೇಬುಗಳೊಂದಿಗೆ ಗಾರ್ಡನ್ ಸಿಟಿಯ ಪ್ರಯತ್ನವು 1920 ರ ಹೊತ್ತಿಗೆ ಕೊನೆಗೊಂಡಿತ್ತಂತೆ.
ಸೇಬು ಬೆಳೆಯಲು ತಣ್ಣನೆಯ ವಾತಾವರಣಬೇಕು
ಇನ್ನು, ‘ನಾವು ಹಿಮಾಚಲ ಪ್ರದೇಶದಿಂದ ಬೇರುಕಾಂಡ ವಿಧಾನದ ಮೂಲಕ ತಳಿಗಳನ್ನು ಪಡೆದುಕೊಂಡಿದ್ದೇವೆ ಮತ್ತು ಅವುಗಳನ್ನು ಲಾಲ್‌ಬಾಗ್‌ನಲ್ಲಿ ನೆಟ್ಟಿದ್ದೇವೆ. ಸೇಬುಗಳು ಬಿಡಲು ವರ್ಷದಲ್ಲಿ ಕನಿಷ್ಠ 350 ಗಂಟೆಗಳ (10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ) ತಣ್ಣಗಿರುವ ಹವಾಮಾನ ಬೇಕು. ಅಂತಹ ಸ್ಥಿತಿ ನಿರ್ಮಾಣ ಮಾಡಿ ಫಲ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಪ್ರಯೋಗದ ಉಸ್ತುವಾರಿ ವಹಿಸಿದ್ದ ತೋಟಗಾರಿಕೆ (ಹಣ್ಣು) ಮಾಜಿ ಹೆಚ್ಚುವರಿ ನಿರ್ದೇಶಕ ಎಸ್.ವಿ.ಹಿತ್ತಲಮನಿ ವಿವರಿಸಿದರು.
ಇದನ್ನೂ ಓದಿ: Mysuru Expressway: ಜುಲೈನಲ್ಲಿ ಸಂಚಾರ ಮುಕ್ತವಾಗಲಿದೆ ಮೈಸೂರು-ಬೆಂಗಳೂರು ಮೊದಲ ಹಂತದ 10 ಪಥಗಳ ಹೆದ್ದಾರಿ
ಈ ಯಶಸ್ಸಿನಿಂದ ಉತ್ಸುಕರಾದ ಅನೇಕ ರೈತರು ಸೇಬು ಬೆಳೆಯಲು ಪಣ ತೊಟ್ಟಿದ್ದರು. ಅಲ್ಲದೆ, ತುಮಕೂರು ಜಿಲ್ಲೆಯ ಸಿರಾ ಹಾಗೂ ಸುತ್ತಮುತ್ತ ಪ್ರಾಥಮಿಕ ಪ್ರಯೋಗಗಳನ್ನು ನಡೆಸಲಾಯಿತು ಎಂದು ತಿಳಿದುಬಂದಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಕರ್ನಾಟಕದ ಹಣ್ಣು ಬೆಳೆಗಾರರ ಸಂಘದ ಅಧ್ಯಕ್ಷ ರಾಮದಾಸ್ “ಹಿಮಾಚಲದ ಸೇಬು ತಜ್ಞ ಚಿರಂಜಿತ್ ಪರ್ಮಾರ್ ಅವರು 2014 ರಲ್ಲಿ ಬೇರುಕಾಂಡ ತಳಿಗಳನ್ನು ಒದಗಿಸುವ ಮೂಲಕ ನಮಗೆ ಸಹಾಯ ಮಾಡಿದರು. 2018 ರ ಹೊತ್ತಿಗೆ, ನಾವು ಸಣ್ಣ ಯಶಸ್ಸನ್ನು ಕಾಣಲು ಸಾಧ್ಯವಾಯಿತು. ನಾವು ಸಸಿಗಳನ್ನು ವಿತರಿಸಲು ಹೋದಾಗ, ಕೋವಿಡ್ ಅರಂಭವಾಯಿತು. ಆದರೂ, ನಂತರ ನಾವು ರೈತರಿಗೆ ಐದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿದ್ದೇವೆ’’ ಎಂದು ರಾಮದಾಸ್ ಹೇಳಿದ್ದಾರೆ.
ಇನ್ನು ಸ್ಥಳೀಯವಾಗಿ ಬೆಳೆಯಲು ಸಾಧ್ಯವಾದ ಈ ತಳಿಯನ್ನು 'ಮೋದಿ ಸೇಬು' ಎಂದು ಹೆಸರಿಸಲಾಗಿದೆಯಂತೆ. ಚಿಕ್ಕಬಳ್ಳಾಪುರದ ರೈತ ಜಿ.ಎನ್.ನಾರಾಯಣಸ್ವಾಮಿ ಎಂಬುವವರು ಅರ್ಧ ಎಕರೆ ಜಮೀನಿನಲ್ಲಿ ಸೇಬು ಕೃಷಿ ಮಾಡಿದ್ದಾರಂತೆ.
"ನಾವು ಇದನ್ನು 2019 ರಿಂದ ಪ್ರಯತ್ನಿಸುತ್ತಿದ್ದೇವೆ ಮತ್ತು 2022 ರಲ್ಲಿ ಇಳುವರಿ (150 ಕೆಜಿ) ಪಡೆದುಕೊಂಡಿದ್ದೇವೆ. ಆದರೆ ಇದು ಇನ್ನೂ ಪ್ರಯೋಗ ಮತ್ತು ದೋಷದ ಹಂತದಲ್ಲಿದೆ. ತಳಿಗಳು 45 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಡೆದುಕೊಳ್ಳಬಲ್ಲವು ಮತ್ತು ಹನಿ ನೀರಾವರಿ ವಿಧಾನದಲ್ಲಿ ಬೆಳೆಸಬಹುದು” ಎಂದು ಅವರು ವಿವರಿಸಿದರು.
ಇದನ್ನೂ ಓದಿ: Gadaga: ನಗರಸಭೆಯ ಸಾಮಾನ್ಯ ಸಭೆಗೆ ನುಗ್ಗಿ ಆಟೋ ಡ್ರೈವರ್ಗಳ ಆಕ್ರೋಶ, ರಸ್ತೆ ದುರಸ್ತಿಗೆ ಪಟ್ಟು
ಅದೇ ರೀತಿ ವಿಜಯಪುರದ ಕೊಲ್ಹಾರದ ಯುವಕ ಸಚಿನ್ ಬಾಳಗೊಂಡ್ ಕೂಡ ಒಂದು ಎಕರೆ ಜಾಗದಲ್ಲಿ ಸೇಬು ಕೃಷಿ ಮಾಡಿದ್ದಾರೆ. “ನಾವು ಆರಂಭಿಸಿ ಎರಡು ವರ್ಷಗಳಾಗಿವೆ. ಆದರೆ ಈ ವರ್ಷ ಒಂದು ಟನ್ ಉತ್ಪನ್ನದಿಂದ ಇಳುವರಿ ತೃಪ್ತಿ ತಂದಿದೆ. ಅಕ್ಟೋಬರ್ ವೇಳೆಗೆ ಗಿಡಗಳನ್ನು ಕತ್ತರಿಸಿದರೆ ನವೆಂಬರ್-ಡಿಸೆಂಬರ್‌ನ ಚಳಿಗಾಲದ ವಾತಾವರಣವು ಹೂ ಬಿಡಲು ಸಹಕಾರಿಯಾಗುತ್ತದೆ’ ಎಂದು ವಿವರಿಸಿದರು.
ಹಾಗೆ, ಸಿರಾದ ಪಟ್ಟನಾಯಕನಹಳ್ಳಿ ಬಳಿಯ ತಮ್ಮ ಜಮೀನಿನಲ್ಲಿ ಸೇಬು ಕೃಷಿ ಮಾಡುತ್ತಿರುವ ಬೆಂಗಳೂರಿನ ಓಂಕಾರ್ ನಾಯ್ಕ್ ಮಾತನಾಡಿ, ‘ಎರಡು ವರ್ಷಗಳ ಹಿಂದೆ 700 ಗಿಡಗಳನ್ನು ಹಾಕಿಕೊಂಡು ಪ್ರಯತ್ನಿಸಿದ್ದೆವು. ಈಗ ಸುಮಾರು 100 ಗಿಡಗಳು ನಾಶವಾಗಿವೆ. ಕೆಲವು ಈ ವರ್ಷ ಫಲ ನೀಡುತ್ತಿವೆ. ಆದರೆ ಎಲ್ಲಾ ಹಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗಿದ ತಕ್ಷಣ ಪಕ್ಷಿಗಳು ತಿಂದವು. ಎರಡು ದಿನಗಳ ಕೊಯ್ಲಿನ ನಂತರ ಹಣ್ಣುಗಳು ಸಿಹಿಯಾಗುತ್ತವೆ’ ಎಂದು ಹೇಳಿದರು.
ಸೇಬು ಬೆಳೆಯೋದು ಸುಲಭವಲ್ಲ
ಪ್ರಸ್ತುತ ವಿವಿಧ ಜಿಲ್ಲೆಗಳಲ್ಲಿ ಸುಮಾರು 50 ಎಕರೆ ಭೂಮಿಯಲ್ಲಿ ಸೇಬುಗಳನ್ನು ಬೆಳೆಯಲಾಗುತ್ತಿದ್ದು, ಆದರೂ, ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ ಎಂದು ಹಣ್ಣಿನ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ''ಕುತೂಹಲದಿಂದ ಬೆಳೆ ಬೆಳೆದಿದ್ದೆವು. ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ಯಾವ ಭಾಗವೂ ವಾಣಿಜ್ಯ ಮಟ್ಟದಲ್ಲಿ ಸೇಬು ಬೆಳೆಯಲು ಯೋಗ್ಯವಾಗಿಲ್ಲ. ವಾಸ್ತವವಾಗಿ, 2014 ರವರೆಗೆ ನಾವು ಈ ಬೆಳೆಗಳನ್ನು ಶಿಫಾರಸು ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೆವು.
6 ವರ್ಷಗಳಲ್ಲಿ ಸಸ್ಯಗಳು ನಾಶವಾಗುತ್ತವೆ ಮತ್ತು ಮೂರನೇ ವರ್ಷದಿಂದ ಇಳುವರಿಯಲ್ಲಿ ಇಳಿಕೆ ಪ್ರಾರಂಭವಾಗುತ್ತದೆ. ಹೂಡಿಕೆಯನ್ನು ಪರಿಗಣಿಸಿದರೆ, ಇದು ಈಗಾಗಲೇ ಒತ್ತಡದಲ್ಲಿರುವ ರೈತರ ದುಃಖವನ್ನು ಹೆಚ್ಚಿಸುತ್ತದೆ’’ ಎಂದು ಈ ಸಂಬಂಧ ಮಾಜಿ ಹೆಚ್ಚುವರಿ ನಿರ್ದೇಶಕ ಎಸ್.ವಿ.ಹಿತ್ತಲಮನಿ ಪ್ರತಿಕ್ರಿಯೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ