ಉಡುಪಿ (ಡಿ. 3): ಭಕ್ತ ಶ್ರೇಷ್ಟ ಕನಕದಾಸರ ಜಯಂತಿಯಂದೇ ಶ್ರೀ ಕೃಷ್ಣ ಮಠದಲ್ಲಿ ಕನ್ನಡ ನಾಮ ಫಲಕ ಅಳವಡಿಕೆಯಾಗಿದೆ. ಕೃಷ್ಣಮಠದ ಮುಂದಿನ ಮುಖ್ಯದ್ವಾರದಲ್ಲಿ ವಿಶ್ವಗುರು ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಕೃಷ್ಣಮಠ ಎಂದು ಮರದ ನಾಮಫಲಕ ಹಾಕಲಾಗಿದೆ. ಕನ್ನಡಿಗರ ಆಕ್ರೋಶಕ್ಕೆ ಮಣಿದ ಮಠ ಕನ್ನಡ ನಾಮಫಲಕವನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಗೋಪುರ ದ್ವಾರದ ಮುಂಭಾಗ ಒಳಪ್ರದೇಶದಲ್ಲಿ ತುಳು ಹಾಗೂ ಸಂಸ್ಕೃತ ಲಿಪಿಯುಳ್ಳ ಬರಹವನ್ನು ಹಾಗೇಯೇ ಉಳಿಸಲಾಗಿದೆ. ಕಳೆದೆರಡು ದಿನಗಳ ಹಿಂದೆ ಪರ್ಯಾಯ ಶ್ರೀಗಳ ಆದೇಶದಂತೆ ಕನ್ನಡ ನಾಮಫಲಕ ತೆಗೆದು ಕೇವಲ ತುಳು ಹಾಗೂ ಸಂಸ್ಕೃತದಲ್ಲಿ ನಾಮಫಲಕ ಹಾಕಲಾಗಿತ್ತು. ಈ ಬಗ್ಗೆ ಕೃಷ್ಣ ಭಕ್ತರು, ಕನ್ನಡ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ಎಚ್ಚೆತ್ತ ಆಡಳಿತ ಮಂಡಳಿ ಪರ್ಯಾಯ ಶ್ರೀಗಳೊಂದಿಗೆ ಚರ್ಚಿಸಿ ನಿನ್ನೆ ದಿಢೀರಾಗಿ ಕನ್ನಡದಲ್ಲಿ ನಾಮಫಲಕ ಬರೆಸಿ, ಕನಕ ಜಯಂತಿಯಾದ ಇಂದು ಗೋಪುರದ ಮೇಲ್ಭಾಗದಲ್ಲಿ ಕನ್ನಡ ನಾಮಫಲಕ ಅಳವಡಿಸಲಾಗಿದೆ. ಇದು ಅಪಾರ ಕನ್ನಡಾಭಿಮಾನಿಗಳಿಗೆ ಸಮಾಧಾನ ತಂದಿದೆ. ಜೊತೆಗೆ ತುಳು ಲಿಪಿಯನ್ನ ಉಳಿಸಿಕೊಂಡಿರುವುದಕ್ಕೆ ತುಳು ಭಾಷಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಕೃಷ್ಣ ಮಠದ ಮುಂಭಾಗ ಇದ್ದ ಕೃಷ್ಣ ಮಠ ಎಂಬ ಕನ್ನಡ ಹಾಗೂ ಆಂಗ್ಲಭಾಷೆಯಲ್ಲಿದ್ದ ನಾಮಫಲಕವನ್ನ ತೆರವು ಮಾಡಿರುವ ಮಠದ ಪರ್ಯಾಯ ಅದಮಾರು ಮಠದ ಆಡಳಿತ ಮಂಡಳಿ, ತುಳು ಹಾಗೂ ಸಂಸ್ಕೃತದಲ್ಲಿ ಶ್ರೀ ಕೃಷ್ಣ ಮಠ, ರಜತಪೀಠ ಪುರಂ ಎಂಬ ಬರಹವನ್ನ ಮರದಲ್ಲಿ ಕೆತ್ತನೆ ಮಾಡಿ ಮಠದ ಮುಂಭಾಗ ಅಳವಡಿಸಿದೆ. ಈ ಫಲಕ ಕಂಡ ಭಕ್ತರು ಒಂದು ಕ್ಷಣ ಗೊಂದಲಕ್ಕೆ ಒಳಗಾಗಿದ್ದರು. ಫಲಕದಲ್ಲಿದ್ದ ಕನ್ನಡ ಕಾಣೆಯಾಗಿದ್ದಕ್ಕೆ ಕನ್ನಡ ಸಂಘಟನೆಗಳು ವ್ಯಾಪಕ ಆಕ್ರೋಶ ಹೊರಹಾಕಿದ್ದವು.
ಇದನ್ನು ಓದಿ: ಉಡುಪಿ ಕೃಷ್ಣ ಮಠದ ಮುಖ್ಯದ್ವಾರದ ಫಲಕದಲ್ಲೇ ಕನ್ನಡ ಮಾಯ; ಕನ್ನಡಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ
ತುಳು ನಮ್ಮ ಸೋದರ ಭಾಷೆ ಒಪ್ಪಿಕೊಳ್ಳುತ್ತೇವೆ. ಆದರೆ ನಾಮಫಲಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸುತ್ತೇವೆ. ಕನ್ನಡ ಮತ್ತು ತುಳುವಿನ ನಡುವೆ ಕಂದಕ ಏರ್ಪಡಿಸುವ ಕೆಲಸ ಮಾಡಬೇಡಿ. ಎಷ್ಟೇ ದೊಡ್ಡವರಾಗಿ ಇರಲಿ, ಕಾನೂನು ರೀತಿಯಲ್ಲಿ ಅಪರಾಧ ಮಾಡಿದ್ದಾರೆ. ಕನ್ನಡಿಗರು ಕ್ಷಮಿಸಲಾರದಂತಹ ಅಪರಾಧ ಇದು ಎಂದು ಕನ್ನಡ ಸಂಘಟನೆಗಳು ಆಗ್ರಹಿಸಿದ್ದವು.
ಕೃಷ್ಣ ಮಠವನ್ನು ಪುನಶ್ಚೇತನ ಗೊಳಿಸಲಾಗುತ್ತಿದೆ. ಪುನಶ್ಚೇತನದ ಸಂದರ್ಭ ಮಖ್ಯದ್ವಾರದ ಪ್ಲಾಸ್ಟಿಕ್ ಬೋರ್ಡ್ ತೆಗೆಯಲಾಗಿದೆ. ಮರದಲ್ಲಿ ತಯಾರಿಸಿ ಬೋರ್ಡ್ ಅಳವಡಿಸುವ ಯೋಜನೆ ಇದೆ. ದ್ವಾರದ ಮೇಲ್ಬಾಗದಲ್ಲಿ ಕನ್ನಡ ಬೋರ್ಡ್ ಅಳವಡಿಸುತ್ತೇವೆ. ಕೆಳಭಾಗದಲ್ಲಿ ಸಂಸ್ಕೃತ, ತುಳುವಿನಲ್ಲಿ ಬೋರ್ಡ್ ಅಳವಡಿಸಲಾಗುವುದು ಎಂದು ಪರ್ಯಾಯ ಅದಮಾರು ಮಠ ಸ್ಪಷ್ಟನೆ ನೀಡಿತ್ತು.
ಮಠದ ವಿಳಂಬ ಧೋರಣೆ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದು, ಇದೀಗ ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಮಣಿದ ಮಠ ಶೀಘ್ರವೇ ಕನ್ನಡದಲ್ಲಿ ನಾಮಫಲಕ ಅಳವಡಿಸಿದ್ದು, ಸಂತಸ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ