ಯಶಸ್ವಿಯಾಯ್ತು ಸಂಧಾನ ; 'ನಟ ಸಾರ್ವಭೌಮ' ಚಿತ್ರದ ಶೂಟಿಂಗ್​ಗೆ ಕೊನೆಗೂ ಸಿಕ್ತು ಗ್ರೀನ್​ ಸಿಗ್ನಲ್​​​!

news18
Updated:July 15, 2018, 5:06 PM IST
ಯಶಸ್ವಿಯಾಯ್ತು ಸಂಧಾನ ; 'ನಟ ಸಾರ್ವಭೌಮ' ಚಿತ್ರದ ಶೂಟಿಂಗ್​ಗೆ ಕೊನೆಗೂ ಸಿಕ್ತು ಗ್ರೀನ್​ ಸಿಗ್ನಲ್​​​!
ಬಾಗಲಕೋಟೆ ಜಿಲ್ಲೆಯ ಮಹಾಕೂಟದಲ್ಲಿರುವ ಐತಿಹಾಸಿಕ ಪುಷ್ಕರಣಿ
news18
Updated: July 15, 2018, 5:06 PM IST
-ರಾಚಪ್ಪ ಬನ್ನಿದಿನ್ನಿ, ನ್ಯೂಸ್​ 18 ಕನ್ನಡ

ಬಾಗಲಕೋಟೆ,(ಜು.15): ಬಹು ನಿರೀಕ್ಷಿತ ಪುನೀತ್​​​ ರಾಜ್‌ಕುಮಾರ ಅಭಿನಯದ 'ನಟ ಸಾರ್ವಭೌಮ' ಚಿತ್ರದ ಚಿತ್ರೀಕರಣ ವಿಚಾರವಾಗಿ ಎದ್ದಿದ್ದ ಪುಷ್ಕರಣಿಯಲ್ಲಿನ ಸೆಟ್ ವಿವಾದ ಕೊನೆಗೂ ಬಗೆಹರಿದಿದೆ. 'ದಕ್ಷಿಣ ಕಾಶಿ' ಎಂದೇ ಹೆಸರಾಗಿರುವ ಬಾಗಲಕೋಟೆ ಜಿಲ್ಲೆಯ ಮಹಾಕೂಟದಲ್ಲಿ ಕಳೆದ ಎರಡು ದಿನಗಳಿಂದ ಶೂಟಿಂಗ್​​ಗಾಗಿ ಹಾಕಿದ್ದ ಶೆಟ್‌ಗೆ ಹೋರಾಟಗಾರರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ಚಿತ್ರತಂಡ ಮತ್ತು ಹೋರಾಟಗಾರರ ಮಧ್ಯೆ ನಡೆದ ಮಾತುಕತೆ ಸಫಲವಾಗಿದ್ದು, ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಹೌದು. ರಾಜ್ಯಾದ್ಯಂತ ಸುದ್ದಿ ಮಾಡುತ್ತಿರುವ,  ಪವರ್​ ಸ್ಟಾರ್​​​ ಪುನೀತ್​ ರಾಜ್‌ಕುಮಾರ್​​ ಅಭಿನಯದ ನಟ ಸಾರ್ವಭೌಮ ಚಲನಚಿತ್ರದ ಪ್ರೀ ಕ್ಲೈಮ್ಯಾಕ್ಸ್ ಶೂಟ್​​ ಮಾಡಲು  ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಮಹಾಕೂಟವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ನಿರ್ದೇಶಕ ಪವನ್ ಒಡೆಯರ್​​ ನೇತೃತ್ವದ ತಂಡ ಮಹಾಕೂಟದಲ್ಲಿರುವ ಐತಿಹಾಸಿಕ ಪುಷ್ಕರಣಿಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸೆಟ್‌ವೊಂದನ್ನು ಹಾಕಿತ್ತು. ಎಂದೂ ಬತ್ತದೇ ಸದಾ ನೀರಿನ ಸೆಲೆಯಿಂದಿದ್ದ ಪುಷ್ಕರಣಿಯಲ್ಲಿ ಸೆಟ್ ಹಾಕುವ ಮೂಲಕ ಅಂತರ್ಜಲಕ್ಕೆ ಧಕ್ಕೆ ಮಾಡಲಾಗಿದೆ ಎನ್ನುವ ಆರೋಪದೊಂದಿಗೆ ನಿನ್ನೆಯಿಂದ ಬಾದಾಮಿಯಲ್ಲಿ ಹೋರಾಟಗಾರರು ಚಿತ್ರೀಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಇಂದು ಪ್ರತಿಭಟನೆಗೆ ಮುಂದಾದ ಪ್ರತಿಭಟನಾಕಾರರನ್ನು ಹಾಗೂ ದೇವಾಲಯದ ಟ್ರಸ್ಟಿಗಳು ಮತ್ತು ನಿರ್ದೇಶಕ ಪವನ್ ಒಡೆಯರ್​​ ಸೇರಿದಂತೆ ಚಿತ್ರತಂಡವನ್ನು ಕರೆಯಿಸಿ ಸಿಪಿಐ ಕೆ.ಎಸ್.ಹಟ್ಟಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಇದರಲ್ಲಿ ಮಾತುಕತೆ ಸಫಲವಾದ ಪರಿಣಾಮ ಪುಷ್ಕರಣಿಗೆ ಧಕ್ಕೆಯಾಗದಂತೆ  ಹೊಣೆ ಹೊತ್ತುಕೊಂಡು ಚಿತ್ರೀಕರಣ ಮಾಡಲು ಚಿತ್ರತಂಡ ಒಪ್ಪಿಗೆ ಸೂಚಿಸಿದ ಬಳಿಕ ಹೋರಾಟಗಾರರು ಹೋರಾಟದಿಂದ ಹಿಂದೆ ಸರಿದರು. ಇದೀಗ ನಟ ಸಾರ್ವಭೌಮ ಚಿತ್ರೀಕರಣ ನಿರಾಂತಕವಾಗಿ ನಡೆಯುವಂತಾಗಿದೆ.

ಇನ್ನು ಸಂಧಾನ ಸಭೆಯ ಮಾತುಕತೆಯಂತೆ ಇನ್ನು 5 ಗಂಟೆಗಳಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಲು ನಿರ್ಧರಿಸಲಾಯಿತು. ಇದರಿಂದ ನಿನ್ನೆಯೇ ಪುನೀತ್ ರಾಜ್‌ಕುಮಾರ ಬದಾಮಿಗೆ ಆಗಮಿಸಿದ್ದು, ಇಂದು ಪ್ರೀ ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಂದುವರೆಯಲಿದೆ. ಸಭೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ಪವನ್ ಒಡೆಯರ್​​,  ನಮ್ಮ ಪ್ರೊಡಕ್ಷನ್‌ನಿಂದ ಸಣ್ಣಪುಟ್ಟ ತಪ್ಪುಗಳಾಗಿವೆ. ಇನ್ನು 5 ಗಂಟೆಗಳ ಕಾಲ ಚಿತ್ರೀಕರಣ ನಡೆಯಲಿದೆ. ಕೆಲವು ನಮ್ಮಿಂದ ಸಣ್ಣ ತಪ್ಪುಗಳಾಗಿವೆ. ಅದಕ್ಕಾಗಿ ಕ್ಷಮೆ ಕೇಳಿದ್ದೇನೆ. ಇನ್ನು ಸಭೆಯಲ್ಲಿ ಕೈಗೊಂಡ ಷರತ್ತುಗಳಂತೆ ಚಿತ್ರೀಕರಣ ನಡೆಸಲು ನಾವು ಸಿದ್ದರಿದ್ದು, ಐತಿಹಾಸಿಕ ಪುಷ್ಕರಣಿಗೆ ನಾವು ಯಾವುದೇ ಧಕ್ಕೆ ತಾರದೇ ಚಿತ್ರೀಕರಣ ಮಾಡುತ್ತೇವೆ. ಮಹಾಕೂಟ ಕ್ಷೇತ್ರದ ಬಗ್ಗೆ ಕಾಳಜಿ ಇದ್ದು, ಎಲ್ಲರೂ ಸಹಕರಿಸಬೇಕೆಂದು ಕೇಳಿಕೊಂಡರು. ಇನ್ನೂ ಭಕ್ತರು ಇಂದು ಪುಷ್ಕರಣೆಯಲ್ಲಿ ಸೆಟ್ ನಡುವೆಯೂ ಪುಣ್ಯ ಸ್ನಾನ ಮಾಡಿದರು.

ಒಟ್ಟಿನಲ್ಲಿ ರಾಜ್ಯದಲ್ಲಿ ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಪುನೀತ್ ಅಭಿನಯದ ನಟ ಸಾರ್ವಭೌಮ ಚಿತ್ರದ ಚಿತ್ರೀಕರಣಕ್ಕಿದ್ದ ಅಡ್ಡಿ ಇದೀಗ ಸಂಧಾನ ಸಭೆಯ ಸಫಲತೆಯಿಂದ ಕೊನೆಗೊಂಡಂತಾಗಿದೆ. ಹೀಗಾಗಿ ಇನ್ನು  5 ಗಂಟೆಗಳ ಕಾಲ ಪುಷ್ಕರಣೆಯಲ್ಲಿ ಚಿತ್ರೀಕರಣ ಮುಂದುವರೆಯಲಿದೆ. ಚಿತ್ರೀಕರಣಕ್ಕೆ ಎದುರಾಗಿದ್ದ ವಿಘ್ನ ಸದ್ಯ ನಿವಾರಣೆಯಾಗುವ ಮೂಲಕ ಚಿತ್ರ ತಂಡ ನಿಟ್ಟುಸಿರು ಬಿಡುವಂತಾಗಿದೆ.
First published:July 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ