ವಿಗ್ರಹಕ್ಕಾಗಿ ಮುಂದುವರಿದ ಫೈಟ್; ಮತ್ತೊಂದು ಬಣದಿಂದ ಶಿಲಾಮೂರ್ತಿ ಪ್ರತಿಷ್ಠಾಪಿಸಲು ಸಿದ್ದತೆ

ದುರ್ಗಮ್ಮ ಹಾಗೂ ಮರಿಗಮ್ಮ ದೇವತೆಗಳ ಪ್ರತಿಷ್ಠಾಪನೆ ವಿಚಾರ ಈಗ ಗ್ರಾಮದಲ್ಲಿ ಸಾಕಷ್ಟು ಪ್ರತಿಷ್ಠೆಯಾಗಿದೆ. ಗ್ರಾಮಸ್ಥರು ಹಾಗೂ ದೇವಸ್ಥಾನ ಟ್ರಸ್ಟ್ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ

ದುರ್ಗಮ್ಮ ಹಾಗೂ ಶ್ರೀಮರಿಗಮ್ಮ ದೇವತೆ

ದುರ್ಗಮ್ಮ ಹಾಗೂ ಶ್ರೀಮರಿಗಮ್ಮ ದೇವತೆ

  • Share this:
ಬಳ್ಳಾರಿ(ಜ.21) : ಆ ದೇವತೆಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಆ ಗ್ರಾಮದ ಆರಾಧ್ಯ ದೇವತೆಗಳು ಹೌದು. ಆದರೆ, ಈಗ ಈ ದೇವಸ್ಥಾನ ಜೀರ್ಣೋದ್ಧರಗೊಂಡು ಹೊಸ ದೇವಸ್ಥಾನ ನಿರ್ಮಾಣಗೊಂಡಿದೆ. ಈ ನೂತನ ದೇವಸ್ಥಾನದಲ್ಲಿ ವಿಗ್ರಹ ಪ್ರತಿಷ್ಠಾಪನೆ ವಿಚಾರವೇ ಈಗ ಎರಡು ಬಣದ ನಡುವೆ ಪ್ರತಿಷ್ಠೆಗೆ ಹೋಗಿದೆ. 

ಬಳ್ಳಾರಿ ತಾಲೂಕಿನ ಬೆಣಕಲ್ಲು ಗ್ರಾಮದ ಆರಾಧ್ಯ ದೇವತೆ ದುರ್ಗಮ್ಮ ಹಾಗೂ ಮರಿಗಮ್ಮ ದೇವತೆಗಳ ಪ್ರತಿಷ್ಠಾಪನೆ ವಿಚಾರ ಈಗ ಗ್ರಾಮದಲ್ಲಿ ಸಾಕಷ್ಟು ಪ್ರತಿಷ್ಠೆಯಾಗಿದೆ. ಗ್ರಾಮಸ್ಥರು ಹಾಗೂ ದೇವಸ್ಥಾನ ಟ್ರಸ್ಟ್ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಗ್ರಾಮಗಳಲ್ಲಿರುವ ಎರಡು ಬಣಗಳ ಪ್ರತಿಷ್ಠೆ ವಿಚಾರದಿಂದಾಗಿ ಕಳೆದ 12 ವರ್ಷಗಳಿಂದ ಈ ಗ್ರಾಮದಲ್ಲಿ ದುರ್ಗಮ್ಮ ಹಾಗೂ ಮರಿಗಮ್ಮ ಜಾತ್ರೆಗಳು ನಡೆದಿಲ್ಲ. ಸುಮಾರು ನೂರಾರು ವರ್ಷಗಳ ಇತಿಹಾಸ ಇರುವ ಈ ದೇವತೆಗಳ ದೇವಸ್ಥಾನ ಈಗ ಜೀರ್ಣೋದ್ಧಾರಗೊಂಡಿದೆ. ನೂತನವಾಗಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.ಆದರೆ, ಈ ದೇವಸ್ಥಾನದಲ್ಲಿ ಶಿಲಾಮೂರ್ತಿಗಳನ್ನ ಪ್ರತಿಷ್ಠಾಪನೆ ನಡೆಸಲು ಟ್ರಸ್ಟ್ ನವರು ಮುಂದಾಗಿದ್ದಾರೆ.

ಇದೇ ತಿಂಗಳು 28 ರಂದು ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಅಂತಾ ಆಮಂತ್ರಣ ಪತ್ರಗಳನ್ನ ಮುದ್ರಿಸಲಾಗಿದೆ. ಇದೇ ಗ್ರಾಮದ ಮತ್ತೊಂದು ಗುಂಪು ಹಳೆಯ ವಿಗ್ರಹಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಸಂಡೂರು ಮಹಾರಾಜರು ನೀಡಿದ ರಕ್ತ ಚಂದನದಲ್ಲಿ ದುರ್ಗಮ್ಮ ದೇವಿ, ಮರಿಗಮ್ಮ ದೇವಿಯ ವಿಗ್ರಹಗಳನ್ನ ಮಾಡಲಾಗಿದೆ. ಜಾತ್ರೆಯ ಸಂದರ್ಭದಲ್ಲಿ ಈ ಹಳೆಯ ವಿಗ್ರಹಗಳನ್ನ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುತ್ತಿದೆ. ಈ ಮೂಲ ವಿಗ್ರಹವನ್ನ ಬಿಟ್ಟು ಗ್ರಾಮದ ಕೆಲವರು ಶಿಲಾಮೂರ್ತಿಗಳನ್ನ ಪ್ರತಿಷ್ಠಾಪನೆ ನಡೆಸಲು ಮುಂದಾಗಿದ್ದಾರೆ. ಆದ್ರೆ ಇದಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಡಬಾರದು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ವಿಗ್ರಹ ವಿಚಾರದಲ್ಲಿ ಗ್ರಾಮದ ಎರಡು ಗುಂಪುಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದ್ದರಿಂದ ಕಳೆದ 12 ವರ್ಷಗಳಿಂದಲೂ ಈ ಗ್ರಾಮದಲ್ಲಿ ಜಾತ್ರೆ ನಡೆಸದಿಲ್ಲ. ಕಳೆದ 12 ವರ್ಷಗಳಿಂದಲೂ ಎರಡು ಗುಂಪುಗಳಿಂದಲೂ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಮನವಿ ಸಲ್ಲಿಸುತ್ತಲೇ ಇದ್ದಾರೆ. ಜೊತೆಗೆ ಪೊಲೀಸರು ಗ್ರಾಮದಲ್ಲಿ ಶಾಂತಿ ಸಭೆಗಳನ್ನ ನಡೆಸಿದ್ದಾರೆ. ಆದ್ರೆ ಇದುವರೆಗೆ ಕೂಡ ಗ್ರಾಮದಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಈ ನಡುವೆ ಟ್ರಸ್ಟ್ ನವರು ಇದೇ ತಿಂಗಳು 28 ರಂದು ಶಿಲಾಮೂರ್ತಿಗಳ ಪ್ರತಿಷ್ಠಾಪನೆಗೆ ಈಗಾಗಲೇ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಅಲ್ಲದೇ ಈ ಸಂಬಂಧ ಫ್ಲೆಕ್ಸ್ ಗಳನ್ನ ಕೂಡ ಗ್ರಾಮದಲ್ಲಿ ಹಾಕಿದ್ದಾರೆ. ಹೀಗಾಗಿ ಇದಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಡಬಾರದು ಎಂದು ಬೆಣಕಲ್ಲು ಗ್ರಾಮದ ನೂರಾರು ಜನರು ಇವತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು. ನಗರದ ಕಾಗೆ ಪಾರ್ಕ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇನ್ನೂ ಓದಿ : ನಾಯಿ ಬೊಗಳದಂತೆ ಮಾಡಿ ಕುರಿಗಳನ್ನು ಕಳ್ಳತನ ಮಾಡಿದ ಖದೀಮರು

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಪರ ಜಿಲ್ಲಾಧಿಕಾರಿ ಮಂಜುನಾಥ್ ಬೆಣಕಲ್ಲು ಗ್ರಾಮದಲ್ಲಿ ದುರ್ಗಮ್ಮ ಹಾಗೂ ಮರಿಗಮ್ಮ ಮೂಲ ವಿಗ್ರಹಗಳನ್ನ ಪ್ರತಿಷ್ಠಾಪನೆ ಮಾಡ್ಬೇಕು, ಶಿಲಾಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಎಸಿ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಕಳೆದ 12 ವರ್ಷಗಳಿಂದ ಈ ಸಮಸ್ಯೆ ಬಗೆಹರಿದಿಲ್ಲ. ವಿಗ್ರಹ ಪ್ರತಿಷ್ಠಾಪನೆ ವಿಚಾರ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ಗ್ರಾಮದಲ್ಲಿ ಗ್ರಾಮಸಭೆ ನಡೆಸಿ ವಿಗ್ರಹ ವಿಚಾರ ಎದ್ದಿರುವ ಗೊಂದಲವನ್ನ ಬಗೆಹರಿಸಬೇಕಾಗಿದೆ. ಆ ಮೂಲಕ ಗ್ರಾಮದಲ್ಲಿ ಶಾಂತಿ ನೆಲೆಸಲು ಅನುಕೂಲ ಮಾಡಿಕೊಡಬೇಕಾಗಿದೆ.
First published: