ರಾಜ್ಯಸಭಾ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಪೈಪೋಟಿ; ಕೆಸಿವಿಗೆ ಕರೆ ಮಾಡಿ ಒತ್ತಡ ಹೇರಿದ ಮುದ್ದಹನುಮೇಗೌಡ

ಹೈಕಮಾಂಡ್ ಮಾತಿಗೆ ತಲೆಬಾಗಿ ಸ್ಥಾನ‌ ಬಿಟ್ಟುಕೊಟ್ಟಿದ್ದೇನೆ. ಒಂದೊಮ್ಮೆ ತುಮಕೂರಿನಲ್ಲಿ ನಾನೇ ಸ್ಪರ್ಧೆ ಮಾಡಿದ್ದಿದ್ದರೆ ಯಾವ ಗೊಂದಲವೂ ನಿರ್ಮಾಣವಾಗದೆ ಕಾಂಗ್ರೆಸ್ ಪಕ್ಷವೇ ಗೆದ್ದಿರುತ್ತಿತ್ತು ಎಂದು ಕೂಡ ತಿಳಿಸಿದ್ದಾರೆ ಎನ್ನಲಾಗಿದೆ.

ಮಾಜಿ ಸಂಸದ ಮುದ್ದಹನುಮೇಗೌಡ

ಮಾಜಿ ಸಂಸದ ಮುದ್ದಹನುಮೇಗೌಡ

  • Share this:
ನವದೆಹಲಿ: ರಾಜ್ಯದಿಂದ ನಾಲ್ಕು ಸ್ಥಾನಗಳಿಗೆ ರಾಜ್ಯಸಭಾ  ಚುನಾವಣೆ ನಡೆಸಲು ದಿನಾಂಕ ನಿಗದಿ ಆಗುತ್ತಿದ್ದಂತೆ  ಟಿಕೆಟ್​ಗಾಗಿ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಪೈಪೋಟಿ ಶುರುವಾಗಿದೆ.

ಟಿಕೆಟ್​ಗಾಗಿ ಪ್ರಯತ್ನಿಸುವವರ ಪೈಕಿ ಹಾಲಿ ರಾಜ್ಯಸಭಾ ಸದಸ್ಯರಾದ ಬಿ.ಕೆ.‌‌ ಹರಿಪ್ರಸಾದ್, ಪ್ರೊ. ರಾಜೀವ್ ಗೌಡ ಅವರ ಜೊತೆಗೆ ರಾಜ್ಯ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮುತ್ಸದಿ ಮಲ್ಲಿಕಾರ್ಜುನ ಖರ್ಗೆ ಮುಂಚೂಣಿಯಲ್ಲಿದ್ದಾರೆ. ಈಗ ಈ ಪೈಕಿ ತುಮಕೂರಿನ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಕೂಡ ಸೇರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ  ಮುದ್ದಹನುಮೇಗೌಡರು ತಮ್ಮ ತುಮಕೂರಿನ ಸಂಸತ್ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಇಡೀ‌ ದೇಶದಲ್ಲಿ ಹಾಲಿ ಸದಸ್ಯನಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ತಪ್ಪಿಸಿದ್ದು ಎಸ್.ಪಿ. ಮುದ್ದಹನುಮೇಗೌಡರಿಗೆ ಮಾತ್ರ. ಆಗ ಸಹಜವಾಗಿ ಮುದ್ದಹನುಮೇಗೌಡ ಮುನಿದಿದ್ದರು ಮತ್ತು ಹೈಕಮಾಂಡ್ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ‌ ನೀಡಲಾಗುವುದು ಎಂಬ ಭರವಸೆ ನೀಡಿತ್ತು.‌ ರಾಜ್ಯಸಭೆಗೆ ಕಳುಹಿಸಿಕೊಡುವ ವಾಗ್ದಾನ ನೀಡಿತ್ತು ಎಂದು ಹೇಳಲಾಗಿದೆ.

ಈ‌ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ದೂರವಾಣಿ ಕರೆ ಮಾಡಿದ ಮುದ್ದಹನುಮೇಗೌಡ, ಸದ್ಯ ಕೊರೋನಾ ಪರಿಸ್ಥಿತಿಯ ಕಾರಣದಿಂದ ದೆಹಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದುದರಿಂದ ನೀವೇ ಮಧ್ಯಸ್ಥಿಕೆ ವಹಿಸಬೇಕು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಬಳಿ ನನ್ನ ವಿಷಯ ಚರ್ಚಿಸಬೇಕು. ಕಳೆದ ಲೋಕಸಭಾ ಚುನಾವಣೆ ವೇಳೆ ಕ್ಷೇತ್ರ ಬಿಟ್ಟುಕೊಡುವಾಗ ನನಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಿ ಎಂದು ಒತ್ತಡ ಹೇರಿರುವುದಾಗಿ ತಿಳಿದುಬಂದಿದೆ.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆ ಮಾತನಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಕೇಳಿರುವ ಮುದ್ದಹನುಮೇಗೌಡರು, ಹೈಕಮಾಂಡ್ ಮಾತಿಗೆ ತಲೆಬಾಗಿ ಸ್ಥಾನ‌ ಬಿಟ್ಟುಕೊಟ್ಟಿದ್ದೇನೆ. ಒಂದೊಮ್ಮೆ ತುಮಕೂರಿನಲ್ಲಿ ನಾನೇ ಸ್ಪರ್ಧೆ ಮಾಡಿದ್ದಿದ್ದರೆ ಯಾವ ಗೊಂದಲವೂ ನಿರ್ಮಾಣವಾಗದೆ ಕಾಂಗ್ರೆಸ್ ಪಕ್ಷವೇ ಗೆದ್ದಿರುತ್ತಿತ್ತು ಎಂದು ಕೂಡ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಹೆಚ್‌.ಡಿ. ರೇವಣ್ಣ ಮತ್ತು ಕಾಂಗ್ರೆಸ್ ಎಂಎಲ್‌ಸಿ ಗೋಪಾಲಸ್ವಾಮಿ ನಡುವೆ ಟಾಕ್‌ವಾರ್‌!

ನನ್ನನ್ನು ರಾಜ್ಯಸಭೆಗೆ ಕಳುಹಿಸುವ ಭರವಸೆ ನೀಡಿದ್ದಿರಿ.‌ ಈಗ ಆ ಕಾಲ ಬಂದಿದೆ, ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಬೇಕು.‌ ಅದಕ್ಕಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾದ ಮತ್ತು ಅಂದು ನನಗೆ ಹೈಕಮಾಂಡ್ ಪರವಾಗಿ ಭರವಸೆ ನೀಡಿದ್ದ ನೀವೇ ಮುತುವರ್ಜಿ ವಹಿಸಬೇಕೆಂದು ಕೆ‌.ಸಿ. ವೇಣುಗೋಪಾಲ್ ಅವರಿಗೆ ಮುದ್ದಹನುಮೇಗೌಡ ಒತ್ತಾಯ ಹೇರಿದ್ದಾರೆ ಎಂದು ಗೊತ್ತಾಗಿದೆ.
First published: