'ನನ್ನನ್ನ ಅವರು ಕೇಳಲ್ಲ, ನಾನು ಹೇಳಲ್ಲ' – ಜಾರಕಿಹೊಳಿ ಮನೆಯಲ್ಲಿ ರಹಸ್ಯ ಸಭೆ; ಎನ್ ಮಹೇಶ್​ಗೆ ಮಂತ್ರಿಪಟ್ಟ?

ನನಗೆ ಯಾವ ಖಾತೆ ಬೇಕು ಅಂತ ಕೇಳಿದರೆ ಬೆಂಗಳೂರು ನಗರ ಉಸ್ತುವಾರಿ ಕೊಡಿ ಎಂದು ಕೇಳುತ್ತೇನೆ. ಅವರು ನನ್ನನ್ನ ಕೇಳುವುದಿಲ್ಲ, ನಾನು ಹೇಳುವುದಿಲ್ಲ ಎಂದು ಉಸ್ತುವಾರಿ ಮೇಲೆ ಕಣ್ಣಿಟ್ಟಿರುವ ನಾಯಕರೊಬ್ಬರು ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

  • Share this:
ಬೆಂಗಳೂರು, ಆ. 06: ಹಾಗೂ ಹೀಗೂ ಕ್ಯಾಬಿನೆಟ್ ರಚನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಇದೀಗ ಖಾತೆ ಹಂಚಿಕೆ ಟೆನ್ಷನ್​ನಲ್ಲಿದ್ಧಾರೆ. ಸಚಿವ ಸ್ಥಾನ ಸಿಕ್ಕರೆ ಸಾಕು ಎಂತಿದ್ದ ನೂತನ ಸಚಿವರು ಇದೀಗ ತಮಗೆ ಬೇಕಾದ ಖಾತೆ ಬೇಕೆಂದು ಪಟ್ಟು ಹಿಡಿಯಲು ಪ್ರಾರಂಭಿಸಿದ್ದಾರೆ. ಖಾತೆ ಹಂಚಿಕೆ ತಲೆ ನೋವು ಒಂದೆಡೆಯಾದರೆ ಸಚಿವ ಸ್ಥಾನದಿಂದ ವಂಚಿತರಾದವರು ರಹಸ್ಯವಾಗಿ ಸಭೆ ನಡೆಸುತ್ತಿರುವುದು ತಿಳಿದುಬಂದಿದೆ. ಇದು ಬೊಮ್ಮಾಯಿ ಸರ್ಕಾರದ ಅಲುಗಾಟಕ್ಕೆ ಎಡೆ ಮಾಡಿಕೊಡುತ್ತದಾ ಎಂಬುದು ಮುಂದಿನ ದಿನಗಳಲ್ಲಿ ನಿಚ್ಚಳವಾಗುತ್ತದೆ. ಸರ್ಕಾರದ ಕೆಲ ಪ್ರಮುಖ ಖಾತೆಗಳ ಮೇಲೆ ಹಲವರು ಕಣ್ಣಿಟ್ಟಿದ್ಧಾರೆ. ಆದರೆ, ಸಿಎಂ ಬಿಟ್ಟರೆ ಸರ್ಕಾರದಲ್ಲಿ ಅತ್ಯಂತ ಪ್ರಭಾವಶಾಲಿ ಖಾತೆ ಎನಿಸಿದ ಗೃಹ ಖಾತೆಯ ಮೇಲೆ ಬಿ ಸಿ ಪಾಟೀಲ್ ಕಣ್ಣಿಟ್ಟಿದ್ಧಾರೆ. ಆದರೆ, ಹಿಂದೆ ಗೃಹ ಸಚಿವರಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಖಾತೆಯನ್ನು ಅನುಭವಿಗಳಾದ ಕೆ ಎಸ್ ಈಶ್ವರಪ್ಪ ಅವರಿಗೆ ನೀಡಲು ಮನಸು ಮಾಡಿದರೆ. ಆದರೆ, ಹಿರಿಯರಾದ ಈಶ್ವರಪ್ಪ ಅವರು ಮಾತ್ರ ಈ ಖಾತೆ ನನಗೆ ಬೇಡ, ಜಲಸಂಪನ್ಮೂಲ ಖಾತೆ ಕೊಡಿ ಎಂದು ಕೇಳುತ್ತಿದ್ಧಾರೆ. ತಾನು ಜಲ ಸಂಪನ್ಮೂಲ ಖಾತೆ ನಿಭಾಯಿಸಬಲ್ಲೆ. ಅದನ್ನ ಕೊಡಿ ಎಂದು ಕೌರವ ಬಿಸಿ ಪಾಟೀಲ್ ದುಂಬಾಲು ಬಿದ್ದಿದ್ದಾರೆ. ಅಂತಿಮವಾಗಿ ಈ ಮಹತ್ವದ ಖಾತೆಯನ್ನ ಬೊಮ್ಮಾಯಿ ಅವರೇ ಇಟ್ಟುಕೊಳ್ಳುತ್ತಾರಾ ಎಂದು ಕಾದುನೋಡಬೇಕು.

ಇನ್ನೊಂದೆಡೆ, ಎಸ್ ಟಿ ಸೋಮಶೇಖರ್ ಅವರು ಬೆಂಗಳೂರು ನಗರಾಭಿವೃದ್ಧಿ ಹಾಗೂ ಬೆಂಗಳೂರು ಉಸ್ತುವಾರಿ ಖಾತೆ ಮೇಲೆ ಕಣ್ಣಿಟ್ಟಿದ್ಧಾರೆ. ಮುಂಬರುವ ಕಾರ್ಪೊರೇಶನ್ ಚುನಾವಣೆ ದೃಷ್ಟಿಯಿಂದ ನನಗೆ ಬೆಂಗಳೂರು ಉಸ್ತುವಾರಿ ಕೊಡಬೇಕೆಂದು ಅವರು ನನ್ನನ್ನ ಕೇಳಿದರೆ ಹೇಳುತ್ತೇನೆ. ಆದರೆ ಅವರು ನನ್ನನ್ನ ಕೇಳಲ್ಲ, ನಾನು ಹೇಳಲ್ಲ ಎಂದು ಮಾಧ್ಯಮಗಳೆದುರು ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ಇನ್ನು, ನಾಗೇಶ್ ಅವರಿಗೆ ಶಿಕ್ಷಣ ಖಾತೆ ಕೊಡಿ ಎಂದು ಆರೆಸ್ಸೆಸ್ ಮುಖಂಡರು ಸಿಎಂ ಹಾಗೂ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ಧಾರೆ ಎಂದು ಮೂಲಗಳು ಹೇಳುತ್ತಿವೆ. ನಾಗೇಶ್ ಅವರದ್ದು ಸೌಮ್ಯ ಸ್ವಭಾವ ಆದ್ದರಿಂದ ಅವರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಕೊಡಿ ಎಂಬುದು ಅವರ ವಾದವಂತೆ. ಹಾಗೆಯೇ, ಮಂಡ್ಯ ಜಿಲ್ಲೆಯ ಉಸ್ತುವಾರಿ ಕೊಡಿ ಎಂದು ನಾರಾಯಣ ಗೌಡ ಹಠ ಹಿಡಿದಿದ್ದಾರೆ. ತನಗೆ ಯಾವ ಖಾತೆಯನ್ನಾದರೂ ಕೊಡಿ, ಆದರೆ ಮಂಡ್ಯ ಉಸ್ತುವಾರ ಜವಾಬ್ದಾರಿಯಂತೂ ಕೊಡಿ ಎಂದು ಕೇಳಿದ್ದೇನೆ ಎಂದು ಮಾಧ್ಯಮಗಳಿಗೆ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಜೈಲಿನಿಂದ ಎಸ್ಕೇಪ್ ಆದ ಖೈದಿಯ ಸಾವಿಗೆ ಟ್ವಿಸ್ಟ್ - ಜೈಲರ್ ಕಿರುಕುಳ ಸಾವಿಗೆ ಕಾರಣ ಆರೋಪ

ರಹಸ್ಯ ಸಭೆ:

ಇದೇ ವೇಳೆ, ಸಚಿವ ಸ್ಥಾನ ಸಿಗದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಅವರಲ್ಲಿ ಕೆಲವರು ಈಗಾಗಲೇ ಸಭೆ ಸೇರಲು ಆರಂಭಿಸಿದ್ದಾರೆ. ಹಿಂದಿನ ಮೈತ್ರಿ ಸರ್ಕಾರದ ಪತನದ ಸೂತ್ರಧಾರ ರಮೇಶ್ ಜಾರಕಿಹೊಳಿ ಅವರ ಮನೆಯಲ್ಲಿ ಇಂದು ರಹಸ್ಯ ಸಭೆ ನಡೆದಿರುವುದು ತಿಳಿದುಬಂದಿದೆ. ಸದಾಶಿವನಗರದಲ್ಲಿರುವ ಅವರ ಮನೆಯಲ್ಲಿ ಮಹೇಶ್ ಕುಮಟಳ್ಳಿ, ಅರವಿಂದ್ ಬೆಲ್ಲದ, ಶ್ರೀಮಂತ ಪಾಟೀಲ ಮೊದಲಾದವರು ಸೇರಿದ್ದು ಗೊತ್ತಾಗಿದೆ. ಸರ್ಕಾರದಲ್ಲಿ ಖಾಲಿ ಉಳಿದಿರುವ ನಾಲ್ಕು ಖಾತೆಗಳನ್ನ ದೃಷ್ಟಿಯಲ್ಲಿಟ್ಟುಕೊಂಡು ಸಿಎಂ ಮೇಲೆ ಒತ್ತಡ ಹೇರಲು ಈ ಸಭೆ ನಡೆದಿರಬಹುದು ಎಂಬ ಮಾತು ಕೇಳಿಬರುತ್ತಿದೆ.

ಎನ್ ಮಹೇಶ್​ಗೆ ಸಚಿವ ಸ್ಥಾನ?

ನಿನ್ನೆ ಬಿಜೆಪಿಗೆ ಸೇರ್ಪಡೆಯಾದ ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬಂತಹ ಸುದ್ದಿ ಕೇಳಿಬರುತ್ತಿದೆ. ಮೈಸೂರು ಮತ್ತು ಚಾಮರಾಜನಗರ ಭಾಗದಲ್ಲಿ ಪಕ್ಷದ ಬಲವರ್ಧನೆ ದೃಷ್ಟಿಯಿಂದ ದೂರಾಲೋಚನೆ ಮಾಡಿ ಬಿಎಸ್​ವೈ ಅವರೇ ಎನ್ ಮಹೇಶ್ ಅವರನ್ನ ಪಕ್ಷಕ್ಕೆ ಕರೆತಂದಿದ್ದಾರೆ. ಅವರಿಗೆ ಮುಂದೆ ಸಚಿವ ಸ್ಥಾನ ಕೊಟ್ಟರೆ ಬಲಗೈ ದಲಿತ ಸಮುದಾಯದ ಜನರನ್ನ ಪಕ್ಷಕ್ಕೆ ಸೆಳೆಯಬಹುದು ಎಂಬ ಲೆಕ್ಕಾಚಾರ ನಡೆದಿದೆ. ಕಾಂಗ್ರೆಸ್​ನಲ್ಲಿ ಹೆಚ್ಚಿರುವ ಬಲಗೈ ಸಮುದಾಯದ ನಾಯಕರು ಬಿಜೆಪಿಯಲ್ಲಿ ಕಡಿಮೆಯೇ ಇದ್ದಾರೆ. ಬಲಗೈ ದಲಿತ ಸಮುದಾಯದ ವಿ ಶ್ರೀನಿವಾಸ ಪ್ರಸಾದ್ ಅವರು ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ, ಎನ್ ಮಹೇಶ್ ಅವರನ್ನ ಬೆಳೆಸಿದರೆ ಬಿಜೆಪಿಗೆ ಅನುಕೂಲವಾಗುತ್ತದೆ. ಮುಂದೆ ಅವರನ್ನ ಸಚಿವರನ್ನಾಗಿ ಮಾಡುವುದಷ್ಟೇ ಅಲ್ಲ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರನ್ನ ಎಂಪಿ ಅಭ್ಯರ್ಥಿಯಾಗಿ ಮಾಡುವ ಆಲೋಚನೆಯೂ ಬಿಜೆಪಿ ನಾಯಕರಲ್ಲಿ ಇದೆ ಎನ್ನಲಾಗುತ್ತದೆ. ಎನ್ ಮಹೇಶ್ ಅವರಿಂದ ಮುಂದೆ ಬಿ ವೈ ವಿಜಯೇಂದ್ರ ಅವರ ಬೆಳವಣಿಗೆಗೂ ಅನುಕೂಲ ಆಗುತ್ತದೆ ಎಂಬ ಲೆಕ್ಕಾಚಾರವೂ ಯಡಿಯೂರಪ್ಪ ಅವರಲ್ಲಿ ಇದೆ ಎಂಬ ಮಾತಿದೆ.
Published by:Vijayasarthy SN
First published: