ಐದನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ; ಗದಗ ಬಂದ್ ಯಶಸ್ವಿ

ಬಂಡಾಯದ ನಾಡಲ್ಲಿ ಎಲ್ಲೆಲ್ಲೂ ಹಸಿರೋ ಹಸಿರು....! ನೀರಿನ ವಿಷಯದಲ್ಲಿ ಸರ್ಕಾರಗಳ ಧೋರಣೆ ಖಂಡಿಸಿ ಇಂದು ಗದಗ ಜಿಲ್ಲೆ ನರಗುಂದ ಬಂದ್....! ರೈತರ ಹೋರಾಟಕ್ಕೆ ಸ್ಥಬ್ದವಾದ ನರಗುಂದ ಪಟ್ಟಣ.....!

news18
Updated:July 16, 2019, 6:41 PM IST
ಐದನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ; ಗದಗ ಬಂದ್ ಯಶಸ್ವಿ
ಗದಗ್​ನಲ್ಲಿ ಮಹದಾಯಿ ಹೋರಾಟಗಾರರಿಂದ ಮೆರವಣಿಗೆ
  • News18
  • Last Updated: July 16, 2019, 6:41 PM IST
  • Share this:
ಗದಗ(ಜುಲೈ 16): ಕುಡಿಯುವ ನೀರಿಗಾಗಿ ಪ್ರಾರಂಭವಾದ ಆ ಹೋರಾಟ ಐದನೇ ವರ್ಷಕ್ಕೆ ಕಾಲಿಟ್ಟಿದೆ. ಹೋರಾಟ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇವತ್ತು ಗದಗ್ ಬಂದ್ ಆಚರಿಸಲಾಯಿತು. ನ್ಯಾಯಾಧೀಕರಣ 13.50 ಟಿಎಂಸಿ ನೀರು ಹಂಚಿಕೆ ಮಾಡಿ ತೀರ್ಪು ನೀಡಿ ವರ್ಷಗಳೇ ಉರುಳಿದರೂ ಗಂಭೀರವಾಗಿ ಪರಿಗಣಿಸದೆ ಕೋಮಾ ಸ್ಥಿತಿಯಲ್ಲಿರುವ ರಾಜ್ಯ ಸರ್ಕಾರ ಹಾಗೂ ಕೇಂದ್ರದ ವಿರುದ್ಧ ಅಲ್ಲಿನ ಹೋರಾಟಗಾರರು ಇಂದು ಆಕ್ರೋಶ ಹೊರಹಾಕಿದ್ರು.

ಗದಗ ಜಿಲ್ಲೆಯ ಬಂಡಾಯದ ನೆಲ ಅಂತ್ಲೇ‌ ಹೆಸರಾದ ನರಗುಂದ ಪಟ್ಟಣದಲ್ಲಿ ಮಹದಾಯಿ-ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರೈತಸೇನೆ ನೇತೃತ್ವದಲ್ಲಿ ಸತತ ನಾಲ್ಕು ವರ್ಷ ನಿರಂತರವಾಗಿ ಈ ಹೋರಾಟ ನಡೆದಿದೆ. ಆದ್ರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾತ್ರ ರೈತರ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ.

2018ರ ಆಗಸ್ಟ್ 14 ರಂದು ಮಹದಾಯಿಗಾಗಿ ರಚನೆಯಾಗಿರುವ ನ್ಯಾಯಾಧೀಕರಣ ರಾಜ್ಯಕ್ಕೆ 13.5 ಟಿಎಂಸಿ ನೀರು ಕೊಡುವಂತೆ ತೀರ್ಪು ನೀಡಿದೆ. ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಯೋಜನೆ ಕುರಿತು ರಾಜ್ಯ ಪತ್ರ ಹೊರಡಿಸಬೇಕು. ಆದ್ರೆ ಕೇಂದ್ರ ಸರ್ಕಾರ ಮಾತ್ರ ಇನ್ನೂ ಸ್ಪಂದಿಸುತ್ತಿಲ್ಲ. ಇದು ರೈತರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿದೆ.

ಇದನ್ನೂ ಓದಿ: ಆಟಕ್ಕೆ ಕೆಪಿಜೆಪಿ ಎಂಟ್ರಿ; ಆರ್. ಶಂಕರ್ ಯಾರಿಗೆ ಬೆಂಬಲ ಕೊಡಬೇಕೆಂದು ನಾವು ನಿರ್ಧರಿಸುತ್ತೇವೆ ಎಂದ ಪಕ್ಷದ ಅಧ್ಯಕ್ಷ

ತೀರ್ಪು ನೀಡಿ ವರ್ಷಗಳು ಕಳೆದ್ರೂ ಯೋಜನೆ ಕಾರ್ಯರೂಪಕ್ಕೆ ಬಾರದ ಹಿನ್ನೆಲೆ, ಇಂದು ರೈತರು ನರಗುಂದ ಪಟ್ಟಣ ಬಂದ್ ಆಚರಣೆ ಮಾಡಿದ್ರು. ಈ ವೇಳೆ ಡಿಸಿ ಹಾಗೂ ಎಸ್ಪಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಅವರು ರಾಜ್ಯಪಾಲರ ಭೇಟಿಗೆ ಅವಕಾಶ ನೀಡಬೇಕು, ಇಲ್ಲ ರಾಜಭವನ ಮುತ್ತಿಗೆ ಹಾಕೋದು ಶತಸಿದ್ಧ ಅನ್ನೋ ನಿರ್ಣಯಗಳನ್ನು ಕೈಗೊಂಡರು. ರೈತ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬಂದ್ ಯಶಸ್ವಿ:

ಮಹದಾಯಿ, ಕಳಸಾ ಬಂಡೂರಿ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವೈಫಲ್ಯಕ್ಕೆ ಇಂದು ನರಗುಂದ ಪಟ್ಟಣವೇ ಸ್ಥಬ್ಧವಾಗಿತ್ತು. ಅಂಗಡಿ ಮುಂಗಟ್ಟುಗಳು, ಬಸ್ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಗದಗ ಜಿಲ್ಲೆಗೆ ಬಂದಾಗ ಯೋಜನೆ ಜಾರಿ ಬಗ್ಗೆ ಭರವಸೆ ನೀಡಿದ್ರು. ಅದು ಇಂದಿಗೂ ಜಾರಿಯಾಗಿಲ್ಲ. ಇದೂ ಕೂಡಾ ರೈತರ ಆಕ್ರೋಶಕ್ಕೆ ಕಾರಣವಾಯಿತು.ಇದನ್ನೂ ಓದಿ: ಮಂಡ್ಯ ರೈತರ ಹೋರಾಟಕ್ಕೆ ಸಿಕ್ಕಿತು ಫಲ; ಇಂದಿನಿಂದ 10 ದಿನ ನಾಲೆಗಳಿಗೆ ನೀರು

ನರಗುಂದ ಪಟ್ಟಣದ ಬಾಬಾಸಾಹೇಬ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೃಹತ್ ಮೆರವಣಿಗೆ ನಡೆಸೋ ಮೂಲಕ ಬಂದ್ ಆರಂಭಿಸಲಾಯಿತು. ಮೆರವಣಿಗೆಯುದ್ದಕ್ಕೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ರೈತರು ಆಕ್ರೋಶ ವ್ಯಕ್ತಪಡಿಸಿದ್ರು. ನೂರಾರು ರೈತ ಮಹಿಳೆಯರು ಹಸಿರು ಸೀರೆಯುಟ್ಟು ಹೋರಾಟದಲ್ಲಿ ಭಾಗಿಯಾಗಿ ಗಮನ ಸೆಳೆದ್ರು. ತಾಲೂಕಿನ ಚಿಕ್ಕನರಗುಂದ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ರಸ್ತೆಗೆ ಮುಳ್ಳಿನ ಬೇಲಿಹಾಕಿ ರಸ್ತೆ ಮಧ್ಯೆ ಟೈರ್​ಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇಂದಿನ ಹೋರಾಟದಲ್ಲಿ ಗದಗ, ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಯ 11 ತಾಲೂಕಿನ‌ ಸಾವಿರಾರು ರೈತರು, ಮಹಿಳೆಯರು ಭಾಗವಹಿಸಿ ಜನನಾಯಕರಿಗೆ ಹಿಡಿಶಾಪ ಹಾಕಿದ್ರು.

ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಅಹಿತಕರ ಘಟನೆಗಳು ನಡೆಯದಂತೆ‌ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಎಸ್ಪಿ ಶ್ರೀನಾಥ್ ಜೋಶಿ, ಹೆಚ್ಚುವರಿ ಎಸ್ಪಿ ನ್ಯಾಮಗೌಡ, ಡಿವೈಎಸ್ಪಿ, ಸಿಪಿಐ, ಪಿಎಸ್ಐ ನರಗುಂದ ಪಟ್ಟಣದಲ್ಲೇ ಠಿಕಾಣಿ ಹೂಡಿದ್ರು.

ಒಟ್ಟಿನಲ್ಲಿ ರೈತರ ಆಕ್ರೋಶದ ಕಟ್ಟೆ ಒಡೆಯುವ ಮುನ್ನವೇ ಸರ್ಕಾರಗಳು ಎಚ್ಚೆತ್ತುಕೊಂಡು ನೀರು ಹರಿಸದಿದ್ರೆ ಮತ್ತೊಂದು ಬಂಡಾಯ ನಡೆಯೋದು ಗ್ಯಾರಂಟಿ ಎನ್ನೋದು ರೈತರ ಆಕ್ರೋಶದ ನುಡಿಗಳು.

(ವರದಿ: ಸಂತೋಷ ಕೊಣ್ಣೂರ)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:July 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ