news18-kannada Updated:January 15, 2021, 8:21 PM IST
ಖಾಸಗಿ ಶಾಲೆ ಹಾಗೂ ಪೋಷಕರ ನಡುವೆ ನಡೆದ ಸಭೆಯ ದೃಶ್ಯ.
ಬೆಂಗಳೂರು; ಹತ್ತು ತಿಂಗಳ ಬಳಿಕ ಶಾಲಾ-ಕಾಲೇಜುಗಳೇನೋ ಆರಂಭವಾಗಿವೆ. ಆದರೆ ಖಾಸಗಿ ಶಾಲೆಗಳ ಶುಲ್ಕದ ಗೊಂದಲ ಮಾತ್ರ ಮುಂದುವರೆದಿದೆ. ಈ ಕುರಿತು ಇಂದು ಶಿಕ್ಷಣ ಇಲಾಖೆ ಕರೆದ ಸಭೆಯಲ್ಲಿ ಪೋಷಕರು ಹಾಗೂ ಖಾಸಗಿ ಆಡಳಿತ ಮಂಡಳಿಗಳ ನಡುವೆ ವಾಗ್ವಾದವೇ ಜರುಗಿತು. ಸಭೆ ಮುಗಿಯುತ್ತಿದ್ದಂತೆ ಕೈ ಕೈ ಮಿಲಾಯಿಸುವಷ್ಟು ಜಗಳ ನಡೆದರೆ, ಆಯುಕ್ತರಿಗೆ ಪೋಷಕರೊಬ್ಬರು ಕೈ ಮುಗಿದು ಕಣ್ಣೀರು ಹಾಕುತ್ತಿದ್ದರು.
ಶಿಕ್ಷಣ ಇಲಾಖೆ ಆಯುಕ್ತರಿಗೆ ಕೈ ಮುಗಿದು ಬೇಡಿಕೊಳ್ಳುತ್ತಿರುವ ಪೋಷಕಿ... ಖಾಸಗಿ ಶಾಲೆಗಳ ಆಟಾಟೋಪಕ್ಕೆ ಬೇಸತ್ತು ಕಣ್ಣೀರು ಹಾಕುತ್ತಿರುವ ಪೋಷಕಿ... ಸಭೆ ಹೊರಗಡೆ ಪೋಷಕರು ಹಾಗೂ ಖಾಸಗಿ ಒಕ್ಕೂಟದ ಸದಸ್ಯರ ನಡುವೆ ವಾಗ್ವಾದ... ಇಂಥ ದೃಶ್ಯ ಕಂಡುಬಂದಿದ್ದು ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ. ಕೊರೋನಾ ಸಂದಿಗ್ಧತೆಯ ಪರಿಸ್ಥಿತಿಯಲ್ಲಿಯೂ ಖಾಸಗಿ ಶಾಲೆಗಳ ಶುಲ್ಕ ಪಡೆಯುತ್ತಿರುವ ಆರೋಪ ಹಿನ್ನೆಲೆ ಶಿಕ್ಷಣ ಇಲಾಖೆ ಇಂದು ಸಭೆ ಕರೆಯಲಾಗಿತ್ತು. ಆಯುಕ್ತರಾದ ಅನ್ಬುಕುಮಾರ್ ಇಂದು ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ಪೋಷಕ ಸಂಘಟನೆಗಳನ್ನು ಸಭೆಗೆ ಆಹ್ವಾನಿಸಿದ್ದರು. ಸಭೆಯಲ್ಲಿ ಕಾಮ್ಸ್, ರೂಪ್ಸಾ, ಕುಸುಮ, ಸಿಬಿಎಸ್ಇ . ಐಸಿಎಸ್ಸಿಇ ಸೇರಿದಂತೆ ಪೋಷಕ ಸಂಘಟನೆಗಳು ಭಾಗಿಯಾಗಿದ್ದವು. ಸಭೆಯಲ್ಲಿ ಪೋಷಕರಿಬ್ಬರು ಆಯುಕ್ತರಾದ ಅನ್ಬುಕುಮಾರ್ ಅವರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ತನ್ನ ಕುಟುಂಬಕ್ಕಾಗುತ್ತಿರುವ ನೋವನ್ನು ತೋಡಿಕೊಂಡರು. ಕೈ ಮುಗಿದು ಬೇಡಿಕೊಳ್ಳುತ್ತ ಕಣ್ಣೀರು ಹಾಕಿದರು.
ಇದನ್ನು ಓದಿ: ಹ್ಯಾಕರ್ ಶ್ರೀಕೃಷ್ಣನ ಮತ್ತಷ್ಟು ಲೀಲೆಗಳು ಅನಾವರಣ; ಒಂದೊಂದೇ ಕೃತ್ಯಗಳನ್ನು ಬಯಲಿಗೆಳೆಯುತ್ತಿರುವ ಸಿಸಿಬಿ!
ಪೋಷಕರು ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಯ ನಡುವೆ ದೊಡ್ಡ ಜಟಾಪಟಿಯೇ ನಡೆಯಿತು. ಕೈ ಕೈ ಮೀಸಲಾಯಿಸುವ ಹಂತಕ್ಕೂ ಹೋಗಿ ಒಬ್ಬರನೊಬ್ಬರು ಕಿತ್ತಾಡಿಕೊಂಡು ವಾಕ್ ಸಮರ ನಡೆಸಿದರು. ಸಭೆ ಆರಂಭವಾಗ್ತಿದ್ದಂತೆ ಪೋಷಕರು ಶಿಕ್ಷಣ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು. ಕೇವಲ ಮೂರ್ನಾಲ್ಕು ತಿಂಗಳಿಗೆ ಪೂರ್ತಿ ಫೀಸ್ ಕಟ್ಟೋದಕ್ಕೆ ಸಾಧ್ಯವಿಲ್ಲ. ಬೋಧನಾ ಶುಲ್ಕ ಬಿಟ್ಟು ನಾವು ಬೇರೆ ಶುಲ್ಕ ಕಟ್ಟೋದಿಲ್ಲಾ. 250 ವಿದ್ಯಾರ್ಥಿಗಳಿರುವ ಕಡೆ ಪೂರ್ತಿ ಶುಲ್ಕ, 250 ರಿಂದ 500 ವರೆಗೆ ಶೇ. 75, 500 ರಿಂದ 1 ಸಾವಿರ ಶೇ. 50. ಹಾಗೂ 1 ಸಾವಿರಕ್ಕಿಂತ ಅಧಿಕ ವಿದ್ಯಾರ್ಥಿಗಳಿರುವ ಶಾಲೆಗೆ ಶೇ. 25 ಪೀಸ್ ಕಟ್ಟೋದಾಗಿ ಸಭೆಯಲ್ಲಿ ಮಾಹಿತಿ ನೀಡಿದರು. ಇದುವರೆಗೂ ಶುಲ್ಕದ ವಿಚಾರದಲ್ಲಿ ಪೋಷಕರು ಹಾಗೂ ಖಾಸಗಿ ಆಡಳಿತ ಮಂಡಳಿಗಳ ನಡುವೆ ಜರುಗಿದ ಮೊದಲ ಸಭೆ ಇದಾಗಿತ್ತು. ಎಲ್ಲ ಅಭಿಪ್ರಾಯ ಸಂಗ್ರಹಿಸಿದ ಆಯುಕ್ತ ಅನ್ಬುಕುಮಾರ್, ಸಭೆಯಲ್ಲಿ ಎಲ್ಲರೂ ಅವರವರ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಸಭೆಯ ವರದಿಯನ್ನು ಇಲಾಖಾ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಗೆ ನೀಡಲಾಗುತ್ತೆ. ಆ ಬಳಿಕ ಶಿಕ್ಷಣ ಸಚಿವರು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ರೂಪ್ಸಾ ವಿದ್ಯಾರ್ಥಿಗಳ ಆಧಾರದ ಮೇಲೆ ಫೀಸ್ ಕಡಿತಗೊಳಿಸಲಾಗುತ್ತದೆ. ಈ ಬಗ್ಗೆ ಘೋಷಣೆಯೂ ಮಾಡಿದ್ದೇವೆ ಎಂದರೆ, ಕಾಮ್ಸ್ ಶೇ. 50 ಶುಲ್ಕ ಕಡಿತ ಮಾಡೋಕೆ ಸಾಧ್ಯವಿಲ್ಲ. ಅದು ಅವೈಜ್ಞಾನಿಕ. ಬೋಧನಾ ಶುಲ್ಕದಲ್ಲಿ ಕಡಿತ ಮಾಡಲಾಗುವುದು ಎಂದು ಈ ಮೊದಲೇ ಘೋಷಣೆ ಮಾಡಿದ್ದೇವೆ. ಪೋಷಕರು ಹಾಗೂ ಖಾಸಗಿ ಶಾಲೆಗಳಿಗೆ ತೊಂದರೆಯಾಗದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿ ಎಂದು ಅಭಿಪ್ರಾಯ ತಿಳಿಸಿತು. ಇಲ್ಲಿಯವರೆಗೆ ಶುಲ್ಕದ ವಿಚಾರವಾಗಿ ಮೌನವಾಗಿದ್ದ ಶಿಕ್ಷಣ ಇಲಾಖೆ ಇದೀಗ ಸಭೆ ಮಾಡಿ ಎಚ್ಚೆತ್ತಿದೆ. ಆದರೆ ಸಭೆಯಲ್ಲಿ ನಡೆದ ಜಟಾಪಟಿಯಿಂದಾಗಿ ಪರಿಸ್ಥಿತಿ ಇನ್ನಷ್ಟು ಬಿಗಿಡಾಯಿಸುತ್ತಿದೆ. ನೆರೆಯ ರಾಜ್ಯಗಳಂತೆ ಸರ್ಕಾರ ಶುಲ್ಕ ಕಡಿತಗೊಳಿಸುತ್ತದೆಯೋ ಅಥವಾ ಮತ್ತೆ ಮೌನಕ್ಕೆ ಶರಣಾಗುತ್ತದೆಯೋ ಕಾದು ನೋಡಬೇಕು.
Published by:
HR Ramesh
First published:
January 15, 2021, 8:21 PM IST