‘ಕಾಂಗ್ರೆಸ್​​ ಹೈಕಮಾಂಡ್’​ಗೇ ಜಾರಕಿಹೊಳಿ ಬ್ರದರ್ಸ್​​ ಸೆಡ್ಡು: ಸದ್ದಿಲ್ಲದೇ ಆಪರೇಷನ್​​ ಕಮಲಕ್ಕೆ ಮುಂದಾದ ಬಿಜೆಪಿ..!


Updated:September 7, 2018, 4:32 PM IST
‘ಕಾಂಗ್ರೆಸ್​​ ಹೈಕಮಾಂಡ್’​ಗೇ ಜಾರಕಿಹೊಳಿ ಬ್ರದರ್ಸ್​​ ಸೆಡ್ಡು: ಸದ್ದಿಲ್ಲದೇ ಆಪರೇಷನ್​​ ಕಮಲಕ್ಕೆ ಮುಂದಾದ ಬಿಜೆಪಿ..!

Updated: September 7, 2018, 4:32 PM IST
ನ್ಯೂಸ್​-18 ಕನ್ನಡ

ಬೆಂಗಳೂರು(ಸೆಪ್ಟೆಂಬರ್​​.07): ಜಾರಕಿಹೊಳಿ ಸಹೋದರರ ಬಂಡಾಯ ಮೈತ್ರಿ ಸರ್ಕಾರಕ್ಕೆ ಮುಳುವಾಗುವ ಸಾಧ್ಯತೆಯಿದೆ. ಮಾಜಿ ಸಚಿವ, ಶಾಸಕ ಸತೀಶ್​ ಜಾರಕಿಹೊಳಿ ಬ್ರದರ್ಸ್​ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಬಂಡಾಯ ಶಮನಕ್ಕೆ ಕಾಂಗ್ರೆಸ್​ ಹೈಕಮಾಂಡ್​​ ಮುಂದಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​​ ಖಂಡ್ರೆ ಮೂಲಕ ಎರಡು ಬಣಗಳ ನಡುವೇ ಸಂಧಾನ ಮಾಡಿಸಿದರು, ಫಲಿಸಲಿಲ್ಲ ಎನ್ನಲಾಗಿದೆ.

ಬೆಳಗಾವಿ ರಾಜಕೀಯದಲ್ಲಿ ತಲೆಹಾಕಿದ ಕಾಂಗ್ರೆಸ್​ ಹೈಕಮಾಂಡ್​ಗೆ ಸೆಡ್ಡು ಹೊಡೆಯಲು ಜಾರಕಿಹೊಳಿ ಸಹೋದರರು ಮುಂದಾಗಿದ್ಧಾರೆ. ಅಕ್ಟೋಬರ್​ನಲ್ಲಿ ಸರ್ಕಾರ ಬೀಳಿಸಲು ತೆರೆ ಹಿಂದೆ ನಡೀತಿದೆ ಯೋಜನೆ. ಹೀಗಾಗಿ, ಜಾರಹೊಳಿ ಸಹೋದರರ ಜೊತೆಗೆ ಸಂಪರ್ಕ ಸಾಧಿಸಲು ಬಿಜೆಪಿ ಶಾಸಕ ಶ್ರೀರಾಮುಲು ಯತ್ನಿಸುತ್ತಿದ್ದಾರೆ ಎನ್ನುತ್ತಿವೆ ರಾಜಕೀಯ ಮೂಲಗಳು.

ಸದ್ದಿಲ್ಲದೇ ಆಪರೇಶನ್ ಕಮಲಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಅಕ್ಟೋಬರ್​ವರೆಗೂ ಸರ್ಕಾರ ಬೀಳಿಸದಂತೆ ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದೆಯಂತೆ. ನಾಡಿದ್ದು ರಾತ್ರಿ ದೆಹಲಿಯತ್ತ ಶ್ರೀರಾಮುಲು ಪ್ರಯಾಣ ಬೆಳೆಸಲಿದ್ದು, ಜಾರಕಿಹೊಳಿ ಬ್ರದರ್ಸ್​​ ನೇತೃತ್ವದ  16 ಜನ ಶಾಸಕರ ತಂಡ ಬಿಜೆಪಿಗೆ ಸೇರಲಿದ್ದಾರೆ? ಎಂಬ ಚರ್ಚೆ ನಡೆಯುತ್ತಿದೆ.

ಕೇಸರಿ ಪಕ್ಷ ಸೇರಲಿರುವ ಎಲ್ಲರಿಗೂ ಮಂತ್ರಿಸ್ಥಾನ, ರಮೇಶ್ ಜಾರಕಿಹೊಳಿಗೆ ಡಿಸಿಎಂ ಹುದ್ದೆ ನೀಡುವ ಭರವಸೆ ನೀಡಿದ್ದಾರಂತೆ ಬಿಜೆಪಿ ಹೈಕಮಾಂಡ್​. ಇಂದು ಸಂಜೆ ಕಾಂಗ್ರೆಸ್​ ಬಂಡಾಯ ಶಾಸಕರ ಪಟ್ಟಿಯೊಂದಿಗೆ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಲಿದ್ಧಾರೆ. ನಾಳೆ ರಾತ್ರಿ ಅಮಿತ್ ಶಾ ಭೇಟಿ ಮಾಡಿ ಚರ್ಚಿಸಿದ ಬಳಿಕ ಹೈಕಮಾಂಡ್ ಒಪ್ಪಿದರೆ, ಅಕ್ಟೋಬರ್​ನಲ್ಲಿ ಸರ್ಕಾರ ಬೀಳಿಸಲು ಮುಂದಾಗಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಇನ್ನು ಒಂದು ವಾರದಿಂದ ರಾಜಕೀಯದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಬ್ರದರ್ಸ್​ ನಡುವಿನ ಭಿನ್ನಮತ ಭಾರೀ ಸದ್ದು ಮಾಡಿತ್ತು. ಅಲ್ಲದೇ ಕೆಪಿಸಿಸಿ ಕಾರ್ಯಾಧ್ಯಕ್ಷರ ಸಂಧಾನ ಸಭೆಯೊಂದಿಗೆ ಸುಖಾಂತ್ಯ ಕಂಡಿದೆ ಎನ್ನಲಾಗಿತ್ತು. ಮನಸ್ತಾಪದಿಂದ ಸರ್ಕಾರಕ್ಕೆ ಮುಜುಗರ ಉಂಟು ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಎರಡು ಬಣದ ಮುಖಂಡರು ಬಂದಿದ್ದರು.

ನಂತರ ಸತೀಶ್​ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​ ಜಂಟಿ ಸುದ್ದಿಗೋಷ್ಠಿ ನಡೆಸಿ, ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಲಾಗಿತ್ತು. ಎರಡೂ ಬಣಗಳ ನಡುವೆ ಸಂವಹನ ಕೊರತೆಯಿಂದ ಸಮಸ್ಯೆಯಾಗಿತ್ತು. ರಮೇಶ್​ ಜಾರಕಿಹೊಳಿ ಕೂಡ ನಮ್ಮ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಬಿಜೆಪಿ ಆಪರೇಷನ್​ ಕಮಲ ವಿಚಾರ ಮುನ್ನೆಲ್ಲೆಗೆ ಬಂದಿದ್ದು, ರಾಜಕೀಯದಲ್ಲಿ ಭಾರೀ ಸಂಚಲನ ಉಂಟಾಗಿದೆ.
First published:September 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ