ಬೆಂಗಳೂರು: ಫ್ಲೆಕ್ಸ್, ಬ್ಯಾನರ್ ಹಾಕುವ (Flex, Banner) ವಿಚಾರಕ್ಕೆ ಮಾರಾಮಾರಿ ನಡೆದಿರುವ ಘಟನೆ ಬೆಂಗಳೂರಿನ (Bengaluru) ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ (Govindaraja Nagar) ವಿಜಯನಗರದಲ್ಲಿ (Vijayanagara) ನಡೆದಿದೆ. ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಬಿಜಿಎಸ್ ಆಟದ ಮೈದಾನದಲ್ಲಿ (BGS Ground) ಘಟನೆ ನಡೆದಿದೆ. ಭಾನುವಾರ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಫ್ಲೆಕ್ಸ್ ಹಾಕಲು ಕೈ ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಮೈದಾನದಲ್ಲಿ ಆಟವಾಡುತ್ತಿದ್ದ ಕೆಲ ಯುವಕರು ಕಾರ್ಯಕ್ರಮದ ಹಿಂದಿನ ದಿನ ಫ್ಲೆಕ್ಸ್ಹಾಕಿಕೊಳ್ಳಿ ಎಂದು ವಾಗ್ವಾದ ನಡೆಸಿದ್ದರಂತೆ. ಈ ವೇಳೆ ಎರಡು ಗುಂಪುಗಳ ನಡುವೆ ನೂಕಾಟ ತಳ್ಳಾಟ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಕೃಷ್ಣಪ್ಪ, ಪ್ರಿಯಾಕೃಷ್ಣ ವಿರುದ್ದ ಸಚಿವ ಸೋಮಣ್ಣ ಗರಂ
ಗೋವಿಂದರಾಜ ನಗರ ಕ್ಷೇತ್ರದಲ್ಲಿ ಗಲಾಟೆ ವಿಚಾರವಾಗಿ ಮಲೈಮಹದೇಶ್ವರ ಬೆಟ್ಟದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಸೋಮಣ್ಣ ಅವರು, ನಾನು ಸ್ವಲ್ಪ ಹೂ ಎಂದರೆ ಉಯ್ ಆಗಿಬಿಡುತ್ತಾರೆ. ಬೆಂಗಳೂರು ಅಲ್ವಾ ಇಂತಹವೆಲ್ಲಾ ನಡೆಯುತ್ತಿರುತ್ತವೆ. ನನಗೆ ಈ ಬಗ್ಗೆ ಮಾಹಿತಿಯಿಲ್ಲ. ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ ಧೃತಿಗೆಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಮಳೆ; ಆಲಿಕಲ್ಲು ಮಳೆಗೆ ಕೋಲಾರದಲ್ಲಿ 20 ಕೋಟಿ ಮೌಲ್ಯದ ಬೆಳೆ ನಾಶ
ಕಳೆದ ನಾಲ್ಕೂವರೆ ವರ್ಷದಲ್ಲಿ ನನ್ನ ಕ್ಷೇತ್ರದಲ್ಲಿ ಒಂದೇ ಒಂದು ಗಲಾಟೆ ನಡೆದಿಲ್ಲ. ನನ್ನ ಮೇಲಿನ ಸೇಡನ್ನು ಅವರು ನಮ್ಮ ಕಾರ್ಯಕರ್ತರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ನಾನು ಮಾಡಿದ ಅಭಿವೃದ್ಧಿ ಕೆಲಸಗಳಿಂದ ಅವರು ಹತಾಶರಾಗಿದ್ದಾರೆ.
ನಾನು ಸ್ವಲ್ಪ ಹ್ಹೂ ಅಂದ್ರೆ ಹುಯ್ ಆಗಿಬಿಡುತ್ತದೆ. ಆದರೆ ಅಂತಹದಕ್ಕೆ ನಾನು ಬಿಡಲ್ಲ. ಅಪ್ಪ 15 ವರ್ಷ ಪಕ್ಕದ ಕ್ಷೇತ್ರದಲ್ಲಿ ಏನೂ ಮಾಡಿಲ್ಲ, ಮಗ 10 ವರ್ಷ ಕ್ಷೇತ್ರದಲ್ಲಿ ಏನು ಮಾಡಿಲ್ಲ. ಅಪ್ಪ ಮಕ್ಕಳಿಗೆ ಬೇರೆ ಏನು ಗೊತ್ತಿಲ್ಲ ಎಂದು ಕೃಷ್ಣಪ್ಪ, ಪ್ರಿಯಾಕೃಷ್ಣ ವಿರುದ್ದ ಸಚಿವ ಸೋಮಣ್ಣ ಗರಂ ಆಗಿದ್ದಾರೆ.
ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ
ಘಟನೆ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರು, ಭಾನುವಾರ ಸ್ತ್ರೀ ಶಕ್ತಿ ಸ್ವಸಹಾಯ ಮಹಿಳಾ ಸಮಾವೇಶ ನಡೆಯಬೇಕು. ಈ ವೇಳೆ ಕಾರ್ಯಕರ್ತರು ಮೈದಾನದಲ್ಲಿ ಪ್ಲೆಕ್ಸ್ ಕಟ್ಟುತ್ತಿದ್ದರು, ಈ ವೇಳೆ ಅಲ್ಲಿ ಕೆಲವು ಮಹಿಳೆಯರು ಕೂಡ ಇದ್ದರು.
ಪ್ಲೆಕ್ಸ್ ಕಟ್ಟುವ ವಿಚಾರಕ್ಕೆ ಎರಡು ಗುಂಪಿನ ನಡುವೆ ಗಲಾಟೆ. ಈ ವೇಳೆ ಕೈ ಕೈ ಮಿಲಾಯಿಸಿದ್ದಾರೆ. ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಈ ವೇಳೆ ಇಬ್ಬರು ಪೊಲೀಸರಿಗು ಸಹ ಗಾಯವಾಗಿದೆ. ಪೊಲೀಸರನ್ನ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾರು ಭಾಗಿಯಾಗಿದ್ದಾರೆ ಅವರ ವಿಡಿಯೋ ನೋಡಿ ಸುಮೋಟೊ ಕೇಸ್ ದಾಖಲು ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಎರಡೂ ಕಡೆ ಮಹಿಳೆಯರೆ ಗಲಾಟೆ ಮಾಡಿಕೊಂಡಿದ್ದರು. ವಾಹನಗಳಲ್ಲಿ ಮಾರಕಾಸ್ತ್ರ ಇದೆ ಅಂತ ಆರೋಪ ಇತ್ತು. ಪೊಲೀಸರ ತಪಾಸಣೆ ವೇಳೆ ಯಾವುದೇ ವೆಫನ್ಸ್ ಸಿಕ್ಕಿಲ್ಲ. ಮೈದಾನದಿಂದ ಹೊರಗಡೆ ಹೋದ ನಂತರ ಎರಡು ಗುಂಪು ಕಲ್ಲು ತೂರಿದ್ದಾರೆ.
ಕಲ್ಲು ತೂರಿದ ವ್ಯಕ್ತಿ ಹಿಡಿಯಲು ಹೋದಾಗ ಪೊಲೀಸರಿಗೆ ಗಾಯವಾಗಿದೆ. ಅವರು ರಾಜಕೀಯ ಪಕ್ಷದ ಕಾರ್ಯಕರ್ತರ ಅಥವಾ ಸಂಘದವರ ಅನ್ನೋ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ