ಕಲಬುರ್ಗಿ (ಜ.30) : ನನಗೆ ತೊಂದ್ರೆ ಕೊಡೋದೆ ಕೆಲವರಿಗೆ ಹವ್ಯಾಸವಾಗಿದೆ ಎಂದು ವಿರೋಧಿಗಳಿಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಗಾಣಗಾಪುರ ದತ್ತ ಮಂದಿರ ಭೇಟಿಯ ನಂತರ ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಜೀವನ ಅಂದ ಮೇಲೆ ಕಷ್ಟ-ಸುಖ ಎರಡೂ ಇರುತ್ತೆ. ಆದರೆ ನನಗೆ ತೊಂದರೆ ಕೊಟ್ರೆ ಮಾತ್ರ ಕೆಲವರಿಗೆ ಸಮಾಧಾನವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾವು ಇಡಿ ಕಸ್ಟಡಿಯಲ್ಲಿದ್ದ ವೇಳೆ ನಡೆದ ಹೋರಾಟದ ವೇಳೆ 82 ಕೋಟಿ ಸಾರ್ವಜನಿಕ ಆಸ್ತಿ ಹಾನಿಗೆ ಎಂದು ರಾಜ್ಯ ಸರ್ಕಾರ ನೀಡಿರೋ ವರದಿ ವಿರುದ್ಧ ಶಿವಕುಮಾರ್ ಕಿಡಿಕಾರಿದರು.
ಹೈಕೋರ್ಟ್ ಗೆ ಪಿ.ಐ.ಎಲ್. ಯಾರು ಸಲ್ಲಿಸಿದ್ದಾರೋ ಗೊತ್ತಿದೆ. ಅದರ ಹಿಂದೆ ಪಿತೂರಿ ಯಾರು ಮತ್ತು ಯಾವ ಪಕ್ಷ ಇದೆ ಅಂತಾನೂ ಗೊತ್ತಿದೆ. ಅವರಿಗೆ ಪಿಐಎಲ್ ಹಾಕಲು ದುಡ್ಡು ಕೊಟ್ಟವರು ಯಾರು ಅಂತಾನೂ ಗೊತ್ತಿದ್ದು, ಈ ಬಗ್ಗೆ ಸದ್ಯಕ್ಕೆ ಮಾತನಾಡಲ್ಲ. ಈ ಹಿಂದೆ ರಾಜ್ಯದಲ್ಲಿ ಎಷ್ಟೋ ಹೋರಾಟಗಳಾಗಿವೆ, ಕಲ್ಲು ತೂರಾಟಗಳಾಗಿವೆ, ಗಲಭೆಗಳು ಸಂಭವಿಸಿದೆ. ಆ ವೇಳೆ ಯಾಕೆ ಯಾರೂ ಪಿ.ಐ.ಎಲ್. ಹಾಕಲಿಲ್ಲ ಎಂದು ಡಿಕೆಶಿ ಪ್ರಶ್ನಿಸಿದರು.
ಮುಂದುವರೆದ ಡಿಕೆಶಿ ಟೆಂಪಲ್ ರನ್
ಮಾಜಿ ಸಚಿವ ಡಿ ಕೆ ಶಿವಕುಮಾರ್ ಟೆಂಪಲ್ ರನ್ ಮುಂದುವರೆಸಿದ್ದಾರೆ. ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದ ದತ್ತ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ನಂತರ ಭೂಸನೂರು ಗ್ರಾಮದ ವಿರಕ್ತ ಮಠಕ್ಕೆ ಭೇಟಿ ಕೊಟ್ಟರು. ನಿನ್ನೆ ಯಾದಗಿರಿ ಜಿಲ್ಲೆ ಗೋನಾಲ ಗಡಿ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಡಿಕೆಶಿ ದೇವರು ಯಾರೊಬ್ಬರ ಆಸ್ತಿಯಲ್ಲ. ಮನಶ್ಶಾಂತಿಗಾಗಿ, ಲೋಕ ಕಲ್ಯಾಣಕ್ಕಾಗಿ ಟೆಂಬಲ್ ರನ್ ನಡೆಸಿದ್ದೇನೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಟೆಂಪಲ್ ರನ್ ಮುಂದುವರೆಸಿದ್ದಾರೆ. ಯಾದಗಿರಿ ಜಿಲ್ಲೆ ಗೋನಾಳದ ಗಡಿ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಇಂದು ಗಾಣಗಾಪುರದ ದತ್ತನ ದರ್ಶನ ಪಡೆದರು. ಅಫಜಲಪುರ ತಾಲೂಕಿನಲ್ಲಿರುವ ಗಾಣಗಾಪುರಕ್ಕೆ ತೆರಲಿ, ದತ್ತಾತ್ರೇಯ ಪಾದುಕೆ ದರ್ಶನ ಮಾಡಿದರು. ನಿರ್ಗುಣ ಪಾದುಕೆ ಪೂಜೆ ನೆರವೇರಿಸಿದ ಡಿಕೆಶಿ, ಇಷ್ಟಾರ್ಧ ಸಿದ್ಧಿಗೆ ಪ್ರಾರ್ಥಿಸಿದರು. ತಮಗಿರುವ ಅಡ್ಡಿ ಆತಂಕಗಳು ನಿವಾರಣೆಯಾಗಲೆಂದು ಪ್ರಾರ್ಥಿಸಿದರು.
ಇದನ್ನೂ ಓದಿ : ಅಧಿಕಾರ ದುರ್ಬಳಕೆ ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ; ಗಾಣಗಾಪುರ ದತ್ತನ ದರ್ಶನದ ನಂತರ ಡಿಕೆಶಿ
ಟೆಂಪಲ್ ರನ್ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾಡಿನ ಜನತೆಗೆ ಒಳ್ಳೆಯದಾಗಲಿ ಅಂತ ದತ್ತ ಮಂದಿರಕ್ಕೆ ಭೇಟಿ ನೀಡಿದ್ದೇನೆ. ದತ್ತನ ಪಾದ ಪವಿತ್ರವಾದಂತಹದ್ದು, ದೇಶದ ಮೂಲೆ ಮೂಲೆಗಳಿಂದ ಜನ ಇಲ್ಲಿಗೆ ಬಂದು ದರ್ಶನ ಪಡೀತಾರೆ. ಹಿಂದೆ ಕೂಡ ಬಂದಿದ್ದೆ, ಇವತ್ತು ಕೂಡ ಬಂದು ಪೂಜೆ ಸಲ್ಲಿಸಿದ್ದೇನೆ. ದತ್ತನ ನಿರ್ಗುಣ ಪಾದುಕೆ ದರ್ಶನ ನನಗೆ ದೊರೆತಿದೆ. ಆದರೆ ಕೆಲವೊಬ್ಬರು ಧರ್ಮ, ದೇವರು ತಮ್ಮ ಆಸ್ತಿ ಎಂಬಂತೆ ವರ್ತಿಸುತ್ತಾರೆ ಎಂದು ಡಿಕೆಶಿ ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಅದನ್ನು ಹಾದಿ ಬೀದಿಲೆಲ್ಲ ಚರ್ಚೆ ಮಾಡಲು ಆಗುತ್ತೇನು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ