HD Kumaraswamy: ಬಿಜೆಪಿ ಸರ್ಕಾರ ರೈತರ ಬಗ್ಗೆ ಮೃದು ಮಾತಾಡುತ್ತಲೇ ರೈತರ ಬೆನ್ನಿಗೆ ಚೂರಿ ಹಾಕುತ್ತಿದೆ; ಕುಮಾರಸ್ವಾಮಿ ಆರೋಪ

ಬಾಯಿ ಮಾತಿನಿಂದ ರೈತರ ಬಾಳು ಬೆಳಗಲು ಸಾಧ್ಯವಿಲ್ಲ. ರೈತರ ಮತಗಳ ಮೇಲೆ ಕಣ್ಣಿಟ್ಟು ಎಷ್ಟು ದಿನ ಸುಳ್ಳಿನ ಅರಮನೆ ಕಟ್ಟುತ್ತೀರಿ? ಇನ್ನಾದರೂ ರೈತರಿಗೆ ಸಹನೀಯ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡಿ. ರಸಗೊಬ್ಬರದ ಮೇಲಿನ ದರ ಹೆಚ್ಚಳ ವಾಪಸ್ ಪಡೆಯಿರಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ.

ಹೆಚ್.ಡಿ. ಕುಮಾರಸ್ವಾಮಿ.

 • Share this:
  ಬೆಂಗಳೂರು (ಏಪ್ರಿಲ್ 11);ಪೆಟ್ರೋಲ್, ಡೀಸೆಲ್ ಮತ್ತು ಅಡಿಗೆ ಅನಿಲಗಳ ಬೆಲೆಯನ್ನು ಸತತವಾಗಿ ಏರಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ರಸಗೊಬ್ಬರಗಳ ಬೆಲೆಯನ್ನೂ ಏರಿಸಿದೆ. ಈಗಾಗಲೇ ವಿವಾದಾತ್ಮಕ ಕೃಷಿ ಕಾನೂನುಗಳ ಮೂಲಕ ರೈತರ ಆಕ್ರೋಶಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರ ಇದೀಗ ರಸಗೊಬ್ಬರಗಳ ಬೆಲೆಯನ್ನೂ ಏರಿಸುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆದಿದೆ. ದೇಶದ ಅತಿದೊಡ್ಡ ರಸಗೊಬ್ಬರ ಮಾರಾಟ ಸಂಸ್ಥೆಯಾದ ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆ (ಇಪ್ಕೋ) ಗುರುವಾರ ಗೊಬ್ಬರದ ಬೆಲೆಯನ್ನು ಶೇ.45 ರಿಂದ ಶೇ.58ಕ್ಕೆ ಏರಿಸಿದೆ. ಪರಿಣಾಮ ಗೊಬ್ಬರಗಳ ಬೆಲೆ ದುಪ್ಪಟ್ಟಾಗಲಿದೆ. ಈ ಬೆಳವಣಿಗೆ ಇದೀಗ ದೇಶದಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ ಬೆನ್ನಿಗೆ ಇಂದು ಕುಮಾರಸ್ವಾಮಿ ಸಹ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಬಿಜೆಪಿ ಸರ್ಕಾರ ರೈತರ ಬಗ್ಗೆ ಮೃದು ಮಾತಾಡುತ್ತಲೇ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ" ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.  ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, "ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿದ್ದ ಬಿಜೆಪಿ ಸರಕಾರ, ರೈತರ ಬಗ್ಗೆ ಮೃದು ಮಾತಾಡುತ್ತಲೇ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ. ಇದೀಗ ರಸಗೊಬ್ಬರ ದರವನ್ನು ಶೇಕಡ 60ರಷ್ಟು ಹೆಚ್ಚಳ ಮಾಡಿದೆ" ಎಂದು ಕಿಡಿಕಾರಿದ್ದಾರೆ.

  ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿರುವ ಕುಮಾರಸ್ವಾಮಿ, "ಕೇಂದ್ರದ ರಸಗೊಬ್ಬರ ಸಚಿವ ಡಿವಿ ಸದಾನಂದ ಗೌಡರು ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳ ಜತೆ ಸಭೆ ನಡೆಸುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಬಾರದು.  ಸದಾನಂದ ಗೌಡರು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡಿ ರಸಗೊಬ್ಬರಕ್ಕಾಗಿ ನೀಡುತ್ತಿದ್ದ 1.5ಲಕ್ಷ ಕೋಟಿಯಷ್ಟು ಸಬ್ಸಿಡಿ ಮುಂದುವರೆಸುವಂತೆ ಮನವರಿಕೆ ಮಾಡಿಕೊಡಬೇಕು. ಈಗ ಅದನ್ನು ಶೇ.50ರಷ್ಟು ಕಡಿತ ಮಾಡಲಾಗಿದೆ.

  ಇದನ್ನೂ ಓದಿ: Siddaramaiah: ರಸಗೊಬ್ಬರ ಬೆಲೆ ಏರಿಕೆ, ಸಂಸದರ ಗುಲಾಮಿ ಮನಸ್ಥಿತಿಗೆ ಕರ್ನಾಟಕ ಸರ್ವನಾಶ‌; ಸಿದ್ದರಾಮಯ್ಯ ಕಿಡಿ

  ಬಾಯಿ ಮಾತಿನಿಂದ ರೈತರ ಬಾಳು ಬೆಳಗಲು ಸಾಧ್ಯವಿಲ್ಲ. ರೈತರ ಮತಗಳ ಮೇಲೆ ಕಣ್ಣಿಟ್ಟು ಎಷ್ಟು ದಿನ ಸುಳ್ಳಿನ ಅರಮನೆ ಕಟ್ಟುತ್ತೀರಿ? ಇನ್ನಾದರೂ ರೈತರಿಗೆ ಸಹನೀಯ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡಿ. ರಸಗೊಬ್ಬರದ ಮೇಲಿನ ದರ ಹೆಚ್ಚಳ ವಾಪಸ್ ಪಡೆಯಿರಿ" ಎಂದು ಆಗ್ರಹಿಸಿದ್ದಾರೆ.
  Published by:MAshok Kumar
  First published: