Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ಇಂದು ಏನೆಲ್ಲ ಬೆಳವಣಿಗೆಗಳು ನಡೆದವು ಎಂಬುದರ ಝಲಕ್​ ಚಿಕ್ಕದಾಗಿ ನಿಮ್ಮ ಮುಂದಿಟ್ಟಿದ್ದೇವೆ. ಇಂದಿನ ಪ್ರಮುಖ 10 ಸುದ್ದಿಗಳು.

Rajesh Duggumane | news18
Updated:February 10, 2019, 7:02 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
Rajesh Duggumane | news18
Updated: February 10, 2019, 7:02 PM IST
1 . ಗೋ ಬ್ಯಾಕ್​ ಮೋದಿ ಆಂದೋಲನ:

ಅಸ್ಸಾಂ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸಕ್ಕೆ ಆಂಧ್ರಪ್ರದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಟ್ವಿಟರ್​​ನಲ್ಲಿ ‘ಗೋ ಬ್ಯಾಕ್​​ ಮೋದಿ’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಪ್ರತಿರೋಧ ಒಡ್ಡುತ್ತಿದ್ದಾರೆ. ಅತ್ತ ದೆಹಲಿಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಕೇಂದ್ರದ ವಿರುದ್ದ ಬೃಹತ್​​ ಪ್ರತಿಭಟನೆಗೆ ವೇದಿಕೆ ಸಜ್ಜಾಗುತ್ತಿದ್ದರೆ, ಇತ್ತ ಆಂಧ್ರದಲ್ಲಿ ಕೂಡ ಸ್ಥಳೀಯರು ಮೋದಿ ಭೇಟಿಯನ್ನು ವಿರೋಧಿಸುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ‘ಗೋ ಬ್ಯಾಕ್​​ ಮೋದಿ’ ಟ್ರೆಂಡಿಗ್​​ನಲ್ಲಿದ್ದು, ಪ್ರಧಾನಿ ಮೋದಿಯವರಿಗೆ ಮುಖಭಂಗವಾಗಿದೆ.

2. ಬಾಲಿವುಡ್​ ಖಳನಟ ಮಹೇಶ್​ ಆನಂದ್ ಸಾವು:

ಬಾಲಿವುಡ್​ನ ಹಲವಾರು ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದ ಮಹೇಶ್​ ಆನಂದ್ (57) ವಯಸ್ಸಿನಲ್ಲಿ​ ನಿಧನರಾಗಿದ್ದಾರೆ. ಮುಂಬೈನ ಅವರ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಸಹಜ ಸಾವೋ ಎಂಬುದು ಇನ್ನೂ ನಿಗೂಢವಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ಧಾರೆ. 80 ಮತ್ತು 90ರ ದಶಕದ ಚಲನಚಿತ್ರಗಳಲ್ಲಿ ಖಳನಾಯಕ ನಟರಾಗಿದ್ದ ಮಹೇಶ್‌ ಅಪಾರ ಜನಪ್ರಿಯತೆ ಗಳಿಸಿದ್ದರು. ಅನೇಕ ಬಾಲಿವುಡ್​ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಹೇಶ್​ ಹಲವಾರು ದಿಗ್ಗಜರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ತೆರೆಕಂಡ 'ರಂಗೀಲಾ ರಾಜಾ' ಚಿತ್ರ ಮಹೇಶ್​ ಆನಂದ್​ ನಟಿಸಿದ ಕೊನೆಯ ಚಿತ್ರವಾಗಿದೆ. ಕುರುಕ್ಷೇತ್ರ, ಸ್ವರ್ಗ, ಕೂಲಿ ನಂ.1, ವಿಜೇತ ಇನ್ನೂ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.

3. 'ಯಜಮಾನ' ಚಿತ್ರದ ಟ್ರೈಲರ್​ ರಿಲೀಸ್​:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ 'ಯಜಮಾನ' ಚಿತ್ರದ ಟ್ರೈಲರ್​ ಇಂದು ಬಿಡುಗಡೆ ಆಯಿತು. 2.46 ನಿಮಿಷಗಳ ಟ್ರೈಲರ್​​ನಲ್ಲಿ ದರ್ಶನ್​ ಖಡಕ್ ಡೈಲಾಗ್, ಆಕ್ಷನ್​ ಮೂಲಕ ಅಬ್ಬರಿಸಿದ್ದಾರೆ. 'ಯಜಮಾನ' ಚಿತ್ರವು ಮಾಸ್​ ಪ್ರೇಕ್ಷಕರನ್ನು ಗಮನದಲ್ಲಿರಿಸಿ ಮಾಡಿದಂತಹ ಪಕ್ಕಾ ಫ್ಯಾಮಿಲಿ ಸಿನಿಮಾ ಎಂಬುದು ವಿಡಿಯೋ ತುಣುಕಿನಿಂದ ಬಹಿರಂಗವಾಗಿದೆ.

4. ಹುಬ್ಬಳಿಗೆ ಮೋದಿ:
Loading...

ಇಂದು ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸಿದ್ದು, ಸಂಜೆ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಸಂಜೆ ಹುಬ್ಬಳ್ಳಿಯಲ್ಲಿ ರ್ಯಾಲಿ ನಡೆಸಲಿರುವ ಪ್ರಧಾನಿ ಮೋದಿ ಅವರ ವಿರುದ್ಧ ಅಂಬೇಡ್ಕರ್​ ಸರ್ಕಲ್ ಬಳಿ ಕಾಂಗ್ರೆಸ್​ ಕಾರ್ಯಕರ್ತರು ಆಪರೇಷನ್​ ಕಮಲ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪಕ್ಷ ನಾಯಕ ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದು, ಅಂಬೇಡ್ಕರ್ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಧರಣಿ ನಡೆಸುತ್ತಿದ್ದಾರೆ. ಧರಣಿಯಲ್ಲಿ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ, ಮಾಜಿ ಶಾಸಕ ಜಬ್ಬಾರ ಖಾನ್ ಹೊನ್ನಳ್ಳಿ, ಅನಿಲ್ ಕುಮಾರ್ ಪಾಟೀಲ್ ಸೇರಿ ಅನೇಕರು ಭಾಗಿಯಾಗಿದ್ದಾರೆ.

5. ಚುಟುಕು ಕ್ರಿಕೆಟ್​ನಲ್ಲಿ ಭಾರತಕ್ಕೆ ಸೋಲು: 

ಹ್ಯಾಮಿಲ್ಟನ್ ಸೆಡನ್ ಪಾರ್ಕ್‌ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್​ 4ರನ್​ಗಳ ಗೆಲುವು ಸಾಧಿಸಿತು. ಈ ಮೂಲಕ 2-1 ಅಂತರದಲ್ಲಿ ನ್ಯೂಜಿಲೆಂಡ್​ ಸರಣಿಯನ್ನು ತನ್ನದಾಗಿಸಿಕೊಂಡಿತು.  20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 212 ರನ್​ಗಳ ಬೃಹತ್ ಮೊತ್ತವನ್ನು ನ್ಯೂಜಿಲೆಂಡ್​ ತಂಡ ಟೀಂ ಇಂಡಿಯಾ ಮುಂದಿಟ್ಟಿತ್ತು. ರೋಹಿತ್​ ಶರ್ಮಾ ಹಾಗೂ ವಿಜಯ್​ ಶಂಕರ್​ ಜಾಗರೂಕ ಆಟವಾಡಿದರು. ರೋಹಿತ್​ (38), ವಿಜಯ್​ ಶಂಕರ್​ (43) ರನ್​ ಗಳಿಸಿ ನಿರ್ಗಮಿಸಿದರು. ರಿಷಭ್​ ಪಂತ್ (25)​, ಹಾರ್ದಿಕ್​ ಪಾಂಡ್ಯಾ (21), ಎಂಎಸ್​ ಧೋನಿ (2) ಅವರಿಂದ ಉತ್ತಮ ಪ್ರದರ್ಶನ ಸಿಗಲಿಲ್ಲ.  ಕೊನೆಯ ಓವರ್​ಗಳಲ್ಲಿ  ದಿನೇಶ್​ ಕಾರ್ತಿಕ್ (27)​, ಕುನಾಲ್​ ಪಾಂಡ್ಯಾ (26) ಉತ್ತಮ ಆಟವಾಡಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಕೊನೆಯದಾಗಿ 20 ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 208 ರನ್​ ಕಲೆ ಹಾಕಲಷ್ಟೇ ಸಾಧ್ಯವಾಯಿತು. ಈ ಮೂಲಕ ಗೆಲುವಿನ ಸನಿಹದಲ್ಲಿ ಭಾರತ ಮುಗ್ಗರಿಸಿತು.

6.ಬಿಎಸ್​. ಯಡಿರೂಪ್ಪ ಬಗ್ಗೆ ಡಿಕೆಶಿ ಮೆಚ್ಚುಗೆ!:

ಬಿ.ಎಸ್​​ ಯಡಿಯೂರಪ್ಪನವರ ಆತ್ಮಸಾಕ್ಷಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಡಿ.ಕೆ ಶಿವಕುಮಾರ್​​​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಶರಣಗೌಡ ಜತೆಗೆ ಮಾತನಾಡಿದ್ದು ಸತ್ಯ ಎಂದು ಹೇಳಿದ್ದಾರೆ. ಈ ಮೂಲಕ ಸಿಎಂ ಬಿಡುಗಡೆ ಮಾಡಿದ ಆಡಿಯೋ ತಮ್ಮದೇ ಎಂದು ಸ್ಪಷ್ಟಪಡಿಸಿದ ಮಾಜಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಎಂದರು.

7. ಬಿಜೆಪಿ ನಾಯಕನ ವಿರುದ್ಧ ಎಫ್​ಐಆರ್​:

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ  ಕೃಷ್ಣಗಂಜ್​ನಲ್ಲಿ  ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್​ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಮುಕುಲ್​ ರಾಯ್​ ಹಾಗೂ ಮೂರು ಜನರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕಾರ್ತಿಕ್​ ಮೊಂಡಲ್​ ಹಾಗೂ ಸುಜಿತ್​ ಎಂಬುವವರನ್ನು ಬಂಧಿಸಲಾಗಿದೆ. ಬಿಸ್ವಾಸ್​ ಅವರ ರಕ್ಷಣಾ ಸಿಬ್ಬಂದಿ ಪ್ರಭಾಷ್​ ಮೊಂಡಲ್​ ಶನಿವಾರ ರಜೆ ಪಡೆದಿದ್ದರು. ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಪ್ರಕರಣದಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಟಿಎಂಸಿ ಆರೋಪಿಸಿದೆ.

8. ಹಿಂಸಾಚಾರಕ್ಕೆ ತಿರುಗಿದ ಗುಜ್ಜರ್​ ಸಮುದಾಯದ ಪ್ರತಿಭಟನೆ:

ಮೀಸಲಾತಿ ನೀಡುವಂತೆ ಆಗ್ರಹಿಸಿ ರಾಜಸ್ಥಾನದಲ್ಲಿ ಗುಜ್ಜರ್​ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಭಾನುವಾರ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ರಾಜಸ್ಥಾನದಲ್ಲಿ ಗುಜ್ಜರ ಸಮುದಾಯದವರಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಕ್ಕೆ ಶೇ.5 ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.

9. ಬಾದಾಮಿಗೆ ಭೇಟಿ ನೀಡಿದ ಸಿದ್ದರಾಮಯ್ಯ:

ಬಜೆಟ್​​ ಮಂಡನೆ ಆದ ಬೆನ್ನಲ್ಲೇ ಮಾಜಿ ಸಿಎಂ ಹಾಗೂ ಸಿದ್ದರಾಮಯ್ಯ ಇಂದು ಸ್ವಕ್ಷೇತ್ರ ಬಾದಾಮಿ ಪ್ರವಾಸ ಕೈಗೊಂಡರು. ಅವರ ನಡೆ ಬಾರೀ ಕುತೂಹಲ ಮೂಡಿಸಿದೆ. ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಿಂದ  ಹೆಲಿಕಾಪ್ಟರ್ ಮೂಲಕ ಬಾದಾಮಿಗೆ ತೆರಳಿದ್ದಾರೆ. ಬಾದಾಮಿಯ ಆಂಜುಮನ್ ಇಸ್ಲಾಂ ಕಮಿಟಿ ಆಯೋಜಿಸಿರುವ ಸಮಾರಂಭದಲ್ಲಿ ಭಾಗಿಯಾದರು. ಸಂಜೆ 4 ಗಂಟೆಗೆ ಬಾದಾವಿು ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

10. ಸುಮಲತಾರಿಂದ ಚುನಾವಣಾ ತಯಾರಿ:

ಮೈತ್ರಿ ನಾಯಕರು ಸುಮಲತಾ ಅಂಬರೀಷ್​​ರ ಸ್ಪರ್ಧೆ ವಿಚಾರದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಅತ್ತ ಚುನಾವಣೆ ಕಣಕ್ಕಿಳಿಯಲು ನಿರ್ಧರಿಸಿರುವ ಅಂಬರೀಷರ ಪತ್ನಿ ಸಿದ್ಧತೆ  ನಡೆಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಲತಾ ಅವರು ಇಂದು ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಶ್ರೀ ಕ್ಷೇತ್ರದ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಕೂಡ ಪಡೆದಿದ್ದಾರೆ. ಹಾಗೆಯೇ ಅಂಬರೀಶ್ ಅಭಿಮಾನಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.

First published:February 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...