Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ಕ್ಷಣಕ್ಕೆ ಒಮ್ಮೆ ತಿರುವು ಪಡೆದುಕೊಳ್ಳುವ ರಾಜಕೀಯ ಘಟನೆಗ, ಪ್ರಚಲಿತ ಘಟನೆಗಳ ಕುರಿತು ನೀವು ಓದಲೇ ಬೇಕಾದ ಇಂದಿನ ಸುದ್ದಿಗಳು ಇವು

Seema.R | news18
Updated:February 12, 2019, 6:03 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಕ್ಷಣಕ್ಕೆ ಒಮ್ಮೆ ತಿರುವು ಪಡೆದುಕೊಳ್ಳುವ ರಾಜಕೀಯ ಘಟನೆಗ, ಪ್ರಚಲಿತ ಘಟನೆಗಳ ಕುರಿತು ನೀವು ಓದಲೇ ಬೇಕಾದ ಇಂದಿನ ಸುದ್ದಿಗಳು ಇವು
Seema.R | news18
Updated: February 12, 2019, 6:03 PM IST
1. ಎಸ್​ಐಟಿಗೆ ಬಿಜೆಪಿ ವಿರೋಧ

ಅಪರೇಷನ್​ ಕಮಲ ನಡೆಸಲಾಗಿದೆ ಎನ್ನುವ ಆಡಿಯೋದಲ್ಲಿ ಸ್ಪೀಕರ್​ ಅವರ ಘನತೆಗೆ ಚ್ಯುತಿ ಬರುವ ರೀತಿಯಲ್ಲಿ ಮಾತನಾಡಲಾಗಿದೆ. ಇದು ಬೇಸರ ಮೂಡಿಸಿದೆ. ಈ ಬಗ್ಗೆ ಎಸ್​ಐಟಿ ತನಿಖೆ ನಡೆಸುವಂತೆ ಸ್ಪೀಕರ್​ ರಮೇಶ್​ ಕುಮಾರ್​ ಸೂಚನೆಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಈ ಕುರಿತು ವಿರೋಧ ವ್ಯಕ್ತಪಡಿಸಿದ ಬಿಜೆಪಿ ನಾಯಕರು ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಸ್​ಐಟಿ ತನಿಖೆಗೆ ಬೇಡ ಎಂದರು. ಈ ರೀತಿಯ ಪ್ರಕರಣಗಳನ್ನು ಪರಿಶೀಲಿಸಲು ಹಕ್ಕುಬಾಧ್ಯತಾ ಸದನವಿದೆ. ಅದನ್ನು ಬಿಟ್ಟು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವುದು ಬೇಡ ಎಂದು ಮನವಿ ಮಾಡಿದರು. ಆದರೆ, ತಮ್ಮ ಮೇಲೆ ಈ ರೀತಿ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಎಸ್​ಐಟಿಯೇ ತನಿಖೆ ಮಾಡಬೇಕು ಎಂದು ಸ್ಪೀಕರ್​ ರಮೇಶ್​ ಕುಮಾರ್​ ತಿಳಿಸಿದರು. ಅಲ್ಲದೇ ಆಡಳಿತ ಪಕ್ಷದ ನಾಯಕರು ಕೂಡ ಈ ಮಾತಿಗೆ ಸಮ್ಮತಿ ಸೂಚಿಸಿದರು.

2.ರಮೇಶ್​ ಜಾರಕಿಹೊಳಿಗೆ ಹೈಕೋರ್ಟ್​ ನೋಟೀಸ್

ಅಥಣಿ ಶಾಸಕ ಮಹೇಶ್ ಕುಮಟಳ್ಳಿ ನಾಪತ್ತೆ ಪ್ರಕರಣ ಸಂಬಂಧ ಕಾಂಗ್ರೆಸ್​ನ ಅತೃಪ್ತ ಶಾಸಕರ ನಾಯಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಹೈಕೋರ್ಟ್ ನೋಟೀಸ್ ನೀಡಿದೆ. ಜಾರಕಿಹೊಳಿ ಅವರು ತಮ್ಮ ಶಾಸಕ ಮಹೇಶ್ ಕುಮಟಳ್ಳಿ ಅವರನ್ನ ಅಪಹರಿಸಿ ಗೃಹ ಬಂಧನದಲ್ಲಿಟ್ಟಿರಬಹುದೆಂಬ ಅನುಮಾನವಿದೆ ಎಂದು ಬೆಳಗಾವಿಯ ಅಥಣಿ ಮೂಲದ ಸಾಮಾಜಿಕ ಕಾರ್ಯಕರ್ತ ದಯಾನಂದ್ ಹಿರೇಮಠ್ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಈ ನೋಟೀಸ್ ಜಾರಿ ಮಾಡಿದೆ. ಹಾಗೆಯೇ, ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆಗೂ ನೋಟೀಸ್ ಕೊಟ್ಟಿದೆ.

3. ರಾಷ್ಟ್ರ ರಾಜಧಾನಿಯಲ್ಲಿ ಬೆಂಕಿ ಅವಘಡ

ದೆಹಲಿಯ ಅರ್ಪಿತ್ ಪ್ಯಾಲೇಸ್ ಹೋಟೆಲ್​ನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ 17 ಮಂದಿ ಮೃತಪಟ್ಟಿದ್ದಾರೆ.  ಕರೋಲ್ ಬಾಘ್​ನಲ್ಲಿರುವ ಈ ಹೋಟೆಲ್ ನಲ್ಲಿ ಮುಂಜಾನೆ 4.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ಹೋಟೆಲ್​ ಆವರಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಶಾರ್ಟ್​ ಸರ್ಕ್ಯೂಟ್​ನಿಂದ್​ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

4.ಆಗಸ್ಟಾ ವೆಸ್ಟ್​ಲ್ಯಾಂಡ್​ ; ರಾಜೀವ್​ ಸಕ್ಸೇನಾ ನ್ಯಾಯಾಂಗ ಕಸ್ಟಡಿಗೆ

ಆಗಸ್ಟಾ ವೆಸ್ಟ್​ಲ್ಯಾಂಡ್​ ವಿವಿಐಪಿ ಹೆಲಿಕ್ಯಾಪ್ಟರ್​ ಹಗರಣದ ಆರೋಪಿ ರಾಜೀವ್​ ಸಕ್ಸೇನಾ ಫೆ.18ರವರೆಗೆ ನ್ಯಾಯಾಂಗ ಕಸ್ಟಡಿಗೆ ನೀಡಿ ದೆಹಲಿ ದೆಹಲಿ ಪಾಟಿಯಾಲ ಹೌಸ್​ ಕೋರ್ಟ್​ ಆದೇಶ ನೀಡಿದೆ,. ಪ್ರಕರಣದ ತನಿಖೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ರಾಜೀವ್​ ಸಕ್ಸೆನಾಗೆ ಹಲವು ಬಾರಿ ಸಮನ್ಸ್​ ಜಾರಿ ಮಾಡಿತ್ತು. ಆದರೆ ಒಮ್ಮೆಯೂ ವಿಚಾರಣೆಗೆ ಸಕ್ಸೆನಾ ಹಾಜರಾಗಿರಲಿಲ್ಲ. ಅಲ್ಲದೇ ಜಾಮೀನು ರಹಿತ ವಾರಂಟ್​ ನೀಡಿ ಜಾರಿಯಾಗಿತ್ತು.

5. ಸಿಬಿಐ ಮುಖ್ಯಸ್ಥ ನಾಗೇಶ್ವರ್​ ರಾವ್​ ತಪ್ಪಿತಸ್ಥ ಎಂದ ಸುಪ್ರೀಂ ಕೋರ್ಟ್​

ಸಿಬಿಐನ ಹಿರಿಯ ತನಿಖಾಧಿಕಾರಿಯೊಬ್ಬರ ವರ್ಗಾವಣೆ ವಿಚಾರದಲ್ಲಿ ಕೋರ್ಟ್ ಆದೇಶ ದಿಕ್ಕರಿಸಿದ ಕಾರಣಕ್ಕೆ ಮಾಜಿ ಸಿಬಿಐ ಮುಖ್ಯಸ್ಥ ಎಂ. ನಾಗೇಶ್ವರ್ ರಾವ್ ಹಾಗೂ ಹೆಚ್ಚುವರಿ ಕಾನೂನು ಸಲಹೆಗಾರ ಎಸ್. ಭಾಸುರನ್ ಅವರಿಬ್ಬರೂ ತಪ್ಪಿತಸ್ಥರೆಂದು ಪರಿಗಣಿಸಿದೆ.  ಪ್ರಕರಣದ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪೀಠ ಅವರಿಬ್ಬರಿಗೂ ಅನಿರ್ದಿಷ್ಟ ಅವಧಿಯವರೆಗೂ ಕೋರ್ಟ್ ಹಾಲ್​ನಲ್ಲೇ ವಾಸವಿರಬೇಕೆಂದು ಆಜ್ಞಾಪಿಸಿತು.  ಇದರ ಜೊತೆಗೆ ನಾಗೇಶ್ವರ್ ರಾವ್ ಅವರಿಗೆ 1 ಲಕ್ಷ ರೂ ದಂಡವನ್ನೂ ವಿಧಿಸಲಾಯಿತು. ಒಂದು ವಾರದೊಳಗೆ ಮಾಜಿ ಸಿಬಿಐ ಮುಖ್ಯಸ್ಥರು ಈ ದಂಡದ ಮೊತ್ತವನ್ನು ಕೋರ್ಟ್​ಗೆ ಇಡಬೇಕೆಂದು ಸೂಚಿಸಿತು.

6. ಸಂಸದೆ ಶೋಭಾ ಕರಂದ್ಲಾಜೆ ಖಾತೆ ಹ್ಯಾಕ್

ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ಎಸ್​ಬಿಐ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್​ ಮಾಡಿದ್ದು, 20 ಲಕ್ಷ ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂಸತ್ ಭವನದ ಎಸ್​ ಬಿಐ ಖಾತೆಯಿಂದ 20 ಲಕ್ಷ ಎಗರಿಸಲಾಗಿದ್ದು, ಈ ಸಂಬಂಧ ಶೋಭಾ ಕರಂದ್ಲಾಜೆ ಅವರು ಸಂಸತ್ ಭವನ ಮಾರ್ಗದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ . ಹ್ಯಾಕ್​ ಆಗಿರುವುದನ್ನು ಸ್ವತಃ ಕರಂದ್ಲಾಜೆ ಅವರೇ ಒಪ್ಪಿಕೊಂಡಿದ್ದಾರೆ. ಆದರೆ, ವಿಷಯ ದೊಡ್ಡದು ಮಾಡಲು ಇಷ್ಟವಿಲ್ಲ ಎಂದ ಅವರು,  ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಅವರು ನಿರಾಕರಿಸಿದ್ದಾರೆ.

7. ಜೀವ ಭಯ; ರಾಜನಾಥ್​ ಸಿಂಗ್​ ಮೊರೆಹೋದ ಮುಕುಲ್​ ರಾಯ್​

ಟಿಎಂಸಿ ಶಾಸಕನ ಹತ್ಯೆ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ಮುಕುಲ್​ ರಾಯ್​ ಇಂದು ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರನ್ನು ಭೇಟಿಯಾಗಿ ತಮಗೆ ಜೀವ ಬೆದರಿಕೆ ಕರೆಗಳು ಎದುರಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದೆ. ಪಶ್ಚಿಮ ಬಂಗಾಳದ ನಡಿಯಾದಲ್ಲಿ ನಡೆದ ತೃಣಮೂಲ ಕಾಂಗ್ರೆಸ್​ ಶಾಸಕ ಸತ್ಯಜೀತ್​ ಬಿಸ್ವಸ್​ ಹತ್ಯೆ ಆರೋಪದಲ್ಲಿ ರಾಯ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಇದಾದ ಬಳಿಕ ರಕ್ಷಣೆ ಕೋರಿ ಅವರು ರಾಜನಾಥ್​ ಸಿಂಗ್​ ಮೊರೆ ಹೋಗಿದ್ದಾರೆ

8. ಅಖಿಲೇಶ್​ಗೆ ಪ್ರವೇಶಕ್ಕೆ ವಿರೋಧ; ಪ್ರಯಾಗ್​ ರಾಜ್​ನಲ್ಲಿ ಲಾಠಿ ಚಾರ್ಜ್​

ಪ್ರಯಾಗರಾಜ್ (ಅಲಹಾಬಾದ್) ನಗರ ಪ್ರವೇಶಿಸಲು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರದ ಅನುಮತಿ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪ್ರಯಾಗ್​ ರಾಜ್​ನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಎಸ್​ಪಿ ಸಂಸದ ಧರ್ಮೇಂದ್ರ ಯಾದವ್ ಸೇರಿದಂತೆ ಹಲವು ಜನರು ಗಾಯಗೊಂಡರು. ಸಮಾಜವಾದಿ ಪಕ್ಷದ ಮುಖಂಡರು ಈ ಘಟನೆಯನ್ನು ಉ.ಪ್ರ. ರಾಜ್ಯಪಾಲ ರಾಮ್ ನಾಯಕ್ ಅವರ ಗಮನಕ್ಕೆ ತರಲು ನಿರ್ಧರಿಸಿದ್ದಾರೆ.

9. ಮತ್ತೆ ರಾಹುಲ್​ ರಫೇಲ್​ ವಾಗ್ದಾಳಿ

ರಫೇಲ್​ ಒಪ್ಪಂದ ಸಂಬಂಧ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ರಫೇಲ್​ ಹಗರಣದಲ್ಲಿ ಪ್ರಧಾನಮಂತ್ರಿ ಅವರು ಅನಿಲ್​ ಅಂಬಾನಿ ಅವರ ಮಧ್ಯವರ್ತಿವಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಅವರು 36 ಯುದ್ಧ ವಿಮಾನ ಒಪ್ಪಂದ ಘೋಷಿಸುವ 15 ದಿನದ ಮುನ್ನವೇ ಉದ್ಯಮಿ ಅನಿಲ್ ಅಂಬಾನಿ ಫ್ರೆಂಚ್​ನ ರಕ್ಷಣಾ ಸಚಿವರನ್ನು ಭೇಟಿಯಾಗಿದ್ದರು. ಒಪ್ಪಂದದ ಬಗ್ಗೆ ರಕ್ಷಣಾ ಸಚಿವರು ಮತ್ತು ವಿದೇಶಾಂಗ ಕಾರ್ಯದರ್ಶಿಗೆ ಮಾಹಿತಿ ಇಲ್ಲದಿರುವಾಗ ಈ ವಿಚಾರ ಅನಿಲ್ ಅಂಬಾನಿ ಅವರಿಗೆ ತಿಳಿದಿತ್ತು ಎಂದು ಆರೋಪಿಸಿದ್ದಾರೆ.

10 ಸಹೋದ್ಯೋಗಿ ಜೊತೆ ವೇದಿಕೆಯಲ್ಲಿ ಅಸಭ್ಯ ವರ್ತನೆ

ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಯ ಮೇಲಿರುವಾಗಲೇ ತ್ರಿಪುರಾ ಸಚಿವ ತಮ್ಮ ಸಹೋದ್ಯೋಗಿ ಜೊತೆ ಅಸಭ್ಯವಾಗಿ ನಡೆದುಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ತ್ರಿಪುರಾದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಸಚಿವ ಮನೋಜ್ ಕಾಂತಿ ದೇಬ್ ಸಮಾಜ ಕಲ್ಯಾಣ ಇಲಾಖೆ ಸಚಿವೆ ಸಂತನಾ ಚಕ್ಮಾ ಅವರ ಸೊಂಟದ ಮೇಲೆ ಕೈ ಇಟ್ಟಿದ್ದಾರೆ. ವೇದಿಕೆಯ ಮೇಲೆ ಅವರು ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.
First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...