FDA Exam: ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; 9 ಆರೋಪಿಗಳ ಬಂಧನ; ಪರೀಕ್ಷಾ ಅಭ್ಯರ್ಥಿಗಳಿಗೂ ಬಲೆ ಬೀಸಿದ ಸಿಸಿಬಿ
KPSC FDA Exam : ಬಹಳಷ್ಟು ಎಫ್ಡಿಎ ಪರೀಕ್ಷಾ ಅಭ್ಯರ್ಥಿಗಳಿಗೆ ಉತ್ತರ ಪ್ರತಿಗಳನ್ನು ನೀಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ, ಆರೋಪಿಗಳ ಸಹಚರರು ಸೇರಿದಂತೆ ಪರೀಕ್ಷಾ ಅಭ್ಯರ್ಥಿಗಳಿಗೂ ಕೂಡ ಸಿಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಬೆಂಗಳೂರು (ಜ. 24): ಇಂದು ಕರ್ನಾಟಕ ಲೋಕಸೇವಾ ಆಯೋಗ ನಡೆಸಬೇಕಾಗಿದ್ದ ಎಫ್ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಈಗಾಗಲೇ 9 ಜನರನ್ನು ಬಂಧಿಸಿದ್ದಾರೆ. ಈಗಾಗಲೇ ಬಹಳಷ್ಟು ಪರೀಕ್ಷಾ ಅಭ್ಯರ್ಥಿಗಳಿಗೆ ಉತ್ತರ ಪ್ರತಿಗಳನ್ನು ನೀಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ, ಆರೋಪಿಗಳ ಸಹಚರರು ಸೇರಿದಂತೆ ಪರೀಕ್ಷಾ ಅಭ್ಯರ್ಥಿಗಳಿಗೂ ಕೂಡ ಸಿಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಪ್ರಮುಖ ಕಿಂಗ್ ಪಿನ್ ಮತ್ತು ಇತರೆ ಆರೋಪಿಗಳಿಗಾಗಿ ಮೂರು ವಿಶೇಷ ತಂಡ ರಚನೆ ಮಾಡಲಾಗಿದೆ. ಪ್ರಶ್ನೆ ಪತ್ರಿಕೆಗಳ ಸೋರಿಕೆ ಪ್ರಮುಖ ಕಿಂಗ್ ಪಿನ್ ಆಗಿರೋ ಶಿವಕುಮಾರಯ್ಯ ಅಲಿಯಾಸ್ ಸ್ವಾಮೀಜಿ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಶಿವಕುಮಾರಯ್ಯನ ಕೈವಾಡವಿದೆಯಾ? ಎಂದು ವಿಚಾರಣೆ ನಡೆಸಲಾಗುತ್ತಿದೆ. ಒಂದು ವಿಶೇಷ ತಂಡದಿಂದ ಇತ್ತೀಚಿನ ಶಿವಕುಮಾರಯ್ಯನ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಆರೋಪಿ ಚಂದ್ರುಗೆ ಕೆಪಿಎಸ್ಸಿಯಲ್ಲಿ ಕೆಲವು ಸ್ನೇಹಿತರ ಸಂಪರ್ಕವಿದ್ದು, ಮೆಸೇಜ್ ಕರೆಗಳ ಮೂಲಕ ಪತ್ತೆ ಕಾರ್ಯಕ್ಕೆ ಸಿಸಿಬಿ ಮುಂದಾಗಿದೆ. ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಇದುವರೆಗೂ 9 ಜನರನ್ನು ಬಂಧಿಸಲಾಗಿದೆ. ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಗಳ ಜೊತೆಗೆ ಪ್ರಶ್ನೆ ಪತ್ರಿಕೆಗಳ ಉತ್ತರಗಳ ಪ್ರತಿಯ್ನು ಕೂಡ ಪೊಲೀಸರು ಸೀಜ್ ಮಾಡಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಆ ಪ್ರತಿಗಳನ್ನು ಕೆಲವು ಜಿಲ್ಲೆಗಳಲ್ಲಿರುವ ಆರೋಪಿಗಳ ಸಹಚರರಿಗೆ ನೀಡಿರುವ ಮಾಹಿತಿ ಲಭ್ಯವಾಗಿದೆ. ಚಂದ್ರು ಜೊತೆ ಇಲಾಖಾ ಮಟ್ಟದಲ್ಲಿ ಯಾರೆಲ್ಲ ಸಂಪರ್ಕದಲ್ಲಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಅಜ್ಞಾತ ಸ್ಥಳದಲ್ಲಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ದ್ವಿತೀಯ ದರ್ಜೆ ಸಹಾಯಕನಾಗಿ ರಾಚಪ್ಪ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಶ್ನೆ ಪತ್ರಿಕೆ ಖರೀದಿಗೆ ಬಂದಿದ್ದ ಮೂವರು ಆರೋಪಿಗಳ ಸಂಪರ್ಕದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳ ಜೊತೆ ಸಂಪರ್ಕವಿದ್ದವರ ಬಗ್ಗೆ ಸಿಸಿಬಿ ಹುಡುಕಾಟ ನಡೆಸುತ್ತಿದೆ. ಬಂಧಿತ ಆರೋಪಿಗಳ CDR ಮೂಲಕ ಉಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಬಂಧಿತರ ವಾಟ್ಸಾಪ್ ಕರೆ ಮತ್ತು ಪೋನ್ ಕರೆ, ಮೆಸೇಜ್ಗಳ ಜಾಡು ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದರಿಂದ ಇಂದು ನಡೆಯಬೇಕಿದ್ದ ಎಫ್ ಡಿಎ (ಪ್ರಥಮ ದರ್ಜೆ ಸಹಾಯಕ) ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಪರೀಕ್ಷಾ ದಿನಾಂಕವನ್ನು ನಿಗದಿ ಘೋಷಣೆ ಮಾಡುವುದಾಗಿ ಕೆಪಿಎಸ್ಸಿ ತಿಳಿಸಿದೆ.
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್ ಪಿನ್ಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ಎರಡನೇ ವ್ಯಕ್ತಿಯಾಗಿ ಪ್ರಶ್ನೆ ಪತ್ರಿಕೆ ಪಡೆದು ಮಾರಾಟಕ್ಕೆ ಮುಂದಾಗಿದ್ದ ಆರೋಪಿ ಚಂದ್ರುವ್ನು ಈ ಬಗ್ಗೆ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಇನ್ಸ್ಪೆಕ್ಟರ್ ಆಗಿದ್ದ ಆರೋಪಿ ಚಂದ್ರು ಮತ್ತು ಆರೋಪಿ ರಾಚಪ್ಪನನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ