news18-kannada Updated:January 24, 2021, 1:21 PM IST
ಕರ್ನಾಟಕ ಲೋಕಸೇವಾ ಆಯೋಗ
ಬೆಂಗಳೂರು (ಜ. 24): ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೆಪಿಎಸ್ಸಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಎಫ್ಡಿಎ ಪರೀಕ್ಷೆಯ ಎರಡೂ ಪ್ರಶ್ನೆ ಪತ್ರಿಕೆಗಳೂ ಲೀಕ್ ಆಗಿವೆ. ಜನರಲ್ ನಾಲೆಡ್ಜ್ ಹಾಗೂ ಕನ್ನಡ ವಿಷಯಗಳ ಪತ್ರಿಕೆಗಳು ಲೀಕ್ ಆಗಿವೆ. ಜನರಲ್ ನಾಲೆಡ್ಜ್ ಪ್ರಶ್ನೆ ಪತ್ರಿಕೆಯ 85 ಪ್ರಶ್ನೆಗಳು ಹಾಗೂ ಕನ್ನಡ ಪತ್ರಿಕೆಯ 86 ಪ್ರಶ್ನೆಗಳು ಲೀಕ್ ಆಗಿವೆ. ಆರೋಪಿಗಳ ಬಳಿ ಇದ್ದ ಪ್ರಶ್ನೆ ಪತ್ರಿಕೆಗಳನ್ನು ಸಿಸಿಬಿ ಪೊಲೀಸರು ಸೀಜ್ ಮಾಡಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಕೆಪಿಎಸ್ಸಿ ಸಿಬ್ಬಂದಿಗಳ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕೆಪಿಎಸ್ಸಿ ಕಚೇರಿಯ ಇಬ್ಬರು ಸಿಬ್ಬಂದಿಗಳ ಮೇಲೆ ಸಿಸಿಬಿ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ. ಇಬ್ಬರೂ ಶಂಕಿತರ ಪೋನ್ ಸ್ವಿಚ್ ಆಫ್ ಆಗಿದೆ. ಎಫ್ಡಿಎ ದರ್ಜೆಯ ಅಧಿಕಾರಿಗಳ ಮೇಲೆ ಶಂಕೆ ವ್ಯಕ್ತವಾಗಿದೆ. ಬಂಧಿತರು ನೀಡಿರುವ ಮಾಹಿತಿ ಮೇರೆಗೆ ಅನುಮಾನ ವ್ಯಕ್ತವಾಗಿದ್ದು, ನಾಪತ್ತೆಯಾಗಿರುವ ಶಂಕಿತರಿಗೆ ಸಿಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ಅವ್ಯವಹಾರ ಭೇದಿಸಿ ಕೆಲವರನ್ನು ಬಂಧಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿಂದೆ ಯಾರ್ಯಾರಿದ್ದಾರೆ ಅಂತ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅತೀ ಶೀಘ್ರದಲ್ಲೇ ಪ್ರಕರಣದ ಹಿಂದೆ ಇರುವವರ ಬಂಧನ ಮಾಡುತ್ತೇವೆ. ಪ್ರಶ್ನೆ ಪತ್ರಿಕೆಗಳನ್ನು ಅತ್ಯಂತ ಸುರಕ್ಷತೆಯಿಂದ ಇಡಲಾಗುತ್ತದೆ. ಸುರಕ್ಷತೆ ಇದ್ದರೂ ಹೇಗೆ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿವೆ ಅನ್ನೋದು ಮಹತ್ವದ ಪ್ರಶ್ನೆಯಾಗಿದೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಎಷ್ಟೇ ಪ್ರಭಾವಿಗಳಿದ್ದರೂ ಪ್ರಕರಣಕ್ಕೆ ಕಾರಣರಾದವರನ್ನು ಬಂಧಿಸುತ್ತೇವೆ. ಸದ್ಯಕ್ಕೆ ಬಂಧಿತರ ವಿಚಾರಣೆ ನಡೆಸಿ ತನಿಖೆ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: FDA Exam: ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; 9 ಆರೋಪಿಗಳ ಬಂಧನ; ಪರೀಕ್ಷಾ ಅಭ್ಯರ್ಥಿಗಳಿಗೂ ಬಲೆ ಬೀಸಿದ ಸಿಸಿಬಿ
ಇಂದು ಕರ್ನಾಟಕ ಲೋಕಸೇವಾ ಆಯೋಗ ನಡೆಸಬೇಕಾಗಿದ್ದ ಎಫ್ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಬೆಂಗಳೂರು ಸಿಸಿಬಿ ಪೊಲೀಸರು ಈಗಾಗಲೇ 9 ಜನರನ್ನು ಬಂಧಿಸಿದ್ದಾರೆ. ಈಗಾಗಲೇ ಬಹಳಷ್ಟು ಪರೀಕ್ಷಾ ಅಭ್ಯರ್ಥಿಗಳಿಗೆ ಉತ್ತರ ಪ್ರತಿಗಳನ್ನ ನೀಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ, ಆರೋಪಿಗಳ ಸಹಚರರು ಸೇರಿದಂತೆ ಪರೀಕ್ಷಾ ಅಭ್ಯರ್ಥಿಗಳಿಗೂ ಕೂಡ ಸಿಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದರಿಂದ ಇಂದು ನಡೆಯಬೇಕಿದ್ದ ಎಫ್ ಡಿಎ (ಪ್ರಥಮ ದರ್ಜೆ ಸಹಾಯಕ) ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಪರೀಕ್ಷಾ ದಿನಾಂಕವನ್ನು ನಿಗದಿ ಘೋಷಣೆ ಮಾಡುವುದಾಗಿ ಕೆಪಿಎಸ್ಸಿ ತಿಳಿಸಿದೆ.
Published by:
Sushma Chakre
First published:
January 24, 2021, 1:21 PM IST