ಮಂಗಳೂರು: ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರತಿಕಾರವಾಗಿ ಸುರತ್ಕಲ್ನಲ್ಲಿ ಫಾಜಿಲ್ ಹತ್ಯೆ (Fazil) ನಡೆಸಲಾಗಿದೆ ಎಂದು ಹೇಳಿಕೆ ನೀಡಿರುವ ವಿಶ್ವ ಹಿಂದೂ ಪರಿಷತ್ನ ( Vishwa Hindu Parishad) ಮುಖಂಡ ಶರಣ್ ಪಂಪ್ವೆಲ್ (Sharan Pumpwell) ವಿರುದ್ಧ ಫಾಜಿಲ್ ತಂದೆ ಉಮರ್ ಫಾರೂಕ್ ದೂರು ನೀಡಿದ್ದಾರೆ. ಸೋಮವಾರ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರನ್ನು ಭೇಟಿಯಾಗಿ ಪಂಪ್ವೆಲ್ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಪಂಪ್ವೆಲ್ ತುಮಕೂರಿನಲ್ಲಿ ಭಾನುವಾರ ಫಾಜಿಲ್ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಂದರೆ ಅವರಿಗೆ ನನ್ನ ಮಗನ ಹತ್ಯೆಯ ವಿಚಾರವಾಗಿ ಹೆಚ್ಚಿನ ಮಾಹಿತಿಯಿದೆ. ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಎಂದು ಒತ್ತಾಯಿಸಿದ್ದಾರೆ.
ಪಂಪ್‌ವೆಲ್‌ಗೆ ತಾಕತ್ ಇದ್ರೆ ನನ್ನ ಜೊತೆ ಕಾದಾಡಲಿ
ಶರಣ್ ಪಂಪ್ವೆಲ್ ನನ್ನ ಮಗ ಫಾಜಿಲ್ ಹತ್ಯೆಯನ್ನು ಸಂಭ್ರಮಿಸಿದ್ದಾನೆ. ಎಂಟು ಮಂದಿ ಸೇರಿ ಒಬ್ಬ ಹುಡುಗನನ್ನು ಹೊಡೆದಿದ್ದಾರೆ. ಅದು ಶೌರ್ಯವಲ್ಲ, ಹೇಡಿತನ. ಶರಣ್ ಪಂಪ್‌ವೆಲ್ ತಾಕತ್ತಿದ್ದರೆ ನನ್ನ ಜೊತೆ ಒಬ್ಬನೇ ಕಾದಾಡಲಿ. ನಾನು ನೋಡಿಕೊಳ್ಳುತ್ತೇನೆ ಎಂದು ಫಾಜಿಲ್ ತಂದೆ ಉಮರ್ ಫಾರೂಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಬೇರೆ, ಹಿಂದುತ್ವ ಬೇರೆ
ಶರಣ್ ಹಿಂದೂ, ಹಿಂದುತ್ವದ ಬಗ್ಗೆ ಮಾತನಾಡುತ್ತಾನೆ. ಹಿಂದೂನೆ ಬೇರೆ, ಹಿಂದುತ್ವವೇ ಬೇರೆ. ಹಿಂದುತ್ವದಲ್ಲಿ ಇರುವವರು ಹಣ ತೆಗೆದುಕೊಂಡು ಕೃತ್ಯಗಳನ್ನು ಎಸಗುತ್ತಾರೆ. ಫಾಜಿಲ್ ಹತ್ಯೆಯ ರೂವಾರಿ ಶರಣ್ ಪಂಪ್ವೆಲ್ ಎನ್ನುವುದು ಅವರು ತುಮಕೂರಿನಲ್ಲಿ ಮಾಡಿರುವ ಭಾಷಣದಿಂದ ತಿಳಿದುಬಂದಿದೆ. ಈ ಬಗ್ಗೆ ಎಡಿಜಿಪಿಗೂ ಮನವಿ ಮಾಡಿದ್ದೇನೆ ಎಂದರು.
ಖಾದರ್ ಆಕ್ರೋಶ
ಚುನಾವಣೆಗೋಸ್ಕರ, ಮಾಧ್ಯಮದಲ್ಲಿ ಬಿಲ್ಡಪ್ ಸಿಗುತ್ತದೆ ಅಂತ ಪಂಪ್ವೆಲ್ ಅಂತಹವರರೂ ಈ ರೀತಿ ಹೇಳಿಕೆ ಕೊಡುತ್ತಾರೆ. ಕೊಲೆಗೆ ನಾವೇ ಪ್ರೇರಣೆ ಎಂದು ಹೇಳಿವವರು ಸಮಾಜಕ್ಕೆ ಅಪಾಯಕಾರಿ. ಇಂತಹವರು ನಮ್ಮ ನಡುವೆ ಇರುವಂತಹ ನಿಜವಾದ ದೇಶದ್ರೋಹಿಗಳು. ಹಿಂದೂ ಆಗಲಿ, ಮುಸ್ಲಿಂ ಆಗಲಿ ಏಕೆ ಕೊಲೆಯಾಗಬೇಕು. ಪ್ರಾಣ ಕಳೆದುಕೊಂಡವರ ಕುಟುಂಬದ ಅಕ್ಕ, ತಂಗಿಯರ ನೋವು ಇವರಿಗೆ ಅರ್ಥ ಆಗುತ್ತದೆಯೇ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಡಿಪಾರು ಮಾಡಬೇಕು
ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡುವವರು ಸಮಾಜಕ್ಕೂ ಭಾರ, ಜಿಲ್ಲೆಗೂ ಭಾರ, ಇವರನ್ನು ಗಡಿಪಾರು ಮಾಡಬೇಕು. ಇವರ ಹೇಳಿಕೆಯಿಂದ ಜನರಲ್ಲಿ ಭಯ ಶುರುವಾಗಿದೆ. ಫಾಜಿಲ್ ಕೊಲೆ ಪ್ರಕರಣ ಸಂಪೂರ್ಣ ಮರು ತನಿಖೆಯಾಗಬೇಕು. ಉಳ್ಳಾಲದಲ್ಲಿ ಜನ ಸೌಹಾರ್ದ ಇದ್ದಾರೆ, ಕೋಮುವಾದಿ ಶಕ್ತಿಗಳಿಗೆ ಜನ ಅವಕಾಶ ಕೊಡಲ್ಲ . ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಎಲ್ಲಾ ಕೊಲೆಗಳ ಬಗ್ಗೆಯೂ ತನಿಖೆ ಮಾಡಿಸ್ತೀವಿ ಎಂದು ಯುಟಿ ಖಾದರ್ ಹೇಳಿದ್ದಾರೆ.
ಪಂಪ್ವೆಲ್ ಹೇಳಿಕೆಗೆ ಖಂಡನೆ
ಪ್ರತೀಕಾರಕ್ಕಾಗಿ ಫಾಜಿಲ್ ಹತ್ಯೆ ಮಾಡಲಾಗಿದೆ ಎಂದು ಹೇಳಿಕೆ ನೀಡಿರುವ ಶರಣ್ ಪಂಪ್ವೆಲ್ ವಿರುದ್ಧ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಹೇಮನಾಥ್ ಶೆಟ್ಟಿ , ವಿಶ್ವ ಹಿಂದೂ ಪರಿಷತ್ತಿನ ನಾಯಕ ಶರಣ್ ಪಂಪ್ವೆಲ್ ಫಾಜಿಲ್ ಕೊಲೆಯನ್ನು ಪ್ರತೀಕಾರದ ಕೊಲೆ ಎಂದು ಹೇಳಿರುವುದರಿಂದ ಜಿಲ್ಲೆಯ ಜನರ ಮನಸ್ಸಿನಲ್ಲಿ ಆತಂಕ ಮನೆ ಮಾಡಿದೆ. ಹಿಂದೂ ಸಂಘಟನೆ ಎನ್ನುವುದು ಕಾನೂನು ಕೈಗೆತ್ತಿಕೊಂಡು ಅನ್ಯ ಧರ್ಮೀಯರನ್ನು ಕೊಲೆಗೈದು ಪ್ರತೀಕಾರ ತೀರಿಸಿಕೊಳ್ಳಿ ಎಂದು ಸರಕಾರ ನಿರ್ದೇಶಿಸಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಡಿವೈಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನೀರ್ ಕಟ್ಟಿಪಾಳ್ಯ ಅವರು ಪಂಪ್ವೆಲ್ ಭಾಷಣ ದುಷ್ಟತನದ ಪರಮಾವಧಿ ಎಂದು ಕಿಡಿ ಕಾರಿದ್ದಾರೆ. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಪಂಪ್ವೆಲ್ರನ್ನು ಬಂಧಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ