ನೆಲಮಂಗಲ: ಸುಗಮ ಸಂಚಾರ, ಡಿಜಿಟಲೀಕರಣ, ನಗದುರಹಿತ ವ್ಯವಹಾರ ಸೇರಿದಂತೆ ಆಧುನಿಕ ತಂತ್ರಜ್ಞಾನದ ಬಳಕೆ ಮಾಡುವುದು ರಾಷ್ತ್ರೀಯ ಹೆದ್ದಾರಿ ಸಚಿವಾಲಯ ಹೆದ್ದಾರಿ ಟೋಲ್ಗಳ ಮೂಲಕ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಆದ್ರೆ ಫಾಸ್ಟ್ಯಾಗ್ ಅಳವಡಿಸಿಕೊಂಡ ವಾಹನ ಸವಾರರಿಗೆ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚು ಎಂದು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಾಲೆಟ್ ಕಿರಿಕಿರಿ: ಫಾಸ್ಟ್ಯಾಗ್ ಮಾರಾಟ ಮಾಡಲು ಸರ್ಕಾರ 22 ಸಂಸ್ಥೆಗಳಿಗೆ ಗುತ್ತಿಗೆ ನೀಡಿದೆ. ನೊಂದಣಿ ಮಾಡಬೇಕಾದರೆ ಕೆವೈಸಿ, ಕನಿಷ್ಠ ಠೇವಣಿ ಎಂದು ಒಂದೊಂದು ಸಂಸ್ಥೆಯೂ ಒಂದೊಂದು ರೀತಿ ಹಣ ಕಬಳಿಸಲು ಶುರು ಮಾಡಿವೆ. ಈ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ದಿಷ್ಟ ನಿಲುವನ್ನು ಪಡೆದುಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಫಾಸ್ಟ್ಯಾಗ್ ವ್ಯಾಲೆಟ್ನಲ್ಲಿ ಹಣವಿದ್ದು ಒಂದು ವೇಳೆ ಟ್ಯಾಗ್ ಹಾಳಾದಲ್ಲಿ ಅದನ್ನ ಬದಲಿಸಬೇಕಾದ ಅನಿವಾರ್ಯ ಎದುರಾದರೆ ವ್ಯಾಲೆಟ್ನಲ್ಲಿನ ಅಷ್ಟೂ ಹಣ ಉಪಯೋಗಕ್ಕೆ ಬರುವುದಿಲ್ಲ, ಅಲ್ಲದೆ ಹೊಸ ಟ್ಯಾಗ್ ಅಳವಡಿಸಿಕೊಂಡಲ್ಲಿ ಮತ್ತೆ ಕೆವೈಸಿ ಭರ್ತಿ ಮಾಡುವುದು, ಕನಿಷ್ಠ ಠೇವಣಿ ಹಣ ಸಂದಾಯ ಮಾಡಬೇಕಾಗುತ್ತದೆ. ಈ ಸಮಸ್ಯೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕಿದೆ.
ರೀಡ್ ಆಗದಿದ್ದರೂ ಡಬಲ್ ಶುಲ್ಕ: ತಂತ್ರಜ್ಞಾನದ ಸಮಸ್ಯೆಯಿಂದ ಕೆಲವೊಮ್ಮೆ ಫಾಸ್ಟ್ಯಾಗ್ ರೀಡ್ ಆಗುವುದಿಲ್ಲ. ವ್ಯಾಲೆಟ್ನಲ್ಲಿ ಹಣವಿದ್ದರೂ ವಾಹನ ಸವಾರರು ಡಬಲ್ ಶುಲ್ಕ ಪಾವತಿಸಬೇಕಾಗುತ್ತದೆ. ಶುಲ್ಕ ಪಾವತಿಸಿ ಮುಂದೆ ಹೋದ ನಂತರ ಫಾಸ್ಟ್ಯಾಗ್ನಿಂದ ಹಣ ಸಂದಾಯ ಆಗಿರುವುದಾಗಿ ಮೊಬೈಲ್ಗೆ ಮೆಸೇಜ್ ಬರುತ್ತದೆ. ಫಾಸ್ಟ್ಯಾಗ್ನಲ್ಲೂ ಹಣ ಕಡಿತವಾಗಿ ಜೇಬಿನಿಂದ ಡಬಲ್ ಶುಲ್ಕ ಪಾವತಿ ವಾಹನ ಸವಾರರಿಗೆ ಟೋಲ್ನಿಂದ ಭಾರಿ ಸಮಸ್ಯೆ ಎದುರಾಗುತ್ತಿದೆ.
ಇದನ್ನೂ ಓದಿ: ByElection: ಗೆಲುವಿಗೆ ಬಿಜೆಪಿ ರಣತಂತ್ರ: ಉಪಚುನಾವಣೆ ಕಣದಲ್ಲಿ ಸಚಿವರ ಮೊಕ್ಕಾಂ ಕಡ್ಡಾಯ
ಹೆಜ್ಜೆ ಹೆಜ್ಜೆಗೂ ಟೋಲ್: ರಾಷ್ಟ್ರೀಯ ಹೆದ್ದಾರಿ ನಿಯಮಾವಳಿಗಳ ಪ್ರಕಾರ ಒಂದು ಟೋಲ್ ಬೂತ್ ನಿರ್ಮಾಣ ಮಾಡಬೇಕಾದರೆ ಹತ್ತು ಹಲವು ನಿಯಮಾವಳಿಗಳನ್ನ ಪಾಲಿಸಬೇಕಾಗುತ್ತದೆ. ಅದರಲ್ಲಿ ಪ್ರಮುಖವಾದದ್ದು 60 ಕಿಲೋ ಮೀಟರ್ಗೊಂದು ಟೋಲ್ ಬೂತ್ ಇರಬೇಕು ಎಂಬುದು ಮುಖ್ಯ ಷರತ್ತು. ಆದ್ರೆ ನಮ್ಮ ರಾಜ್ಯದ ಹಲವೆಡೆ 20 ರಿಂದ 30 ಕಿಲೋಮೀಟರ್ಗೆ ಒಂದೊಂದು ಟೋಲ್ ಬೂತ್ಗಳನ್ನ ಕಾಣಬಹುದು. ಅಲ್ಲದೆ ಟೋಲ್ ರಸ್ತೆ ಬಳಕೆದಾರರಿಗೆ ಟೋಲ್ ಕಂಪನಿಗಳು ಕನಿಷ್ಠ ಮೂಲಭೂತ ಸೌಲಭ್ಯಗಳನ್ನ ಸಹ ಒದಗಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಾಜ್ಯ ಹೆದ್ದಾರಿಗಳಲ್ಲೂ ಸುಂಕ ವಸೂಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೇಂದ್ರ ಟೋಲ್ ಸಂಗ್ರಹ ಮಾಡುತ್ತಿರುವ ಕಾರಣ ಈಗ ರಾಜ್ಯ ಸರ್ಕಾರ ಸಹ ಹೆದ್ದಾರಿಗಳ್ಳಲಿನ ರಸ್ತೆಗಳಲ್ಲಿ ಟೋಲ್ಬೂತ್ಗಳನ್ನ ಅಳವಡಿಸುತ್ತಿರುವುದು ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದೆ, ಅಲ್ಲದೆ ಯಾವುದೇ ಹೆದ್ದಾರಿಗಳಿಗೆ ಟೋಲ್ ರಸ್ತೆಗಳನ್ನ ನೀಡಿಲ್ಲ. ಇದು ಹೆದ್ದಾರಿ ನಿಯಮಗಳಿಗೆ ವಿರುದ್ಧವಾದ ನಡೆ ಎಂದು ವಕೀಲರು ಆರೋಪಿಸಿದ್ದಾರೆ.
ಸಾರ್ವಜನಿಕರ ಬೇಡಿಕೆಗಳು:
* ಒಂದು ವಾಹನಕ್ಕೆ ಒಂದೇ ಫಾಸ್ಟ್ಯಾಗ್, ಯುನಿಕ್ ಐಡಿ ಒದಗಿಸಬೇಕು
* ಟ್ಯಾಗ್ ಹಾಳಾದರೆ ಒಂದೆ ಐಡಿಯ ಮುಖಾಂತರ ಡೂಪ್ಲಿಕೇಟ್ ಐಡಿ ಪಡೆಯಲು ಅವಕಾಶ
* ಏಕ ರೂಪದ ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೊಳಿಸಿ ಖಾತೆಯಿಂದ ಬ್ಯಾಂಕ್ ಹಣ ಜಮಾವಣೆಗೆ ಆದ್ಯತೆ
* ವಿವಿಧ ವ್ಯಾಲೆಟ್ಗಳಿಗೆ ಕಡಿವಾಣ, ಕನಿಷ್ಠ ಠೇವಣಿಗೆ ಬ್ರೇಕ್
* ಹಣ ಕಡಿತವಾದ ಬಗ್ಗೆ ತುರ್ತು ಮೆಸೇಜ್ ಬರಬೇಕು
* ಫಾಸ್ಟ್ಯಾಗ್ ಸಮಸ್ಯೆಗಳ ಬಗ್ಗೆ ವಿಚಾರಿಸಲು ಸಹಾಯವಾಣಿ ಆರಂಭಿಸಬೇಕು
* ಎಲ್ಲಾ ಟೋಲ್ ರಸ್ತೆಗಳಲ್ಲೂ ಕಡ್ಡಾಯವಾಗಿ ಸರ್ವಿಸ್ ರಸ್ತೆ ಕಲ್ಪಿಸಬೇಕು
* ಸ್ಥಳೀಯ ವಾಹನ ಸವಾರರಿಗೆ ವಿಶೇಷ ರಿಯಾಯಿತಿ
ಇದನ್ನೂ ಓದಿ: ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆ; ಸುಪ್ರೀಂ ಕೋರ್ಟ್ ಆದೇಶಕ್ಕೆ ಬದ್ಧ ಎಂದ ಎಸ್.ಆರ್. ವಿಶ್ವನಾಥ್
ಒಟ್ಟಾರೆ ಫಾಸ್ಟ್ಯಾಗ್ ಅಳವಡಿಕೆ ಕಡ್ಡಾಯದ ನಂತರ ಒಂದಷ್ಟು ಸಮಸ್ಯೆಗಳು ಎದುರಾಗಿದ್ದು ಬಳಕೆಗಾರರು ರಾಷ್ತ್ರೀಯ ಹೆದ್ದಾರಿ ಪ್ರಾಧಿಕಾರದ ಮುಂದೆ ಕೆಲವು ಬೇಡಿಕೆಗಳನ್ನ ಇಟ್ಟಿದ್ದಾರೆ. ಸರ್ಕಾರ ಫಾಸ್ಟ್ಯಾಗ್ ಬಳಕೆದಾರರ ಮನವಿಯನ್ನ ಪುರಸ್ಕರಿಸಿ ಶೀಘ್ರ ವಾಹನ ಸವಾರರ ಸಮಸ್ಯೆ ಬಗೆಹರಿಸಿ ತಂತ್ರಜ್ಞಾನದ ಸದುಪಯೋಗಪಡಿಸಿಕೊಳ್ಳಲು ಅನುವು ಮಾಡಿಕೊಡಬೇಕಿದೆ.
ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ