ಲಾಕ್​ಡೌನ್​ ವೇಳೆ ರೈತರಿಗೆ ಕಣ್ಣೀರು ಹಾಕಿಸಿದ ಈರುಳ್ಳಿ; ದಿಢೀರ್ ಬೆಲೆ ಕುಸಿತಕ್ಕೆ ಅನ್ನದಾತ ಕಂಗಾಲು

ಸರ್ಕಾರ ಕೃಷಿ ಹಾಗೂ ರೈತರ ಬೆಳೆಗಳ ಕುರಿತು ವಿಚಾರ ಮಾಡಬೇಕು. ಇಲ್ಲವಾದರೆ ಈರುಳ್ಳಿಯಂತೆ ನಮ್ಮ ಬದುಕು ಸಹ ಕೊಳೆಯುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು.

ಈರುಳ್ಳಿ

ಈರುಳ್ಳಿ

  • Share this:
ಗದಗ (ಮೇ 22) : ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಪಟ್ಟಣದಲ್ಲಿ ನವೆಂಬರ್‌, ಡಿಸೆಂಬರ್‌ ಅವಧಿಯಲ್ಲಿ ಈರುಳ್ಳಿಗೆ ಬಂದಿದ್ದ ಬಂಗಾರದಂತ ಬೆಲೆಗೆ ರೈತರು ಖುಷಿಗೊಂಡಿದ್ದರು. ಆ ವೇಳೆ ಜಮೀನಿನಲ್ಲಿರುವ ಈರುಳ್ಳಿಯನ್ನ ಕಳ್ಳರು ರಾತ್ರೋರಾತ್ರಿ ಕದ್ದಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಅದೇ ದರ ಸಿಗುವ ನಿರೀಕ್ಷೆಯೊಂದಿಗೆ ಪಟ್ಟಣದ ರೈತರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದು, ಉತ್ತಮ ಫಸಲೂ ಸಹ ಬಂದಿದೆ. ಆದರೆ, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಯಾರೂ ಕೇಳದಂತಹ ಸ್ಥಿತಿ ನಿರ್ಮಾಣವಾಗಿದ್ದರಿಂದ ಸೂಕ್ತ  ಬೆಲೆಯಿಲ್ಲದೆ ರೈತರು ಪರದಾಡುವಂತಾಗಿದೆ.  ನರೇಗಲ್ ಗ್ರಾಮದ ಹನಮಂತಗೌಡ ಕಳಕನಗೌಡ ಹುಲ್ಲೂರು ಎಂಬ ಸ್ಥಳೀಯ ರೈತ ಸಾವಿರಾರು ರೂಪಾಯಿ ಅಡ್ವಾನ್ಸ್‌ ನೀಡಿ ಲಾವಣಿಯಲ್ಲಿ ತೋಟ ಮಾಡಿದ್ದು ನಾಲ್ಕು ಎಕರೆ ನೀರಾವರಿಯಲ್ಲಿ ಈರುಳ್ಳಿಯನ್ನು ಬೆಳೆದಿದ್ದಾನೆ.

ಆದ್ರೆ ಲಾಕ್‍ಡೌನ್‌ ಪರಿಣಾಮ ಒಂದೂವರೆ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಎಲ್ಲಾ ಬಗೆಯ ವ್ಯಾಪಾರ ಸ್ಥಗಿತಗೊಂಡಿದ್ದರಿಂದ ಬೆಲೆ ಸಂಪೂರ್ಣವಾಗಿ  ಕುಸಿದಿದೆ. ಹೀಗಾಗಿ ಬೆಳೆದ ಈರುಳ್ಳಿಯು ಕೊಳೆಯುವಂತಾಗಿದೆ. 15 ಚೀಲ ಈರುಳ್ಳಿಯನ್ನು  ಗದಗ ಎಪಿಎಂಸಿಗೆ ಕಳುಹಿಸಲಾಗಿದೆ. ದೊಡ್ಡ ಗಡ್ಡೆ ಇದ್ದರೂ ಕ್ವಿಟಾಲ್‌ಗೆ 100 ರೂಪಾಯಿಯಂತೆ ಕೇಳುತ್ತಿದ್ದರಿಂದ ಎಲ್ಲಾ ಈರುಳ್ಳಿಯನ್ನು ಅಲ್ಲಿಯೇ ಬಿಟ್ಟು ಊರಿಗೆ ಬಂದಿದ್ದೇವೆ. ಇನ್ನು ಯಾರೂ ಸಹ ಹೆಚ್ಚಿನ ಬೆಲೆಗೆ ಖರೀದಿ ಮಾಡಲು ಬಂದಿಲ್ಲ ಎಂದು ರೈತ ತನ್ನ ಅಳಲು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಕೋವಿಡ್ ಬಿಕ್ಕಟ್ಟನಲ್ಲಿ ಆರ್ಥಿಕ ಸಂಕಷ್ಟ; ಕೃಷಿ ಮಾತ್ರ ಆಶಾಕಿರಣ: ಆರ್​ಬಿಐ ಗವರ್ನರ್

ಇನ್ನು,  60 ಚೀಲಕ್ಕೂ ಹೆಚ್ಚು ಆಗುವಷ್ಟು ಈರುಳ್ಳಿಯನ್ನು ಮಳೆ ಬಂದಾಗ ಸೋರುವ ಪಟ್ಟಣದ ಗಾಂಧಿ ಭವನದಲ್ಲಿ ಹಾಕಿದ್ದಾರೆ.  ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಮತ್ತು  ಕೊಳ್ಳುವವರೂ ಇಲ್ಲದೇ ಇರುವುದರಿಂದ ಈರುಳ್ಳಿ  ಕೊಳೆತು ಹೋಗುತ್ತಿದೆ‌. ಬೀಜ, ಗೊಬ್ಬರ, ಔಷಧಿ, ಆಳು ಸೇರಿದಂತೆ ಸುಮಾರು 1.5 ಲಕ್ಷ ರೂಪಾಯಿ ಖರ್ಚು ಮಾಡಿ ಸಾಲದಲ್ಲಿದ್ದೇನೆ ಅಂತಾನೆ ರೈತ. ಕೊರೋನಾ ಕಾರಣ ಮನೆಯಿಂದ ಯಾರೂ ಹೊರ ಬರದಂತೆ ಲಾಕ್ ಡೌನ್ ಇದ್ದಿದ್ದರ ಪರಿಣಾಮ ಬೆಲೆ ಕುಸಿದಿದೆ.

ಸರ್ಕಾರ ಕೃಷಿ ಹಾಗೂ ರೈತರ ಬೆಳೆಗಳ ಕುರಿತು ವಿಚಾರ ಮಾಡಬೇಕು. ಇಲ್ಲವಾದರೆ ಈರುಳ್ಳಿಯಂತೆ ನಮ್ಮ ಬದುಕು ಸಹ ಕೊಳೆಯುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು. ಸರ್ಕಾರ ಸೂಕ್ತ ಬೆಲೆಗೆ ನೇರವಾಗಿ ರೈತರ ಈರುಳ್ಳಿಯನ್ನು ಖರೀದಿ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
First published: