ರೈತರು, ಕಾರ್ಮಿಕರ ಪ್ರತಿಭಟನೆ : ಮಾತುಕತೆಗೆ ಆಹ್ವಾನಿಸಿ ಸಮಸ್ಯೆ ಬಗೆಹರಿಸಲು ಸಿದ್ದರಾಮಯ್ಯ ಆಗ್ರಹ 

ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಇರುವ ವಿಸ್ಟ್ರಾನ್ ಎಂಬ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ವೇತನ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು(ಡಿಸೆಂಬರ್​.20): ರಾಜ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ  ರೈತರು ಮತ್ತು ಕಾರ್ಮಿಕರು ಚಳವಳಿ, ಪ್ರತಿಭಟನೆ ಹಾಗೂ ಸತ್ಯಾಗ್ರಹಗಳಲ್ಲಿ ತೊಡಗಿದ್ದಾರೆ. ಪ್ರತಿಭಟನೆಯಲ್ಲಿ‌ ನಿರತರಾಗಿರುವ ರೈತರು, ಕಾರ್ಮಿಕರನ್ನು‌ ಮಾತುಕತೆಗೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಶೇ.80 ರಷ್ಟು ಸಂಬಳ ಸಿಕ್ಕಿಲ್ಲ ಎಂದು ಕೈಗಾರಿಕೆಗಳ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ ಹೇಳಿದೆ. ಶೇ.70ರಷ್ಟು ಹಂಗಾಮಿ ಕಾರ್ಮಿಕರನ್ನು, ತರಬೇತಿಯಲ್ಲಿದ್ದ ಕಾರ್ಮಿಕರನ್ನು ಈ ಅವಧಿಯಲ್ಲಿ ಕೆಲಸದಿಂದ ತೆಗೆದುಹಾಕಲಾಗಿದೆ. ಇದರಿಂದ ಲಕ್ಷಾಂತರ ಕಾರ್ಮಿಕರ ಬದುಕು ಬೀದಿಪಾಲಾಗಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ. ಸುಸೂತ್ರವಾಗಿ ನಡೆಯುತ್ತಿದ್ದ ಬಿಡದಿಯ ಟೊಯೋಟಾ ಕಂಪನಿಯ ಘಟಕವನ್ನು ಲಾಕೌಟ್ ಮಾಡಲಾಗಿದೆ. ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಇರುವ ವಿಸ್ಟ್ರಾನ್ ಎಂಬ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ವೇತನ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ ಎಂದು ಕಿಡಿಕಾರಿದ್ದಾರೆ.

ಕೊರೋನಾ ಕಾರಣದಿಂದ ಕಾಲೇಜುಗಳನ್ನು ಮುಚ್ಚಿರುವುದರಿಂದ, ಮೂರು ನಾಲ್ಕು ತಿಂಗಳು ದುಡಿದು ಬರುವ ಹಣದಿಂದ ಮುಂದಿನ ಓದನ್ನು ನಿಭಾಯಿಸಬಹುದು ಎಂಬ ಆಸೆಯಿಂದ ಗುತ್ತಿಗೆ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದವರಾಗಿದ್ದಾರೆ. ಅವರಿಗೂ ಸಂಬಳ ನೀಡಿಲ್ಲ. ಕಾರ್ಮಿಕರು ಶೌಚಾಲಯಕ್ಕೆ ಹೋದ ಅವಧಿಯನ್ನು ಕೆಲಸ ಮಾಡದ ಅವಧಿ ಎಂದು ಪರಿಗಣಿಸಿ ತಿಂಗಳಲ್ಲಿ ಎರಡು ಮೂರು ದಿನಗಳ ಸಂಬಳವನ್ನು ಕಡಿತಗೊಳಿಸಲಾಗಿದೆ. ಈ ರೀತಿಯ ಅಮಾನವೀಯ ಸಂಗತಿಗಳು ಕಾರ್ಮಿಕ ವಲಯವನ್ನು ರೊಚ್ಚಿಗೇಳುವಂತೆ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಗ್ರಾಮ ಪಂಚಾಯಿತಿ​ ಚುನಾವಣೆ: ಅಕ್ರಮ ಮದ್ಯದ ಮೇಲೆ ಅಬಕಾರಿ ಇಲಾಖೆ ಹದ್ದಿನ ಕಣ್ಣು

ರಾಜ್ಯದ ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಡಾ.ಅಶ್ವತ್ಹನಾರಾಯಣ ಅವರು, ಬೇಕಿದ್ದರೆ ಕಾರ್ಮಿಕರು ಕಾರ್ಮಿಕ ನ್ಯಾಯಾಲಯಕ್ಕೆ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದಿದ್ದಾರೆ. ಇದು ಸರ್ಕಾರ ಆಡಳಿತ ನಡೆಸುವ ಕ್ರಮವೇ? ಆಡಳಿತದ ಸಮಸ್ಯೆಗಳನ್ನು ನಿಭಾಯಿಸುವುದಕ್ಕೋಸ್ಕರವೇ ಸಂವಿಧಾನದಡಿ ಕಾರ್ಮಿಕ ಕಾಯ್ದೆಗಳನ್ನು ರೂಪಿಸಲಾಗಿದೆ. ದುಡಿಯುವ ವರ್ಗಗಳ ಸಮಸ್ಯೆಗಳನ್ನು ಬಗೆಹರಿಸಲು ಬೇಕಾದ ಮುತ್ಸದ್ಧಿತನ ಮತ್ತು ಪ್ರಬುದ್ಧತೆ, ಮಾನವೀಯತೆ, ಅಂತಃಕರಣಗಳ ಅಗತ್ಯವಿದೆ.

ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ  ನಿಷ್ಕ್ರಿಯವಾಗದೆ, ನಿರ್ಲಕ್ಷ್ಯ ಮನೋಭಾವವನ್ನು ತೊರೆದು ಕಂಪೆನಿಗಳ ಆಡಳಿತ ಮಂಡಳಿಗಳನ್ನು ಮತ್ತು ಕಾರ್ಮಿಕರನ್ನು ಮಾತುಕತೆಗೆ ಕರೆದು ಸೌಹಾರ್ದಯುತವಾಗಿ ಸಮಸ್ಯೆಯನ್ನು ಇತ್ಯಾರ್ಥಪಡಿಸಿ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಹಾಗೂ ಜಾರಿಗೆ ತಂದಿರುವ ಎಲ್ಲ ಜನವಿರೋಧಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
Published by:G Hareeshkumar
First published: