news18-kannada Updated:January 26, 2021, 5:20 PM IST
ಹೆಚ್.ಎಸ್. ದೊರೆಸ್ವಾಮಿ.
ಬೆಂಗಳೂರು (ಜನವರಿ 26); ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದಾದ್ಯಂತ ರೈತರು ನಡೆಸುತ್ತಿರುವ ಚಳುವಳಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ರಾಜ್ಯದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಆರೋಪಿಸಿದ್ದಾರೆ. ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ರೈತರು ಕಳೆದ 2 ತಿಂಗಳಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ದೇಶದ ಹಲವೆಡೆ ಕೇಂದ್ರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಆದರೆ, ಎರಡು ತಿಂಗಳಾದರೂ ತಮ್ಮ ಬೇಡಿಕೆಗಳು ಈಡೇರದ ಪರಿಣಾಮ ದೆಹಲಿ ಹೋರಾಟಗಾರರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿಯನ್ನು ಆಯೋಜಿಸಿದ್ದರು. ಅಲ್ಲದೆ, ಕೆಂಪುಕೋಟೆಯನ್ನು ವಶಕ್ಕೆ ಪಡೆದು ರೈತ ಬಾವುಟ ಹಾರಿಸಿದ್ದಾರೆ. ಆದರೆ, ಈ ವೇಳೆ ಹೋರಾಟದ ನಡುವೆ ಪೊಲೀಸರು ಲಾಠಿಚಾರ್ಚ್ ನಡೆಸಿ ಅಶ್ರುವಾಯು ಸಿಡಿಸಿದ್ದಾರೆ. ಪರಿಣಾಮ ಓರ್ವ ಮೃತಪಟ್ಟಿದ್ದರೆ, 20 ಜನ ಗಾಯಗೊಂಡಿದ್ದಾರೆ. ಈ ನಡುವೆ ದೆಹಲಿಯಲ್ಲಿ ನಡೆದಿರುವ ಈ ಅಹಿಕರ ಘಟನೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಹೆಚ್.ಎಸ್. ದೊರೆಸ್ವಾಮಿ ಕಿಡಿಕಾರಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರಾಜ್ಯ ರೈತ ಸಂಘದ ಒಕ್ಕೂಟ ಇಂದು ಫ್ರೀಡಂ ಪಾರ್ಕ್ನಲ್ಲಿ ಬಹಿರಂಗ ಸಮಾವೇಶವನ್ನು ಹಮ್ಮಿಕೊಂಡಿದೆ. ರಾಜ್ಯದ ವಿವಿಧೆಡೆಯಿಂದ ಟ್ರ್ಯಾಕ್ಟರ್ ಮೂಲಕವೇ ಬೆಂಗಳೂರಿಗೆ ಆಗಮಿಸಿರುವ ರೈತರು, ಟ್ರ್ಯಾಕ್ಟರ್ ರ್ಯಾಲಿ ನಂತರ ರೈತ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ಸಮಾವೇಶದಲ್ಲಿ ಮಾತನಾಡಿರುವ ಹೆಚ್.ಎಸ್. ದೊರೆಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: Farmers Protest: ಕೇಂದ್ರ-ರಾಜ್ಯ ಸರ್ಕಾರಗಳು ತಮ್ಮ ರೈತ ವಿರೋಧಿ ನಿಲುವಿಗೆ ಪ್ರತಿಫಲ ಉಣ್ಣಲೇಬೇಕು; ಸಿದ್ದರಾಮಯ್ಯ
ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯುವಂತೆ ಸಮಾವೇಶದಲ್ಲಿ ಒತ್ತಾಯಿಸಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿ, " ಕೇಂದ್ರ ಸರ್ಕಾರ ಜನ ವಿರೋಧಿ ಸರ್ಕಾರದಂತೆ ಕೆಲಸ ನಿರ್ವಹಿಸುತ್ತಿದೆ. ಈ ಸರ್ಕಾರದಿಂದ ರೈತರನ್ನು ಕಾಪಾಡಬೇಕು.ಗಣರಾಜ್ಯೋತ್ಸವ ದಿನದಂದೇ ರೈತರ ಹೋರಾಟ ನಡೆದಿರೋದು ತುರ್ತು ವಿಚಾರ. ಹೀಗಾಗಿ ಎಲ್ಲರೂ ಒಗ್ಗಟ್ಟಾಗ ಬೇಕು. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ರೈತರ ಹಿತವನ್ನು ಕಾಪಾಡಿಕೊಳ್ಳಬೇಕು. ಆದರೆ, ಪ್ರಸ್ತುತ ಸರ್ಕಾರವೇ ರೈತರಿಗೆ ಮಾರಕವಾಗಿರುವುದು ದುರಂತ.
ದೆಹಲಿಯಲ್ಲಿ ರೈತರು ಮಳೆ ಚಳಿ ಬಿಸಿಲನ್ನೂ ಲೆಕ್ಕಿಸದೆ ಹೋರಾಟ ಮಾಡುತ್ತಿದ್ದಾರೆ. ಅವರ ಬೇಡಿಕೆಯಲ್ಲಿ ನ್ಯಾಯವಿದೆ. ಆದರೆ, ಕೇಂದ್ರ ಸರ್ಕಾರ ರೈತರ ಕೋರಿಕೆಗೆ ಕಿವಿಗೊಡದೆ ಹೋರಾಟವನ್ನು ಹತ್ತಿಕ್ಕಲು ಷಡ್ಯಂತ್ರ ನಡೆಸುತ್ತಿದೆ. ಈ ನಡುವೆ ಇಂದು ದೆಹಲಿಯಲ್ಲಿ ನಡೆದಿರುವ ಅಹಿತಕರ ಘಟನೆಗೆ ಕೇಂದ್ರ ಸರ್ಕಾರವೇ ಹೊಣೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಈ ಕಾಯ್ದೆಗಳನ್ನು ವಾಪಾಸ್ ತೆಗೆದುಕೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.
Published by:
MAshok Kumar
First published:
January 26, 2021, 5:20 PM IST